ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರಿನ ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ 1915ನೇ ಮೇ 5 ರಂದು ಅಧಿಕೃತವಾಗಿ ಉದ್ಘಾಟನೆಯಾಯಿತು. ಆಗ ಮೈಸೂರು ಅರಸರಾಗಿದ್ದ ರಾಜರ್ಷಿ ನಾಲ್ಮಡಿ ಕೃಷ್ಣರಾಜ ಓಡೆಯರು ಈ ಪರಿಷತ್ತಿನ ಸ್ಥಾಪನೆಗೆ ಚಾಲನೆ ನೀಡಿದರು. ಆರಂಭವಾದಾಗ ಕರ್ನಾಟಕ ಸಾಹಿತ್ಯ ಪರಿಷತ್ತು ಎಂದು ಸ್ಥಾಪನೆಯಾಯಿತು. ಮುಂದೆ 1925ರಲ್ಲಿ ಈ ಹೆಸರನ್ನು ಕನ್ನಡ ಸಾಹಿತ್ಯ ಪರಿಷತ್ತು ಎಂದು ಬದಲಾಯಿಸಲಾಯಿತು. ಮೇ 5 ರಂದು ನಮ್ಮ ಕನ್ನಡ ಸಾಹಿತ್ಯ ಪರಿಷತ್ತು ಆರಂಭವಾದ ಸವಿನೆನಪಿಗಾಗಿ ಪ್ರತಿ ವರ್ಷ ನಮ್ಮ ಕನ್ನಡ ನಾಡಿನಲ್ಲಿ ಮೇ 5ರಂದು “ಕನ್ನಡ ಸಾಹಿತ್ಯ ಪರಿಷತ್ತು ಸಂಸ್ಥಾಪನಾ ದಿವಸ” ಎಂದು ಆಚರಿಸಿ ರಾಜ್ಯದೆಲ್ಲೆಡೆ ಸಂಭ್ರಮಿಸುತ್ತೇವೆ. ಕನ್ನಡ ನಾಡಿನ ನಾಡು, ನುಡಿ, ಮತ್ತು ಜನರ ಹಿತಾಸಕ್ತಿಗಳನ್ನು ಸಂರಕ್ಷಿಸುವ ಹೊಣೆಗಾರಿಕೆ ಮತ್ತು ವಿಶೇಷ ಜವಾಬ್ದಾರಿ ಈ ಕನ್ನಡ ಸಾಹಿತ್ಯ ಪರಿಷತ್ತಿಗೆ ಇದೆ. ಇದರ ಜೊತೆಗೆ ಕನ್ನಡ ಸಾಹಿತಿಗಳಿಗೆ ಮತ್ತು ಕವಿಗಳಿಗೆ ಪ್ರೋತ್ಸಾಹ, ಕನ್ನಡ ಪುಸ್ತಕಗಳ ಪ್ರಕಟನೆ, ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆÀ, ಕನ್ನಡ ಭಾಷೆಯ ರಕ್ಷಣೆ, ಕನ್ನಡ ಶಾಲೆಗಳ ಉಳಿವಿಗಾಗಿ ಹೋರಾಟ ಮುಂತಾದ ಹತ್ತು ಹಲವು ಕಾರ್ಯಗಳನ್ನು ಕಸಾಪ ನಿರಂತರವಾಗಿ ಮಾಡುತ್ತದೆ. ಕನ್ನಡ ಸಾಹಿತ್ಯದ ಸವಿಯನ್ನು ನಾಡಿನ ಮೂಲೆ ಮೂಲೆಗೆ ತಲುಪಿಸುವ ಮತ್ತು ವಿಸ್ತರಿಸುವ ಅಭೂತಪೂರ್ವ ಕಾರ್ಯವನ್ನು ಕಸಾಪ ಸದ್ದಿಲ್ಲದೆ ಮಾಡುತ್ತಿರುವುದು ಸಮಾಧಾನಕರ ಅಂಶವಾಗಿದೆ.
ಚರಿತ್ರೆ:
ಬ್ರಿಟಿಷರು ಟಿಪ್ಪುವನ್ನು ಸೋಲಿಸಿ ಮೈಸೂರು ರಾಜ್ಯವನ್ನು ವಶಪಡಿಸಿಕೊಂಡ ಬಳಿಕ, 1881ರಲ್ಲಿ ಚಾಮರಾಜೇಂದ್ರ ಒಡೆಯರು ಪಟ್ಟವನ್ನೇರಿದರು. ಆಗಿನಿಂದ ದಿವಾನರ ಆಡಳಿತ ಆರಂಭವಾಯಿತು. ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಸರ್. ಎಮ್. ವಿಶ್ವೇಶ್ವರಯ್ಯ 1912ರಲ್ಲಿ ದಿವಾನರಾದರು. 1912 ರಿಂದ 1918ರ ವರೆಗೆ ಅವರು ದಿವಾನರಾಗಿದ್ದರು. ಅವರು ಮೈಸೂರು ಸಾಮ್ರಾಜ್ಯ ಅಭಿವೃದ್ಧಿಗಾಗಿ 1912ರಲ್ಲಿ ಮೈಸೂರು ಇಕಾನೋಮಿಕ್ ಕಾನ್ವರೆನ್ಸ್ ಆರಂಭಿಸಲು ಮಹಾರಾಜರಿಗೆ ಸಲಹೆ ನೀಡಿದರು. ಅವರ ಸಲಹೆಯಂತೆ ಆ ಸಂಸ್ಥೆಗೆ ಮೂರು ಉಪಸಮಿತಿಯ ರಚನೆಯಾಯಿತು. ಅದರಲ್ಲಿ 2ನೇ ವಿದ್ಯಾ ಸಮಿತಿಯಲ್ಲಿ ಮೈಸೂರು ವಿಶ್ವವಿದ್ಯಾಲಯ ಸ್ಥಾಪನೆ ಮತ್ತು ಕನ್ನಡ ಅಕಾಡಮಿ (ಇಂದಿನ ಕನ್ನಡ ಸಾಹಿತ್ಯ ಪರಿಷತ್ತು) ಸ್ಥಾಪನೆ ವಿಚಾರ ಮುನ್ನೆಲೆಗೆ ಬಂದಿತು. ಈ ವಿಚಾರದ ಬಗ್ಗೆ ವಿದ್ಯಾವಂತರ ಅಭಿಪ್ರಾಯ ತಿಳಿಯಲು ವಿದ್ಯಾ ಸಮಿತಿ ಹಲವು ಉಪನ್ಯಾಸಗಳನ್ನು ವಿದ್ವಜ್ಜನರಿಂದ ಏರ್ಪಡಿಸಿದರು. ಈ ಹಿನ್ನಲೆಯಲ್ಲಿ ಮೊದಲ ಉಪನ್ಯಾಸ 1912-13ರಲ್ಲಿ ಬಿ.ಎಮ್.ಶ್ರೀ ಯವರಿಂದ ನಡೆಯಿತು.
1915 ಮಾರ್ಚ್ 22 ರಂದು ಉಪಸಮಿತಿ ಸೇರಿ ಹಲವಾರು ಪ್ರಮುಖ ನಿರ್ಣಯಗಳನ್ನು ಚರ್ಚಿಸಿ ಅನುಷ್ಠಾನಕ್ಕೆ ತರಲು ಉದ್ದೇಶಿಸಿದರು.
ಅದರಲ್ಲಿ ಕೆಲವು ಪ್ರಮುಖ ವಿಚಾರಗಳು ಈ ಕೆಳಗಿನಂತಿವೆ.
1. ಕನ್ನಡ ನಾಡಿನ ಪ್ರಾಮುಖ್ಯರನ್ನು ಸೇರಿಸಿ, ಆಗಾಗ ಸಭೆ ನಡೆಸಿ ಸಮರ್ಥ ವಿಧ್ಯಾವಂತರಿಂದ ಉಪನ್ಯಾಸ ಏರ್ಪಡಿಸುವುದು.
2. ಕನ್ನಡ ಮಾತನಾಡುವ ಪ್ರದೇಶಗಳನ್ನು ಗುರುತಿಸಿ, ಕನ್ನಡ ವಾಚನಾಲಯ ಮತ್ತು ಗ್ರಂಥ ಭಂಡಾರ ನಿರ್ಮಿಸುವುದು.
3. ಕನ್ನಡ ಸಾಹಿತ್ಯ ಕೃಷಿ ಮಾಡುತ್ತಾ ಸಂಶೋಧನೆ ಮಾಡುವ ವಿದ್ವಾಂಸರಿಗೆ ಪಂಡಿತ ವೇತನ ನೀಡುವುದು.
4. ಕನ್ನಡ ಭಾಷೆಯಲ್ಲಿ ಪಂಡಿತಯೋಗ್ಯವಾದ ವ್ಯಾಕರಣ, ಚರಿತ್ರೆ, ನಿಘಂಟು ಈ ಮೂರನ್ನು ಬರೆಸುವುದು ಮತ್ತು ಬರೆಯುವುದಕ್ಕೆ ಸಹಾಯ ಮಾಡುವುದು.
5. ಉತ್ಕøಷ್ಟವಾದ ಪ್ರಾಚೀನ ಕನ್ನಡ ಗ್ರಂಥಗಳನ್ನು, ಕನ್ನಡ ದೇಶÀದ ಚರಿತ್ರೆ ಇರುವ ಗ್ರಂಥಗಳನ್ನು ಸಂಗ್ರಹಿಸಿ, ಪರಿಷ್ಕರಿಸಿ ಪುನರ್ ಪ್ರಕಟಿಸುವುದು ಮತ್ತು ಕಾಪಾಡಿಕೊಳ್ಳುವುದು.
ಈ ಸಮಿತಿಯಲ್ಲಿ ನಿರ್ಣಯವಾದಂತೆ ಮೊದಲು ಕರ್ನಾಟಕ ಸಾಹಿತ್ಯ ಪರಿಷತ್ತಿನ ಸ್ಥಾಪನೆ ಮೇ 5 ರಂದು 1915 ನೇ ಇಸವಿಯಲ್ಲಿ ಆರಂಭವಾಗಿ, ಅದೇ ದಿನ ಮೇ 5 ರಂದು ಕನ್ನಡ ಸಾಹಿತ್ಯ ಸಮ್ಮೇಳನ ಮಧ್ಯಾಹ್ನ 3 ಗಂಟೆಗೆ ಆರಂಭವಾಯಿತು. ಹೀಗೆ ಸ್ಥಾಪಿತವಾದ ಕನ್ನಡ ಸಾಹಿತ್ಯ ಪರಿಷತ್ತಿನ ಮೊದಲ ಅಧ್ಯಕ್ಷರಾಗಿ ಎಚ್. ವಿ. ನಂಜುಡಯ್ಯ ಅವರು ಆಯ್ಕೆಯಾದರು. ಸುಮಾರು 108 ವರುಷಗಳ ಇತಿಹಾಸ ಇರುವ ಕಸಾಪ.ಗೆ ಈಗ ಅಧ್ಯಕ್ಷರಾಗಿ ನಾಡೋಜ ಶ್ರೀ. ಡಾ| ಮಹೇಶ ಜೋಷಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕನ್ನಡದ ಭಾಷೆ ಸಾಹಿತ್ಯ ಕಲೆ, ಜಾನಪದ, ಸಂಸ್ಕøತಿಗಳ ಸಂವೇದನೆ ಹಾಗೂ ಸಂರಕ್ಷಣೆಯ ಮಹದಾಶಯದೊಂದಿಗೆ 05/05/1915ರಲ್ಲಿ ಆರಂಭಗೊಂಡ ಕನ್ನಡ ಸಾಹಿತ್ಯ ಪರಿಷತ್ತು, ಒಂದು ರೀತಿಯಲ್ಲಿ ಕನ್ನಡ ಸಂಸ್ಕøತಿಯ ಮೇರು ಸಂಸ್ಥೆ ಎಂದರೂ ಅತಿಶಯವಾಗದು.
ಬೆಂಗಳೂರಿನ ಚಾಮರಾಜ ಪೇಟೆಯ ಪಂಪ ಮಹಾಕವಿ ರಸ್ತೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಕಚೇರಿ ಇದೆ. ಈ ಕಸಾಪ 1940 ರಲ್ಲಿ ರಜತ ಮಹೋತ್ಸವ, 1965 ರಲ್ಲಿ ಸುವರ್ಣ ಮಹೋತ್ಸವ ಮತ್ತು 2015ರಲ್ಲಿ ಶತಮಾನೋತ್ಸವನ್ನು ಆಚರಿಸಿ ಕನ್ನಡಿಗರ ಸ್ಥಾನಮಾನ, ಹಿತಾಸಕ್ತಿ ಮತ್ತು ಅಸ್ಮಿತೆಯನ್ನು ರಕ್ಷಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದೆÉ. ಸದ್ಯ ಸುಮಾರು 3 ಲಕ್ಷ 50 ಸಾವಿರ ಸದಸ್ಯರನ್ನು ಹೊಂದಿರುವ ಈ ಕಸಾಪ, ಮುಂದಿನ ದಿನಗಳಲ್ಲಿ ಇನ್ನಷ್ಟು ಸದಸ್ಯರನ್ನು ಸೇರಿಸಿಕೊಳ್ಳಲು ಹೊಸ ಅಭಿಯಾನ ಆರಂಭಿಸಿದೆ. ಆರೂವರೆ ಕೋಟಿ ಕನ್ನಡಿಗರು ಇರುವ ನಮ್ಮ ಕನ್ನಡ ನಾಡಿನಲಿ,್ಲ ತಾಯಿ ಭುವನೇಶ್ವರಿಯ ಸೇವೆ ಮಾಡಲು ಕನಿಷ್ಟ ಒಂದು ಕೋಟಿ ಕನ್ನಡದ ಕಟ್ಟಾಳು ಸದಸ್ಯರು ಕನ್ನಡ ಸಾಹಿತ್ಯ ಪರಿಷತ್ತ್ ಸೇರಿದಲ್ಲಿ, ಕನ್ನಡ ಸಾಹಿತ್ಯ ಪರಿಷತ್ತಿಗೆ ನೂರು ಆನೆಬಲ ಬರುವುದರಲ್ಲಿ ಸಂಶಯವೇ ಇಲ್ಲ.
ಕೊನೆಮಾತು:
ಭಾಷೆ ಎನ್ನುವುದು ಮನುಷ್ಯ ತನ್ನ ಸಂವಹನಕ್ಕಾಗಿ ಮಾಡಿಕೊಂಡ ಒಂದು ಮಾಧ್ಯಮ ಅಷ್ಟೇ. ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಗೆ ತನ್ನ ವಿಚಾರಗಳನ್ನು ಅಭಿವ್ಯಕ್ತ ಪಡಿಸಲು ಭಾಷೆಯನ್ನು ಮಾಧ್ಯಮವನ್ನಾಗಿ ಬಳಸಿಕೊಳ್ಳುತ್ತಾರೆ. ನಮ್ಮ ಭಾರತೀಯ ಸಂವಿಧಾನದ 8ನೇ ಪರಿಚ್ಛೇಧನದಲ್ಲಿ ಒಟ್ಟು 22 ಭಾಷೆಗಳಿಗೆ ಅಧಿಕೃತವಾಗಿ ಮಾನ್ಯತೆ ನೀಡಲಾಗಿದೆ. ಆರಂಭದಲ್ಲಿ ಸುಮಾರು 14 ಭಾಷೆಗಳಿಗೆ ಮಾನ್ಯತೆ ನೀಡಿದ್ದರು. ಬಳಿಕ ಸಂವಿಧಾನದ ಪರಿಷ್ಕರಣೆಯಿಂದ ಮತ್ತೆ 8 ಭಾಷೆಗಳಿಗೆ ಮಾನ್ಯತೆ ನೀಡಲಾಗಿದೆ. ನಮ್ಮ ಭಾರತ ದೇಶದಲ್ಲಿ ಸಾವಿರಾರು ಜಾತಿ, ಮತ, ಪಂಗಡವಿದ್ದಂತೆ, ನೂರಾರು ಭಾಷೆಗಳು ಅಸ್ಥಿತ್ವದಲ್ಲಿದೆ. ಸಂಸ್ಕøತ ನಮ್ಮ ದೇಶದ ಅತ್ಯಂತ ಪುರಾತನ ಭಾಷೆಯಾಗಿದ್ದು ಕ್ರಿಸ್ತ ಪೂರ್ವ 5000ನೇ ಇಸವಿಯಲ್ಲಿಯೇ ಸಂಸ್ಕøತ ಭಾಷೆಯ ಉಲ್ಲೇಖವಿದೆ. ಆಸ್ಸಾಮೀಸ್, ಬೆಂಗಾಲಿ, ಡೊಗ್ರಿ, ಗುಜರಾತಿ, ಹಿಂದಿ, ಕಾಶ್ಮೀರಿ, ಕೊಂಕಣಿ, ಮೈಥಿಲಿ, ಮರಾಠಿ, ಒರಿಯ, ಪಂಜಾಬಿ, ಸಂಸ್ಕøತ, ಸಿಂಧಿ, ಉರ್ದು ಭಾಷೆಗಳು ಆರಂಭಿತವಾಗಿ ಸಂವಿಧಾನದಲ್ಲಿ ಉಲ್ಲೇಖವಾಗಿತ್ತು. ನಮ್ಮ ಭಾರತ ದೇಶ, ವೈವಿಧ್ಯತೆಯಲ್ಲಿ ಏಕತೆ ಹೊಂದಿರುವ ವಿಶಿಷ್ಟ ದೇಶವಾಗಿದೆ.
ನೂರಾರು ಭಾಷೆ, ಸಾವಿರಾರು ಜಾತಿ, ಮತ ಪಂಗಡವಿದ್ದರೂ ನಾವು ಭಾರತಾಂಬೆಯ ಮಕ್ಕಳು ಎಂದು ಒಗ್ಗಟ್ಟಿನಿಂದ ಬದುಕುತ್ತಿದ್ದೇವೆ. ಇಲ್ಲಿ ಹಿಂದಿ ಮೇಲು, ಕನ್ನಡ ಮೇಲು, ತಮಿಳು ಮೇಲು ಎಂಬ ಕಚ್ಚಾಟ ಸಲ್ಲದು. ಇತ್ತೀಚಿಗೆ ಹಿಂದಿ ರಾಷ್ಟ್ರೀಯ ಭಾಷೆ ಎಂದು ಮೇರು ನಟನೊಬ್ಬ ಟ್ವೀಟ್ ಮಾಡಿ, ಪೇಚಾಟಕ್ಕೆ ಸಿಲುಕಿದ್ದನ್ನು ನಾವೆಲ್ಲ ಓದಿ ತಿಳಿದಿದ್ದೇವೆ. ಇಲ್ಲಿ ಯಾವ ಭಾಷೆ ಮೇಲು ಮತ್ತು ಉತ್ಕøಷ್ಟ ಎನ್ನುವ ಚರ್ಚೆ ಅನಗತ್ಯ ಮತ್ತು ಅದರಿಂದಲೇ ಹಲವಾರು ವಿವಾದಗಳು ಹುಟ್ಟಿಕೊಳ್ಳುವ ಸಾಧ್ಯತೆ ಇದೆ. ಪ್ರತಿ ಭಾಷೆಗೂ ತನ್ನದೇ ಆದ ಇತಿಮಿತಿಗಳಿವೆ. ಲಿಪಿ ಇದೆ ಮತ್ತು ತನ್ನದೇ ಆದ ಇತಿಹಾಸವೂ ಇದೆ. ತನ್ನ ಭಾಷೆಯ ಬಗ್ಗೆ ಅಭಿಮಾನ, ಗೌರವ, ಪ್ರೀತಿ ಇರುವುದರ ಜೊತೆಗೆ, ಇತರ ಭಾಷೆಗಳನ್ನು ಗೌರವಿಸುವ ದೊಡ್ಡ ಹೃದಯವಂತಿಕೆ ಇರಬೇಕು. ಹಾಗಾದಲ್ಲಿ ಮಾತ್ರ ಭಾಷಾ ಸಾಮರಸ್ಯ ಹುಟ್ಟಿಕೊಂಡು, ಸಮಾಜದಲ್ಲಿ ಶಾಂತಿ ಮತ್ತು ಸುಭೀಕ್ಷೆ ನೆಲೆಸಬಹುದು.
ಭಾಷೆಯ ಮೇಲಿನ ದುರಭಿಮಾನ ಯಾವತ್ತೂ ಒಳ್ಳೆಯದಲ್ಲ. ನಾವು ಕನ್ನಡಿಗರು ಈ ವಿಚಾರದಲ್ಲಿ ಬಹಳ ಹೃದಯವಂತರು ಎಂದರೆ ತಪ್ಪಾಗಲಾರದು. ಎಲ್ಲಾ ಜಾತಿಯ, ಎಲ್ಲಾ ಧರ್ಮದ ಮತ್ತು ಎಲ್ಲಾ ಭಾಷೆಯ ಜನರಿಗೆ ಗೌರವ ನೀಡಿ, ಅವರನ್ನು ನಮ್ಮ ಒಡಲಲ್ಲಿಟ್ಟುಕೊಂಡು ಸಾಕುತ್ತಿದ್ದೇವೆ. ಇದು ನಮ್ಮ ಕನ್ನಡಿಗರ ದೌರ್ಬಲ್ಯ ಎಂದು ತಿಳಿದುಕೊಂಡು, ನಮ್ಮ ಕನ್ನಡ ಭಾಷೆಯ ಮೇಲೆ ಸವಾರಿ ಮಾಡಿದ್ದಲ್ಲಿ, ಮುಂದೊಂದು ದಿನ ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ಬಂದಲ್ಲಿ, ಖಂಡಿತವಾಗಿ ಕನ್ನಡಿಗರು ತಿರುಗೇಳುವ ದಿನಗಳು ಬಂದರೆ ಆಶ್ಚರ್ಯವೇನಲ್ಲ. ಅದೇನೇ ಇರಲಿ ಈಗೀನ 108ನೇ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನದಂದು ನಾವೆಲ್ಲ ಮಗದೊಮ್ಮೆ ತಾಯಿ ಭುವನೇಶ್ವರಿಯ ಸೇವೆಗೆ ಸಮರ್ಪಿಸಿಕೊಳ್ಳೋಣ.
ಡಾ| ಮುರಲಿ ಮೋಹನ್ ಚೂಂತಾರು
ಗೌರವ ಕಾರ್ಯದರ್ಶಿಗಳು
ಕನ್ನಡ ಸಾಹಿತ್ಯ ಪರಿಷತ್ತು
ಮಂಗಳೂರು ತಾಲೂಕು.
9845135787
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ