ವಿವೇಕಾನಂದ ವಿದ್ಯಾವರ್ಧಕ ಸಂಘದಿಂದ ರ‍್ಯಾಂಕ್ ಗಳಿಸಿದ ವಿದ್ಯಾರ್ಥಿಗಳಿಗೆ ‘ಅಭಿನಂದನಮ್’ ಸನ್ಮಾನ ಸಮಾರಂಭ
ಪುತ್ತೂರು: ಆಸಕ್ತಿ ಮತ್ತು ಪರಿಶ್ರಮ ಎಲ್ಲಾ ಕ್ಷೇತದ ಯಶಸ್ಸಿನ ಸೂತ್ರ. ಶಿಕ್ಷಣವು ಮೊದಲಿಗೆ ನಮ್ಮ ವ್ಯಕ್ತಿತ್ವವನ್ನು ರೂಪಿಸಬೇಕು. ಉತ್ತಮ ವ್ಯಕ್ತಿತ್ವ ರೂಪುಗೊಂಡಾಗ ಮಾತ್ರ ಶಿಕ್ಷಣ ಸಾರ್ಥಕವೆನಿಸುತ್ತದೆ. ವಿದ್ಯಾಸಂಸ್ಥೆಗಳಿಗೆ ಶಿಕ್ಷಣದ ಮೂಲಕ ಉತ್ತಮ ಪ್ರಜೆಗಳನ್ನು ದೇಶಕ್ಕೆ ಕೊಡುಗೆಯಾಗಿ ನೀಡುವ ಸಾಮರ್ಥ್ಯವಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ನಿರ್ಮಾಣದ ಜವಾಬ್ದಾರಿ ಇದೆ ಎಂದು ಮಂಗಳೂರು ಮಂಗಳಾದೇವಿ ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದ ಹೇಳಿದರು.
ಅವರು ಇಲ್ಲಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ನಡೆದ 'ಅಭಿನಂದನಮ್- ಸಾಧಕರಿಗೆ ಸನ್ಮಾನ' ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಶುಕ್ರವಾರ ಮಾತನಾಡಿದರು.
ವಿವೇಕಾನಂದ ಸಂಸ್ಥೆ ಕಲಿಕೆಗೆ ಉತ್ತಮ ವಾತಾವರಣವನ್ನು ಕಲ್ಪಿಸುತ್ತಿದೆ ಎನ್ನುವುದಕ್ಕೆ ವಿದ್ಯಾರ್ಥಿಗಳ ಸಾಧನೆಯೇ ಸಾಕ್ಷಿ. ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸುವುದು ಶಿಕ್ಷಕರ ಕರ್ತವ್ಯ. ಬೋಧಕವರ್ಗದ ಆಸಕ್ತಿ ವಿದ್ಯಾರ್ಥಿಗಳ ಯಶಸ್ಸಿನಲ್ಲಿ ಪ್ರತಿಬಿಂಬಿತವಾಗಿದೆ. ವಿದ್ಯಾರ್ಥಿಗಳು ಕೇವಲ ಶೈಕ್ಷಣಿಕ ಅಂಕಗಳ ಮೂಲಕ ತಮ್ಮ ಸಾಮರ್ಥ್ಯವನ್ನು ಅಳೆಯದೆ ಅದರಿಂದಾಚೆಗಿನ ಭವಿಷ್ಯದ ಬಗ್ಗೆ ಹೆಚ್ಚು ಯೋಚಿಸಬೇಕು ಎಂದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣಮಧ್ಯ ಕ್ಷೇತ್ರದ ಕ್ಷೇತ್ರೀಯ ಕಾರ್ಯವಾಹ ನಾ. ತಿಪ್ಪೇಸ್ವಾಮಿ ಮಾತನಾಡಿ, ಜಾಗತಿಕ ಮಟ್ಟದಲ್ಲಿ ಪೈಪೋಟಿ ನೀಡಬಲ್ಲ ಶಕ್ತ ಯುವ ಪೀಳಿಗೆ ಭಾರತದಲ್ಲಿದೆ. ಶೈಕ್ಷಣಿಕ ಯಶಸ್ಸಿನೊಂದಿಗೆ ಸಂಸ್ಕಾರಯುತ ಶಿಕ್ಷಣ ನೀಡುವುದು ಸಂಸ್ಥೆಯ ಪ್ರತಿಯೊಂದು ಮೂಲಗಳಿಂದ ನಡೆಯಬೇಕು. ಶಿಕ್ಷಣ ಸಂಸ್ಥೆಗಳು ಸಾಮಾಜಿಕ ಪರಿವರ್ತನಾ ಕೇಂದ್ರಗಳಾಗಬೇಕು. ಸಮಾಜಕ್ಕೆ ಸಾಧಕರನ್ನು ನೀಡುವುದರ ಜೊತೆಗೆ ಉತ್ತಮ ವ್ಯಕ್ತಿತ್ವವನ್ನು ರೂಪಿಸುವುದು ವಿದ್ಯಾಸಂಸ್ಥೆಗಳ ಜವಾಬ್ದಾರಿ. ಈ ನೆಲೆಗಟ್ಟಿನಲ್ಲಿ ಪುತ್ತೂರಿನ ವಿವೇಕಾನಂದ ವಿದ್ಯಾಸಂಸ್ಥೆಗಳು ಸಂಸ್ಕಾರಯುತ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ಒದಗಿಸುತ್ತಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಸತೀಶ್ ರಾವ್ ಪಿ. ಮಾತನಾಡಿ, ಲಕ್ಷಾಂತರ ಪದವೀಧರರನ್ನು ಸಮಾಜಕ್ಕೆ ನೀಡಿರುವ ವಿವೇಕಾನಂದ ಸಂಸ್ಥೆ, ಆರಂಭದಿಂದಲೂ ಗ್ರಾಮೀಣ ವಿಧ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತಾ ಬಂದಿದೆ. ಸದ್ಯ ವಿದ್ಯಾರ್ಥಿಗಳಿಗೆ ಹಲವು ರೀತಿಯ ವ್ಯವಸ್ಥೆಗಳನ್ನು ಸಂಸ್ಥೆ ಕಲ್ಪಿಸುತ್ತಿದ್ದು, ವಿದ್ಯಾರ್ಥಿಗಳು ಇದನ್ನು ಸದ್ವಿನಿಯೋಗಿಸುವತ್ತ ಚಿಂತಿಸಬೇಕು. ಸಾಧನೆಯ ಹಾದಿಯಲ್ಲಿ ಹಲವು ತ್ಯಾಗಗಳು ಅನಿವಾರ್ಯ, ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಪಯಣದಲ್ಲಿ ಪೋಷಕರ ಬೆಂಬಲವು ಅಗತ್ಯ ಎಂದರು.
ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೆ. ಎಂ. ಕೃಷ್ಣ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿ, ವಿವೇಕಾನಂದ ವಿದ್ಯಾವರ್ಧಕ ಸಂಸ್ಥೆ ವಿದ್ಯಾರ್ಥಿಗಳಿಗೆ ಶಿಕ್ಷಣದ ಹಲವು ಮಜಲುಗಳಲ್ಲಿ ತನ್ನನ್ನು ತೆರೆದುಕೊಂಡಿದೆ. ಸಾಗರದಷ್ಟು ವಿಶಾಲವಾಗಿ ಶೈಕ್ಷಣಿಕ ಸೇವೆಯನ್ನು ಎಲ್ಲಾ ಸ್ಥರದ ಜನರಿಗೂ ಒದಗಿಸಿ ಸಾಮಾಜಿಕವಾಗಿ ಮುಂಚೂಣಿಯಲ್ಲಿದೆ. ವಿವಿಧ ರೀತಿಯ ತರಬೇತಿಗಳನ್ನು ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡುವ ಮುಖೇನವಾಗಿ ಶೈಕ್ಷಣಿಕ ಕ್ಷೇತ್ರದಲ್ಲಿ ಮಾತ್ರವಲ್ಲದೆ ಸಾಮಾಜಿಕ ಜವಾಬ್ದಾರಿ ನಿರ್ವಹಿಸುವಲ್ಲಿಯೂ ಸಂಸ್ಥೆ ಮುಂದಿದೆ ಎಂದರು.
ಈ ಸಂದರ್ಭ ವಿವೇಕಾನಂದ ವಿದ್ಯಾವರ್ಧಕ ಸಂಘದ ವಿವಿಧ ವಿದ್ಯಾಸಂಸ್ಥೆಗಳಲ್ಲಿ ವ್ಯಾಸಾಂಗ ಮಾಡಿ ರ‍್ಯಾಂಕ್ ಗಳಿಸಿದ ವಿದ್ಯಾರ್ಥಿಗಳನ್ನು ಗುರುತಿಸಿ ಸನ್ಮಾನಿಸಲಾಯಿತು. ಮಂಗಳೂರು ವಿಶ್ವವಿದ್ಯಾನಿಲಯ ನಡೆಸಿದ 2021 ನೇ ಸಾಲಿನ ಪದವಿ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ ದಿವ್ಯಾ ಎಸ್ ಭಟ್ (ಪಿ ಎಂ ಸಿ ಎಸ್) ಎರಡನೇ ರ್ಯಾಂಕ್, ಅನುಶ್ರೀ ಎಸ್ ಭಟ್ (ಬಿ ಝೆಡ್ ಸಿ) ಮೂರನೇ ರ‍್ಯಾಂಕ್, ಶಿವಾನಿ ಮಲ್ಯ (ಬಿ ಝೆಡ್ ಸಿ) ಆರನೇ ರ‍್ಯಾಂಕ್ ಹಾಗೂ ಕಲಾ ವಿಭಾಗದ ಸುಮಾ ವೈ. ಭಟ್ (ಹೆಚ್ ಇ ಪಿ) ಹತ್ತನೇ ರ‍್ಯಾಂಕ್, ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಾದ ರಂಜನ್ ಎಂ (ಮೆಕ್ಯಾನಿಕಲ್ ಇಂಜಿನಿಯರಿಂಗ್) ಮೂರನೇ ರ‍್ಯಾಂಕ್, ಕೃತಿಕಾ ಕೆ (ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್) ಎಂಟನೇ ರ‍್ಯಾಂಕ್, ವಿವೇಕಾನಂದ ಕಾಲೇಜ್ ಆಫ್ ಎಜುಕೇಶನ್ ವಿದ್ಯಾರ್ಥಿನಿ ದಿವ್ಯ ಎಸ್ ಭಟ್ (ಬಿ ಎಡ್) 4ನೇ ರ‍್ಯಾಂಕ್, ವಿವೇಕಾನಂದ ಕಾನೂನು ವಿದ್ಯಾರ್ಥಿಗಳಾದ ಬದ್ರುದ್ದೀನ್ ಬಿ (ಬಿಎ ಎಲ್ ಎಲ್ ಬಿ ) ನಾಲ್ಕನೇ ರಾಂಕ್ ಹಾಗೂ ಸಿಂಧೂ ಬಿ, (ಬಿಎ ಎಲ್ ಎಲ್ ಬಿ) ಎಂಟನೇ ರ‍್ಯಾಂಕ್ ಪಡೆದಿದ್ದು ಈ ವಿದ್ಯಾರ್ಥಿಗಳನ್ನು ಹಾಗೂ ಅವರ ಪೋಷಕರನ್ನು ಸನ್ಮಾನಿಸಲಾಯಿತು.
ಬಿ ಎಡ್ ವಿದ್ಯಾರ್ಥಿಗಳ ತಂಡ ಪ್ರಾರ್ಥಿಸಿ, ವಿವೇಕಾನಂದ ವಿದ್ಯಾವರ್ಧಕ ಸಂಘದ ಖಜಾಂಚಿ ಅಚ್ಯುತ ನಾಯಕ್ ವಂದಿಸಿದರು. ವಿವೇಕಾನಂದ ಬಿ.ಎಡ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಕೃಷ್ಣವೇಣಿ ಎನ್ ಎ ಕಾರ್ಯಕ್ರಮ ನಿರೂಪಿಸಿದರು.
ನಮ್ಮ ಗುರಿ ಸರಿಯಾಗಿದ್ದು ಭಯಪಡದೆ ಆತ್ಮವಿಶ್ವಾಸದಿಂದ ಮುಂದುವರಿದರೆ ಏನನ್ನು ಬೇಕಾದರೂ ಸಾಧಿಸಲು ಸಾಧ್ಯ. ಈ ನಿಟ್ಟಿನಲ್ಲಿ ನನ್ನ ಬೆಂಬಲಕ್ಕೆ ನಿಂತಿದ್ದು ಪುತ್ತೂರಿನ ತೆಂಕಿಲದ ವಿವೇಕಾನಂದ ಬಿ.ಎಡ್ ಕಾಲೇಜು. ಒಬ್ಬ ಶಿಕ್ಷಕಿಯಾಗಲು ಬೇಕಾದ ಅರ್ಹತೆಗಳನ್ನು ಈ ಸಂಸ್ಥೆ ನನಗೆ ಕಲಿಸಿಕೊಟ್ಟಿದೆ. ಜೊತೆಗೆ ರ‍್ಯಾಂಕ್ ಬರುವಲ್ಲೂ ಪ್ರಮುಖ ಪಾತ್ರ ವಹಿಸಿದೆ. ಈ ಸಂದರ್ಭದಲ್ಲಿ ಸಹಕರಿಸಿದ ಆಡಳಿತ ಮಂಡಳಿಗೂ, ಉಪನ್ಯಾಸಕ ವೃಂದಕ್ಕೂ, ಸಹಪಾಠಿಗಳಿಗೂ, ಕುಟುಂಬಕ್ಕೂ ಅನಂತ ಧನ್ಯವಾದಗಳು.
-ದಿವ್ಯ ಎಸ್ ಭಟ್ (ಬಿಎಡ್) ನಾಲ್ಕನೇ ರ‍್ಯಾಂಕ್
ಮನೆಯವರ ಬೆಂಬಲ, ಶಿಕ್ಷಕರ ಪ್ರೋತ್ಸಾಹದಿಂದ ನಾನು ಈ ಸಾಧನೆ ಮಾಡುವಂತಾಗಿದೆ. ಬೇರೆ ಬೇರೆ ಶೈಕ್ಷಣಿಕ ಸ್ಪರ್ಧೆಗಳಲ್ಲಿ ಭಾಗವಹಿಸುವಿಕೆಯಿಂದಾಗಿ ಸಾಕಷ್ಟು ಅನುಕೂಲವಾಗಿದೆ. ಇದರಿಂದ ನನ್ನಲ್ಲಿರುವ ಜ್ಞಾನ ಹೆಚ್ಚಾಯಿತು. ಯಶಸ್ಸು ಯಾರನ್ನೂ ಹುಡುಕಿ ಬರಲಾರದು. ಆಸಕ್ತಿ ಮತ್ತು ಪರಿಶ್ರಮವಿದ್ದರೆ ಯಶಸ್ಸು ಗಳಿಸಲು ಸಾಧ್ಯ. ಜೊತೆಗೆ ಸಹಪಾಠಿಗಳ ಸಹಕಾರ, ಕಲಿಕೆಗೆ ಪೂರಕವಾಗಿರುವ ಕಾಲೇಜಿನ ಹಾಸ್ಟೆಲ್ ಇವೆಲ್ಲ ಕಾರಣದಿಂದ ಇಂದು ರ‍್ಯಾಂಕ್ ಗಳಿಸಲು ಸಾಧ್ಯವಾಗಿದೆ.
-ಅನುಶ್ರೀ ಎಸ್ ಭಟ್ (ಬಿ ಝಡ್ಸಿ)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ