ಹೊರ ರಾಜ್ಯದ ಬ್ಯಾಂಕ್ ಸಿಬ್ಬಂದಿಗಳಿಗೆ ಕನ್ನಡ ಕಲಿಸಲು ಮಂಗಳೂರು ತಾಲೂಕು ಕಸಾಪ ಯೋಜನೆ

Upayuktha
0

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕದ ವತಿಯಿಂದ ಕನ್ನಡ ನಾಡು ನುಡಿಯ ಉಳಿವಿಗಾಗಿ ಬ್ಯಾಂಕ್‌ಗಳಲ್ಲಿ ಗ್ರಾಹಕರ ಜೊತೆ ಕನ್ನಡ ಭಾಷೆಯಲ್ಲಿ ವ್ಯವಹಾರ ನಡೆಸಲು ಅಭಿಯಾನ ಹಮ್ಮಿಕೊಂಡಿದೆ. ಕಸಾಪದ ಗಮನಕ್ಕೆ ಬಂದಿರುವಂತೆ ಬ್ಯಾಂಕ್‌ಗಳಲ್ಲಿ ಹೊರ ರಾಜ್ಯದವರು ವರ್ಗಾವಣೆಯಾಗಿ ಮಂಗಳೂರಿಗೆ ಆಗಮಿಸಲು ಆರಂಭವಾದ ಕಾರಣ ಬ್ಯಾಂಕ್‌ಗಳಲ್ಲಿ ಕನ್ನಡ ಭಾಷೆಯ ಬಳಕೆ ಕಡಿಮೆಯಾಗಿ ಇಂಗ್ಲಿಷ್‌ ಮತ್ತು ಹಿಂದಿ ಬಳಕೆ ಹೆಚ್ಚಾಗುತ್ತಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಕನ್ನಡ ಭಾಷೆ ಅಳಿವಿನಂಚಿಗೆ ಸರಿಯುವ ಸಾಧ್ಯತೆ ಇರುತ್ತದೆ. ಹಾಗಾಗದಂತೆ ತಡೆಯಲು ಮತ್ತು ಕನ್ನಡದ ಉಳಿವಿಗಾಗಿ ಕನ್ನಡಿಗರಾದ ನಾವು ಕಾರ್ಯೋನ್ಮುಖವಾಗ ಬೇಕಾದ ಅಗತ್ಯವಿದೆ.  ಇದು, ತಾಯಿ ಭುವನೇಶ್ವರಿಯ ಗರ್ಭದಲ್ಲಿ ಜನಿಸಿದ ನಮ್ಮ ಕರ್ತವ್ಯವೂ ಹೌದು.


ಅತಿಥಿ ದೇವೋಭವ ಎಂಬ ಭಾರತದ ಸಂಸ್ಕೃತಿಯಂತೆ ಹೊರ ರಾಜ್ಯದವರು ವರ್ಗಾವಣೆಯಾಗಿ ನಮ್ಮ ನಾಡಿಗೆ ಬಂದರೆ ಅವರನ್ನು ಮನದಾಳದಿಂದ ಸ್ವಾಗತಿಸುವುದು ನಮ್ಮ ಸಂಸ್ಕೃತಿ. ಅವರಿಗೆ ಕನ್ನಡದಲ್ಲಿ ವ್ಯವಹರಿಸಲು ತೊಡಕಾಗದಂತೆ ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕವು ಹೊರ ರಾಜ್ಯದವರಿಗೆ ಕನ್ನಡ ನುಡಿಯ ಕಾರ್ಯಾಗಾರ ನಡೆಸಲು ನಿರ್ಧರಿಸಿದೆ. ಕನ್ನಡ ಕಲಿಕೆಯ ಜೊತೆಗೆ ಕನ್ನಡಿಗ ಸಹೋದ್ಯೋಗಿಗಳು ಗ್ರಾಹಕರ ಜೊತೆ  ಕಡ್ಡಾಯವಾಗಿ ಕನ್ನಡದಲ್ಲೇ ವ್ಯವಹಾರ ಮಾಡಬೇಕೆಂದು ಕಸಾಪ ವಿನಂತಿಸಿದೆ.


ದಕ್ಷಿಣ ಕನ್ನಡ ಜಿಲ್ಲಾ ಕಸಾಪ ಮಂಗಳೂರು ತಾಲೂಕು ಘಟಕ ಕನ್ನಡ ನಾಡು ನುಡಿಯ ಉಳಿವಿಗಾಗಿ ಆರಂಭಿಸಿದ ಈ ಅಭಿಯಾನ ಹಂತ ಹಂತವಾಗಿ ಬೆಳೆದು ಮುಂದಿನ ದಿನಗಳಲ್ಲಿ ಎಲ್ಲಾ ಬ್ಯಾಂಕುಗಳಲ್ಲಿ ಕನ್ನಡ ನುಡಿ ಗಟ್ಟಿಯಾಗಿ ತಳವೂರುವುದರಲ್ಲಿ ಸಂಶಯವಿಲ್ಲ. ಈ ಅಭಿಯಾನಕ್ಕೆ ಕನ್ನಡಿಗರೆಲ್ಲರ ಸಹಕಾರ ಅಗತ್ಯವಿದೆ ಎಂದು ಕಸಾಪ ಪ್ರಕಟಣೆ ಕೋರಿದೆ.


ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗುವ ಉದ್ದೇಶದಿಂದ ಮಂಗಳೂರು ತಾಲೂಕು ಕಸಾಪ ಅಧ್ಯಕ್ಷರಾದ ಡಾ. ಮಂಜುನಾಥ್ ರೇವಣಕರ್ ಅವರು ಕೆನರಾ ಬ್ಯಾಂಕ್‌ನ ಮಂಗಳೂರು ವೃತ್ತ ಕಚೇರಿಯ ಜನರಲ್ ಮ್ಯಾನೇಜರ್‌ ಎಸ್‌ ಜಯಕುಮಾರ್ ಅವರನ್ನು ಭೇಟಿ ಮಾಡಿ, ಹೊರ ರಾಜ್ಯಗಳಿಂದ ಬಂದ ಬ್ಯಾಂಕ್ ಸಿಬ್ಬಂದಿಗಳಿಗೆ ಕನ್ನಡ ಕಲಿಸುವ ಪ್ರಸ್ತಾವನೆಯನ್ನು ಸಲ್ಲಿಸಿದರು. ಇದಕ್ಕೆ ಸ್ಪಂದಿಸಿದ ಎಸ್‌ ಜಯಕುಮಾರ್ ಅವರು ಕನ್ನಡ ಸಾಹಿತ್ಯ ಪರಿಷತ್‌ ಜತೆ ಕೈಜೋಡಿಸಿ ಸಿಬ್ಬಂದಿಗಳಿಗೆ ಕನ್ನಡ ಕಲಿಸುವ ನಿಟ್ಟಿನಲ್ಲಿ ಸಹಕರಿಸುವುದಾಗಿ ತಿಳಿಸಿದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top