|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಯುವ ಹಾಸ್ಯ ಕಲಾವಿದ "ಕರ್ನಾಟಕ ಪ್ರತಿಭಾರತ್ನ ಪ್ರಶಸ್ತಿ" ಪುರಸ್ಕೃತ ದ್ವಿತೇಶ್ ಕಾಮತ್

ಯುವ ಹಾಸ್ಯ ಕಲಾವಿದ "ಕರ್ನಾಟಕ ಪ್ರತಿಭಾರತ್ನ ಪ್ರಶಸ್ತಿ" ಪುರಸ್ಕೃತ ದ್ವಿತೇಶ್ ಕಾಮತ್


ಹಿರಿಯಡ್ಕ ಕಾಜಾರಗುತ್ತು ಪಾಂಡುರಂಗ ಕಾಮತ್ ಮತ್ತು ಸುಧಾ ಪಿ. ಕಾಮತ್ ಅವರ ಇಬ್ಬರು ಗಂಡು ಮಕ್ಕಳಲ್ಲಿ ದ್ವಿತೇಶ್ ಕಾಮತ್ ಕಿರಿಯವರು. ಇವರು 27-07-1995 ರಲ್ಲಿ ಉಡುಪಿ ಜಿಲ್ಲೆಯ ಚೇರ್ಕಾಡಿಯ ಆರೂರು ಗ್ರಾಮದ ಮುಂಡ್ಕಿನಜಡ್ಡುನಲ್ಲಿ ಜನಿಸಿದರು. ತಂದೆ-ತಾಯಿ ಮುಂಡ್ಕಿನಜಡ್ಡುನಲ್ಲಿ ಹೋಟೆಲ್ ಮಾಡಿಕೊಂಡು ಇದ್ದ ಕಾರಣ ದ್ವಿತೇಶ್ ಅವರು ಬಾಲ್ಯವನ್ನು ಅಲ್ಲೇ ಕಳೆದಿರುತ್ತಾರೆ.


ಯಕ್ಷಗಾನ ಪ್ರದರ್ಶನಗಳು ನಡೆಯುತ್ತಿದ್ದ ಪರಿಸರದಲ್ಲಿ ಬೆಳೆದ ಕಾರಣ ಸಹಜವಾಗಿ ಎಳವೆಯಲ್ಲಿಯೇ ಯಕ್ಷಗಾನ ಕಲೆಯಲ್ಲಿ ಆಸಕ್ತಿ ಹೊಂದಿದ್ದ ದ್ವಿತೇಶ್ ಅವರು ತನ್ನ 8ನೇ ವಯಸ್ಸಿನಲ್ಲಿರುವಾಗಲೇ ಯಕ್ಷಗಾನ ತಾಳ ಮತ್ತು ಹೆಜ್ಜೆಯನ್ನು ರಾಧಾಕೃಷ್ಣ ನಾಯ್ಕ್ ಚೇರ್ಕಾಡಿಯವರಲ್ಲಿ ಕಲಿತರು. ಪ್ರಾಥಮಿಕ ಶಿಕ್ಷಣವನ್ನು ವಿಶ್ವ ಕೀರ್ತಿ ಖಾಸಗಿ ಹಿರಿಯ ಪ್ರಾಥಮಿಕ ಶಾಲೆ ಕುಂಜಾಲು ಇಲ್ಲಿ ಕಲಿತರು. ಮುಂದಿನ ದಿನಗಳಲ್ಲಿ ಕೇಶವ ಆಚಾರ್ಯ, ಮಂಜುನಾಥ ಕುಲಾಲ್, ನರಸಿಂಹ ತುಂಗ ಕೋಟ ಇವರಲ್ಲಿ ಯಕ್ಷಗಾನದ ಹೆಚ್ಚಿನ ಅಭ್ಯಾಸ ಮಾಡಿದರು. ಹೈಸ್ಕೂಲ್ ವಿದ್ಯಾಭ್ಯಾಸವನ್ನು ಶಾರದಾ ಪ್ರೌಢಶಾಲೆ ಚೇರ್ಕಾಡಿಯಲ್ಲಿ ಮುಗಿಸಿ ನಂತರ ಬೆಂಗಳೂರಿನಲ್ಲಿ ಫಿಲಂ ಆಕ್ಟಿಂಗ್ ನಲ್ಲಿ ಡಿಪ್ಲೋಮೋ ಪದವಿ ಪಡೆದಿರುತ್ತಾರೆ. ಯಕ್ಷಗಾನ ರಂಗಕ್ಕೆ ಬರಲು ಮೂಲ ಪ್ರೇರಣೆ ಇವರ ತಂದೆ ಹಾಗೂ ತಾಯಿ ಎಂದು ಹೇಳುತ್ತಾರೆ ಕಾಮತ್.


ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರಿ ಎಂದು ಕೇಳಿದಾಗ ಹೀಗೆ ಹೇಳುತ್ತಾರೆ :-

ಎದುರು ವೇಷಧಾರಿಯವರು ಹಿರಿಯವರೇ ಆಗಲಿ ಕಿರಿಯವರೇ ಆಗಲಿ ಅವರ ಜೊತೆ ಮಾತುಕತೆ ಮಾಡಿಕೊಳ್ಳುವುದು. ಹಿರಿಯ ಕಲಾವಿದರ ಜೊತೆ ಕೇಳಿಕೊಳ್ಳುವುದು, ಹೊಸತನ ಸೇರಿಸುವಲ್ಲಿ ಪ್ರಯತ್ನ ಮಾಡುವುದು ಹೀಗೆ ತಯಾರಿ ಮಾಡಿಕೊಳ್ಳುತ್ತೇನೆ ಎಂದು ಕಾಮತ್ ಹೇಳುತ್ತಾರೆ.


ಬೇಡರ ಕಣ್ಣಪ್ಪ, ಕನಕಾಂಗಿ ಕಲ್ಯಾಣ, ಪ್ರಹ್ಲಾದ ಚರಿತ್ರೆ, ಹರಿಶ್ಚಂದ್ರ ಇವರ ನೆಚ್ಚಿನ ಪ್ರಸಂಗಗಳು. ಕಾಶಿಮಾಣಿ, ಪ್ರಹ್ಲಾದ, ಲೋಹಿತಾಶ್ವ, ದೇವಿ ಮಹಾತ್ಮೆಯ ದೂತ, ಪೌರಾಣಿಕ ಹಾಗೂ ಸಾಮಾಜಿಕ ಪ್ರಸಂಗದ ಹಾಸ್ಯ ಪಾತ್ರಗಳು ಇವರ ನೆಚ್ಚಿನ ವೇಷಗಳು.


ಇವತ್ತಿನ ಯಕ್ಷಗಾನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ ಕೇಳಿದಾಗ ಹೀಗೆ ಹೇಳುತ್ತಾರೆ:-

ನನ್ನ ಪ್ರಕಾರ ಯಕ್ಷಗಾನಕ್ಕೆ ಅಭಿಮಾನಿಗಳು ಕಡಿಮೆ ಆಗ್ತಾ ಇದ್ದಾರೆ ಅಂದುಕೊಂಡಿದ್ದೆ, ಆದರೆ ಇತ್ತೀಚಿನ ದಿನಗಳಲ್ಲಿ ಯಕ್ಷಗಾನ ಯುವ ಪ್ರೇಕ್ಷಕರನ್ನೂ ತನ್ನತ್ತ ಸೆಳೆಯುತ್ತಿದೆ. ಯಕ್ಷಗಾನಕ್ಕೆ ಕಲಾಭಿಮಾನಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ತುಂಬಾನೇ ಖುಷಿಯ ವಿಷಯ.


ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:-

ಯಕ್ಷರಂಗದಲ್ಲಿ ನನ್ನ ಸಾಧನೆಯೇ ನನ್ನ ಮೊದಲ ಗುರಿ ಎಂದು ಹೇಳುತ್ತಾರೆ ಕಾಮತ್.

ದ್ವಿತೇಶ್ ಕಾಮತ್ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ರಜಾದಿನಗಳಲ್ಲಿ ನಡೆಯುತ್ತಿದ್ದ “ಕೋಶಿಕಾ" ಎನ್ನುವ ಬೇಸಿಗೆ ಶಿಬಿರದಲ್ಲಿ ಭಾಗವಹಿಸುತ್ತಿದ್ದರು. ಕೋಟ ಶಿವರಾಮ ಕಾರಂತ್ ಹಾಗೂ ದುಂಡಿರಾಜ್ ಅವರು ಬರೆದ ಹಲವಾರು ನಾಟಕಗಳಲ್ಲಿ ಅಭಿನಯಿಸಿ ಯಶಸ್ವಿ ಎನಿಸಿದ್ದಾರೆ. ತಮ್ಮ 20ನೇ ವಯಸ್ಸಿನಲ್ಲಿ ಪ್ರಥಮವಾಗಿ ಮಂದಾರ್ತಿ ಮೇಳದಲ್ಲಿ ಬಾಲಗೋಪಾಲ ಹಾಗೂ ಬೇರೆಬೇರೆ ವೇಷಧಾರಿಯಾಗಿ 3 ವರ್ಷ ವೃತ್ತಿ ಕಲಾವಿದರಾಗಿ ಸೇವೆ ಸಲ್ಲಿಸಿ, ನಂತರ 2018-2019ನೇ ಸಾಲಿನಲ್ಲಿ ಕೋಟ ಅಮೃತೇಶ್ವರಿ ಮೇಳದಲ್ಲಿ ಪ್ರಥಮವಾಗಿ ಸಹ ಹಾಸ್ಯ ಕಲಾವಿದರಾಗಿ 3 ವರ್ಷ ಸೇವೆ ಸಲ್ಲಿಸಿ, ಪ್ರಸ್ತುತ ಹಟ್ಟಿಯಂಗಡಿ ಮೇಳದಲ್ಲಿ ಹಾಸ್ಯಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.


“ಕರ್ನಾಟಕ ಪ್ರತಿಭಾರತ್ನ ಪ್ರಶಸ್ತಿ” ಮತ್ತು 2ನೇ ಆದಿಗ್ರಾಮೋತ್ಸವ ಗ್ರಾಮ ಸಾಹಿತ್ಯ ಸಮ್ಮೇಳನದಲ್ಲಿ “ಆದಿ ಗ್ರಾಮೋತ್ಸವ ವಿಂಶತಿ ಗೌರವ” ಹಾಗೂ ಬಹಳಷ್ಟು ಕಾರ್ಯಕ್ರಮಗಳಲ್ಲಿ ಸನ್ಮಾನಗಳು ಇವರಿಗೆ ಲಭಿಸಿರುತ್ತದೆ.


ಇವರ ಹವ್ಯಾಸಗಳು:-

ಪ್ರಾಣಿ - ಪಕ್ಷಿ ಸಾಕಾಣಿಕೆ ಮತ್ತು ಗಾಯಗೊಂಡ ಪ್ರಾಣಿ ಪಕ್ಷಿಗಳನ್ನು ಚಿಕಿತ್ಸೆ ಮಾಡುವುದು ಮತ್ತು ವಿಷಪೂರಿತ  ಹಾಗೂ ವಿಷರಹಿತ ಉರಗ ಸಂರಕ್ಷಣೆ ಇವರ ಮೂಲ ಗುರಿ. ಮನೆಯೊಳಗೆ ಹಾವುಗಳು ಬಂದಾಗ ಹಲವಾರು ಕಡೆಗಳಿಂದ ದೂರವಾಣಿ ಕರೆಗಳು ಬರುತ್ತವೆ. ಅಲ್ಲಿವರೆಗೆ ಹೋಗಿ ಹಾವನ್ನು ಹಿಡಿದು ಸುರಕ್ಷಿತ ತಾಣಕ್ಕೆ ಬಿಡುವುದು. ಗಾಯಗೊಂಡ ಹಾವುಗಳನ್ನು ಗುಣ ಮಾಡಿ ಬಿಡುವುದು ಇವರ ಹವ್ಯಾಸಗಳು.


ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.


-ಶ್ರವಣ್ ಕಾರಂತ್ ಕೆ

ಸುಪ್ರಭಾತ

ಶಕ್ತಿನಗರ ಮಂಗಳೂರು.

8971275651


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post