|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಸಾವಯವ ಕೃಷಿ: ದೃಷ್ಟಿ- ಸೃಷ್ಟಿ

ಸಾವಯವ ಕೃಷಿ: ದೃಷ್ಟಿ- ಸೃಷ್ಟಿ


ಕೆಲವು ದಿನಗಳ ಹಿಂದೆ ಸಾವಯವ ಕೃಷಿಯಿಂದ ನಿರೀಕ್ಷಿತ ಫಸಲು ಸಾಧ್ಯವೇ ಎಂಬ ಕಿರು ಲೇಖನವನ್ನು ಬರೆದಿದ್ದೆ. ಮೆಚ್ಚುಗೆಯ ಪ್ರತಿಕ್ರಿಯೆಗಳು ನೂರಾರು ಬಂದರೂ ಪ್ರಶ್ನಾರ್ಥಕ ಪ್ರತಿಕ್ರಿಯೆಗಳು ಕೆಲವು.


(1) ಭಾವುಕತೆ ಇದ್ದರೆ ಕೃಷಿ ಉತ್ಪತ್ತಿ ಸಾಧ್ಯವೇ?

(2) ಕೃಷಿಯು ಒಂದು ವ್ಯಾಪಾರ ಹಾಗಾಗಿ ವ್ಯಾಪಾರ ಧರ್ಮ ಇರಬೇಕು.

(3) ಬೇರೆ ಆರ್ಥಿಕ ಮೂಲಗಳು ಇಲ್ಲದೆ ಸಾವಯವ ಕೃಷಿ ಕಷ್ಟಸಾಧ್ಯ.

(4) ಕೃಷಿ ಗೊಬ್ಬರ ವಿಧಾನದ ಬಗ್ಗೆ ಹೇಳಿದ್ದರೆ ಹೆಚ್ಚು ಸೂಕ್ತ.

(5) ಫಲಾಪೇಕ್ಷೆ ಇಲ್ಲದೆ ಕೆಲಸ ಮಾಡುವುದು ಕೃಷಿಗೆ ಲಗಾವು ಆಗಲಾರದು.


ಭಾವುಕತೆ ವ್ಯಕ್ತಿಯಿಂದ ವ್ಯಕ್ತಿಗೆ ಬೇರೆ ಬೇರೆ ಇರಬಹುದು. ನಾನು ಕಂಡಂತೆ ದನವನ್ನು ಪೂರ್ತಿಯಾಗಿ ಕರುವಿಗೆ ಬಿಟ್ಟು ಉಳಿದರೆ ಮಾತ್ರ ಕರೆಯುವುದು ಭಾವುಕತೆ, ಕರುವಿಗೂ ಬಿಟ್ಟು ನಾನೂ ಕರೆದುಕೊಳ್ಳುವುದು ಸಾವಯವ. ಕರುವಿಗೂ ಕೊಡದೆ ನಾನು ಮಾತ್ರ ಕರೆದುಕೊಳ್ಳುವುದು ವ್ಯಾಪಾರ ಅಥವಾ ರಾಸಾಯನಿಕ ಚಿಂತನೆ.


ಜೇನುಪೆಟ್ಟಿಗೆ ಇಟ್ಟಿದ್ದರೆ ಸಂಪೂರ್ಣ ಜೇನನ್ನು ನೊಣಗಳಿಗೆ ಬಿಡುವುದು ಭಾವುಕತೆ, ಸಂಸಾರ ಕೋಣೆಯ ಜೇನನ್ನು ಬಿಟ್ಟು ಮೇಲಿನ ಎದಿಗಳಿಂದ ಜೇನು ತೆಗೆಯುವುದು ಸಾವಯವ, ಈಗ ತೆಗೆದದ್ದು ಬಂತು ಎಂದು ಸಂಸಾರ ಕೋಣೆಯಿಂದಲೇ ಪೂರ್ತಿ ತೆಗೆದು ನೊಣಗಳನ್ನು ಹಾರಿಸಿ ಬಿಡುವುದು ರಾಸಾಯನಿಕ ಚಿಂತನೆ.

ತೆಂಗಿನ ಮರದಲ್ಲಿ ಬೊಂಡ ಸಂಪೂರ್ಣ ಮಂಗ ತಿಂದರೂ ಸುಮ್ಮನಿರುವುದು ಭಾವುಕತೆ, ಓಡಿಸುತ್ತಾ ಓಡಿಸುತ್ತಾ ಸ್ವಲ್ಪ ತಿಂದರೂ ಚಿಂತಿಸದೆ ಇರುವುದು ಸಾವಯವ, ಸಂಪೂರ್ಣ ನಿರ್ವಂಶ ಗೊಳಿಸುವ ಕೆಲಸ ರಾಸಾಯನಿಕ.


ಅಡಿಕೆ ತೋಟಕ್ಕೆ ಏನೂ ಹಾಕದೆ ಬಂದದ್ದನ್ನು ಮಾತ್ರ ಕೊಯ್ದುಕೊಂಡು ತೃಪ್ತಿಯಿಂದ ಇರುತ್ತೇನೆ ಎಂಬುದು ಭಾವುಕತೆ, ಸಾವಯವ ಗೊಬ್ಬರವನ್ನು ಬಳಸಿ, ಸಮೂಹ ನಾಶಕ ವಿಷವನ್ನು ಬಳಸದೆ ಬಂದದ್ದಕ್ಕೆ ತೃಪ್ತಿ ಪಡುವುದು ಸಾವಯವ, ಬಿಟ್ಟ ಎಲ್ಲಾ ಅಡಿಕೆ ಮಿಡಿಯು ಉಳಿಯಬೇಕು ಯಾವ ಜೀವಿ ನಾಶವಾದರೂ ನನಗೆ ಚಿಂತೆಯಿಲ್ಲ ಎಂಬ ಯೋಚನೆ ರಾಸಾಯನಿಕ. 


ಬಂದ ಉತ್ಪತ್ತಿಯಲ್ಲಿ ವ್ಯಾಪಾರ ಧರ್ಮ ನೂರಕ್ಕೆ 99% ಕೃಷಿಕರಲ್ಲಿ ಇದೆ. ಅದು ಇಲ್ಲದೆ ಇದ್ದರೆ ವಂಚಕರು ಎಂದಷ್ಟೇ ಹೇಳಿಸಿ ಕೊಳ್ಳಬಹುದು.


ನನ್ನ ಅಜ್ಜನ ಕಾಲದಿಂದಲೂ ನಾವು ಕೃಷಿಕರು. ಕೃಷಿ ಬಿಟ್ಟು ಯಾವ ಆದಾಯ ಮೂಲವೂ ನನ್ನಲ್ಲಿಲ್ಲ. ಸಾವಯವ ಆರಂಭ ಮಾಡಿದಾಗ ನಾನೂ ಸಾಲಗಾರನಾಗಿದ್ದೆ. ಇಂದು ಸಾಲಮುಕ್ತ. ಬ್ಯಾಂಕಿನಿಂದ ನೋಟೀಸು ಬರುವುದು ಠೇವಣಿ ನವೀಕರಣ ಮತ್ತು 15h ಸ್ವಯಂ ಘೋಷಣಾ ಪತ್ರ. ಯಾವುದೇ ಉಚಿತಗಳ ಹಿಂದೆ ಬಿದ್ದಿಲ್ಲ. ಸಾಲಮನ್ನಾವಾಗಲಿ, ಬಡ್ಡಿ ಇಲ್ಲದ ಸಾಲಗಳಾಗಲಿ, ಇಂತವುಗಳನ್ನು ಕಂಡಿಲ್ಲ. ಸುಖೀ ಸಂಸಾರದ ಜೀವನಕ್ಕೆ ಯಾವ ಕೊರತೆಯೂ ಆಗಿಲ್ಲ. ಇನ್ನೇನು ಬೇಕು?


ನನಗಿರುವುದು 6 ಎಕರೆ ಅಡಿಕೆ ತೋಟ, ಮೂರು ಎಕರೆ ತೆಂಗಿನ ತೋಟ, ಒಂದು ಎಕರೆ ಗದ್ದೆ, 15 ಎಕರೆಯಷ್ಟು ಕಾಡು. 22 ಮಲೆನಾಡು ಗಿಡ್ಡ ಹಸುಗಳ ಗೊಬ್ಬರ ಮತ್ತು ಒಂದು ಮರಕ್ಕೆ ವರ್ಷಕ್ಕೆ ಅರ್ಧ ಕೆಜಿಯಷ್ಟು ಹರಳಿಂಡಿ, ಸೋಗೆ ಬಾಳೆಎಲೆ, ಅಡಿಕೆ ಸಿಪ್ಪೆ ಮುಂತಾದವು ಮರದ ಬುಡಕ್ಕೆ. ಸ್ಲರಿಗೇಷನ್ ಮೂಲಕ ಗೊಬ್ಬರ ಹಾಕುವ ವಿಧಾನದಿಂದಾಗಿ  ಖರ್ಚು ಕನಿಷ್ಠ. ದೇಶಿ ತಳಿ ಆದುದರಿಂದ ಹುಲ್ಲು ಮಾಡುವುದು ಮಾತ್ರ ಕೆಲಸ. ಈ ತೋಟದ ಮಧ್ಯೆ ಎಲ್ಲಾ ಅಂತರ ಬೆಳೆಗಳು ಇವೆ.


ನಮ್ಮ ಗ್ರಾಮೀಣ ಹಳೆಯ ಲೆಕ್ಕದಲ್ಲಿ 18 ಖಂಡಿಯಿಂದ 25 ಖಂಡಿಯವರೆಗೆ (ಖಂಡಿ 260 ಕೆಜಿ) ಏರಿಳಿತಗಳು ನಡೆಯುತ್ತಿರುತ್ತದೆ. ಉಪಬೆಳೆಗ ಳು ಶಕ್ತಿಯನ್ನು ತುಂಬುತ್ತದೆ.


ಒಂದು ಎಕರೆಗೆ ಗದ್ದೆಯ ಎರಡು ಬೆಳೆ ಆಹಾರದ ಕೊರತೆಯನ್ನು ಸಂಪೂರ್ಣ ನಿಭಾಯಿಸುತ್ತದೆ. ನನ್ನೊಬ್ಬನದೇ ಗದ್ದೆಯಾದ ಕಾರಣ 10 ಕ್ವಿಂಟಾಲ್ ಭತ್ತ ಬರಬೇಕಾದುದು ಆರು ಕ್ವಿಂಟಾಲ್‌ ಒಳಗೆ ತೃಪ್ತಿಪಟ್ಟುಕೊಳ್ಳಬೇಕಾಗಿದೆ.


ಭಾವುಕತೆ ಎಂದು ನಾನೇನು ಸುಮ್ಮನೆ ಕುಳಿತಿಲ್ಲ. ಮಂಗ ಬಂದರೆ ಓಡಿಸುತ್ತೇನೆ, ಹಂದಿ ಬಾರದ ಹಾಗೆ ತಂತಿಬೇಲಿ ಕಟ್ಟುತ್ತೇನೆ, ಕೊಳೆ ರೋಗ ಬಾರದಂತೆ ಎರಡು ಬೋರ್ಡೋ ಸ್ಪ್ರೇ ಮಾಡುತ್ತೇನೆ. ರಾಸಾಯನಿಕ ವಲ್ಲವೇ ಎಂಬ ಪ್ರಶ್ನೆ ಬರಬಹುದು. ಖಂಡಿತವಾಗಿಯೂ ಹೌದು ಹಾಗೆಂದ ಮಾತ್ರಕ್ಕೆ ನಾನೇನೂ ವಿಜ್ಞಾನದ ರಾಸಾಯನಿಕದ ಕಡುವಿರೋಧಿ ಅಲ್ಲ. ಬೋರ್ಡೋ ಕಳೆದ 150 ವರ್ಷಗಳಿಂದ ಬಳಸುತ್ತಿದ್ದರೂ ಎಲ್ಲಿಯೂ ಹಾನಿ ಮಾಡಿದ ಪುರಾವೆಗಳಿಲ್ಲ.


ಯಾವುದೇ ರಾಸಾಯನಿಕಗಳು ಉದ್ದೇಶಿತ ವನ್ನು ಮಾತ್ರ ನಾಶ ಮಾಡುತ್ತಿದ್ದರೆ ಒಪ್ಪಿಕೊಳ್ಳಬಹುದು. ದುರಂತವೆಂದರೆ ಎಲ್ಲವೂ ಸಮೂಹನಾಶಕ. ಉಪದ್ರಿ ಕೀಟಗಳನ್ನು ತಿಂದು ಬದುಕುತ್ತಿದ್ದ ಕಾಗೆಗಳು, ಕುಪ್ಪುಳುಗಳು, ಗುಬ್ಬಿಗಳು ಬಜಾಕ್ಕುರೆ ಹಕ್ಕಿಗಳು ಇತ್ಯಾದಿಗಳು ಇಂದು ನಾಶದತ್ತ ಹೊರಟಿವೆ. ಹಾಗಿರುವಾಗ ಇವುಗಳನ್ನು ಇನ್ನೂ ಇನ್ನೂ ಬಳಸಬೇಕೆ?

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


ಕೆಲದಿನಗಳ ಹಿಂದೆ ಅಡಿಕೆ ಮಂಡಿ ಒಂದಕ್ಕೆ ಹೋಗಿದ್ದೆ. ಮಂಡಿಗೆ ಖಾಯಂ ಆಗಿ ಬರುವ ಡಾಕ್ಟರ್ ಒಬ್ಬರ ಪ್ರಕಾರ ಇಂದು ಕನಿಷ್ಠ ಹತ್ತಕ್ಕೆ ನಾಲ್ಕು ಮನೆಯಲ್ಲಾದರೂ ಕ್ಯಾನ್ಸರ್ ಪೇಷಂಟ್ ಗಳು ಇದ್ದಾರಂತೆ. ಬಾಕಿ ಕಾಯಿಲೆಗಳ ಬಗ್ಗೆ ನಾನೇನು ವಿವರ ಕೊಡಬೇಕಾಗಿಲ್ಲ. ನಮ್ಮ ಪೀಳಿಗೆಗೆ ಕೃಷಿ ಮುಗಿಯಬೇಕೇ ಮುಂದಿನ ಪೀಳಿಗೆಗೂ ಉಳಿಯಬೇಕೆ ಎಂಬುದು ಮಾತ್ರ ನನ್ನ ಚಿಂತನೆ.


ಎಷ್ಟು ಕಷ್ಟಪಟ್ಟರೂ ಸರಿ ಪ್ರಾಮಾಣಿಕ ದುಡಿಮೆ ಮಾಡಿದರೆ ಫಲ ದೊರೆತೇ ದೊರೆಯುತ್ತದೆ ಎಂಬುದಕ್ಕೆ ಪಾಂಡವರು ಉದಾಹರಣೆ. ಯಾವ ದಾರಿಯಾದರೂ ಸರಿ ಎಲ್ಲಾ ಫಲ ನನಗೇ ದೊರೆಯಬೇಕು ಎಂಬುದಕ್ಕೆ ಕೌರವರು ಉದಾಹರಣೆ. ಅವರವರ ಚಿಂತನೆ ಯೋಚನೆಯ ದಾರಿ ಅವರವರಿಗೆ ಬಿಟ್ಟದ್ದು.


ತೃಪ್ತಿಯನರಿಯದ ವಾಂಛೆ, ಜೀರ್ಣಿಸದ ಭುಕ್ತಿ,

ಸುಪ್ತದೊಳು ಕೊಳೆಯುತ್ತೆ ವಿಷಬೀಜವಾಗಿ,

ಪ್ರಾಪ್ತಿ ಗೊಳಿಪುದು ದೇಹಕ್ಕೆ ಉನ್ಮಾದ ತಾಪಗಳು

ಸುಪ್ತವಾಗುವುದೆಂತಿಚ್ಚೆ ಮಂಕುತಿಮ್ಮ. 


ಇಂತಹ ಘಟನೆಗಳನ್ನೆಲ್ಲ ಮೊದಲೇ ಊಹಿಸಿ ಬರೆದ ಮಂಕುತಿಮ್ಮನಿಗೆ ಒಂದು ನಮನ.

-ಎ.ಪಿ. ಸದಾಶಿವ ಮರಿಕೆ



web counter

0 تعليقات

إرسال تعليق

Post a Comment (0)

أحدث أقدم