||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಆತ್ಮಹತ್ಯೆ ಎಂಬ ಅಸಹಾಯಕತೆ

ಆತ್ಮಹತ್ಯೆ ಎಂಬ ಅಸಹಾಯಕತೆ


ಅವರು ಮಾನ ಮರ್ಯಾದೆಯಿಂದ ಬದುಕುತ್ತಿದ್ದವರು. ಅವರಿಗೆ ಸಾಂದರ್ಭಿಕವಾಗಿ ಏರ್ಪಟ್ಟ  ಅವಮಾನಗಳಿಂದಾಗಿ ಮಾನ ಮರ್ಯಾದೆ ಹೋಯಿತು ಎಂದು ಆತ್ಮಹತ್ಯೆ ಮಾಡಿಕೊಂಡರು.  ಪ್ರಿಯಕರ ಮೋಸ ಮಾಡಿದನೆಂದು ಅವಿವಾಹಿತ ಗರ್ಭಿಣಿ ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾಳೆ, ಪಿಯುಸಿ ಅನುತ್ತೀರ್ಣನಾದ ವಿದ್ಯಾರ್ಥಿಯು ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ತಾಯಿಯ ಸೀರೆಯನ್ನು ಮನೆಯ ಪ್ಯಾನಿಗೆ ಕಟ್ಟಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡನು. ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ 22 ವರ್ಷದ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ತನಿಖೆಗೆ ಒಳಪಡಿಸಿದಾಗ ಯುವಕನಿಗೆ ಗಾಂಜಾ, ಅಫೀಮು ಸೇವನೆ ಮಾತ್ರವಲ್ಲದೆ ಜಗತ್ತಿನಲ್ಲಿ ಇರುವ ಎಲ್ಲ ದುಶ್ಚಟಗಳು ಇದ್ದವೆಂದೂ ತನ್ನ ದುಶ್ಚಟಗಳಿಗೆ ಹಣ ದೊರಕದ ಕಾರಣ ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ ಎಂದು ತಿಳಿದುಬರುತ್ತದೆ.


ಕಳೆದ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದ ಯುವಜೋಡಿಯೊಂದು ಒಂದೇ ಮರದ ಕೊಂಬೆಗೆ ಯುವತಿಯ ವೇಲಿನಿಂದ ಹೃದಯ ವಿದ್ರಾವಕ ಎನಿಸುವಂತೆ ನೇಣಿಗೆ ಶರಣಾಗಿದ್ದಾರೆ. ಕ್ಷುಲ್ಲಕ ಕಾರಣದಿಂದಾಗಿ ವಿವಾಹಿತ ಮಹಿಳೆಯು ಹೊಳೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸುಮಾರು ಎಪ್ಪತ್ತು ವರ್ಷದ ವ್ಯಕ್ತಿ ತಮ್ಮ ತೋಟದಲ್ಲಿ ಗುಂಡು ಹೊಡೆದುಕೊಳ್ಳುವ ಮೂಲಕ ಆತ್ಮಹತ್ಯೆ ಮಾಡಿಕೊಂಡರು ಇವೆಲ್ಲವೂ ಇತ್ತೀಚೆಗೆ ಹೆಚ್ಚಾಗಿ ಪ್ರಾದೇಶಿಕ ಮತ್ತು ರಾಜ್ಯ ಮಟ್ಟದ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿರುವ ಸುದ್ಧಿಗಳು.


ಆದರೆ ಮನುಷ್ಯರು ಏಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಪ್ರಾಣಿಗಳಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಉದಾಹರಣೆಗಳು ಇಲ್ಲ. ದಿನವು ಪ್ರಾಣಿ ಪಕ್ಷಿಗಳಿಗೆ ಮೂರು ಕಂಟಕಗಳೆಂದೂ ಆಹಾರದ ಅನ್ವೇಷಣೆಯ ವೇಳೆಯಲ್ಲಿ ತಾನೇ ಇನ್ನೊಂದು ಪ್ರಾಣಿಗೆ ಆಹಾರವಾಗುವ ಸಂಭವವೂ ಸಹ ಪ್ರಾಣಿಗಳಲ್ಲಿ ಕಂಡುಬರುವ ಸಾಮಾನ್ಯ ವಿಚಾರವಾಗಿದೆ. ಮನುಷ್ಯರಿಗೂ ಸಹ ಆದಿಮಾನವರ ಕಾಲದಲ್ಲಿ ಹೀಗೆಯೇ ಇದ್ದಿರಬಹುದು. ಆದರೆ ಈಗ ಆ ರೀತಿಯ ಪರಿಸ್ಥಿತಿ ಇಲ್ಲವೆನ್ನಬಹುದು. ಆದರೆ ದೈವ ನಿಯಮವೋ ಎಂಬಂತೆ ಬೇರೆ ಬೇರೆ ರೀತಿಯಲ್ಲಿ ಉದಾಹರಣೆಗೆ ಅಪಘಾತ, ಆತ್ಮಹತ್ಯೆ, ನಾನಾ ರೋಗ ವೈಚಿತ್ರಗಳು ಸಂಭವಿಸಿ ಸಾವುನೋವುಗಳು ಸಂಭವಿಸುತ್ತಲಿವೆ ಎಂಬುದು ಸತ್ಯಕ್ಕೆ ಹತ್ತಿರದ ವಿಚಾರ.


ಮನುಷ್ಯನಿಗೆ ಮಾನ ಮರ್ಯಾದೆ ಎಂಬುದು ಕಣ್ಣಿಗೆ ಕಾಣದ ಸೂಕ್ಷ್ಮವಾದ ವಿಷಯ. ನಮ್ಮ ಗೌರವಕ್ಕೆ ಧಕ್ಕೆ ಬಾರದಂತೆ ನಡೆದುಕೊಳ್ಳಬೇಕಾದುದು ನಮ್ಮ ಕರ್ತವ್ಯ ಆದರೂ ಸಹ ಕೆಲವೊಮ್ಮೆ ಕಿಡಿಗೇಡಿಗಳ ಷಡ್ಯಂತ್ರಗಳಿಂದ ಅಥವಾ ನಮ್ಮದೇ ಅಸಹಾಯಕತೆಯಿಂದ ಅಥವಾ ಅಜ್ಞಾನದಿಂದ ನಮ್ಮ ಗೌರವಕ್ಕೆ ಚ್ಯುತಿಯನ್ನು ನಾವೇ ತಂದುಕೊಂಡಾಗ ಆತ್ಮಹತ್ಯೆಯಂತಹ ಕಡು ಹೀನ ಕೃತ್ಯವನ್ನು ಮನಸೋಯಿಚ್ಛೆಯಿಂದ ಮಾಡಿಕೊಳ್ಳುವ ಬದಲು ಪ್ರಾಮಾಣಿಕವಾಗಿ ನಾನು ನನ್ನ ಕರ್ತವ್ಯವನ್ನು ಪೂರೈಸಲು ಪ್ರಯತ್ನಿಸಿ ವಿಫಲವಾಗಿದ್ದೇನೆ ಆದಾಗ್ಯೂ ಪರಿಸ್ಥಿತಿ ನನ್ನ ಕೈ ಮೀರಿ ಹೋಗಿದೆ ಎಂದು ಸಮಾಧಾನ ತಂದುಕೊಳ್ಳುವ ಪ್ರಯತ್ನವನ್ನು ಮಾಡಿಕೊಳ್ಳಲೇಬೇಕು. ಇದು ಹಿರಿಯರು ಸಾತ್ವಿಕರು ಸಂಸಾರ ಸಾಗರದ ಏಳುಬೀಳುಗಳನ್ನು ಕಂಡವರು ಮಾನ ಮರ್ಯಾದೆಯೆಂದು ಆತ್ಮಹತ್ಯೆ ಮಾಡಿಕೊಳ್ಳುವವರು ಅರಿತುಕೊಳ್ಳಬೇಕಾದ ಅಂಶ. ಇನ್ನು ಮೇಲ್ಕಂಡ ಮಿಕ್ಕುಳಿದ ವಿಚಾರಗಳನ್ನು ಗಮನಿಸಿದಾಗ ಬಹುತೇಕ ಸ್ವಯಂ ಕೃತ ಅಪರಾದ, ಅಪವಾದಗಳೇ ಹೆಚ್ಚಾಗಿ ಕಂಡುಬರುತ್ತದೆ. ಅವುಗಳಲ್ಲಿ ಮುಖ್ಯವಾದವು ಸಮಾಜದ ರೀತಿ ನೀತಿಗಳನ್ನು ಸರಿಯಾದ ರೀತಿಯಲ್ಲಿ ಅರ್ಥಮಾಡಿಕೊಳ್ಳಲು ಸಾಧ್ಯವಾಗದಿರುವುದು. ಅಥವಾ ಸಾಮಾಜಿಕ ಪಿಡುಗುಗಳನ್ನು ನಿವಾರಿಸುವ ಹರಿಕಾರ ನಾನಾಗುವೆನೆಂದು ಹಗಲುಗನಸು ಕಂಡು ಪರಿಸ್ಥಿತಿಯನ್ನು ನಿವಾರಿಸಿಕೊಳ್ಳಲು ಸಾಧ್ಯವಾಗದೇ ಆತ್ಮಹತ್ಯೆಯ ಅಪಾಯವನ್ನು ಮೈಮೇಲೆ ಎಳೆದುಕೊಳ್ಳುವುದು.


ಅದೆಷ್ಟೋ ಪ್ರೇಮ ಪ್ರಕರಣಗಳಲ್ಲಿ ಸಮಯೋಚಿತ ರೀತಿಯಲ್ಲಿ ಚಿಂತಿಸದೆ ಮದುವೆಗೆ ಮುಂಚೆ ಲೈಂಗಿಕ ಸಂಪರ್ಕವನ್ನು ಹೊಂದಿದ ನಂತರ ಮದುವೆಗೆ ಅಡ್ಡಲಾಗಿ ಬರುವ ಪಾತ್ರಗಳು, ಸಾಮಾಜಿಕ ಕಟ್ಟುಪಾಡುಗಳು ಅಥವಾ ಸಂದರ್ಭಗಳು ಆರ್ಥಿಕ ಪರಿಸ್ಥಿತಿ ಇವ್ಯಾವುಗಳನ್ನೂ ಸಹ ಪರಿಗಣಿಸದೆ ಕೇವಲ ದೈಹಿಕ ಸುಖದ ಕ್ಷಣಿಕ ಆಸೆಗೆ ಬಲಿಯಾಗಿ ನಂತರ ಯಾವುದೇ ಪರಿಹಾರವನ್ನು ಕಂಡುಕೊಳ್ಳಲು ಅಸಹಾಯಕರಾಗಿ ಆತ್ಮಹತ್ಯೆಗೆ ಶರಣಾಗುವುದು. ವಿದ್ಯಾರ್ಥಿಗಳು ತಮ್ಮ ದೈನಂದಿನ ಚಟುವಟಿಕೆಗಳನ್ನು ಸರಿಯಾಗಿ ನಿರ್ವಹಿಸಿಕೊಳ್ಳಲು ಅಸಮರ್ಥರಾಗುವುದು. ಅಥವಾ ತಮ್ಮ ತಂದೆ ತಾಯಿ ಅಥವಾ ಬಂಧುಗಳಲ್ಲಿ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡು ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನವನ್ನು ಮಾಡದಿರುವುದು ಕೂಡ ಒಂದು ಕಾರಣವೆನ್ನಬಹುದು. ತಪ್ಪುಗಳು ಕೇವಲ ಯುವ ಪೀಳಿಗೆಯಿಂದ ಮಾತ್ರ ನಡೆಯುತ್ತದೆ ಎಂಬುದು ಸರಿಯಾದ ಮಾತು ಅಲ್ಲವೇ ಅಲ್ಲ. ದಾಸರ ವಾಣಿಯಂತೆ ಚಿಕ್ಕಂದಿನಲ್ಲಿ ಅಕ್ಕರೆಯಿಂದ ಮಕ್ಕಳಿಗೆ ತಕ್ಕ ವಿದ್ಯೆಯನ್ನು ಮಾತ್ರವಲ್ಲ ಸಕ್ಕರೆ ತುಪ್ಪವನ್ನು ಬೆರೆಸಿದಂತೆ ಬಾಳ ಹಾದಿಗೆ ಹಾಲು ಜೇನಾಗುವ ನೀತಿ ನಿಯಮಗಳನ್ನು ಕಲಿಸದೆ ಹೋದರೆ ನಮ್ಮ ಮಕ್ಕಳನ್ನು ನಾವೇ ಕೊಂದಂತೆ ಎನ್ನುವ ನುಡಿಮುತ್ತುಗಳನ್ನು ನಾವು ಎಂದರೆ ಪೋಷಕರು ಖಂಡಿತವಾಗಿಯೂ ನೆನಪಿನಲ್ಲಿ ಇಟ್ಟುಕೊಳ್ಳಲೇಬೇಕು.


ಇಂದಿನ ದಿನಗಳಲ್ಲಿ ಹೆಚ್ಚಾಗಿರುವ ಕೊಳ್ಳುಬಾಕ ಸಂಸ್ಕೃತಿ ಹಾಗೂ ಸಂಗ್ರಹಿಸಿಡುವ ಸಂಸ್ಕೃತಿಯಿಂದ ಉಂಟಾಗುತ್ತಿರುವ ಧನದಾಹದ ಕಾರಣ ಅಥವಾ ಧನಮದದ ಕಾರಣವೂ ಕೂಡ ಮಕ್ಕಳ ಕುರಿತು ನಮ್ಮ ಜವಾಬ್ದಾರಿಯನ್ನು ಮರೆತು ಮಕ್ಕಳಾಟವೆಂಬಂತೆ ಅವರಾಟಕ್ಕೆ ಕುಣಿದು ಕುಪ್ಪಳಿಸಿ ಮಕ್ಕಳಿಗೆ ಸರಿಯಾದ ಶಿಕ್ಷಣ, ಹಣದ ಬೆಲೆಯನ್ನು ಅಥವಾ ಬದುಕಿನ ಕಷ್ಟಸುಖಗಳನ್ನು ತಿಳಿಯಗೊಡದಂತೆ ಸಾಕುವ ನೆಪದಲ್ಲಿ ಅವರನ್ನು ಅಡ್ಡದಾರಿಗೆ ತಳ್ಳುವಂತಹ ಹೀನವಾದ ಕೃತ್ಯಗಳನ್ನು ನಾವೇ (ಪೋಷಕರು) ಮಾಡುತ್ತಿರುವುದು ಅಕ್ಷಮ್ಯ ಅಪರಾದವೆಂದರೆ ತಪ್ಪಾಗಲಾರದು. ಇದಕ್ಕೆಲ್ಲ ಶಿಕ್ಷೆಯ ರೂಪದಲ್ಲಿ ಮಕ್ಕಳು ನಮಗೆ ನೀಡುವ ಉತ್ತರ ಆತ್ಮಹತ್ಯೆ ಮಾಡಿಕೊಂಡು ಪುತ್ರ ಶೋಕಂ ನಿರಂತರಂ ಎನ್ನುವಂತೆ ನಮ್ಮ ಸಾವಿನತನಕ ನಾವು ಕೊರಗುವಂತೆ ಮಾಡುವುದು ಎನ್ನಬಹುದು. ಹಾಗಾದರೆ ಇದಕ್ಕೆಲ್ಲ ಪರಿಹಾರವನ್ನು ಕಂಡುಕೊಳ್ಳಲು ಸಾಧ್ಯವಿಲ್ಲವೇ ಎಂದು ಆಲೋಚಿಸಿದಾಗ ಕಂಡುಬರುವ ಅನೇಕ ವಿಚಾರಗಳನ್ನು ನಾವು ಗಮನಿಸಬಹುದು. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಪ್ರತಿಷ್ಠೆಯೆಂದುಕೊಂಡು ನಮ್ಮ ಆರ್ಥಿಕ ಸಾಮಾಜಿಕ ಸಾಮರ್ಥ್ಯವನ್ನು ಮೀರಿದ ಶಾಲೆಗಳಿಗೆ ಸೇರಿಸುವ ಅಗತ್ಯವಿದೆ ಎಂದು ಯೋಚನೆ ಕೂಡ ಮಾಡಬಾರದು. ಮಕ್ಕಳ ಸ್ನೇಹಿತರು ನಮ್ಮ ಆರ್ಥಿಕ ಸಾಮಾಜಿಕ ಮಟ್ಟಕ್ಕೆ ಸಮಾನಾಂತರವಾಗಿ ಇರುವಂತಿದ್ದರೆ ಮತ್ತು ಆರ್ಥಿಕವಾಗಿ ನಾವು ಅಥವಾ ಮಕ್ಕಳು ಇನ್ನೊಬ್ಬರೆದುರು ಕೈ ಚಾಚುವಂತಹ ಸಂದರ್ಭಗಳು ಬಾರದಿರುವಂತೆ ನಮ್ಮನ್ನು ಮತ್ತು ನಮ್ಮ ಆರ್ಥಿಕ ಸಾಮಾಜಿಕ ಸ್ಥಿತಿಗತಿಗಳನ್ನು ನಾವು ಮೊದಲು ಅರಿತುಕೊಂಡು ಶಾಲಾ ಕಾಲೇಜುಗಳ ಆಯ್ಕೆ ಮಾಡಿಕೊಂಡರೆ ಅದು ನಮ್ಮ ಮಕ್ಕಳ ಭವಿಷ್ಯಕ್ಕೆ ನಾವು ಹಾಕುವ ಬುನಾದಿಯಾದೀತು.


ಎದುರು ಮನೆಯವರು ಅತ್ಯಂತ ದೊಡ್ಡ ಮತ್ತು ಪ್ರತಿಷ್ಠಿತ ಶಾಲಾಕಾಲೇಜುಗಳಿಗೆ ತಮ್ಮ ಮಕ್ಕಳನ್ನು ಸೇರಿಸಿದ್ದಾರೆಂದು ನಾವೂ ಕೂಡ ಸಾಲ ಸೋಲವನ್ನು ಮಾಡಿ ನಮ್ಮ ಮಕ್ಕಳನ್ನು ಅಂತಹ ಶಾಲಾಕಾಲೇಜುಗಳಿಗೆ ಸೇರಿಸಿ ಬಳಿಕ ಮುಂದಿನ ವಿದ್ಯಾಭ್ಯಾಸವನ್ನು ಮುಗಿಸುವ ತನಕ ಮಿಕ್ಕುಳಿದ ಖರ್ಚು ವೆಚ್ಚಗಳನ್ನು ಭರಿಸಲು ಸಾಧ್ಯವಾಗದೇ ಮಕ್ಕಳೆದುರಿಗೆ ಕೈ ಚೆಲ್ಲುವುದು ಅಥವಾ ಅಸಹಾಯಕರಾಗುವುದು ಬೇಕೇನು. ಇಲ್ಲಿ ಇನ್ನೊಂದು ವಿಚಾರ ಶಾಲಾ ಕಾಲೇಜುಗಳಲ್ಲಿ ಇಂತಹ ಅತಂತ್ರ ಸ್ಥಿತಿಯನ್ನು ಹೊಂದಿರುವ ಮಕ್ಕಳನ್ನು ಹುಡುಕಿ ಸಹಾಯ ಮಾಡುವ ನೆಪದಲ್ಲಿ ಇಂತಹವರನ್ನು ಬಲಿಪಶುಗಳನ್ನಾಗಿ ಮಾಡಿಕೊಂಡು ಹಣದ ಅಮಿಸವೊಡ್ಡಿ ತಮ್ಮ ಕುಕೃತ್ಯಗಳಿಗೆ ಬಳಸಿ ಬಿಸಾಡುವ ದುಷ್ಟರು ಹೊಂಚು ಹಾಕುತ್ತಿರುತ್ತಾರೆ. ಅವರ ಬಲೆಗೆ ಇಂತಹ ಮಧ್ಯಮ ವರ್ಗದ ವಿದ್ಯಾರ್ಥಿಗಳು ಬಲಿಯಾಗುತ್ತಿರುವುದು ಕೂಡ ಬಹಿರಂಗ ಗುಟ್ಟು ಎನ್ನಬಹುದು. 


ಇನ್ನು ನಮ್ಮ ಮಗು ಕೆಟ್ಟು ಕೆರ ಹಿಡಿದ ಅರಿವು ನಮಗಾದ ಮೇಲೆ ತಾಳ್ಮೆಯಿಂದ ವ್ಯವಹರಿಸಿ ಸೂಕ್ತವಾದ ಚಿಕಿತ್ಸೆ ಮತ್ತು ವ್ಯವಸ್ಥೆಗಳನ್ನು ಮಾಡಲಾರದೆ ನಮ್ಮ ಹಿತೈಷಿಗಳಂತೆ ನಾಟಕವಾಡುವ ನಮ್ಮ ಶತ್ರುಗಳ ಕೈಗೆ ನಮ್ಮ ಮಕ್ಕಳ ಭವಿಷ್ಯವನ್ನು ಕೊಟ್ಟು ಮಕ್ಕಳಿಗೆ ಇರಿಸುಮುರಿಸಾಗಿ ಎಲ್ಲರ ಕಣ್ಣು ತಪ್ಪಿಸಿ ಆತ್ಮಹತ್ಯೆ ಮಾಡಿಕೊಂಡ ಉದಾಹರಣೆಗಳು ನಮ್ಮ ಕಣ್ಮುಂದೆ ಬಹಳಷ್ಟು ಇವೆ ಎಂದರೆ ತಪ್ಪಾಗಲಾರದು. ಏಕೆಂದರೆ ಬಹುತೇಕ ನಾವೆಲ್ಲರೂ ಸಹ ಸತ್ಯವಾದ ಕಟುನುಡಿಗಳನ್ನಾಡುವ ಹಿತೈಷಿಗಳಿಗಿಂತ ಸಿಹಿಯಾದ ಮೃದುವಾದ ಮಾತಿನಿಂದ ತಮ್ಮ ಸ್ವಾರ್ಥ ಸಾಧನೆಗೆ ಹಾದಿ ಮಾಡಿಕೊಳ್ಳುವ ಸ್ವಾರ್ಥಿಗಳನ್ನೇ ನಂಬುವುದು ಮತ್ತು ಇಂಬುಗೊಡುವುದು ವಾಸ್ತವವಾಗಿದೆ. ಇಂತಹ ಆತ್ಮಹತ್ಯೆಗೆ ಕಾರಣವಾದರೂ ಏನು ಎಂಬುದನ್ನು ನಾವು ಕಂಡುಕೊಂಡ ಅಂಶವೆಂದರೆ ಅದು ಅಸಹಾಯಕತೆ.


ಜೀವಮಾನದ ಸಾಧನೆಗಾಗಿ ಎಲ್ಲರಿಂದಲೂ ಪ್ರಶಂಸೆಗೆ ಪಾತ್ರರಾಗಿದ್ದ ವ್ಯಕ್ತಿಯು ತನ್ನ ಗೌರವ ಮಣ್ಣು ಪಾಲಾಯಿತು. ಇನ್ನು ನನ್ನನ್ನು ಗೌರವಿಸಲಾರರು ಎಂದು ಸ್ವಯಂ ನಿಶ್ಚಯಿಸಿಕೊಳ್ಳುವ ಅಪ್ರಬುದ್ಧತೆ. ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಲಾಗದೆ ಕಾಲ ಮಿಂಚಿದ ಮೇಲೆ ಸ್ವತಃ ಅಸಹಾಯಕರಾಗುವಿಕೆ. ಕಾಲಕಾಲಕ್ಕೆ ಮಾಡಬೇಕಾದ ಕರ್ತವ್ಯವನ್ನು ಸೋಮಾರಿತನದಿಂದ ಪೂರೈಸಿಕೊಳ್ಳಲು ಅಸಮರ್ಥರಾಗಿ ನಂತರ ಅಸಹಾಯಕತೆ ಹೀಗೆ ಹತ್ತು ಹಲವಾರು ಅಸಹಾಯಕತೆಯ ಪ್ರತಿರೂಪವೇ ಆತ್ಮಹತ್ಯೆಯ ರೂಪದಲ್ಲಿ ಅನೇಕ ಯುವಜನತೆ ಒಂದಷ್ಟು ಪ್ರಬುದ್ಧರನ್ನೂ ಕೂಡ ಬಿಡದಂತೆ ತನ್ನ ಕಬಂಧ ಬಾಹುಗಳಲ್ಲಿ ಅವಚಿಕೊಂಡಿದೆಯೆಂದರೆ ತಪ್ಪಾಗಲಾರದು. ಧನದಾಹಕ್ಕೆ ಸಿಲುಕಿ ಧನಾರ್ಜನೆಯಲ್ಲಿ ಮುಳುಗಿ ತಮ್ಮ ಮಕ್ಕಳ ಭವಿಷ್ಯಕ್ಕೆ ಸಂಪಾದಿಸುತ್ತಿದ್ದೇನೆ ಎಂದು ಸುಳ್ಳು ಸುಳ್ಳೆ ಆತ್ಮ ತೃಪ್ತಿ ಹೊಂದಿಕೊಂಡು ತಿರುಗುವಗುವ ಪೋಷಕರ ಧನದಾಹಕ್ಕೆ ಸಿಲುಕಿ ಅಸಹಾಯಕರಾದ ಮಕ್ಕಳು. ಆದರೆ ನಿಜವಾಗಿಯೂ ಆತ್ಮಹತ್ಯೆ ಎಂಬುದು ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಂತೂ ಅಲ್ಲವೇ ಅಲ್ಲ. ಇಂತಹ ಖಿನ್ನತೆಗೆ ಒಳಗಾದ ವ್ಯಕ್ತಿಗಳಿಗೆ ಸರಿಯಾದ ಮಾರ್ಗದರ್ಶನ ನೀಡುವ ಮೂಲಕ ಅವರ ದಿವ್ಯವಾದ ಪ್ರಾಣವನ್ನು ಉಳಿಸಿಕೊಳ್ಳಲು ನಮ್ಮಿಂದ ಸಾಧ್ಯವಾದಷ್ಟೂ ಹೆಚ್ಚಿನ ಸಹಾಯವನ್ನು ಮಾಡಬೇಕಾಗುತ್ತದೆ.


ಆದರೆ ಕೆಲವೊಮ್ಮೆ ಮಾತ್ರವಲ್ಲ ಬಹುತೇಕ ಸಂದರ್ಭಗಳಲ್ಲಿ ಆತ್ಮೀಯರು ಅಥವಾ ಒಬ್ಬ ಸಾಮರ್ಥ್ಯವುಳ್ಳ ಬಂಧುಗಳಿಗೆ ಇಂತಹ ಸಂದರ್ಭದ ಅರಿವಾಗುವುದು ಎಲ್ಲ ವಿಚಾರಗಳು ಮುಗಿದು ಕೊನೆಯ ಘಟ್ಟಕ್ಕೆ ತಲುಪಿದಾಗ ಮಾತ್ರ. ಅದಕ್ಕೆ ಒಂದು ಸ್ಪಷ್ಟವಾದ ಉದಾಹರಣೆ ಇತ್ತೀಚೆಗೆ ಒಬ್ಬ ಯುವಕ ತನ್ನ ಸ್ವಯಂ ಕೃತ ಅಪರಾಧವನ್ನು ಸಮರ್ಥ ವ್ಯಕ್ತಿಗೆ ತಿಳಿಸದೆ ತನ್ನ ತಂದೆತಾಯಿಗಳನ್ನು ಹೆದರಿಸಲೆಂದು ಬಹು ಕಠಿಣವಾದ ಕ್ರಿಮಿನಾಶಕವನ್ನು ಸೇವಿಸಿ ಬಳಿಕ ಆಸ್ಪತ್ರೆಯ ಹಾಸಿಗೆಯ ಮೇಲೆ ನಿಮಗೆ ನನಗಿಂತ ಹಣವೇ ಮುಖ್ಯವಾಯಿತಲ್ಲವೇ ಎಂದು ನಿಜವಾಗಿಯೂ ಮನೆ ಮಠ ತೋಟ ತುಡಿಕೆಗಳನ್ನು ಮಾರಾಟ ಮಾಡಿಯಾದರೂ ಮಗನನ್ನು ಉಳಿಸಿಕೊಳ್ಳಲು ತಯಾರಿದ್ದವರಿಗೆ ಆ ಯುವಕನ ಶ್ವಾಸಕೋಶವೇ ಬೆಂದುಹೋಗಿ ವೈದ್ಯರು ಕೂಡ ಅಸಹಾಯಕರಾಗಿದ್ದ ವಿಷಯ ತಿಳಿಯದೆ ಆಡಿದ ನುಡಿಗಳು ಮೊದಲೇ ನೊಂದವರನ್ನು ಮತ್ತಷ್ಟು ನೋಯಿಸಿತ್ತು. ಆತ್ಮಹತ್ಯೆ ಪಾಪದ ಕೆಲಸ ಎಂಬ ಮಾತಿನೊಂದಿಗೆ ಲೇಖನವನ್ನು ಮುಕ್ತಾಯಗೊಳಿಸುತ್ತೇನೆ. 


-ವೈಲೇಶ್ ಪಿ ಎಸ್, ಕೊಡಗು


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post