
ಮಂಗಳೂರು: ವಿದ್ಯಾಭ್ಯಾಸದತ್ತ ಒಲವು ತೋರುತ್ತಿರುವ ಮುಸ್ಲಿಂ ವಿದ್ಯಾರ್ಥಿನಿಯರ ಸಂಖ್ಯೆ ಹೆಚ್ಚುತ್ತಿರುವುದು ಒಳ್ಳೆಯ ಬೆಳವಣಿಗೆ. ವಸ್ತ್ರ ಸಂಹಿತೆಯಂತಹ ವ್ಯವಸ್ಥೆಯಲ್ಲಾಗುವ ಬದಲಾವಣೆಗಳು ಅವರ ವಿದ್ಯಾಭ್ಯಾಸಕ್ಕೆ ಅಡ್ಡಿಯಾಗದಂತೆ ಎಲ್ಲಾ ಎಚ್ಚರ ವಹಿಸಲಾಗುವುದು ಎಂದು ಮಂಗಳೂರು ವಿಶ್ವವಿದ್ಯಾನಿಲಯ ಕುಲಪತಿ ಪ್ರೊ. ಪಿ ಸುಬ್ರಹ್ಮಣ್ಯ ಯಡಪಡಿತ್ತಾಯ ಆಶ್ವಾಸನೆ ನೀಡಿದ್ದಾರೆ.
ಶನಿವಾರ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿನಿಯರು ವಿದ್ಯಾಭ್ಯಾಸ ಮುಂದುವರಿಸುವಂತಾಗಲು ಈಗಿನ ಬೆಳವಣಿಗೆಯನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ, ಈ ಬಾರಿಗೆ ಸೀಮಿತವಾದ ಕೆಲವು ಕ್ರಮಗಳನ್ನು ಕೈಗೊಳ್ಳಲಾಗುವುದು. ವಿದ್ಯಾರ್ಥಿನಿಯರು ಸೆಮಿಸ್ಟರ್ ಮಧ್ಯದಲ್ಲಿ ಕಾಲೇಜು ಬದಲಾಯಿಸಲು ಬಯಸಿದರೆ ಇಂಟೇಕ್ ಹೆಚ್ಚು ಮಾಡಲಾಗುವುದು, ಫೀಸ್ ಮನ್ನಾ ಮಾಡಲು ಕ್ರಮ ಕೈಗೊಳ್ಳಲಾಗುವುದು. ಹಾಜರಾತಿ ಕೊರತೆಯಿದ್ದರೆ ಮಾತ್ರ ಇದನ್ನು ಮಾಡಲಾಗುವುದಿಲ್ಲ, ಎಂದರು.
ಎಲ್ಲಾ ಘಟಕ ಕಾಲೇಜುಗಳಲ್ಲಿ ವಸ್ತ್ರ ಸಂಹಿತೆಯನ್ನು ಕಡ್ಡಾಯವಾಗಿ ಜಾರಿಗೆ ತರಲಾಗುವುದು, ಎಂದು ಪುನರುಚ್ಛರಿಸಿದರು. ಇದೇ ವೇಳೆ ಅವರು, ಮಂಗಳೂರು ವಿಶ್ವವಿದ್ಯಾನಿಲಯದ 6 ಘಟಕ ಕಾಲೇಜುಗಳಲ್ಲಿ 3 ಮೂರು ಕಾಲೇಜುಗಳಿಗೆ ಸರ್ಕಾರ ಮಾನ್ಯತೆ ನೀಡಿದ್ದು ಮಂಗಳಗಂಗೋತ್ರಿಯ ವಿವಿ ಕಾಲೇಜು, ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜು ಮತ್ತು ನೆಲ್ಯಾಡಿಯ ವಿವಿ ಕಾಲೇಜುಗಳಿಗೂ ಶೀಘ್ರ ಮಾನ್ಯತೆ ದೊರೆಯುವ ವಿಶ್ವಾಸವಿದೆ ಎಂದು ನುಡಿದರು. ಮೂಡಬಿದಿರೆಯ ಬನ್ನಡ್ಕದ ಕಾಲೇಜಿಗೆ ಮಾನ್ಯತೆ ದೊರೆತಿದ್ದು, ಸ್ವಂತ ಸಂಪನ್ಮೂಲ ಬಳಸಿಕೊಂಡು ಕಾರ್ಯನಿರ್ವಹಿಸಲು ಸರ್ಕಾರ ಅನುಮತಿ ನೀಡಿದೆ ಎಂದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ