ಕಲಾವಿದ ಜಯಾನಂದ ಸಂಪಾಜೆಗೆ ಅಳಿಕೆ ಯಕ್ಷ ನಿಧಿ- ಗೃಹ ಸನ್ಮಾನ

Upayuktha
0

ಹಿರಿಯ ಕಲಾವಿದರ ಬದುಕು ಕಿರಿಯರಿಗೆ ಮಾದರಿ: ಡಾ.ಎಂ. ಪ್ರಭಾಕರ ಜೋಶಿ 



ಮಂಗಳೂರು: 'ಅಳಿಕೆ ರಾಮಯ್ಯ ರೈಯವರಂತಹ ಪ್ರಸಿದ್ಧ ಕಲಾವಿದರು ಯಕ್ಷಗಾನಕ್ಕೆ ಘನತೆ ತಂದುಕೊಟ್ಟ ಹಿರಿಯರು. ಅವರಂತೆ ಕಲೆಗಾಗಿ ಬದುಕು ತೇದ ಅನೇಕರು ಇಂದು ಪ್ರಾತಃಸ್ಮರಣೀಯರಾಗಿ ಉಳಿದಿದ್ದಾರೆ. ಅವರ ಬದುಕು- ಸಾಧನೆ ಕಿರಿಯ ಕಲಾವಿದರಿಗೆ ಮಾದರಿಯಾಗಬೇಕು' ಎಂದು ವಿಶ್ರಾಂತ ಪ್ರಾಚಾರ್ಯ ಮತ್ತು ಯಕ್ಷಗಾನ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಶಿ ಹೇಳಿದರು.


ಬೆಂಗಳೂರಿನ ದಿ. ಅಳಿಕೆ ರಾಮಯ್ಯ ರೈ ಸ್ಮಾರಕ ಟ್ರಸ್ಟ್ ವತಿಯಿಂದ ಅನಾರೋಗ್ಯದಿಂದಿರುವ ಯಕ್ಷಗಾನ ಕಲಾವಿದ ಜಯಾನಂದ ಸಂಪಾಜೆ ಮತ್ತು ವಿಜಯ ದಂಪತಿಗೆ ಸುಳ್ಯಕ್ಕೋಡಿಯ ಅವರ ನಿವಾಸದಲ್ಲಿ ಗೃಹ ಸಮ್ಮಾನ ನೀಡಿ ಜೋಶಿ ಮಾತನಾಡಿದರು.


ಅಭಿನಂದನಾ ಭಾಷಣ ಮಾಡಿದ ಹಿರಿಯ ಯಕ್ಷಗಾನ ಕಲಾವಿದ ಉಬರಡ್ಕ ಉಮೇಶ ಶೆಟ್ಟಿ 'ಜಯಾನಂದ ಸಂಪಾಜೆ ಭರವಸೆಯ ಯುವ ಕಲಾವಿದ. ರಂಗಸ್ಥಳದಲ್ಲೇ ಕಾಲು ಮುರಿತಕ್ಕೊಳಗಾಗಿ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರು ಶೀಘ್ರ ಗುಣಮುಖರಾಗಿ ಯಕ್ಷಗಾನ ಸೇವೆಗೆ ಮರಳು ವಂತಾಗಲಿ' ಎಂದು ಹಾರೈಸಿದರು.  

ದಿ.ಅಳಿಕೆ ರಾಮಯ್ಯ ರೈ ಯವರ ಪುತ್ರ ಮತ್ತು ಅಳಿಕೆ ಸ್ಮಾರಕ ಟ್ರಸ್ಟ್ ನ ಸಂಚಾಲಕ ಅಳಿಕೆ ದುರ್ಗಾಪ್ರಸಾದ್ ರೈ 2020-22 ನೇ ಸಾಲಿನ ಅಳಿಕೆ ಯಕ್ಷ ಸಹಾಯನಿಧಿ ರೂ.20 ಸಾವಿರ ನಗದು ನೀಡಿ ಕಲಾವಿದರನ್ನು ಗೌರವಿಸಿದರು. ಕೆ. ಲಕ್ಷ್ಮೀನಾರಾಯಣರ ರೈ ಹರೇಕಳ ಸನ್ಮಾನ ಪತ್ರ ವಾಚಿಸಿದರು.


ಸನ್ಮಾನಕ್ಕೆ ಉತ್ತರಿಸಿ ಮಾತನಾಡಿದ ಜಯಾನಂದ ಸಂಪಾಜೆ 'ತೆಂಕುತಿಟ್ಟಿನ ಕಟೀಲು, ಕುಂಟಾರು, ಪುತ್ತೂರು, ಹೊಸನಗರ, ಎಡನೀರು, ಹನುಮಗಿರಿ, ಬಪ್ಪನಾಡು ಮೇಳಗಳಲ್ಲಿ 32 ವರ್ಷ ತಿರುಗಾಟ ಪೂರೈಸಿರುವ ತಾನು ಅನೇಕ ಹಿರಿಯ ಕಲಾವಿದರಿಂದ ಅವರ ಅನುಭವಗಳ ಲಾಭ ಪಡೆದಿರುವೆ. ಅವರೆಲ್ಲ ಸದಾ ವಂದ್ಯರು.ಅಲ್ಲದೆ ಈಗಿನ ಸಂಕಟದ ಸಮಯದಲ್ಲಿ ಸಹಾಯ ಹಸ್ತ ನೀಡಿದ ಕಲಾಭಿಮಾನಿಗಳನ್ನು ಎಂದಿಗೂ ಮರೆಯಲಾರೆ' ಎಂದು ಕೃತಜ್ಞತೆ ಸಲ್ಲಿಸಿದರು. ಟ್ರಸ್ಟ್ ನಿರ್ದೇಶಕ ಮಹಾಬಲ ರೈ, ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಕೆ.ಆರ್. ಜಗದೀಶ್ ರೈ, ಸ್ಥಳೀಯರಾದ ಕೇಶವ ಬಂಗ್ಲೆಗುಡ್ಡೆ, ಹೇಮಂತ್ ಸಂಪಾಜೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.  


ಟ್ರಸ್ಟ್ ಸಲಹೆಗಾರ, ಯಕ್ಷಗಾನ, ಜಾನಪದ ಹಾಗೂ ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಅವರು 2009 ರಿಂದ ಅಳಿಕೆ ಸ್ಮಾರಕ ಟ್ರಸ್ಟ್ ನಿರ್ವಹಿಸಿದ ಕಾರ್ಯಕಲಾಪಗಳ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸಂಚಾಲಕ ಅಳಿಕೆ ದುರ್ಗಾಪ್ರಸಾದ್ ರೈ ವಂದಿಸಿದರು‌ ವಿಜಯಾ ಜಯಾನಂದ, ಯಶೋದಾ ಶೇಷಪ್ಪ, ಮಕ್ಕಳಾದ ನೈರುತ್ಯ, ಭ್ರಾಮರಿ, ಜಾಹ್ನವಿ ಮತ್ತು ಜಶ್ಮಿತಾ ಅತಿಥಿಗಳನ್ನು ಗೌರವಿಸಿದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top