|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಶಂಕರಂ ಲೋಕಶಂಕರಮ್: ಇಂದು ಶ್ರೀ ಶಂಕರ ಜಯಂತಿ

ಶಂಕರಂ ಲೋಕಶಂಕರಮ್: ಇಂದು ಶ್ರೀ ಶಂಕರ ಜಯಂತಿ



ಅದ್ವೈತ ಮತದ ಮೂಲಕ ಇಡೀ ಲೋಕಕ್ಕೆ ಮನೆಮಾತಾದವರು ಜಗದ್ಗುರು ಶ್ರೀ ಶಂಕರಾಚಾರ್ಯರು. 'ಬ್ರಹ್ಮಸತ್ಯಂ ಜಗತ್ ಮಿತ್ಯಮ್' ಎಂದು ಸಾರಿದ ಮಹಿಮರು. ಅದ್ವೈತ ಎಂದರೆ ಎರಡಿಲ್ಲ ಎಂಬುದು.. ಪರಮಾತ್ಮ ತತ್ತ್ವ ಬೇರೆ ಅಲ್ಲ ಜೀವಾತ್ಮ ತತ್ತ್ವ ಬೇರೆ ಅಲ್ಲ ಎಂಬ ಮಹಾತತ್ತ್ವದ ಪ್ರತಿಪಾದಕರು. 

       

ಶ್ರೀ ಶಂಕರರು ಕ್ರಿ.ಶ. 780 ರಲ್ಲಿ ಕೇರಳದ ಕಾಲಟಿಯಲ್ಲಿ ಆರ್ಯಾಂಬಾ ಹಾಗೂ ಶಿವಗುರು ದಂಪತಿಯ ಪುತ್ರನಾಗಿ ಶಿವನ ವರಪ್ರಸಾದದಿಂದ ಜನಿಸಿದರು. ತಂದೆ ಬೇಗ ಕಾಲವಾದಾಗ ತಾಯಿಯ ಆರೈಕೆಯಲ್ಲಿ ಬೆಳೆದರು. ತಾಯಿಯ ಮನವಲಿಸಿ ಚಿಕ್ಕವಯಸ್ಸಿನಲ್ಲೇ ಸನ್ಯಾಸಿಯಾಗಲು ಮನಮಾಡಿ ಮನೆಬಿಟ್ಟು ಗುರುವನ್ನು ಅರಸಿ ಹೊರಟರು. ನರ್ಮದಾ ನದೀ ತೀರದಲ್ಲಿದ್ದ ಗೋವಿಂದ ಭಗವತ್ಪಾದರನ್ನು ಗುರುವಾಗಿ ಸ್ವೀಕರಿಸಿ ವೇದ ಶಾಸ್ತ್ರಗಳ ಅಧ್ಯಯನ ಮಾಡಿದರು. 

  

ಇಡೀ ಭಾರತವನ್ನು ಕಾಲ್ನಡಿಗೆಯಲ್ಲಿ ಸುತ್ತಿ ಸನಾತನ ಧರ್ಮವನ್ನು ಬೋಧಿಸುತ್ತಾ ದೇಶದ ನಾಲ್ಕು ದಿಕ್ಕುಗಳಲ್ಲಿ ಮಠಗಳನ್ನು ಸ್ಥಾಪಿಸಿದರು. ಶಂಕರರು ಉಪನಿಷತ್ತುಗಳಲ್ಲಿ ಸನಾತನ ಧರ್ಮದ ಗಹನ ವಿಚಾರಗಳನ್ನು ಹಾಗೂ ತತ್ವಶಾಸ್ತ್ರವನ್ನು ಕಂಡು ಅದನ್ನು ಪ್ರಚುರಪಡಿಸಿದರು. ಉಪನಿಷತ್ತು, ಬ್ರಹ್ಮಸೂತ್ರ ಹಾಗೂ ಗೀತೆಗಳ ಮೇಲೆ ಭಾಷ್ಯಬರೆದರು. ಇವು ಇಂದು ಪ್ರಸ್ಥಾನತ್ರಯಗಳೆಂದು ಪ್ರಸಿದ್ಧವಾಗಿವೆ. ಇವುಗಳು ಸನಾತನ ಧರ್ಮದ ಆಧಾರಸ್ತಂಭಗಳೆಂದರೆ ತಪ್ಪಿಲ್ಲವೆಂದು ಹೇಳಬಹುದು.

     

ಶಂಕರರು ಪ್ರಪಂಚವು ಮಾಯೆಯೆಂದರು. ಜಗತ್ತು ನಿತ್ಯವಲ್ಲದ್ದು ಬ್ರಹ್ಮಸತ್ಯಂ ಎಂಬುದು ಅವರ ಬಲವಾದ ಮತ. ಮನುಷ್ಯನ ಆತ್ಮ ಬ್ರಹ್ಮನಿಂದ ಬೇರೆಯಲ್ಲ. ಬ್ರಹ್ಮನು ಅನಾದಿ, ಅನಂತ ಹಾಗೂ ಬ್ರಹ್ಮನನ್ನು ವರ್ಣಿಸಲು ಸಾಧ್ಯವಿಲ್ಲ. ಆ ಬ್ರಹ್ಮನಲ್ಲಿ ಒಂದಾಗುವುದು ಆತ್ಮದ ಗುರಿಯಾಗಬೇಕು. ಇದಕ್ಕೆ ಮುಖ್ಯವಾಗಿ ನಮ್ಮ ಅಜ್ಞಾನಗಳನ್ನು ಹೋಗಲಾಡಿಸಿಕೊಳ್ಳಬೇಕು. ಇದು ಶ್ರೀಶಂಕರರ ಉಪದೇಶ ಹಾಗೂ ತತ್ವವಾಗಿದೆ.  

    

ಕರ್ಮವೇ ಪ್ರಧಾನವೆಂಬ ಕರ್ಮದ ಮಾರ್ಗವನ್ನು ಹಾಗೂ ಎಲ್ಲವೂ ಶೂನ್ಯವೆಂಬ ಶೂನ್ಯ ಮಾರ್ಗವನ್ನು ವಿರೋಧಿಸಿ ಜ್ಞಾನಮಾರ್ಗವನ್ನು ಪ್ರತಿಪಾದಿಸಿದರು. ಈ ಮೂಲಕ ಬೌದ್ಧರನ್ನು ವಾದದ ಮೂಲಕ ಸೋಲಿಸಿದರು. "ಅಹಂ ಬ್ರಹ್ಮಾಸ್ಮಿ" ಎಂಬುದಾಗಿ ಹೇಳುದರ ಮೂಲಕ ಪರಮಾತ್ಮನ ಎದುರು ಯಾರು ಮೇಲು ಕೀಳಲ್ಲ ಎಂಬುದನ್ನು ಸಾರಿದರು.

     

ಪ್ರಸ್ಥಾನತ್ರಯ ಭಾಷ್ಯಗಳನ್ನಲ್ಲದೆ ಅನೇಕ ವಿದ್ವತ್ಪೂರ್ಣ ಗ್ರಂಥಗಳನ್ನು ರಚಿಸಿದರು. ಲೋಕದಲ್ಲಿ ಪ್ರಸಿದ್ದವಾದ 'ಭಜ ಗೋವಿಂದಮ್' ಸ್ತೋತ್ರವೇ ಮುಂತಾದ ಸಾವಿರಾರು ಸ್ತೋತ್ರಗಳನ್ನು ಬರೆದರು. ಇಡೀ ಭಾರತದ ಅನೇಕ ಕಡೆ ಮಠಗಳನ್ನು ಮಾತ್ರವಲ್ಲದೆ ಸನ್ಯಾಸಿ ಸಂಘಗಳನ್ನು ರಚಿಸಿದರು. ಪ್ರಾಯಾಗ ಅಂದರೆ ಈಗಿನ ಅಲಹಾಬಾದ್ ನಲ್ಲಿ ಹನ್ನೆರಡು ವರ್ಷಗಳಿಗೊಮ್ಮೆ ಜರಗುವ  ಕುಂಭಮೇಳವನ್ನು ಆರಂಭಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಕಾಶ್ಮೀರದ ಸರ್ವಜ್ಞ ಪೀಠ ಏರಿದ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ.

      

ಜನರು ಯಾವ ದೇವರನ್ನು ಪೂಜಿಸಬೇಕೆಂಬ ಗೊಂದಲದಲ್ಲಿದಾಗ ಪಂಚಾಯತನ ಪೂಜೆ ಮಾಡಿ ಎಂದು ಕರೆಕೊಟ್ಟು ಆ ಮೂಲಕ ಶಿವ, ಗಣಪತಿ, ವಿಷ್ಣು, ಸೂರ್ಯ ಹಾಗೂ ದುರ್ಗೆಯನ್ನು ಆರಾಧಿಸಿ ಎಂದರು. ಒಂದು ಕಾಲದಲ್ಲಿ ನಶಿಸಿಹೋಗಲು ತೊಡಗಿದ್ದ ಸನಾತನ ಧರ್ಮದ ಉತ್ಥಾಪನೆಗೆ ಶ್ರೀಶಂಕರರ ಕೊಡುಗೆ ಅಪಾರವಾದದ್ದು. 

         

ಹೀಗೆ ಅತ್ಯಂತ ಸಣ್ಣ ವಯಸ್ಸಿನಲ್ಲೇ ಧರ್ಮದ ಅಡಿಪಾಯವನ್ನು ಗಟ್ಟಿಮಾಡಿ ಕೊಟ್ಟು ತನ್ನ ಮೂವತ್ತೆರಡನೆಯ ವಯಸ್ಸಿನಲ್ಲಿ ಇಹ ಲೋಕ ತ್ಯಜಿಸಿ ಅಮರರಾಗಿದ್ದಾರೆ.  


ಪ್ರತಿ ವರ್ಷ ವೈಶಾಖ ಶುದ್ಧ ಪಂಚಮಿಯಂದು ಶಂಕರ ಜಯಂತಿ ಪರ್ವ ಕಾಲ. ಈ ವರ್ಷ ಮೇ ತಿಂಗಳ ಆರನೆಯ ತಾರೀಕು ಶಂಕರ ಜಯಂತಿಯ ಆಚರಣೆ. ಈ ಮೂಲಕ ಅವರನ್ನು ನೆನೆದು ಕೃತಕತ್ಯರಾಗೋಣ.

-ಡಾ. ಪ್ರಸನ್ನಕುಮಾರ್ ಐತಾಳ್

ಸಂಸ್ಕೃತ ಭಾಷಾ ವಿಭಾಗ

ಎಸ್.ಡಿ.ಎಮ್ ಕಾಲೇಜು

ಉಜಿರೆ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ




hit counter

0 Comments

Post a Comment

Post a Comment (0)

Previous Post Next Post