||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಸಿರಿವಂತೆಯ ಶ್ರೀಮಂತ ಬ್ರಹ್ಮ ರಥೋತ್ಸವ

ಸಿರಿವಂತೆಯ ಶ್ರೀಮಂತ ಬ್ರಹ್ಮ ರಥೋತ್ಸವ


ಶಿವಮೊಗ್ಗ ಜಿಲ್ಲೆ ಸಾಗರ ಪಟ್ಟಣದಿಂದ ನಾಲ್ಕು ಕಿ.ಮೀ. ದೂರದ ಹೆದ್ದಾರಿಯಲ್ಲಿರುವ ಒಂದು ಐತಿಹಾಸಿಕ ಸ್ಥಳ ಸಿರಿವಂತೆ. ಪೌರಾಣಿಕ ಹಾಗೂ ಸಾಂಸ್ಕøತಿಕ ಪ್ರಸಿದ್ಧಿ ಹೊಂದಿ ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ತ್ರಿಪುರಾಂತಕೇಶ್ವರ ಇಲ್ಲಿಯ ದೇವರು. ಹೆಸರಿಗೆ ತಕ್ಕಂತೆ ಪಾಕೃತಿಕ-ಸಾಂಸ್ಕೃತಿಕ-ಧಾರ್ಮಿಕ ಶ್ರೀಮಂತಿಕೆಯುಳ್ಳ ಶಕ್ತಿ ಸ್ಥಳವಿದು. 


ಈ ದೇವಸ್ಥಾನವು ಸುಮಾರು ಹನ್ನೆರಡನೇ ಶತಮಾನದಲ್ಲಿ ಅಂದಿನ ಪಾಳೇಗಾರರಿಂದ ನಿರ್ಮಾಣವಾಗಿ 300 ವರ್ಷಗಳ ಕಾಲ ಭಕ್ತಾದಿಗಳ ಪಾಲಿಗೆ ಪುಣ್ಯನೆಲೆ ಅದಾಗಿತ್ತು. ನಂತರದ ದಿನಗಳಲ್ಲಿ ಕಾರಣಾಂತರಿಂದ ಅನಾಥ ಸ್ಥಿತಿಗೆ ತಲುಪಿದರೂ ಆ ನೆಲದ ದಿವ್ಯ ಶಕ್ತಿ ಜೀವಂತವಾಗಿದ್ದು ಅಂಕುರಗೊಳ್ಳಲು ಹವಣಿಸುತ್ತಿತ್ತು. ಸಮಯ ಸಂದರ್ಭಗಳು ಕೂಡಿ ಬಂದಾಗ ಮತ್ತೊಮ್ಮೆ ಆ ಗತಕಾಲದ ವೈಭವ ಮರುಕಳಿಸಿ ಸೀಮೆ ದೇವಸ್ಥಾನವಾಗಿ ಪ್ರಸಿದ್ಧಿಹೊಂದಿರುವುದು ಸ್ಥಳ ಮಹಿಮೆಗೆ ಸಾಕ್ಷಿಯಾಗಿ ನಿಲ್ಲುತ್ತದೆ. ವೈಶಾಖ ಶುದ್ಧ ಪೂರ್ಣಿಮೆ ಅಂದರೆ ನಾಳೆ ದಿನಾಂಕ 16.05.2022 ರಂದು ಬ್ರಹ್ಮರಥೋತ್ಸವ ಅತ್ಯಂತ ಸಂಭ್ರಮದಿಂದ ನಡೆಯುತ್ತದೆ.


ಪಾಂಚರಾತ್ರಾಗಮದ ರೀತಿಯಲ್ಲಿ ನಡೆಯುವ ಮೂರು ದಿವಸದ ಧಾರ್ಮಿಕ ಕಾರ್ಯಕ್ರಮಗಳು ಇಲ್ಲಿಯ ವಿಶೇಷ. ವಿಶಿಷ್ಠವಾಗಿ ನಿರ್ಮಿಸಿದ ಯಾಗಶಾಲೆಯಲ್ಲಿ ಕಂಕಣಧಾರರು ಮುಖ್ಯ ತಾಂತ್ರಿಕರೊಡಗೂಡಿ ಅಗ್ನಿ ಜನನ, ಬೀಜವಾಪನ, ಕೌತುಕಬಂಧನ, ಅಷ್ಟಾವಧಾನ ಸೇವೆ, ಭೇರಿತಾಡನ, ಶಿಬಿಕ ಯಂತ್ರೋತ್ಸವ ಹಾಗೂ ಮಹಾಬಲಿ ಕಾರ್ಯಕ್ರಮಗಳು ಇಡೀ ದೇಗುಲಕ್ಕೆ ಒಂದು ಧಾರ್ಮಿಕ ಹಾಗೂ ಸಾಂಸ್ಕøತಿಕ ವಾತಾವರಣವನ್ನು ನಿರ್ಮಿಸುತ್ತದೆ. 


ಉತ್ಸವಗಳು ಧಾರ್ಮಿಕ ಹಾಗೂ ಸಾಂಸ್ಕøತಿಕ ಮೌಲ್ಯಗಳಿಗೆ, ಸಂಘಟನೆಯ ಸಂವರ್ಧನೆಗೆ ಕಾರಣವಾಗುತ್ತವೆ ಎನ್ನುವುದಕ್ಕೆ ಈ ರಥೋತ್ಸವ ಒಂದು ನಿದರ್ಶನ. ಕಾಷ್ಠ ಶಿಲ್ಪಗಳಿಂದ ಕೂಡಿದ ಈ ರಥ, ಉತ್ಸವದ ಸಂದರ್ಭದಲ್ಲಿ ಪರಿಶಿಷ್ಠ ಜಾತಿ ಮತ್ತು ಒಕ್ಕಲಿಗರಿಂದ ವಿಶೇಷವಾಗಿ ಅಲಂಕಾರಗೊಳ್ಳುತ್ತದೆ. ಉತ್ಸವ ಮೂರ್ತಿಯ ರಥಾರೋಹಣದ ನಂತರ ಅದರ ಒಂದೊಂದು ಗಾಲಿಗಳಿಗೆ ಅಲ್ಲಿಯ ಮಡಿವಾಳರು, ದೀವರು ತೆಂಗಿನಕಾಯನ್ನು ಕೊಟ್ಟು ಚಾಲನೆಗೆ ಅವಕಾಶ ಮಾಡಿಕೊಡುತ್ತಾರೆ. ಹೀಗೆ ಯಾವುದೇ ಒಂದು ಜಾತಿಗೆ ಸೀಮಿತಗೊಳ್ಳದೆ ಹತ್ತು ಹಲವು ಜಾತಿಗಳು ಸೇರಿ ಒಂದು ಸಮಗ್ರ ನೋಟದೊಂದಿಗೆ ಸಾಮಾಜಿಕ ನ್ಯಾಯಕ್ಕೆ ಕುಂದು ಬಾರದಂತೆ ತೇರನ್ನೆಳೆಯುವ ಸಂಭ್ರಮದಲ್ಲಿ ಎಲ್ಲಾ ಭಕ್ತರು ಒಟ್ಟಾಗಿ ಸೇರುತ್ತಾರೆ. ದೇವರಿಗೆ ನವಧಾನ್ಯವನ್ನು ಬೀರುತ್ತಾ ಭೂ ಸಂಪತ್ತು, ವ್ಯಾಪಾರ ವ್ಯವಹಾರ, ಕೌಟುಂಬಿಕ ನೆಮ್ಮದಿ ಮುಂತಾದವುಗಳನ್ನು ಈಡೇರಿಸಲು ಆ ಕರುಣಾಜನಕನನ್ನು ಭಕ್ತಿಯಿಂದ ಬೇಡಿಕೊಳ್ಳುತ್ತಾರೆ.


ಮಾತುಗಾರಿಕೆ:

ರಥೋತ್ಸವದ ಮಾರನೆಯ ದಿನ ಕುಂಕುಮೋತ್ಸವ ನಡೆದು ಸಂಜೆ ಮಾತುಗಾರಿಕೆ ಎನ್ನುವ ಒಂದು ವಿಶಿಷ್ಟ ಸಾಂಸ್ಕೃತಿಕ ಕಾರ್ಯಕ್ರಮ ನೆಡೆಯುತ್ತದೆ. ಕಥನ-ಕವನ ರೂಪದಲ್ಲಿರುವ ಈ ಪ್ರಸಂಗ ಜಾನಪದ ಶೈಲಿಯಲ್ಲಿದ್ದು, ಪೌರಾಣಿಕ ಹಿನ್ನಲೆಯುಳ್ಳ ಒಂದು ಸುಂದರವಾದ ಕಥೆ ಬಿಚ್ಚಿಕೊಳ್ಳುತ್ತದೆ. 

ಶಿವ ಪಾರ್ವತಿಯರು ಶಯನೋತ್ಸವದ ಸಂಭ್ರಮದಲ್ಲಿರುವ ಸಂದರ್ಭದಲ್ಲಿ ಮಂದರ ಪರ್ವತದಲ್ಲಿರುವ ಋಷಿಗಳು ಕೈಲಾಸಕ್ಕೆ ಬಂದು, ರಾಕ್ಷಸರ ಹಾವಳಿಯಿಂದ ತಮಗಾದ ಕಷ್ಟವನ್ನು ಹೋಗಲಾಡಿಸಲು ಶಿವನ ಮೊರೆ ಹೋಗುತ್ತಾರೆ, ಶಿವ ಪಾರ್ವತಿಗೆ ತಿಳಿಯದಂತೆ ಎದ್ದು ಹೋಗಿ ಲೋಕ ಕಲ್ಯಾಣಕ್ಕಾಗಿ ಋಷಿಗಳ ಸಂಕಷ್ಟವನ್ನು ಪರಿಹರಿಸಿದ ಭಕ್ತ ವತ್ಸಲನಾಗುತ್ತಾನೆ. ಇತ್ತ ಪಾರ್ವತಿ ಎಚ್ಚೆತ್ತು ನೋಡಿದಾಗ ಶಿವ ಇಲ್ಲದಿರುವುದು ಅವಳ ಕೋಪಕ್ಕೆ ಕಾರಣವಾಗುತ್ತದೆ. ತನಗೆ ತಿಳಿಸದೆ ಹೋದ ಸಿಟ್ಟಿಗಾಗಿ ಬಾಗಿಲನ್ನು ಭದ್ರವಾಗಿ ಹಾಕಿ ಹುಸಿಮನಸ್ಸನ್ನು ತೋರಿಸುತ್ತಾ ಚಡಪಡಿಸುತ್ತಾಳೆ. ಶಿವ ತಿರುಗಿ ಬಂದು ಬಾಗಿಲು ಬಡಿಯುತ್ತಾ, ಎಷ್ಟೇ ಬೇಡಿಕೊಂಡರೂ ಬಾಗಿಲು ತೆರೆಯುವುದಿಲ್ಲ. ಆ ಸಂದರ್ಭದಲ್ಲಿ ಅವಳನ್ನು ಸಮಾಧಾನ ಪಡಿಸಲು ಶಿವ ಕೊಡುವ ಕಾರಣಗಳು, ಅದಕ್ಕೆ ಪ್ರತ್ಯುತ್ತರವಾಗಿ ಪಾರ್ವತಿಯ ಮಾತುಗಳು ವ್ಯಂಗ್ಯ ಹಾಗೂ ಹಾಸ್ಯದಿಂದೊಡಗೂಡಿ ಪ್ರೇಕ್ಷಕರಿಗೆ ರಂಜನೆಯನ್ನು ಒದಗಿಸುತ್ತದೆ. ಹೀಗೆ ಇವರಿಬ್ಬರ ಮಧ್ಯೆ ನಡೆಯು ಸ್ವಾರಸ್ಯಕರ ಸಂಭಾಷಣೆಯೇ ಈ ಮಾತುಗಾರಿಕೆ. ಶಿವನ ಪರವಾಗಿ ಹಾಗೂ ಪಾರ್ವತಿಯ ಪರವಾಗಿ ಎರಡು ಗುಂಪು ಮಾಡಿಕೊಂಡು, ಹಾಡಿಗೆ ತಕ್ಕಂತೆ ಸಾಂದರ್ಭಿಕವಾಗಿ ಹೇಳುವ ಆಶು ಸಂಭಾಷಣೆ ಪಾತ್ರಧಾರಿಗಳ ನೈಪುಣ್ಯತೆಯನ್ನು ಎತ್ತಿ ತೋರಿಸುತ್ತದೆ. ಶಿವ ಪಾರ್ವತಿಯ ಪಾತ್ರಧಾರಿಗಳು ಆ ಪಾತ್ರಗಳಿಗೆ ಜೀವತುಂಬಿ, ಸನ್ನಿವೇಶ ಪ್ರಜ್ಞೆಯಿಂದ ಕಥೆಗೊಂದು ಕಳೆಕಟ್ಟಿ ಕಲಾಭಿಮಾನಿಗಳ ಕುತುಹೂಲವನ್ನು ಹೆಚ್ಚಿಸುತ್ತಾರೆ. ಇದು ಒಂದರ್ಥದಲ್ಲಿ ನಮ್ಮ ಯಕ್ಷಗಾನ ಹಾಗು ತಾಳಮದ್ದಳೆಯ ಪ್ರಸಂಗವನ್ನು ನೆನಪಿಸುತ್ತದೆ. ವೇಷ ಕಟ್ಟದಿದ್ದರೂ ಹಿಮ್ಮೇಳ-ಮುಮ್ಮೇಳಗಳನ್ನು ಹೊಂದಿ ಕಲಾಭಿಮಾನಿಗಳಿಗೆ ರಸದೌತಣವನ್ನು ನೀಡುವ ಒಂದು ಅಪೂರ್ವ ಕಾರ್ಯಕ್ರಮವಾಗಿ ಜನಮನದಲ್ಲಿ ಉಳಿದಿದೆ.   


ರಥೋತ್ಸವದ ಮಾರನೆಯ ದಿವಸ ಅಂದರೆ ಕುಂಕುಮೋತ್ಸವದ ದಿನ ಹತ್ತಿರದಲ್ಲಿರುವ ನದಿಯಲ್ಲಿ ಉತ್ಸವ ಮೂರ್ತಿಯೊಂದಿಗೆ ಕಂಕಣಧಾರಿಗಳು ತಾಂತ್ರಿಕರು ಸ್ನಾನವನ್ನು ಮಾಡಿ ನಂತರ ದೇಗುಲಕ್ಕೆ ಬಂದು ಓಕುಳಿಯಾಡಿ ಅಷ್ಟಾಂಗ ಸೇವೆಯೊಂದಿಗೆ ಅಂದಿನ ಕಾರ್ಯಕ್ರಮಕ್ಕೆ ಮಂಗಳವನ್ನು ಹಾಡುತ್ತಾರೆ. ಅಂದೇ ಸಾಯಂಕಾಲ ಯಾವುದಾದರು ಒಂದು ಪೌರಾಣಿಕ ಯಕ್ಷಗಾನವನ್ನು ಹಮ್ಮಿಕೊಂಡು ಬೆಳಗಿನವರೆಗೂ ಅದು ನಡೆಯುತ್ತದೆ. ಕೊನೆಯ ದಿನ ಸಂಪ್ರೋಕ್ಷಣ್ಯದಲ್ಲಿ ಅಂಕುರಪ್ರಸಾದದ ವಿನಿಯೋಗದೊಂದಿಗೆ ರಥೋತ್ಸವ ನೆಲೆನಿಲ್ಲುತ್ತದೆ.

-ನಾರಾಯಣ ಭಟ್ ಹುಳೇಗಾರು 

(ಹವ್ಯಾಸಿ ಲೇಖಕರು)


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ0 Comments

Post a Comment

Post a Comment (0)

Previous Post Next Post