ಹೀಗೊಂದು ಹಪ್ಪಳ ಪುರಾಣ

Upayuktha
0

ಹಲಸಿನಕಾಯಿ ಹಪ್ಪಳ ವೆಂದರೆ ನಮಗೆ ಮನೆಮಂದಿಗೆಲ್ಲ ಬಲು ಇಷ್ಟ.ನಾವು ತಿನ್ನುವ ಹಪ್ಪಳ ಹೊರಗಿಂದ ತರುವುದೆಂದರೆ ಬಲುಕಷ್ಟ. ನಾವು ದುಡಿಯಬೇಕು ನಾವು ಉಣ್ಣಬೇಕು ಎಂಬ ಸಾವಯವ ಸಿದ್ಧಾಂತ ನಮ್ಮದು. ಒಂದು ಊಟಕ್ಕೆ 4 ಹಪ್ಪಳ ಎಂಬ ಸ್ವಘೋಷಣೆಯೊಂದಿಗೆ ಬ್ಯಾಟಿಂಗ್ ಸುರು. ಮಾರ್ಚ್ ತಿಂಗಳಲ್ಲಿ ಬೆಳೆಯುತ್ತಿದ್ದ ಹಲಸಿನಕಾಯಿ ಈ ವರ್ಷ ಬೆಳೆಯಲು ಆರಂಭವಾದುದು ಮೇ ತಿಂಗಳಲ್ಲಿ. ಹಲಸು ಬೆಳೆಯುತ್ತಿದ್ದಂತೆ ಹಪ್ಪಳ ಮಾಡಲು ಮನಸ್ಸು ಸಿದ್ಧವಾಗಿತ್ತು. ಮೋಡ ಬಿಸಿಲಿನ ಹೋರಾಟದಲ್ಲಿ ಹಪ್ಪಳವು ಒಂದು ಸರ್ತಿ ಮಾಡಿಯಾಗಿತ್ತು. ಕಾರ್ಮುಗಿಲ ಅಬ್ಬರದಲ್ಲಿ ಸುರಿದ ಅಕಾಲ ಮಳೆಗಾಲದಿಂದ ಮಾಡಿದ ಹಪ್ಪಳ ಹಾಳು ಆಗಿತ್ತು. ಅಲ್ಲಿಗೆ ಈ ವರ್ಷದ ಹಪ್ಪಳದ ಆಸೆ ಬಿಟ್ಟಾಗಿತ್ತು.


ನಿನ್ನೆಯ ದಿನ ಆರಾಮ ಕುರ್ಚಿಯಲ್ಲಿ ಕುಳಿತು ದಿನ ಪತ್ರಿಕೆಯನ್ನು ಓದುತ್ತಿದ್ದೆ. ಒಳಗಿನಿಂದ ಸ್ವರ ಒಂದು ಕೇಳಿಬಂತು, ಬಿಸಿಲು ಹಾಳಾಗುತ್ತಿದೆ ಹಪ್ಪಳ ಮಾಡಲು ಹಲಸಿನಕಾಯಿ ತೆಗೆದು ಕೊಡುವಿರಾ? ಅಭಾವ ವೈರಾಗ್ಯದಿಂದ ಹಪ್ಪಳ ತ್ಯಾಗ ಮಾಡಿದ್ದ ನಾನು ಕರೆಗೆ ಓಗೊಟ್ಟೆ. ಎಷ್ಟು ಎತ್ತರದಲ್ಲಿ ಇದ್ದರೂ ಮರ ಹತ್ತಿ ಬೆಳೆದ ಹಲಸಿನಕಾಯಿ ತೆಗೆಯುವ ನುರಿತ ಸಹಾಯಕರು ಇಂದಿಲ್ಲದುದರಿಂದ ತೆಗೆಯುವ ಪರಿಯೆಂತೂ ಎಂದು ಯೋಚನೆಗೆ ಹೊರಟೆ. 35 ಅಡಿಯವರೆಗೆ ಆದರೆ ನನ್ನಲ್ಲಿ ಈಗಾಗಲೇ ಇರುವ ಅಲುಮಿನಿಯಂ ದೋಟಿ ಕೆಲಸ ಮಾಡುತ್ತದೆ. ಆದರೆ ಎಲ್ಲವೂ ಎತ್ತರದಲ್ಲಿ. ವಾರದ ಹಿಂದೆ ಬಂದಿದ್ದ ಕಾರ್ಬನ್ ಫೈಬರ್ ದೋಟಿಗೆ ಕತ್ತಿ ಸಿಕ್ಕಿಸಿ ಕೈಗಾಡಿ, ಬುಟ್ಟಿ, ಬಾಜಾಭಜಂತ್ರಿ ಯೊಂದಿಗೆ ಸಾಗಿತು. ಐದೈದು ಅಡಿ ಮೇಲೇರಿದಂತೆ 57 ಅಡಿಗೆ ಹಲಸಿನಕಾಯಿ ಸಿಕ್ಕಿತು. ಬೆಳೆದಕಾಯಿಯನ್ನು ಗುರಿಯಿಟ್ಟು ದೋಟಿಯನ್ನು ಮೇಲೆ ಏರಿಸಲು ಆಗುವ ಕಾರಣ ಅಷ್ಟು ಎತ್ತರದ್ದನ್ನು ತೆಗೆಯಲು ಅನುಕೂಲ ಎನಿಸಿತು. ಒಂದೇ ತೊಟ್ಟಿನಲ್ಲಿ ನಾಲ್ಕೈದು ಇದ್ದ ಕಾರಣ ಎಲ್ಲವೂ ಬೀಳದಂತೆ ತೆಗೆಯಲು ಸಾಧ್ಯವಿಲ್ಲ ಎಂಬುದು ಸ್ಪಷ್ಟವಾಯಿತು. ಎಳೆಯದೂ ಬಿದ್ದ ಕಾರಣ ನಿರಂತರ ಐದು ದಿನದಲ್ಲಿ ಹಲಸಿನಕಾಯಿಯ ಪಾಕೇತನ ಇದ್ದರೂ ಆರನೇ ದಿನಕ್ಕೂ ಅದುವೇ ಅಡುಗೆ ಎಂಬುದು ನಿಶ್ಚಯವಾಯಿತು.



ಹೊಸದಾಗಿ ತಂದ ಹಲಸು ಕಟ್ಟರಿನಲ್ಲಿ ತುಂಡುಮಾಡಿ ಸೋಸಿ, ಬೇಯಿಸಿ ಇಂದು ಬೆಳಗ್ಗೆ ಹಿಟ್ಟು ಮಾಡಲು ಆರಂಭ.


ಶಾರೀರಿಕ ಶಕ್ತಿ ಕುಂಠಿತವಾದುದರಿಂದ ಮರದ ಒನಕೆಯನ್ನು ಬಿಟ್ಟು ಗ್ರೈಂಡರ್ನತ್ತ ಹೋಗಿ ಕೆಲವು ವರ್ಷವಾಗಿತ್ತು. ಬಿಸಿಬಿಸಿಯಾದ ಸೊಳೆಯನ್ನು ಬೀಸುವಾಗ ಬರುವ ಏದುಸಿರು ನನ್ನ ಮೇಲೂ ಪರಿಣಾಮ ಬೀರುತ್ತಿತ್ತು.! ಕಳೆದ ವರ್ಷ ಅದೇ ಸಮಯಕ್ಕೆ ವಾಟ್ಸಪ್ ಗುಂಪು ಒಂದರಲ್ಲಿ ಟಿಲ್ಟಿಂಗ್ ಗ್ರೈಂಡರ್ ನ ಒಂದು ಕಲ್ಲು ತೆಗೆದು ಹಿಟ್ಟು ಮಾಡುವ ವಿಡಿಯೋ ಚಿತ್ರಣವೊಂದು ಕಂಡುಬಂತು. ಆಗದು ಎಂಬ ಪ್ರತಿರೋಧದ ನಡುವೆ ಪ್ರಯೋಗಕ್ಕೆ ಹೊರಟೆ. ಇಂದು ಹಿಟ್ಟು ಗಟ್ಟಿಯಾದಾಗ, ಗ್ರೈಂಡರ್ ತಿರುಗದಾಗ ಏನೇನು ಮಾಡಬೇಕು ಎಂಬುದರಲ್ಲಿ ನನ್ನಾಕೆ ತಂತ್ರಜ್ಞೆ. ಏದುಸಿರಿನ ಪರಿಣಾಮ ಇಲ್ಲದಿದುದರಿಂದ ಹಪ್ಪಳ ತಿನ್ನುವಾಗ ಸಂತೋಷ ಜಾಸ್ತಿ.


ಉಂಡೆಕಟ್ಟಿ ಒತ್ತಿ ತೆಂಗಿನ ಮಡಲಿನ ತಟ್ಟಿಯಲ್ಲಿ ಬಿಸಿಲಿಗಿಟ್ಟು ಒಣಗಿಸುತ್ತಿದ್ದಂತೆ, ತಟಪಟನೆ ಮಳೆರಾಯನ ಆಗಮನ. ಅಡಿಕೆ ಗೂಡಿನೊಳಗೆ ಪಯಣ. ಆಮೇಲೆ ಚೆನ್ನಾಗಿ ಬಿಸಿಲು ಬಂದುದರಿಂದ ಒಂದು ಊಟಕ್ಕೆ 4 ಹಪ್ಪಳದ ನೀರೀಕ್ಷೆಗೆ ಮನಸ್ಸು ಸಜ್ಜಾಗುತ್ತಿದೆ.

ಬಿಸಿಲಿಗೆ ದಾರಿ ಮಾಡಿಕೊಟ್ಟ ವರುಣ ದೇವನಿಗೆ ನಮಸ್ಕರಿಸುತ್ತಾ ವಿರಮಿಸುವೆ.

-ಎ.ಪಿ. ಸದಾಶಿವ ಮರಿಕೆ.

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top