
ಘನಗಂಭೀರ ಮುಖಮುದ್ರೆಯಲ್ಲಿ ಕುಳಿತಿದ್ದಾನೆ ಕವಿ
ಲೋಕವನ್ನೇ ಧೇನಿಸುತ್ತ
ಕೆನ್ನೆಗಾನಿಸಿ ಕೈ
ಕಣ್ಣು ದಿಟ್ಟಿಸಿ ಬಹುದೂರ ಶೂನ್ಯ
ಮಾತಾಡಿಸಬೇಡಿ ಈಗ!
ಎಲ್ಲರೂ ನನ್ನನ್ನೇ ನೋಡುತ್ತಿದ್ದಾರೆ
ಕಾಯುತ್ತಿದ್ದಾರೆ ಉದುರುವ ಮಂತ್ರಕ್ಕೆ
ಮುಗ್ಧವಾಗಿದೆ ಜಗ
ಓಂಕಾರ ಬರುವುದೋ ಹೂಂಕಾರ ಹೊರಡುವುದೋ
ಗೊತ್ತಿಲ್ಲ!
ಲೋಕ ಮುಳುಗುವ ಈ ಹೊತ್ತಲ್ಲಿ
ಜೀವಿಗಳೆಲ್ಲ ತೊಪತೊಪ ಉದುರುವ ಈ ಕ್ಷಣದಲ್ಲಿ
ಗಂಭೀರ ಮುಖಮುದ್ರೆಯಲ್ಲಿ ಕವಿ
ಎಂತಹ ಕ್ಷುದ್ರ ಜನರಿವರು
ಮಾತಾಡಲು ಬಾರದವರು
ಒಳ್ಳೆಯದು ಯಾವುದು ಕೆಟ್ಟದ್ದು ಯಾವುದು
ಬೇಕು ಯಾವುದು ಬೇಡ ಯಾವುದು
ಎಂಬುದನ್ನು ಅರಿಯದವರು
ನಾನಿರದಿದ್ದರೆ ಏನು ಮಾಡಿಯಾರು ಇವರು!
ಹೇಗೆ ಬದುಕಿಯಾರು
ಇವರಿಗೀಗ ಕೊಡಬೇಕು
ಒಂದು ಮಂತ್ರಿಸಿದ ಮಾವಿನಕಾಯಿ
ಅಲ್ಲಾದೀನನ ಹಾರುವ ಚಾದರ
ಬಾಗಿಲು ತೆಗೆಯೇ ಸೇಸಮ್ಮ
ಎಂಬ ಮಂತ್ರ!
ಇಲ್ಲವಾದರೆ ಇವರು ಪಾರಾಗುವುದು ಕಷ್ಟ!
ಕವಿಯಾಗುವುದು ಅಷ್ಟು ಸುಲಭವೇ?
ಮಂತ್ರಿಸುವುದು ಅಷ್ಟು ಸುಲಭವೇ?
ಘನಗಂಭೀರ ಮುಖಮುದ್ರೆಯಲ್ಲಿ ಕುಳಿದ್ದಾನೆ ಕವಿ
ಆಕಾಶ ಕಳಚಿ ಬೀಳುವುದು ನಿಶ್ಚಿತ!
- ಡಾ. ವಸಂತಕುಮಾರ ಪೆರ್ಲ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ