||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಶ್ರಮಜೀವಿ ಕಮಲಜ್ಜಿ- ಬಾಂಧವ್ಯದ ಪ್ರತಿರೂಪ

ಶ್ರಮಜೀವಿ ಕಮಲಜ್ಜಿ- ಬಾಂಧವ್ಯದ ಪ್ರತಿರೂಪ


ಅದೊಂದು ರಾತ್ರಿ ನಮ್ಮಲ್ಲಿ ದೇವತಾ ಕಾರ್ಯಕ್ರಮವಿತ್ತು. ನೆಂಟರಿಷ್ಟರೆಲ್ಲ ಸೇರಿ ಮಾಡಿದ ಕಾರ್ಯಕ್ರಮ. ರಾತ್ರಿ ಊಟ ಮುಗಿದ ಮೇಲೆ ಬಂದಂಥ ಅತಿಥಿಗಳೆಲ್ಲ ಅವರವರ ಮನೆಗಳಿಗೆ ಹೋದ ಮೇಲೆ ಮುಸುರೆ ಪಾತ್ರೆಗಳನ್ನೆಲ್ಲ ನಮ್ಮ ಮನೆ ಹೊರಗಿರುವ ಬಚ್ಚಲಿಗೆ ಹಾಕಿ ಬಾಗಿಲು ಹಾಕಿ ಮಲಗಿದ್ದೆವು. ಯಥಾಪ್ರಕಾರ ಮರುದಿನ ಬೆಳಗ್ಗೆ ಬಾಗಿಲು ತೆಗೆದು ಹೊರ ಬರುತ್ತೇನೆ.. ಅಲ್ಲೊಂದು ಸೋಜಿಗವೇ ನಡೆದಿತ್ತು. ಎಷ್ಟು ಯೋಚನೆ ಮಾಡಿದರೂ ನನಗೆ ಅರ್ಥವೇ ಆಗಲಿಲ್ಲ. ಏನೆಂದರೆ ಹಿಂದಿನ ರಾತ್ರಿಯಲ್ಲಿ ಸ್ವಚ್ಛಗೊಳಿಸಲೆಂದು ಹೊರ ಹಾಕಿದ ಅಷ್ಟೂ ಪಾತ್ರೆಗಳು ತೊಳೆದು ಜಗಲಿಯಲ್ಲಿ ಪೇರಿಸಿಡಲ್ಪಟ್ಟಿತ್ತು. ಯಾರದ್ದು ಈ ಕೆಲಸ? ಆಶ್ಚರ್ಯವಾಗಿತ್ತು. ಹಾಗೆಯೇ ಆಶ್ಚರ್ಯವಾಗಲು ಇನ್ನೊಂದು ಕಾರಣವೆಂದರೆ ಪಾತ್ರೆ ತೊಳೆದ ಜಾಗವಾಗಲಿ, ನಳ್ಳಿಯಲ್ಲಿ ಬಿಟ್ಟ ನೀರಿನ ಕುರುಹಾಗಲಿ ಒಂದಿಷ್ಟೂ ಇಲ್ಲದೆ ಎಲ್ಲವೂ ಒಣಗಿಯೇ ಇತ್ತು. ನನಗೆ ಇದೊಂದು ವಿಸ್ಮಯವೆಂದೇ ಅನ್ನಿಸಿತ್ತು.


ಅಂತೆಯೇ ನಾವು ಸಣ್ಣವರಿರುವಾಗ ಅಜ್ಜಿ ಹೇಳುತ್ತಿದ್ದ ಕತೆಗಳಲ್ಲಿ ಮಾಯಾವಿಗಳು ಅಡುಗೆ ಮಾಡುವುದು, ಯಾರೂ ಇಲ್ಲದಾಗ ಪಾತ್ರೆ ತೊಳೆದಿಡುವುದು, ಬಟ್ಟೆ ಒಗೆದು ಹಾಕುವುದು ಮುಂತಾದ ಸನ್ನಿವೇಶಗಳನ್ನು ಸೃಷ್ಟಿಸಿ ಭಯಾನಕವೂ ರೋಚಕವೂ ಆಗಿರುವಂತೆ ಕತೆ ಪೋಣಿಸಿ ಹೇಳುತ್ತಿದ್ದದ್ದೂ ನೆನಪಾಯಿತು. ಅದು ಕಾಲ್ಪನಿಕ ಕತೆಯಾದರೆ ನಮ್ಮಲ್ಲಿಯ ಕತೆ ಏನೆಂದೇ ತಿಳಿಯಲಿಲ್ಲ. ನನ್ನ ಹೆಂಡತಿ ಲಕ್ಷ್ಮಿಯನ್ನು ಕರೆದು ಇದು ಹೇಗಾಯಿತು ಎಂದರೆ ಅವಳಿಗೂ ಆಶ್ಚರ್ಯವಾಗಿತ್ತು. ಆದರೆ ಅವಳ ತಲೆಗೆ ಕೂಡಲೇ ಹೊಳೆಯಿತು ಇದು ಕಮಲಜ್ಜಿದ್ದೇ ಕೆಲಸ ಎಂದಳು. ಯಾಕೆಂದರೆ ಕಮಲಜ್ಜಿ ಮತ್ತು ಲಕ್ಷ್ಮಿಯ ಅನ್ಯೋನ್ಯತೆ ಎಂದರೆ ಅದು ಜನ್ಮಾಂತರದ ಸಂಬಂಧವೆಂದೇ ಅನಿಸುತ್ತಿತ್ತು. ಆದ್ದರಿಂದ ಕಮಲಜ್ಜಿಯ ಮನಸ್ಸು ಲಕ್ಷ್ಮಿಗೆ ಸಹಜವಾಗಿಯೇ ಗೊತ್ತಾಗುತ್ತಿತ್ತು. ಆದರೂ ಅದು ಯಾವಾಗ ಈ ಕೆಲಸ ಮಾಡಿದಳೆಂದೇ ಪ್ರಶ್ನೆ.  


ನಡೆದದ್ದಿಷ್ಟೆ... ನಮ್ಮಲ್ಲಿ ಈ ಕಮಲಜ್ಜಿ ಬರಲು ಪ್ರಾರಂಭವಾಗಿ ಸಾಧಾರಣ ಇಪ್ಪತೈದಕ್ಕೂ ಮಿಕ್ಕಿ ವರ್ಷಗಳಾದವು. ಪ್ರತಿ ದಿನವೂ ಬೆಳಗ್ಗೆ ಏಳು ಗಂಟೆಯಷ್ಟೊತ್ತಿಗೆ ಬಂದರೆ ಬೆಳಗ್ಗಿನ ಒಂದು ಹಂತದ ಕೆಲಸ ಮಾಡಿ ಕಾಪಿ ತಿಂಡಿ ಸೇವಿಸಿ ಹೊರಟು ಬಿಡುತ್ತಿದ್ದರು. ಇತರರ ಮನೆಯಲ್ಲಿ ಕೂಲಿ ನಾಲಿ ಮಾಡಿ ದುಡಿಯುವ ಶ್ರಮಜೀವಿಯಾಗಿದ್ದರು. ಒಂದಿನಿತೂ ಕೆಲಸದಲ್ಲಿ ಅಶ್ರದ್ಧೆ ಇರದೆ ಅತ್ಯಂತ ಪ್ರಾಮಾಣಿಕ ಸ್ವಭಾವದ ಈ ಕಮಲಜ್ಜಿ ಯಾರಲ್ಲಿ ಕೆಲಸಕ್ಕೆ ಹೋಗುವುದಾದರೂ ನಮ್ಮಲ್ಲಿ ಮಾತ್ರ ಬಂದೇ ಬರುತ್ತಿದ್ದರು. ಅಂತೆಯೇ ನಾವು ಅದೇನನ್ನು ಬೆಳಗ್ಗೆ ತೆಗೆದುಕೊಳ್ಳುತ್ತಿದ್ದೆವೋ ಅದರಲ್ಲಿ ಕಮಲಜ್ಜಿಗೂ ಒಂದು ಪಾಲು ಇದ್ದೇ ಇತ್ತು. ನಮ್ಮದು ಅಡುಗೆ ವೃತ್ತಿಯಾದ್ದರಿಂದ ಪಾತ್ರೆ ತೊಳೆಯಲು, ಸ್ವಚ್ಛ ಮಾಡಲು ಬಹಳವಿರುತ್ತಿದ್ದುದರಿಂದ ನಮ್ಮಲ್ಲೂ ಆಗೊಮ್ಮೆ ಈಗೊಮ್ಮೆ ಕೆಲಸಕ್ಕೆ ಬರುತ್ತಿದ್ದರು. ಅದೇನೇ ಆದರೂ ನಮಗೂ ಕಮಲಜ್ಜಿಗೂ ಒಂದೇ ಮನೆಯಂತಿರುವ ಸಂಬಂಧವೊಂದು ಇತ್ತು ಅಥವಾ ಈಗಲೂ ಇದೆ. ಆ ದಿವಸ ಯಾರದೋ ಕೆಲಸ ಮುಗಿಸಿ ಮನೆಗೆ ಹೋಗುವಾಗ ನಮ್ಮ ಮನೆಯ ಎದುರಿಂದಲೇ ಅವರ ಮನೆಗೆ ದಾರಿ ಇರುವುದರಿಂದ ನಮ್ಮಲ್ಲಿದ್ದ ಪಾತ್ರೆಯ ರಾಶಿಯನ್ನು ಕಮಲಜ್ಜಿ ನೋಡಿದ್ದಾರೆ. ನಾಳೆ ಪುನಃ ಬೇರೆ ಮನೆಗೆ ಕೆಲಸಕ್ಕೆ ಹೋಗಲಿಕ್ಕಿದ್ದುದರಿಂದ ಬೆಳಗ್ಗಿನ ಜಾವವೇ ಬಂದು ಪಾತ್ರೆ ತೊಳೆದು ಹೊರಡುವುದೆಂದು ನಿರ್ಧರಿಸಿದ್ದಾರೆ. ಈ ಆಲೋಚನೆಯಿಂದ ಮಲಗಿದ ಕಮಲಜ್ಜಿಗೆ ಅದ್ಯಾವಾಗಲೋ ಎಚ್ಚರವಾಗಿದೆ. ಗಂಟೆ ನೋಡಲು ತಿಳಿಯದ ಕಮಲಜ್ಜಿ ಬೆಳಗಾಯಿತೆಂದು ಸರಸರನೆ ಎದ್ದು ಬಂದು ಪಾತ್ರೆ ತೊಳೆಯಲು ಪ್ರಾರಂಭಿಸಿದ್ದಾರೆ. ನಾವು ಸೆಕೆಗೆಂದು ಫ್ಯಾನ್ ಹಾಕಿ ಮಲಗಿದ್ದರಿಂದ ಫ್ಯಾನಿನ ಶಬ್ದಕ್ಕೆ ಕಮಲಜ್ಜಿಯ ಪಾತ್ರೆ ತೊಳೆಯುವ ಶಬ್ದ ಕೇಳಿಸಲಿಲ್ಲ. ನಮ್ಮಲ್ಲಿದ್ದ ನಾಯಿಗಳಿಗೆ ಕಮಲಜ್ಜಿಯ ಪರಿಚಯವಿದ್ದುದರಿಂದ ಅವುಗಳೂ ಬಾಲ ಆಡಿಸಿ ಸುಮ್ಮನಾಗಿವೆ. ಅಂತು ಪೂರ್ತಿ ಪಾತ್ರೆ ತೊಳೆದರೂ ಬೆಳಗಾಗದ ಕಾರಣ ಕಮಲಜ್ಜಿ ಪುನಃ ಅವರ ಮನೆಗೆ ವಾಪಸಾಗಿದ್ದಾರೆ. ಇದೆಲ್ಲವೂ ಸಾಧಾರಣ ರಾತ್ರಿ ಹನ್ನೆರಡು ಘಂಟೆಯೊಳಗೆ ನಡೆದು ಹೋಗಿದೆ. ಇದಿಷ್ಟನ್ನು ಕಮಲಜ್ಜಿಯೇ ಹೇಳಿದಾಗ ಎಲ್ಲವೂ ಬಗೆಹರಿಯಿತು.  


ಬಟ್ಟೆ ಒಗೆಯುವುದಾಗಲಿ, ಪಾತ್ರೆ ತೊಳೆಯುವುದಾಗಲಿ, ಕಸ ಗುಡಿಸುವುದಾಗಲಿ ಅಥವಾ ಯಾವುದೇ ಕೃಷಿಯ ಕೆಲಸವಾಗಲಿ ಕಮಲಜ್ಜಿ ಇಂದಿಗೂ ಹಿಂದೆ ಸರಿಯುವವರಲ್ಲ. ಕಮಲಜ್ಜಿಯ ಮೊಮ್ಮಗಳಿಗೆ ಮಗುವಾದರೂ ಇವರು ಇಂದಿಗೂ ಸ್ವಾವಲಂಬಿಯೇ. ದಿನ ಒಂದಕ್ಕೆ ಐದುನೂರು ರೂಪಾಯಿಯಷ್ಟು ದುಡಿಯುವ ಹುಮ್ಮಸ್ಸು, ಶಕ್ತಿ ಇಂದಿಗೂ ಕಮಲಜ್ಜಿಗೆ ಇದೆ ಎಂದರೆ ಅದು ದೇವರ ಕೊಡುಗೆಯೇ ಎಂದು ಹೇಳಬೇಕು. ಯುವಕರನ್ನೂ ನಾಚಿಸುವ ಅವರ ಕ್ರಿಯಾಶೀಲತೆಗೆ ಯಾವನಾದರೂ ತಲೆಬಾಗಲೇ ಬೇಕು. ಬಹುಷಃ ಸುದೀರ್ಘವಾದ ಶ್ರಮದಾಯಕವಾದ ಕಾಯಕ ಮಾಡಿಕೊಂಡಿರುವ ವ್ಯಕ್ತಿಗೆ ಸನ್ಮಾನ ಮಾಡುವುದಾದರೆ ಕಮಲಜ್ಜಿ ಅದಕ್ಕೆ ಯಾವಾಗಲೂ ಅರ್ಹರೇ. ಇವತ್ತು ಕಮಲಜ್ಜಿಗೆ ವರ್ಷ ಎಂಭತ್ತಕ್ಕೆ ಆಸು ಪಾಸು ಇರಬಹುದು. ಆದರೆ ಇವತ್ತಿಗೂ ತೋಟದ ಕೆಲಸಗಳಿಗೆ, ಕಾಡಿಗೆ ಸೌದೆ ತರಲಿಕ್ಕೆ, ದನಗಳಿಗೆ ಹುಲ್ಲು ಕೊಯ್ಯಲಿಕ್ಕೆ, ನಡೆದುಕೊಂಡೇ ಒಂದೆರಡು ಕಿ ಮೀ. ಹೋಗಲಿಕ್ಕೆ ಕಮಲಜ್ಜಿಗೆ ಕಷ್ಟವಾಗುವುದಿಲ್ಲ. ಅಕ್ಷರಾಭ್ಯಾಸವಿಲ್ಲದಿದ್ದರೂ, ಹಣದ ಗುರುತಿಲ್ಲದಿದ್ದರೂ ಕಮಲಜ್ಜಿಗೆ ಬದುಕು ದುಸ್ತರವಾಗಿಲ್ಲ. ಮುಂದೆ ಅಂತಹ ಯಾವ ಲಕ್ಷಣಗಳೂ ಇಲ್ಲ. ಅಂತಹ ಕಮಲಜ್ಜಿಗೂ ನಮಗೂ ಅದ್ಯಾವ ಋಣಾನುಬಂಧವೋ ಆ ದೇವರೇ ಬಲ್ಲ.


ಇನ್ನು ಲಕ್ಷ್ಮಿಯ ಮತ್ತು ಕಮಲಜ್ಜಿಯ ವಿಚಾರಕ್ಕೆ ಬಂದರೆ ಇವರು ಒಬ್ಬರನ್ನೊಬ್ಬರು ಅದೆಷ್ಟು ಅರ್ಥೈಸಿಕೊಂಡಿದ್ದರೋ ನನಗೆ ಈಗಲೂ ವಿಸ್ಮಯವೇ ಆಗುತ್ತದೆ. ಲಕ್ಷ್ಮಿ ಆರೋಗ್ಯದಿಂದಿರುವಾಗ ಕಮಲಜ್ಜಿ ಬರುತ್ತಿದ್ದರೂ ನಾನಂದುಕೊಂಡಿದ್ದು.. ಕಮಲಜ್ಜಿ ದುಡಿದದ್ದಕ್ಕೆ ಲಕ್ಷ್ಮಿ ದಿನಾಲೂ ಒಂದಿಷ್ಟು ಹಣ ಕೊಡುತ್ತಿದ್ದಳು ಅಂತೆಯೇ ತಿಂಡಿಯನ್ನೂ ಕೊಡುತ್ತಿದ್ದಳು ಕಮಲಜ್ಜಿಗೂ ಅದರ ಅಗತ್ಯವಿತ್ತು ಲಕ್ಷ್ಮಿಗೂ ಕಮಲಜ್ಜಿಯ ದುಡಿಮೆಯ ಅವಶ್ಯಕತೆ ಇತ್ತು ಎಂದು. ಅದು ಒಂದಷ್ಟು ಸತ್ಯವೂ ಆಗಿತ್ತು. ಆದರೆ ಯಾವಾಗ ಲಕ್ಷ್ಮಿ ಖಾಯಿಲೆಯಿಂದ ಬಳಲತೊಡಗಿದಳೋ ಆವಾಗ ಕಮಲಜ್ಜಿಯ ಪೂರ್ಣ ಅರಿವು ನನಗುಂಟಾಯಿತು. ತನ್ನ ಆತ್ಮಕ್ಕೇ ಸಂಕಟ ಬಂದಿದಿಯೋ ಎಂಬಂತೆ ನಿತ್ಯವೂ ಲಕ್ಷ್ಮಿಯ ಬಟ್ಟೆ ಒಗೆಯುವುದರಿಂದ ತೊಡಗಿ ಎಲ್ಲವನ್ನೂ ಮಾಡುತ್ತಿದ್ದರು. ಪ್ರತಿ ಕ್ಷಣದಲ್ಲೂ ಲಕ್ಷ್ಮಿಯ ಆರೋಗ್ಯ ಕೆಡುವಾಗ ಕಮಲಜ್ಜಿಯ ಚಾಕರಿ ಮಾತ್ರ ನಿಂತಿರಲಿಲ್ಲ. ಅದಕ್ಕೆ ಕಾರಣಗಳೂ ಇದ್ದವು. ಲಕ್ಷ್ಮಿ ಕೂಡ ಆರೋಗ್ಯದಲ್ಲಿರುವಾಗ ಕಮಲಜ್ಜಿಗೆ ಕುಡಿಯಲು, ತಿನ್ನಲು ಕೊಡದೆ ತಾನು ತಿನ್ನುತ್ತಿರಲಿಲ್ಲ. ಕೆಲಸಕ್ಕೆ ಮಜೂರಿಯನ್ನು ಕೂಡ ಎಲ್ಲರೂ ಕೊಡುವುದಕ್ಕಿಂತ ಸ್ವಲ್ಪ ಜಾಸ್ತಿಯೇ ಕೊಡುತ್ತಿದ್ದಳು. ಅಂತೆಯೇ ಕೆಲಸವಿರಲಿ ಇಲ್ಲದಿರಲಿ ಬೆಳಗ್ಗಿನ ತಿಂಡಿ ಲಕ್ಷ್ಮಿಯೇ ನೀಡುತ್ತಿದ್ದಳು. ಅಂತು ಕಮಲಜ್ಜಿ ಒಂದು ದಿನ ಬಾರದಿದ್ದರೆ ಲಕ್ಷ್ಮಿಗೆ ಕಸಿವಿಸಿಯೇ ಆಗುತ್ತಿತ್ತು. ಅದಲ್ಲದೆ ಕೆಲಸದವಳು ಎಂದುಕೊಂಡು ನಾವ್ಯಾರು ಕೂಡ ಆಕೆಯನ್ನು ಏಕವಚನದಲ್ಲಿ ಕರೆಯದೆ ಗೌರವಿಸುತ್ತಿದ್ದೆವು. ಇದೆಲ್ಲ ಹಿನ್ನೆಲೆಯಿಂದ ಕಮಲಜ್ಜಿ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ನಮ್ಮಲ್ಲಿಗೆ ಇಂದಿನವರೆಗೂ ಚಾಚೂ ತಪ್ಪದೆ ಬರುತ್ತಾರೆ. ಮುಂದೆಯೂ ಈ ಕ್ರಿಯೆ ಮುಂದುವರಿಯುವುದರಲ್ಲಿ ಸಂದೇಹವಿಲ್ಲ.


ಲಕ್ಷ್ಮಿಯ ದೇಹಾಂತ್ಯವಾದಂದು ಕಮಲಜ್ಜಿಯ ಮನಸ್ಸಿಗೆ ಅದೆಷ್ಟು ಘಾತವಾಗಿತ್ತೋ ಆಕೆಗೇ ಗೊತ್ತು. ಮನೆಯ ಪಕ್ಕದ ಬಸ್ಟೇಂಡಿನಲ್ಲಿ ಕೂತು ಅಳುತ್ತಿದ್ದುದನ್ನು ನಮ್ಮಲ್ಲಿಗೆ ಬಂದಂಥ ಹಿತೈಷಿಗಳು ಹೇಳುತ್ತಿದ್ದರು. ಏನೇ ಇರಲಿ ಕಮಲಜ್ಜಿಯ ಪ್ರಾಮಾಣಿಕತೆಗೆ ಬೆಲೆ ಕಟ್ಟಲಾಗದು. ಇವತ್ತು ಕೂಡ ಕಸ ಗುಡಿಸುವಾಗ ಲಕ್ಷ್ಮಿಯ ಭಾವಚಿತ್ರ ಕಂಡು ಕಣ್ಣು ಮಂಜಾದಾಗಲೇ ಆಕೆಗೆ ಸಮಾಧಾನ. ಇದು ನಮ್ಮಲ್ಲಿಯ ಕಥೆಯಾದರೆ ಕಮಲಜ್ಜಿ ಯಾವ ಮನೆಗಳಿಗೆ ಹೋಗುತ್ತಿದ್ದರೋ ಅಲ್ಲೆಲ್ಲ ಇಂತಹ ಸಾವಿರ ನೆನಪುಗಳನ್ನು ಬಿಟ್ಟು ಅಥವಾ ಹುಟ್ಟು ಹಾಕಿ ಬಂದಿರುತ್ತಾರೆ. ಅದೇ ರೀತಿ ಕಮಲಜ್ಜಿಯ ಮುಗ್ಧತೆಯನ್ನು ಅಥವಾ ಅವರಿಗೆ ಹಣದ ಪರಿಚಯವಿರದುದನ್ನು ಗಮನಿಸಿ ಅದರ ದುರುಪಯೋಗ ಪಡೆದುಕೊಂಡು ಆಕೆಗೆ ಮೋಸ ಮಾಡಿದವರೂ ಇರದಿರಲಿಕ್ಕಿಲ್ಲ. ನೂರರ ನೋಟಾಗಲಿ ಐನೂರರ ನೋಟಾಗಲಿ ಆಕೆಗೆ ವ್ಯತ್ಯಾಸ ಕಾಣುತ್ತಿರಲಿಲ್ಲ. ನಾನು ಪ್ರತಿ ಸಲವೂ ಹಣ ಕೊಡುವಾಗ ನೋಟಿನ ವಿವರಣೆಯೊಂದಿಗೇ ಕೊಟ್ಟರೂ ಆಕೆಗದು ತಿಳಿಯಲಾರದು. ಅಂತು ದುಡಿಯುವ ಜೀವ ದುಡಿಯುತ್ತಲೇ ಇದೆ. ಅದೆಷ್ಟೋ ಮಳೆಗಾಲಗಳು ದಾಟಿ ಬಂದಂಥ ವೃದ್ಧ ಜೀವ ಶ್ರಮ ಜೀವನವೇ ಸಹಜವೆಂಬಂತೆ ನಿತ್ಯವೂ ದುಡಿತದಲ್ಲೇ ಸಂತೃಪ್ತಿ ಕಂಡು ಭವಿಷ್ಯದ ಚಿಂತೆ ಇಲ್ಲದೆ, ಭೂತದ ಬಾಧೆ ಇಲ್ಲದೆ, ವರ್ತಮಾನವೇ ಬದುಕೆಂಬ ಧ್ಯೇಯವಾಕ್ಯದಲ್ಲಿ ಬದುಕುತ್ತಿದ್ದರೆ ಯಾರು ಬುದ್ಧಿವಂತರು ಎನ್ನುವುದೇ ನನಗೆ ಪ್ರಶ್ನೆಯಾಗಿ ಉಳಿದಿದೆ...

************

-ಬಾಲಕೃಷ್ಣ ಸಹಸ್ರಬುದ್ಧೆ ಮುಂಡಾಜೆ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post