ದಂತ ವೈದ್ಯರ 32 ಸಾಮಾಜಿಕ ಹೊಣೆಗಾರಿಕೆಗಳು

Upayuktha
0

ಬಾಯಿ ಎನ್ನುವುದು ನಮ್ಮ ದೇಹದ ಹೆಬ್ಬಾಗಿಲು ಆಗಿದ್ದು, ಹಲ್ಲುಗಳು ಜೀರ್ಣಾಂಗ ವ್ಯವಸ್ಥೆಯ ಹೊಸ್ತಿಲು ಆಗಿರುತ್ತದೆ. ಹಲ್ಲಿನ ಆರೋಗ್ಯ ಹದಗೆಟ್ಟಾಗ ಜೀರ್ಣ ಪ್ರಕ್ರಿಯೆ ಸರಿಯಾಗಿ ನಡೆಯದೆ, ನೂರಾರು  ರೋಗಗಳಿಗೆ  ಸದ್ದಿಲ್ಲದೆ ಮುನ್ನುಡಿ ಬರೆಯುತ್ತದೆ. ಆದ ಕಾರಣ ನಮ್ಮ  ಬಾಯಿ ಮತ್ತು  ಹಲ್ಲಿನ ಆರೋಗ್ಯವನ್ನು ಸರಿಯಾಗಿ ಕಾಪಾಡಿಕೊಂಡಲ್ಲಿ ಹತ್ತು ಹಲವು ರೋಗಗಳನ್ನು ಬರದಂತೆ ಪರಿಣಾಮಕಾರಿಯಾಗಿ ತಡೆಯಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ದಂತ ವೈದ್ಯರಿಗೆ ವಿಶೇಷವಾದ ಸಾಮಾಜಿಕ ಹೊಣೆಗಾರಿಕೆ ಇದ್ದು, ಒಬ್ಬ ವ್ಯಕ್ತಿಯ ಪರಿಪೂರ್ಣ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ದಂತ ವೈದ್ಯರು ಪರೋಕ್ಷವಾಗಿ ಕಾರಣವಾಗುತ್ತಾರೆ. ದಂತ ವೈದ್ಯರು ಬರೀ ಹಲ್ಲಿನ ವೈದ್ಯರಾಗಿರದೆ ರೋಗಿಯ ಬಾಯಿಯಲ್ಲಿ ನಾಲಿಗೆಯಲ್ಲಿ ಅಥವಾ ಇನ್ಯಾವುದೇ ಭಾಗದಲ್ಲಿ ಕಂಡು ಬರುವ ಸೂಕ್ತವಾದ ವ್ಯತ್ಯಾಸಗಳನ್ನು ಗುರುತಿಸಿ ಬರಲಿರುವ ರೋಗವನ್ನು ಆರಂಭ ಹಂತದಲ್ಲೇ ನಿವಾಳಿಸಿ ಹಾಕಬಹುದು. ಈ ಕಾರಣದಿಂದಲೇ ಬಾಯಿಯನ್ನು ‘ವೈದ್ಯರುಗಳ ಕನ್ನಡಿ’ ಎಂದು ಸಂಭೋದಿಸಲಾಗುತ್ತದೆ.


ಅದೇ ರೀತಿ ನಮ್ಮ ಬಾಯಿಯೊಳಗೆ ಲಕ್ಷಾಂತರ ನಿರುಪ್ರದವಿ ಬ್ಯಾಕ್ಟೀರಿಯಾಗಳು ಮತ್ತು ವೈರಾಣುಗಳು ಜೀವಿಸುತ್ತಿದ್ದು, ಕವಿ ಹೃದಯ ವೈದ್ಯರುಗಳು ಬಾಯಿಯನ್ನು ‘ಬ್ಯಾಕ್ಟೀರಿಯಾಗಳ ತ್ಯಾಜ್ಯ ಗುಂಡಿ’ ಎಂದು ವಿಶ್ಲೇಷಿಸುತ್ತಿದ್ದಾರೆ. ದೇಹದ ರಕ್ಷಣಾ ವ್ಯವಸ್ಥೆ ತಿಳಿಸಿದಾಗ ಇದೇ ನಿರುಪದ್ರವಿ ಜೀವಿಗಳು  ಉಗ್ರವಾಗಿ  ಕೆರಳಿ ರೋಗಗಳಿಗೆ ಕಾರಣವಾಗಲೂಬಹುದು. ಈ ಕಾರಣದಿಂದ ಸದಾ ಕಾಲ ಬಾಯಿಯನ್ನು ಸ್ವಚ್ಛಗೊಳಿಸುತ್ತಾ ಬ್ಯಾಕ್ಟೀರಿಯಾಗಳ ಸಂಖ್ಯೆಯನ್ನು ನಿಯಂತ್ರಿಸಬೇಕಾದ ಅನಿವಾರ್ಯತೆಯೂ ಇರುತ್ತದೆ. ದಂತ ವೈದ್ಯರ  ಸಾಮಾಜಿಕ ಹೊಣೆಗಾರಿಕೆಯನ್ನು ಈ ಕೆಳಗಿನಂತೆ ವಿವರಿಸಲಾಗಿದೆ.


1) ಬಾಯಿಯಲ್ಲಿನ ಹಲ್ಲುಗಳಲ್ಲಿ ಹುಳುಕಾಗಿ ಅಥವಾ ದಂತ ಕ್ಷಯ ಉಂಟಾದಾಗ ಅದರಲ್ಲಿನ ಬ್ಯಾಕ್ಟೀರಿಯಾಗಳು ಚರ್ಮದಲ್ಲಿ ಅಲರ್ಜಿ ಅಥವಾ ತುರಿಕೆಗಳಿಗೆ ಕಾರಣವಾಗುತ್ತದೆ. ಈ ಕಾರಣದಿಂದ ನಿಮಗೆ ಪದೇ ಪದೇ ತುರಿಕೆ ಸಮಸ್ಯೆ ಇದ್ದಲ್ಲಿ ಚರ್ಮ ತಜ್ಞರೇ ಹುಳುಕಾದ ಹಲ್ಲುಗಳನ್ನು ಸರಿಪಡಿಸಿಕೊಂಡು ಬನ್ನಿ ಎಂದು ಆದೇಶಿಸುತ್ತಾರೆ. ಹುಳುಕಾದ ಹಲ್ಲು ಸರಿಪಡಿಸಿ ಸಿಮೆಂಟ್ ತುಂಬಿಸಿದಾಗ ಅಲರ್ಜಿ ತನ್ನಿಂತಾನೇ ಕಡಿಮೆಯಾಗುತ್ತದೆ. 

2) ನಿಮ್ಮ ವಸಡುಗಳಲ್ಲಿ ರಕ್ತ ಜಿನುಗುತ್ತಿದ್ದಲ್ಲಿ ಅಥವಾ ಕೆಂಪಗಾಗಿ ಉರಿಯೂತದಿಂದ ಕೂಡಿದ್ದಲ್ಲಿ ನಿಮಗೆ ವಿಟಮಿನ್ ಸಿ ಕೊರತೆ ಇರುವ ಸಾಧ್ಯತೆ ಇರುತ್ತದೆ. ವಿಟಮಿನ್ ಸಿ ಕೊಲ್ಲಾಜೆನ್ ಎಂಬ ವಸ್ತುಗಳ ತಯಾರಿಕೆಗೆ ಅತೀ ಅಗತ್ಯವಿದ್ದು, ವಿಟಮಿನ್ ಸಿ ಕೊರತೆ ಇದ್ದಲ್ಲಿ ಈ ಪ್ರೊಟೀನ್ ಉತ್ಪಾದನೆ  ಕುಂದಿಸಿ, ವಸಡಿನ ರಕ್ತಸ್ರಾವಕ್ಕೆ ಕಾರಣವಾಗುತ್ತದೆ.

3) ಮಧುಮೇಹ ರೋಗಿಗಳಲ್ಲಿ ಬಾಯಿಯಲ್ಲಿ ವಾಸನೆ ಇರುತ್ತದೆ. ಇದನ್ನು ಅಸೆಟೋನ್ ಉಸಿರು ಎಂದು ಕರೆಯುತ್ತಾರೆ. ಇದರ ಜೊತೆಗೆ ಹಲ್ಲಿನ ಸುತ್ತ ಎಲುಬು ಕರಗಿ ವಸಡುಗಳಲ್ಲಿ ಕೀವು ತುಂಬಿ ಹಲ್ಲುಗಳು ಅಲುಗಾಡುತ್ತದೆ. ಇಂತಹ ಸನ್ನಿವೇಶಗಳಲ್ಲಿ ರೋಗಿಗಳ ರಕ್ತದಲ್ಲಿನ ಗ್ಲುಕೋಸ್ ಪರೀಕ್ಷೆ ಮಾಡಿ  ಮಧುಮೇಹವನ್ನು ಪತ್ತೆ ಹಚ್ಚಲಾಗುತ್ತದೆ.

4) ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶ 10ಕ್ಕಿಂತಲೂ ಕಡಿಮೆಯಿದ್ದಲ್ಲಿ ಬಾಯಿಯಲ್ಲಿನ ಪದರಗಳು  ಬಿಳಿಚಿಕೊಂಡಿರುತ್ತದೆ. ಹೆಚ್ಚಾಗಿ ನಾಲಗೆ ಕೆಳ ಭಾಗದಲ್ಲಿ ಈ ರೀತಿ ಕಂಡು ಬರುತ್ತದೆ. ತಕ್ಷಣವೇ ರಕ್ತ ಪರೀಕ್ಷೆ ಮಾಡಿ ಹಿಮೋಗ್ಲೋಬಿನ್ ಪ್ರಮಾಣ ಪತ್ತೆ ಹಚ್ಚಿ ರಕ್ತಹೀನತೆಯನ್ನು ದೃಢೀಕರಿಸಲಾಗುತ್ತದೆ. 

5) ವ್ಯಕ್ತಿಯ ದೇಹದಲ್ಲಿ ಬಿಲಿರುಬಿನ್ ಎಂಬ ವರ್ಣ ದ್ರವ್ಯದ ಪ್ರಮಾಣ ಜಾಸ್ತಿಯಾದಾಗ ಬಾಯಿಯಲ್ಲಿನ ಪದರಗಳು ಹಳದಿ ಬಣ್ಣಕ್ಕೆ ತಿರುಗುತ್ತದೆ. ನಾಲಗೆ ಕೆಳಭಾಗ ತುಟಿಯ ಬಿಳಿಭಾಗದಲ್ಲೂ ಹಳದಿ ಬಣ್ಣ ಇರುತ್ತದೆ. ವ್ಯಕ್ತಿಯು ಲಿವರ್ ತೊಂದರೆಯಿಂದ  ಜಾಂಡೀಸ್ ಕಾಯಿಲೆ ಬಂದಾಗ ಈ ರೀತಿಯ  ಸನ್ನಿವೇಶ  ಬಾಯಿಯಲ್ಲಿ ಇರುತ್ತದೆ. ಹಾಗಾಗಿ ರೋಗಿಗೆ ಜಾಂಡೀಸ್ ಕಾಯಿಲೆ ಬಂದಿದೆ ಎಂದು ದಂತ ವೈದ್ಯರು ಪತ್ತೆಹಚ್ಚಲು ಸಾಧ್ಯವಿದೆ.


6) ಒಬ್ಬ ವ್ಯಕ್ತಿಯ ದೇಹದಲ್ಲಿನ ಪ್ಲೆಟ್‍ಲೆಟ್‍ಗಳ ಸಂಖ್ಯೆ ಕ್ಷೀಣಿಸಿದಾಗ ವಸಡುಗಳಲ್ಲಿ ರಕ್ತ ಜಿನುಗುತ್ತದೆ. ಸಾಮಾನ್ಯವಾಗಿ ಆರೋಗ್ಯವಂತ ವ್ಯಕ್ತಿಗಳಲ್ಲಿ 1.5 ಲಕ್ಷದಿಂದ 4.5 ಲಕ್ಷದವರೆಗೆ ಪ್ಲೆಟ್‍ಲೆಟ್‍ಗಳು ಇರುತ್ತದೆ. ಪ್ಲೆಟ್‍ಲೆಟ್‍ಗಳ ಸಂಖ್ಯೆ 50,000ಕ್ಕಿಂತ ಕಡಿಮೆಯಾದಾಗ ವಸಡಿನಲ್ಲಿ ರಕ್ತ  ಒಸರುತ್ತದೆ.  ಈ ಕಾರಣದಿಂದ ವಸಡಿನಲಿ ರಕ್ತ ಬಂದಲ್ಲಿ  ದಂತ ವೈದ್ಯರು ರಕ್ತ ಪರೀಕ್ಷೆಗೆ ಆದೇಶಿಸುತ್ತಾರೆ. 

7) ಒಬ್ಬ ವ್ಯಕ್ತಿಗೆ ಡೆಂಗ್ಯೂ ಜ್ವರ ಮತ್ತು ಚಿಕುನ್‍ಗುನ್ಯಾ ಜ್ವರ ಬಂದಾಗಲೂ ಪ್ಲೆಟ್‍ಲೆಟ್‍ಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತದೆ ಮತ್ತು ವಸಡುಗಳಲ್ಲಿ ರಕ್ತ ಬರುತ್ತದೆ. ಒಬ್ಬ ವ್ಯಕ್ತಿಗೆ ಜ್ವರದ ಜೊತೆಗೆ ವಸಡಿನಲ್ಲಿ ರಕ್ತ ಬರುತ್ತಿದ್ದಲ್ಲಿ ದಂತ ವೈದ್ಯರು ಡೆಂಗ್ಯುಜ್ವರ ಪತ್ತೆಗೆ ರೋಗಿಗೆ ನಿರ್ದೇಶನ ನೀಡುತ್ತಾರೆ. 

8) ಒಬ್ಬ ರೋಗಿಗೆ ರಕ್ತದ ಕ್ಯಾನ್ಸರ್ ಬಂದಾಗ ವ್ಯಕ್ತಿಯ ದೇಹದಲ್ಲಿನ ಒಳ ರಕ್ತಕಣಗಳ ಸಂಖ್ಯೆ ಅತಿಯಾಗಿ ವೃದ್ಧಿಸುತ್ತದೆ ಮತ್ತು ಪ್ಲೇಟ್‍ಲೆಟ್ ಸಂಖ್ಯೆ ಕ್ಷೀಣಿಸುತ್ತದೆ. ಇಂತಹ ಸಂದರ್ಭಗಳಲ್ಲಿಯೂ  ವಸಡಿನಲ್ಲಿ ರಕ್ತ ಬರುವ ಸಾಧ್ಯತೆ ಇರುತ್ತದೆ. ವಸಡಿನ ಉರಿಯೂತ ಮತ್ತು ರಕ್ತ ಒಸರುವಿಕೆ ಸಣ್ಣ ಮಕ್ಕಳಲ್ಲಿ ಕಂಡು ಬಂದಲ್ಲಿ ದಂತ ವೈದ್ಯರು ರಕ್ತದ ಕ್ಯಾನ್ಸರ್‍ನ್ನು ಸಂಶಯಿಸಿ ಕ್ಯಾನ್ಸರ್ ತಜ್ಞರ ಸಲಹೆಗೆ ಆದೇಶ ನೀಡಿರುತ್ತಾರೆ.

9) ಒಬ್ಬ ವ್ಯಕ್ತಿಯ ಬಾಯಿಯಲ್ಲಿ ಬಿಳಿ ಕಲೆಗಳು ಕೆಂಪು ಕಲೆಗಳು ಕಂಡು ಬಂದಲ್ಲಿ ದಂತ ವೈದ್ಯರು ಅಂತಹ ರೋಗಿಗಳನ್ನು ಪ್ರತೀ ಆರು ತಿಂಗಳಿಗೊಮ್ಮೆ ಕಡ್ಡಾಯವಾಗಿ ಸಂದರ್ಶನಕ್ಕೆ ಬರಲು ಆದೇಶಿಸಿರುತ್ತಾರೆ. ಇದನ್ನು ಲ್ಯುಕೋಪ್ಲೇಕಿಯಾ ಅಥವಾ ಲೈಕೆನ್‍ಪ್ಲಾನಸ್ ಎಂಬುದಾಗಿ ಸಂಭೋಧಿಸಲಾಗುತ್ತದೆ.  ಇವುಗಳು  ಕೆಲವೊಮ್ಮೆ  ಬಾಯಿ ಕ್ಯಾನ್ಸರ್ ಆಗಿ  ಪರಿವರ್ತನೆ ಆಗುವ ಸಾಧ್ಯತೆಯೂ ಇರುತ್ತದೆ.  ಈ ಕಾರಣದಿಂದ  ಇಂತಹಾ ರೋಗಗಳ ಪತ್ತೆ ಹಚ್ಚುವಿಕೆಯೂ  ದಂತ ವೈದ್ಯರಿಗೆ ವಿಶೇಷ ಜವಾಬ್ದಾರಿ.

10) ಒಬ್ಬ ವ್ಯಕ್ತಿಯ ಬಾಯಿಯಲ್ಲಿ ಉರಿ, ಖಾರ ಮತ್ತು ಬಿಸಿ ಪದಾರ್ಥಗಳ ಸೇವನೆ ಸಂದರ್ಭದಲ್ಲಿ ಉರಿಯೂತವಿದ್ದಲ್ಲಿ ಅಂತಹಾ ವ್ಯಕ್ತಿಗಳ ಚರಿತ್ರೆಯನ್ನು ದಂತ ವೈದ್ಯರು ವಿಚಾರಿಸುತ್ತಾರೆ. ಅಂತಹ ವ್ಯಕ್ತಿಗಳು ತಂಬಾಕು ಉತ್ಪನ್ನ ಸೇವಿಸುತ್ತಿದ್ದಲ್ಲಿ ಅವರಿಗೆ ಬಾಯಿ ಬಿಗಿಯುವ ರೋಗ ಇರುವ ಸಾಧ್ಯತೆ ಇರುತ್ತದೆ.  ಇದು ಮುಂದೆ ಕ್ಯಾನ್ಸರ್ ಆಗಿ ಪರಿವರ್ತನೆ ಆಗುವ ಸಾಧ್ಯತೆಯೂ ಇರುತ್ತದೆ. ಇಂತಹ ರೋಗಿಗಳಿಗೆ  ಬಾಯಿ ತೆರೆಯಲು ಕಷ್ಟವಾಗುವ ಸಾಧ್ಯತೆಯೂ ಇರುತ್ತದೆ.

11) ಒಬ್ಬ ರೋಗಿಯ ಬಾಯಿಯಲ್ಲಿ ಎರಡು ವಾರಗಳಿಗಿಂತಲೂ ಜಾಸ್ತಿ ಕಾಲ ಒಣಗದೇ ಇರುವ ಹುಣ್ಣು ಇದ್ದಲ್ಲಿ ದಂತ ವೈದ್ಯರು ಬಯಾಪ್ಸಿ ಎಂಬ ಪರೀಕ್ಷೆಗೆ ಆದೇಶಿಸುತ್ತಾರೆ. ಬಾಯಿ ಹುಣ್ಣಿಗೆ ಕಾರಣವಾದ ಎಲ್ಲಾ ಅಂಶಗಳನ್ನು ಸರಿಪಡಿಸಿದ ಬಳಿಕವೂ ಹುಣ್ಣು ಒಣಗದಿದ್ದಲ್ಲಿ ದಂತ ವೈದ್ಯರು ಬಾಯಿ ಕ್ಯಾನ್ಸರ್‍ನ್ನು  ಸಂದೇಹಪಡುತ್ತಾರೆ.


12) ಬಾಯಿಯ ಸ್ವಚ್ಛತೆ ಇಲ್ಲದವರಿಗೆ ಇತರರಿಗಿಂತ 25 ಶೇಕಡಾ ಜಾಸ್ತಿ ಪಟ್ಟು  ಹೃದಯಾಘಾತ ಆಗುವ ಸಾಧ್ಯತೆ ಇದೆ ಎಂದು ಬ್ರಿಟಿಷ್ ವೈದ್ಯಕೀಯ ನಿಯತಕಾಲಿಕ ಲಾನ್ಸೆಟ್ ವರದಿ ಮಾಡಿದೆ. ಈ ನಿಟ್ಟಿನಲ್ಲಿ ಪ್ರತಿ ರೋಗಿಗೆ 6 ತಿಂಗಳಿಗೊಮ್ಮೆ ಬಾಯಿ ಶುಚಿಗೊಳಿಸುವಂತೆ ಮನವೊಲಿಸುವ ಸಾಮಾಜಿಕ ಹೊಣೆಗಾರಿಕೆ ದಂತ ವೈದ್ಯರಿಗೆ ಇದೆ.  

13) ಬಾಯಿ ಸ್ವಚ್ಛತೆ ಇಲ್ಲದವರಿಗೆ ಅದರಲ್ಲಿ ಹುದುಗಿರುವ ಬ್ಯಾಕ್ಟೀರಿಯಾಗಳು ವಸಡಲ್ಲಿ ಸೇರಿಕೊಂಡು ಆಲ್‍ಝೈಮರ್ಸ್ ಎಂಬ ಮರೆಗುಳಿತನ ಕಾಯಿಲೆ ಉಂಟುಮಾಡುತ್ತದೆ ಎಂದು ಆಕ್ಸ್‍ಫರ್ಡ್ ವಿಶ್ವವಿದ್ಯಾಲಯ ವರದಿ ತಿಳಿಸಿದೆ. ಈ ನಿಟ್ಟಿನಲ್ಲಿ ಎಲ್ಲಾ ರೋಗಿಗಳು ಬಾಯಿ ಶುಚಿಗೊಳಿಸುವಂತೆ ಮನಪರಿವರ್ತನೆ ಮಾಡುವ ಗುರುತರ ಹೊಣೆಗಾರಿಕೆ ಇದೆ.

14) ನಿಯಮಿತವಾಗಿ ದಂತ ಶುಚಿತ್ವವನ್ನು ಮಾಡಿಸಿಕೊಂಡು ವಸಡಿನ ಆರೋಗ್ಯವನ್ನು ಕಾಪಾಡಿಕೊಂಡಲ್ಲಿ ಸ್ಟ್ರೋಕ್ ಉಂಟಾಗುವ ಸಾಧÀ್ಯತೆ ಕ್ಷೀಣಿಸುತ್ತದೆ ಎಂದು ವೈದ್ಯಕೀಯ ನಿಯತಕಾಲಿಕೆಗಳು ವರದಿ ಮಾಡಿವೆ. 

15) ಪ್ರತೀ 6 ತಿಂಗಳಿಗೊಮ್ಮೆ ದಂತ ವೈದ್ಯರ ಬಳಿ ಸಂದರ್ಶನ ಪಡೆದು ಹಲ್ಲು ಶುಚಿತ್ವಗೊಳಿಸಿ ವಸಡಿನ ಆರೋಗ್ಯವನ್ನು ಹತೋಟಿಯಲ್ಲಿಟ್ಟಲ್ಲಿ ಹೃದಯಾಘಾತ, ಸ್ಟ್ರೋಕ್, ಮರೆಗುಳಿತನ ಮತ್ತು ಇತರ  ಹೃದಯ ಸಂಬಂಧಿ ಕಾಯಿಲೆಗಳನ್ನು  ತಡೆಗಟ್ಟಬಹುದು ಎಂದು ಅಮೆರಿಕಾದ ಮಿನಸೋಟ್ ವಿಶ್ವವಿದ್ಯಾನಿಲಯ ಸಂಶೋಧನೆಯಿಂದ ಸಾಬೀತಾಗಿದೆ. ಈ ನಿಟ್ಟಿನಲ್ಲಿ ರೋಗಿಗಳ ಮನವೊಲಿಸಿ ದಂತ ಶುಚಿಗೊಳಿಸುವ ಗುರುತರ ಜವಾಬ್ದಾರಿ ದಂತ ವೈದ್ಯರಿಗಿದೆ.


16) ಗ್ಯಾಸ್ಟ್ರಿಕ್ ಸಮಸ್ಯೆ ಇರುವವರಿಗೆ ಹಲ್ಲುಗಳ ಎನಾಮಲ್ ಸವೆದು ಹೋಗಿ ಅತೀ ಸಂವೇದನೆ ಇರುತ್ತದೆ. ಇಂತಹ ರೋಗಿಗಳ ಚರಿತ್ರೆ ತಿಳಿದು ಸೂಕ್ತ ಮಾರ್ಗದರ್ಶನ ನೀಡುವ ಹೊಣೆಗಾರಿಕೆ ದಂತ ವೈದ್ಯರಿಗಿದೆ. ಹೊಟ್ಟೆಯಲ್ಲಿನ ಗ್ಯಾಸ್ಟ್ರಿಕ್ ಆಮ್ಲದ ಆಮ್ಲೀಯತೆ 2ರಿಂದ 3ರಷ್ಟು ಇದ್ದು, ಅದು ಬಾಯಿಗೆ ತಿರುಗಿ ಬಂದಲ್ಲಿ ಹಲ್ಲುಗಳ ಎನಾಮೆಲ್ ಸವೆದು ಹೋಗಿ ದಂತ ಅತಿ ಸಂವೇದನೆಗೆ ಕಾರಣವಾಗುತ್ತದೆ. 

17) ಲಿವರ್ ತೊಂದರೆ, ಲಿವರ್ ಸಿರ್ಹೋಸಿಸ್, ಲಿವರ್ ಕ್ಯಾನ್ಸರ್ ಇರುವವರಿಗೆ ಹಲ್ಲು ಕಿತ್ತ ಬಳಿಕ  ವಿಪರೀತ ರಕ್ತಸ್ರಾವವಾಗುವ ಸಾಧ್ಯತೆ ಇರುತ್ತದೆ. ಇಂತಹ ಸಂದರ್ಭಗಳಲ್ಲಿ ದಂತ ವೈದ್ಯರು ರೋಗಿಗಳನ್ನು ಹೆಚ್ಚಿನ ತಪಾಸಣೆಗೆ ಒಳಪಡಿಸಿ ಅವರು ರೋಗಿಗಳನ್ನು ಪತ್ತೆ ಹಚ್ಚಲು ಕಾರಣಭೂತರಾಗುತ್ತಾರೆ. ಲಿವರ್ ಸಮಸ್ಯೆ ಇದ್ದಾಗ ರಕ್ತ ಹೆಪ್ಪುಗಟ್ಟಲು  ಬೇಕಾದ ಅಂಶಗಳು ಲಿವರ್ ನಲ್ಲಿ ಉತ್ಪತ್ತಿಯಾಗದೆ ರಕ್ತ ಹೆಪ್ಪುಗಟ್ಟದೆ ಇರಬಹುದು.  

18) ಶ್ವಾಸಕೋSದಲ್ಲಿ ಕೀವು ತುಂಬಿಕೊಂಡಿದ್ದಲ್ಲಿ ವಿಪರೀತ ಬಾಯಿ ವಾಸನೆ ಇರುವ ಸಾಧ್ಯತೆ ಇರುತ್ತದೆ. ಇಂತಹ ಸಂದರ್ಭಗಳಲ್ಲಿ ದಂತ ವೈದ್ಯರು ರೋಗಿಗಳಿಗೆ ಶ್ವಾಸಕೋಶ ತಜ್ಞರ ಸಲಹೆ ಪಡೆಯಲು ಆದೇಶಿಸಿತ್ತಾರೆ.  

19) ಅಪಸ್ಮಾರ  ಮತ್ತು ಅಧಿಕ ರಕ್ತದೊತ್ತಡ ರೋಗ ಇರುವವರಲ್ಲಿ  ಔಷಧಿಗಳ  ಅಡ್ಡ ಪರಿಣಾಮದಿಂದ ವಸಡುಗಳು ಅಡ್ಡಾದಿಡ್ಡಿಯಾಗಿ ಬೆಳೆದು ಹಲ್ಲುಗಳು ಕಾಣಿಸದೇ ಇರಬಹುದು. ಇಂತಹಾ ಸನ್ನಿವೇಶಗಳಲ್ಲಿ ರೋಗಿಗೆ ತಿಳಿ ಹೇಳಿ ವೈದ್ಯರ ಮನವೊಲಿಸಿ ಬದಲಿ ಔಷಧಿ ನೀಡುವ ಹೊಣೆಗಾರಿಕೆ ದಂತ ವೈದ್ಯರಿಗೆ ಇದೆ. 

20) ಸಣ್ಣ ಮಕ್ಕಳಲ್ಲಿ ದಂತ ಆರೋಗ್ಯ ಕಾಪಾಡಿಕೊಳ್ಳುವಂತೆ ಹೆತ್ತವರ ಮನವೊಲಿಸುವ ಹೊಣೆಗಾರಿಕೆ  ದಂತ ವೈದ್ಯರಿಗಿದೆ. ಮಕ್ಕಳ ಹಲ್ಲು ಬೇಗನೆ ಹಾಳಾದಲ್ಲಿ ಅವರ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಕುಂಠಿತವಾಗಬಹುದು.

21) ಮಕ್ಕಳು 5 ವರ್ಷದ ನಂತರವೂ ಬೆರಳು ಚೀಪುವ ಅಭ್ಯಾಸವಿದ್ದಲ್ಲಿ ತಂದೆ ತಾಯಂದಿರ ಮನವೊಲಿಸಿ ವಿಶೇಷ ಸಲಕರಣೆ ನೀಡಿ ಈ ಕೆಟ್ಟ ಅಭ್ಯಾಸವನ್ನು ನಿಯಂತ್ರಿಸುವ ಹೊಣೆಗಾರಿಕೆ ದಂತ ವೈದ್ಯರಿಗಿದೆ. ಇಲ್ಲವಾದಲ್ಲಿ ಮುಖದ ಎಲುಬುಗಳು ಎರ್ರಾಬಿರ್ರಿ ಬೆಳೆದು ಮುಖದ ಅಂದ ಹಾಳಾಗಿ ಮಗುವಿನ ಮಾನಸಿಕ ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮ ಬೀರಬಹುದು.

22) ಮಕ್ಕಳಲ್ಲಿ ಬಾಯಿಯಲ್ಲಿ ಉಸಿರಾಡುವ ಅಭ್ಯಾಸವಿದ್ದಲ್ಲಿ ತಂದೆ ತಾಯಂದಿರ ಗಮನಕ್ಕೆ ತರಬೇಕು.  ಬಾಯಿಯಲ್ಲಿ ಉಸಿರಾಡಿದಲ್ಲಿ ಮುಖದ ಆಕಾರದಲ್ಲಿ ಬದಲಾವಣೆಯಾಗಬಹುದು. ಮತ್ತು ಬಾಯಿಯಲ್ಲಿ ಸೋಂಕು ತಗಲುವ ಸಾಧ್ಯತೆಯೂ ಹೆಚ್ಚಾಗುತ್ತದೆ. ಇದನ್ನು ಹೆತ್ತವರ ಗಮನಕ್ಕೆ ತಂದು ಮಗುವಿನ ಪರಿಪೂರ್ಣ ಬೆಳವಣಿಗೆಗೆ ಪೂರಕವಾದ ವಾತಾವರಣ ನಿರ್ಮಿಸುವುದು  ದಂತ ವೈದ್ಯರ ಕರ್ತವ್ಯವಾಗಿರುತ್ತದೆ.

23) ದಂತ ಚಿಕಿತ್ಸಾಲಯಕ್ಕೆ ಬರುವ 50 ವರ್ಷ ದಾಟಿದ ಎಲ್ಲಾ ರೋಗಿಗಳಿಗೆ ಮಧುಮೇಹ ಪರೀಕ್ಷೆ ಮತ್ತು ರಕ್ತದೊತ್ತಡ ಪರೀಕ್ಷೆ ಎಲ್ಲಾ  ದಂತ ವೈದ್ಯರು ಮಾಡುತ್ತಾರೆ. 20 ಶೇಕಡಾ ಮಧುಮೇಹ ರೋಗಿಗಳು ಮತ್ತು 30 ಶೇಕಡಾ ಅಧಿಕ ರಕ್ತದೊತ್ತಡ ರೋಗಿಗಳು ದಂತ ವೈದ್ಯರ ಪರೀಕ್ಷೆÀಯಿಂದಲೇ ರೋಗ ಪತ್ತೆ ಮಾಡುತ್ತಾರೆ. ಈ ನಿಟ್ಟಿನಲ್ಲಿ ರೋಗಿಗೆ  ರೋಗದ ಬಗ್ಗೆ ಜಾಗೃತಿ ಮೂಡಿಸುವ ಗುರುತರ ಜವಾಬ್ದಾರಿ ದಂತ ವೈದ್ಯರಿಗೆ ಇದೆ.

24) ದಂತ ಚಿಕಿತ್ಸಾಲಯಕ್ಕೆ ಬರುವ ರೋಗಿಗಳ  ನಾಲಿಗೆ ಬೋಳಾಗಿದ್ದಲ್ಲಿ ವಿಟಮಿನ್ ಃ12 ಕೊರತೆ ಎಂದು ದಂತವೈದ್ಯರು ಸುಲಭವಾಗಿ ಪತ್ತೆ ಹಚ್ಚುತ್ತಾರೆ. ಹೆಚ್ಚಿನ ಚಿಕಿತ್ಸೆಗಾಗಿ ವೈದ್ಯರ ಬಳಿ ಕಳುಹಿಸಿ ಮುಂದಾಗುವ ಅನಾಹುತವನ್ನು  ತಪ್ಪಿಸುತ್ತಾರೆ.

25) ರೋಗಿಗಳು ಹಲ್ಲಿನ ಮೇಲ್ಭಾಗ ಹೆಚ್ಚು ಸವೆದು ಹೋಗಿದ್ದಲ್ಲಿ ದಂತ ವೈದ್ಯರು ಗುರುತಿಸಿ ಅವರಿಗೆ ‘ಬ್ರುಕ್ಸಿಸಮ್’É ಎಂಬ ಮಾನಸಿಕ ಒತ್ತಡ ಇರಬಹುದು ಎಂದು ಪತ್ತೆ ಹಚ್ಚುತ್ತಾರೆ.  ಅಂತವರಿಗೆ ವಿಶೇಷ ತರಬೇತಿ  ಚಿಕಿತ್ಸೆ ಮತ್ತು ಆಪ್ತ ಸಮಾಲೋಚನೆ ಮಾನಸಿಕ ತಜ್ಞರು ನೀಡಿ ರೋಗ ಗುಣಪಡಿಸುತ್ತಾರೆ.

26) ಹದಿಹರೆಯದ ರೋಗಿಗಳಲ್ಲಿ ಮೂರನೇ ದವಡೆ  ಹಲ್ಲು ಬಾಯಿಯಲ್ಲಿ  ಬಂದಿರದಿದ್ದಲ್ಲಿ 21 ವರ್ಷಗಳ ಬಳಿಕವೂ  ದಂತ ವೈದ್ಯರು ಕ್ಷಕಿರಣ ತೆಗೆದು  ಹಲ್ಲಿನ ಇರುವಿಕೆಯನ್ನು ಪತ್ತೆ ಹಚ್ಚಿ ಸೂಕ್ತ ಸರ್ಜರಿಗೆ ಮಾರ್ಗದರ್ಶನ ನೀಡುತ್ತಾರೆ. ಇದರಿಂದ ಮುಂದೆ ಬರುವ ಅನಾಹುತಗಳನ್ನು  ತಪ್ಪಿಸಬಹುದಾಗಿದೆ.

27) ಹದಿಹರೆಯದ ಯುವಕರು ಬೀಡಿ, ಸಿಗರೇಟು, ಗುಟ್ಕಾ, ಪಾನ್‍ಪರಾಗ್ ತಿನ್ನುತ್ತಿದ್ದಲ್ಲಿ  ಬಾಯಿಯಲ್ಲಿನ  ಹಲ್ಲಿನ ಬಣ್ಣ ಬದಲಾಗುತ್ತದೆ. ತಕ್ಷಣವೇ ಗುರುತಿಸಿ ಅಂತಹಾ ವ್ಯಕ್ತಿಗಳಿಗೆ ಬುದ್ಧಿ ಹೇಳಿ  ಮಾರ್ಗದರ್ಶನ ನೀಡಿ  ಚಟವನ್ನು ತೊರೆಯುವಂತೆ  ಮನಪರಿವರ್ತನೆ ಮಾಡಲಾಗುತ್ತದೆ.

28) ಕೆಲವೊಮ್ಮೆ ಹಲ್ಲು ಕಿತ್ತ ಬಳಿಕ ರೋಗಿಗಳಲ್ಲಿ ವಿಪರೀತ ರಕ್ತಸ್ರಾವವಾಗುತ್ತದೆ. ಅಂತಹಾ ಸಂದರ್ಭಗಳಲ್ಲಿ ರೋಗಿಯ ರಕ್ತದೊತ್ತಡ ಪರೀಕ್ಷೆ ಮಾಡಿ ಅಧಿಕ ರಕ್ತದೊತ್ತಡ ಇರುವುದನ್ನು  ದಂತ ವೈದ್ಯರು ಪತ್ತೆ ಮಾಡುತ್ತಾರೆ ಮತ್ತು ಹೆಚ್ಚಿನ ಚಿಕಿತ್ಸೆಗೆ  ವೈದ್ಯರ ಬಳಿ ಕಳುಹಿಸುತ್ತಾರೆ.

29) ಕೆಲವೊಮ್ಮೆ ರೋಗಿಗಳಲ್ಲಿ ದೇಹದ ರಕ್ಷಣಾ ವ್ಯವಸ್ಥೆ ಕುಂದಿದಾಗ  ನಾಲಗೆ ಮೇಲೆ ಬಿಳಿ ಪದರ ಉಂಟಾಗುತ್ತದೆ. ಇದನ್ನು ಕ್ಯಾಂಡಿಡಾ ಎಂಬ ಶೀಲೀಂದ್ರದ ಸೋಂಕು ಎಂದು ದಂತ ವೈದ್ಯರು ಪತ್ತೆ ಹಚ್ಚಿ  ಹೆಚ್ಚಿನ ಚಿಕಿತ್ಸೆಗಾಗಿ ಇತರ ವೈದ್ಯರ ಬಳಿ ಸಲಹೆಗಾಗಿ ಕಳುಹಿಸುತ್ತಾರೆ. ರೋಗಿಯ ಚರಿತ್ರೆ ಮತ್ತು ಇತಿಹಾಸವನ್ನು ಪಡೆದು ಮುಂದೆ ಬರಬಹುದಾದ ಅನಾಹುತವನ್ನು ತಪ್ಪಿಸಲು ದಂತ ವೈದ್ಯರು ಕಾರಣವಾಗುತ್ತಾರೆ.

30) ಕುಸುಮ ರೋಗ ಅಥವಾ ಹಿಮೋಪಿಲಿಯಾ  ರೋಗ ಇರುವವರಲ್ಲಿಯೂ ವಸಡಿನಲ್ಲಿ ಸಣ್ಣ ಪುಟ್ಟ ಗಾಯಗಳಾದಾಗ ರಕ್ತ ಒಸರುತ್ತದೆ ಮತ್ತು ರಕ್ತ ಹೆಪ್ಪುಗಟ್ಟುವುದೇ ಇಲ್ಲ. ಇಂತಹ ರೋಗ ಪತ್ತೆ ಹಚ್ಚುವಲ್ಲಿ ದಂತ ವೈದ್ಯರು ಬಹುಮುಖ್ಯ ಭೂಮಿಕೆ ವಹಿಸುತ್ತಾರೆ. 

31) ಕೆಲವೊಂದು ರೋಗಿಗಳಲ್ಲಿ ಪದೇ ಪದೇ ಬಾಯಿಹುಣ್ಣು ಉಂಟಾಗುತ್ತದೆ. ಇದು ಕೆಲವೊಮ್ಮೆ ನಿದ್ರಾಹೀನತೆ ಮತ್ತು ಅಧಿಕ ಮಾನಸಿಕ ಒತ್ತಡದಿಂದಲೂ ಉಂಟಾಗುತ್ತದೆ. ಇದನ್ನು ದಂತ ವೈದ್ಯರು ಗುರುತಿಸಿ ಹೆಚ್ಚಿನ ಚಿಕಿತ್ಸೆಗೆ ಮಾನಸಿಕ ತಜ್ಞರ ಬಳಿ ಕಳುಹಿಸುತ್ತಾರೆ.

32)  ಅತಿ ವಿರಳವಾದ ಏಡ್ಸ್ ರೋಗ ಬಂದಾಗಲೂ ಬಾಯಿಯಲ್ಲಿ ಶಿಲೀಂದ್ರ ಸೋಂಕು, ವಸಡಿನ ಉರಿಯೂತ, ವಸಡು ಕೆಂಪಾಗಿ ರಕ್ತ ಒಸರುವುದು, ಬಾಯಿಯಲ್ಲಿ ಉರಿಯೂತ, ಬಾಯಿಯಲ್ಲಿ ಹುಣ್ಣು, ಬಾಯಿಯಲ್ಲಿ ವಾಸನೆ, ವಸಡಿನಲ್ಲಿ ಕೀವು ಕಂಡುಬರುತ್ತದೆ. ಇಂತಹ ಸನ್ನಿವೇಶದಲ್ಲಿ ಹಲವು ವೈದ್ಯರು  ತಕ್ಷಣವೇ  ರಕ್ತ ಪರೀಕ್ಷೆಗೆ ಆದೇಶ ನೀಡಿ ಏಡ್ಸ್ ರೋಗ ಪತ್ತೆ ಹಚ್ಚುವಲ್ಲಿ ವೈದ್ಯರಿಗೆ ನೆರವಾಗುತ್ತಾರೆ.


ಕೊನೆಮಾತು: ದಂತ ವೈದ್ಯರು ಎಂದರೆ ಬರೀ ಹಲ್ಲಿನ ಚಿಕಿತ್ಸೆಗೆ ಇರುವ ವೈದ್ಯರಲ್ಲ. ದಂತ ವೈದ್ಯರು ವೈದ್ಯಕೀಯ ಜ್ಞಾನದ ಅನುಭವದಿಂದ ಬಾಯಿಯಲ್ಲಿ ಬ್ರಹ್ಮಾಂಡವನ್ನೇ ಕಾಣುತ್ತಾರೆ. ಅತೀ ಸರಳ ರಕ್ತಹೀನತೆ ರೋಗದಿಂದ ಹಿಡಿದು ಅತೀ ವಿರಳ ಏಡ್ಸ್ ರೋಗವನ್ನು ಪತ್ತೆ ಹಚ್ಚುವಲ್ಲಿ ಎಲ್ಲ ದಂತ ವೈದ್ಯರ ಪಾತ್ರ ಅತೀ ಮಹತ್ವದ್ದಾಗಿದೆ. ಪ್ರತಿ ದಂತ ವೈದ್ಯರು ತಮ್ಮ ಸಾಮಾಜಿಕ ಹೊಣೆಗಾರಿಕೆ ಅರಿತು ನಿಭಾಯಿಸಿದಲ್ಲಿ ನೂರಾರು ಕಾಯಿಲೆಯನ್ನು ಆರಂಭದಲ್ಲಿ ಪತ್ತೆ ಹಚ್ಚಿ ಪರಿಪೂರ್ಣ ಚಿಕಿತ್ಸೆಗೆ ಕಾರಣವಾಗಿ ಸುಂದರ, ಸುದೃಢ  ಆರೋಗ್ಯಪೂರ್ಣ ಸಮಾಜ ನಿರ್ಮಾಣ ಸಾಧ್ಯವಿದೆ.

-ಡಾ|| ಮುರಲೀ ಮೋಹನ ಚೂಂತಾರು

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top