ಭೂಮ್ಯಾಕಾಶವ ಅಳೆದನು ವಾಮನ
ವಿಕ್ರಮನಾಗುತ ಚೆಂದದಲಿ|
ಸೋಮನ ಭೂಮಿಗೆ ಎಳೆಯುತ ತರುವೆನು
ಎಂದನು ಬಾಲನು ಮಾತಿನಲಿ||
ಬೆಳೆದೇಬೆಳೆದನು ಚಂದ್ರನ ಸನಿಹಕೆ
ಕಟ್ಟಿದ ಹಗ್ಗವ ಬಿಗಿಯಾಗಿ|
ಎಳೆಯುತ ಶಶಿಯನು ಹತ್ತಿರ ತಂದನು
ಭೂಮಿಗೆ ದೀಪದ ಬೆಳಕಾಗಿ||
ಬುವಿಯನು ತುಂಬಿತು ಚಂದ್ರನ ಕಾಂತಿಯು
ಉಕ್ಕಿತು ಸಾಗರ ಎತ್ತರಕೆ|
ನವನವ ಭಾವನೆ ಅರಳಿತು ಮನದಲಿ
ಉಬ್ಬಿದ ಹುಡುಗನು ಸಂತಸಕೆ||
ಸಾಹಸ ಕಾರ್ಯವ ಧೈರ್ಯದೆ ಮಾಡಿದೆ
ಎನ್ನುತ ಬೀಗಿದ ಜಂಬದಲಿ|
ಆಹಾ ಅಚ್ಚರಿ ಬಲಯುತ ನಾನಿಹೆ
ಎನ್ನುತ ನುಡಿದನು ಅಹಮಿನಲಿ||
ಎತ್ತುತ ಕೈಯನು ಕುಟ್ಟಲು ನೆಲದಲಿ
ಎಚ್ಚರಗೊಂಡನು ಮಂಚದಲಿ|
ಮೆತ್ತಗೆ ಆಗುತ ನುಡಿದನು ಬಾಲಕ
ನಡೆದದ್ದೆಲ್ಲಾ ಕನಸಿನಲಿ||
(ಚತುರ್ಮಾತ್ರಾ ಲಯದಲ್ಲಿ)
-ಅಶ್ವತ್ಥನಾರಾಯಣ, ಮೈಸೂರು
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ