|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಒಮ್ಮೆ ನಾನು ಅಂಬೇಡ್ಕರರನ್ನು ತಿರಸ್ಕರಿಸಿದ್ದೆ, ಆದರೆ…

ಒಮ್ಮೆ ನಾನು ಅಂಬೇಡ್ಕರರನ್ನು ತಿರಸ್ಕರಿಸಿದ್ದೆ, ಆದರೆ…


ಒಂದರ್ಥದಲ್ಲಿ ನಾನವರನ್ನು ತಿರಸ್ಕರಿಸಿದ್ದೆ. ಅಂಬೇಡ್ಕರ್ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮೀಸಲಾತಿ ಕಲ್ಪಿಸಿದ್ದಾರೆ, ನಮಗೇನು ಮಾಡಿದ್ದಾರೆ. ಹಾಗಾಗಿ ಅವರಷ್ಟೇ ಅಂಬೇಡ್ಕರ್ ಬಗ್ಗೆ ತಿಳಿದುಕೊಂಡರೆ ಸಾಕು ಎಂಬುದು ನನ್ನ ಅಭಿಪ್ರಾಯವಾಗಿತ್ತು. 


ಒಂದು ಸಂಜೆ ನನ್ನಪ್ಪನ ಒತ್ತಾಯದ ಮೇರೆಗೆ ಚಾನೆಲ್ ಒಂದರಲ್ಲಿ ಪ್ರಸಾರವಾಗುತ್ತಿದ್ದ ಅಂಬೇಡ್ಕರ್ ಕುರಿತ ಧಾರವಾಹಿಯನ್ನು ನೋಡಲು ಪ್ರಾರಂಭಿಸಿದೆ. ಕೆಲವು ದಿನಗಳ ಕಾಲ ಧಾರವಾಹಿ ವೀಕ್ಷಿಸಿದ ನನಗಾದದ್ದು ಕತ್ತಲು ಸರಿದು ಬೆಳಕು ಮೂಡಿದ ಅನುಭವ. ಅಂಬೇಡ್ಕರ್ ಒಬ್ಬ ಮಹಾನ್ ವ್ಯಕ್ತಿ ಮತ್ತು ಅವರ ಬಗ್ಗೆ ತಿಳಿದುಕೊಳ್ಳುವುದು ನಮ್ಮ ಕರ್ತವ್ಯ ಭಾವನೆ ಮೂಡಿತು. ಅವರ ಬಗ್ಗೆ ಮತ್ತಷ್ಟು ತಿಳಿದುಕೊಳ್ಳುವ ಕುತೂಹಲ ಹೆಚ್ಚಿತು. ಅವರ ಆತ್ಮ ಚರಿತ್ರೆ ʼವೈಟಿಂಗ್ ಫಾರ್ ಎ ವೀಸಾʼ (waiting for a visa) ಓದಲು ಆರಂಭಿಸಿದೆ. ಅಂಬೇಡ್ಕರ್ ಎಂಬ ಶಿಲ್ಪ ಸಾಕಷ್ಟು ಉಳಿಯೇಟುಗಳನ್ನು ತಿಂದಿತ್ತು ಎಂಬ ಸತ್ಯ ತಿಳಿಯಿತು. 


ಭೀಮರಾವ್ ರಾಮಜೀ ಅಂಬೇಡ್ಕರವರು ಏಪ್ರಿಲ್ 14, 1891ರಂದು ರಾಮಜೀ ಮತ್ತು ಭೀಮಬಾಯಿ ದಂಪತಿಯ 14ನೇ ಮಗನಾಗಿ ಜನಿಸಿದರು. ಅಂಬೇಡ್ಕರ್ ಅವರ ಮೊದಲ ಹೆಸರು ಭೀಮರಾವ್ ಆಗಿತ್ತು.  ಹೆತ್ತವರಿಗೇನೋ ಮಗನನ್ನು ಆದರ್ಶ ವ್ಯಕ್ತಿಯನ್ನಾಗಿ ಬೆಳೆಸುವ ಹಂಬಲವಿತ್ತು, ಆದರೆ ಇದೆಲ್ಲದಕ್ಕೂ ವಿರುದ್ಧ ಎನ್ನುವಂತೆ ಅಸ್ಪೃಶ್ಯತೆ ಅವರ ತಡೆಯಾಗಿತ್ತು. ನೋವು, ಅವಮಾನಗಳನ್ನು ಸಹಿಸಿಕೊಂಡೇ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿ, ಮಾಧ್ಯಮಿಕ ಶಿಕ್ಷಣವನ್ನು ಆಗಿನ ಬಾಂಬೆಯ ಎಲ್ಫಿನ್ ಸ್ಟೋನ್ ಸರ್ಕಾರಿ ಪ್ರೌಢ ಶಾಲೆಯಲ್ಲಿ ಅನೇಕ ಕಹಿ ಘಟನೆಗಳ ಮಧ್ಯೆ ಮುಗಿಸುತ್ತಾರೆ.  


ಪದವಿ ಶಿಕ್ಷಣವನ್ನು 1912 ರಲ್ಲಿ ಮುಗಿಸಿ, ನಂತರ 1913ರಲ್ಲಿ ಅಮೇರಿಕಾದ ಕೊಲಂಬಿಯ ವಿಶ್ವವಿದ್ಯಾಲಯದಲ್ಲಿ ಎಂ.ಎ ಹಾಗೂ ಪಿಹೆಚ್ಡಿ ಪದವಿ ಪಡೆದು ಇಂಗ್ಲೆಂಡಿನ ಗ್ರೇಸ್ ಇನ್ ಕಾಲೇಜಿನಲ್ಲಿ ಕಾನೂನು ಪದವಿಯನ್ನು ಪಡೆದು ಭಾರತಕ್ಕೆ ಮರಳುತ್ತಾರೆ. ಭಾರತದಲ್ಲಿ ಹಲವಾರು ಸಾಮಾಜಿಕ ಶೋಷಣೆಗಳನ್ನು ಕಂಡ ಅಂಬೇಡ್ಕರ್, ಅವುಗಳ ವಿರುದ್ಧ ಧ್ವನಿಯೆತ್ತುವ ಪಣ ತೊಡುತ್ತಾರೆ.  ಬ್ರಿಟಿಷ್ ಸರ್ಕಾರ 1927 ರಲ್ಲಿ ಅಂಬೇಡ್ಕರ್ರನ್ನು ಮುಂಬೈಯ ಶಾಸಕಾಂಗದ ಸದಸ್ಯರನ್ನಾಗಿ ನೇಮಿಸುತ್ತದೆ. ಇದರೊಂದಿಗೆ ರಾಜಕೀಯ ಜೀವನ ಆರಂಭಿಸಿದ ಇವರು 1927ರಿಂದ 1932ರವರೆಗೆ ಅಹಿಂಸಾತ್ಮಕ ಆಂದೋಲನಗಳ ಮುಂದಾಳತ್ವ ವಹಿಸಿ ಅಸ್ಪೃಶ್ಯರಿಗೆ ದೇವಾಲಯ ಪ್ರವೇಶದ ಹಕ್ಕು ಸಾರ್ವಜನಿಕ ಕೆರೆ ಬಾವಿಗಳಿಂದ ನೀರು ಸೇದುವ ಹಕ್ಕು ಇತ್ಯಾದಿಗಳಿಗಾಗಿ ಹೋರಾಟ ಮಾಡುವ ಮೂಲಕ ಸಮತಾವಾದದ ಸಮಾಜ ನಿರ್ಮಾಣಕ್ಕೆ ಚಾಲನೆ ನೀಡುತ್ತಾರೆ. 


ದೇಶದ ಮೊದಲ ಕಾನೂನು ಮಂತ್ರಿಯಾಗಿ ಡಾ. ಬಿ ಆರ್ ಅಂಬೇಡ್ಕರ್ ಅನೇಕ ಪ್ರಗತಿಪರ ಕಾರ್ಯಗಳನ್ನು ಕೈಗೊಂಡಿದ್ದಾರೆ. ವಿಶೇಷವಾಗಿ ರಾಜಕೀಯ ಹಾಗೂ ಕಾನೂನು ರಂಗದಲ್ಲಿ ವಿಶೇಷ ಕೆಲಸ ಮಾಡಿ ದೇಶದ ಜನಸಾಮಾನ್ಯರ ಪ್ರೀತಿ ಸ್ನೇಹ ಸಂಪಾದನೆ ಮಾಡುತ್ತಾರೆ ಅಂಬೇಡ್ಕರ್ ಅವರ ಪ್ರಜಾಪ್ರಭುತ್ವದ ಕಲ್ಪನೆಯೇ ತೀರಾ ವಿಭಿನ್ನ. ಪ್ರಜಾಪ್ರಭುತ್ವ ಕೇವಲ ಸರ್ಕಾರದ ಒಂದು ರೂಪವಲ್ಲ,  ಅದು ಪ್ರಮುಖವಾಗಿ ಸಹಬಾಳ್ವೆಯ ಸೊಗಸು ಎಂದವರು. 


ಅಸ್ಪೃಶ್ಯತೆ ವಿರುದ್ಧ ಧ್ವನಿ ಎತ್ತಿದ ಇವರು, ಸವರ್ಣೀಯರ ಹಿಂಸಾತ್ಮಕ ಪ್ರತಿಕ್ರಿಯೆಯನ್ನು ಎದುರಿಸಬೇಕಾಯಿತು. ಇದ್ಯಾವುದನ್ನೂ ಲೆಕ್ಕಿಸದೆ ನಡೆದ ಚೌಡಾರ್ ಕೆರೆಯ ಚಳುವಳಿ ನ್ಯಾಯಾಲಯದ ಕಟಕಟೆಯೇರಿತು. ವರ್ಷಗಳ ಕಾನೂನಾತ್ಮಕ ಹೋರಾಟದ ಬಳಿಕ ಕೆಳವರ್ಗಗಳ ಪರವಾಗಿ ತೀರ್ಪು ಪ್ರಕಟವಾದದ್ದು ಅಂಬೇಡ್ಕರ್ ಅವರ ಹೋರಾಟಕ್ಕೂ ಸಂದ ವಿಜಯವಾಗಿತ್ತು. ಸಂಪ್ರದಾಯವಾದಿ ಹಿಂದೂಗಳ ಕೆಂಗಣ್ಣಿಗೆ ಗುರಿಯಾಗಿದ್ದ ಅಂಬೇಡ್ಕರ್, 1931ರಿಂದ 1932ರಲ್ಲಿ ಅವರಿಗೆ ಮತ್ತಷ್ಟು ಅಪ್ರಿಯರಾದರು. ಅವರೇ ಹೇಳಿಕೊಂಡಂತೆ, ʼಭಾರತದ ಹಿಂದುಗಳು ಅತ್ಯಂತ ದ್ವೇಷಿಸುವ ವ್ಯಕ್ತಿʼಯಾದರು. ಅಂಬೇಡ್ಕರ್ ದಲಿತರಿಗೆ ಪ್ರತ್ಯೇಕ ಚುನಾವಣಾ ಕ್ಷೇತ್ರಕ್ಕಾಗಿ ಪಟ್ಟು ಹಿಡಿದದ್ದೇ ಈ ಅಸಮಾಧಾನಕ್ಕೆ ಕಾರಣವಾಗಿತ್ತು.


ಮಹಾತ್ಮ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷದ ಧೋರಣೆ ಇದಕ್ಕೆ ವಿರೋಧವಾಗಿತ್ತು. ಗಾಂಧಿ ಹಾಗೂ ಅಂಬೇಡ್ಕರರಲ್ಲಿ ಈ ವಿಷಯದ ಬಗ್ಗೆ ಎರಡನೆಯ ದುಂಡು ಮೇಜಿನ ಪರಿಷತ್ತಿನಲ್ಲಿ ಮಾತಿನ ಚಕಮಕಿಯೂ ನಡೆದಿತ್ತು. ಹಿಂದೂ ಸಮಾಜದಿಂದ ಜಾತಿಪದ್ಧತಿ ಹಾಗೂ ತಾರತಮ್ಯವನ್ನು ನಿರ್ಮೂಲನ ಮಾಡುವ ಪರವಾಗಿದ್ದ ಗಾಂಧಿ, ದಲಿತರ ಹಿತರಕ್ಷಣೆಗಾಗಿ ದನಿಯೆತ್ತಿದ ಮೊದಲಿಗರಲ್ಲಿ ಒಬ್ಬರಾಗಿದ್ದರೂ  ಬ್ರಿಟಿಷರಿಗೆ ಈ ವಿಷಯದಲ್ಲಿ ಹಿಂದೂಗಳನ್ನು ಜಾತಿಯ ಆಧಾರದ ಮೇಲೆ, ರಾಜಕೀಯವಾಗಿ ಒಡೆಯಲು ಅವಕಾಶ ಕೊಡಬಾರದೆಂಬುದು ಅವರ ನಿಲುವಾಗಿತ್ತು.


1932ರಲ್ಲಿ ಬ್ರಿಟಿಷರು ಜಾರಿಗೆ ತಂದ ಕೋಮುವಾರು ಕಾನೂನಿನಲ್ಲಿ ಅಸ್ಪೃಶ್ಯರಿಗೆ ಪ್ರತ್ಯೇಕ ಕ್ಷೇತ್ರವನ್ನು ಮಂಜೂರು ಮಾಡಲಾಯಿತು. ಇದಕ್ಕೆ ಪ್ರತಿಭಟನೆಯಾಗಿ ಗಾಂಧಿ ಆಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಂಡ ಫಲವಾಗಿ, ಅಂಬೇಡ್ಕರ್, ಕಾಂಗ್ರೆಸ್ ಮತ್ತು ಸನಾತನ ಹಿಂದೂ ಮುಖಂಡರೊಂದಿಗೆ ಚರ್ಚಿಸಿ ಕೊನೆಗೂ ಪ್ರತ್ಯೇಕ ಕ್ಷೇತ್ರ ಹಾಗೂ ಕೋಟಾ ಬೇಡಿಕೆಯನ್ನು ಕೈಬಿಟ್ಟರು. ಕಾಂಗ್ರೆಸ್ ಪಕ್ಷ ಅಸ್ಪೃಶ್ಯರಿಗೆ ಪ್ರಾತಿನಿಧ್ಯವನ್ನು ಹೆಚ್ಚುಮಾಡಲು ಒಪ್ಪಿಕೊಂಡಿತು. ಹಿಂದೂ ಧಾರ್ಮಿಕ ಮುಖಂಡರುಗಳು ಅಸ್ಪೃಶ್ಯತೆಯ ಹಾಗೂ ಜಾತ್ಯಾಧಾರಿತ ತಾರತಮ್ಯದ ವಿರುದ್ಧವಾಗಿ ಹೆಚ್ಚು ಹೆಚ್ಚಾಗಿ ದನಿಯೆತ್ತ ತೊಡಗಿದರು.  


ಹಿಂದೂ ಧರ್ಮದಲ್ಲಿ ಅಸ್ಪೃಶ್ಯರ ಏಳಿಗೆ ಅಸಾಧ್ಯವಾದ್ದರಿಂದ ಅಂಬೇಡ್ಕರ್ ಬೇರೆ ಧರ್ಮಕ್ಕೆ ಮತಾಂತರಗೊಳ್ಳಬೇಕು ಎಂಬ ಆಲೋಚನೆ ಮಾಡತೊಡಗಿದರು. ಇದಕ್ಕೆ ಹಿಂದೂ ಸಮಾಜದಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಆ ವರ್ಷಗಳಲ್ಲಿ ಅಂಬೇಡ್ಕರ್ ಅವರ ಖಾಸಗಿ ಜೀವನದಲ್ಲಿ ಕೆಲವು ಮಹತ್ವದ ಘಟನೆಗಳು ಘಟಿಸಿದವು. ಅವರ ಪತ್ನಿ ರಮಾಬಾಯಿ ಮರಣ ಹೊಂದಿದರು. 1904ರಲ್ಲಿ ಅವರ ಮದುವೆಯಾದಾಗ ಅಂಬೇಡ್ಕರ್ ವಯಸ್ಸು ಹದಿನಾರಾದರೆ, ಅವರ ಹೆಂಡತಿ ಕೇವಲ ಒಂಭತ್ತು ವರ್ಷದವರಾಗಿದ್ದರು. ಅವರಿಗೆ ಹುಟ್ಟಿದ ಐದು ಮಕ್ಕಳಲ್ಲಿ ಉಳಿದದ್ದು ಒಬ್ಬರೇ.


ಇಂದು ಡಾ. ಅಂಬೇಡ್ಕರ್ ಅವರನ್ನು ಭಾರತದ ʼಸಂವಿಧಾನ ಶಿಲ್ಪಿʼ ಎಂದು ಮುಕ್ತ ಕಂಠದಿಂದ ಹೇಳಲಾಗುತ್ತಿದೆ. ವಿಶ್ವದ ಅನೇಕ ದೇಶಗಳು ಸಾರ್ವಜನಿಕರ ಹಕ್ಕುಗಳನ್ನು ಕಾಪಾಡಲು ಅಸಮರ್ಥವಾಗಿರುವಾಗ ಭಾರತದ ಸಂವಿಧಾನ ಎದ್ದು ಕಾಣುತ್ತದೆ. ಡಾ. ಅಂಬೇಡ್ಕರ್ ಅವರ ಕೊಡುಗೆಯನ್ನು ಇಂದಿನ ಸಮಾಜ ಮುಕ್ತವಾಗಿ ಒಪ್ಪಿಕೊಂಡಿದೆ. ಅವರ ಹೆಸರಿನ ದುರ್ಬಳಕೆಯಾಗುತ್ತಿರುವುದೂ ಸತ್ಯ. ಇದಕ್ಕೆ ಅಂಬೇಡ್ಕರ್ ಅವರನ್ನು ಹೆಚ್ಚೆಚ್ಚು ಅರಿಯುವುದೊಂದೇ ಪರಿಹಾರ. 

-ಶಂಕರ್ ಓಬಳಬಂಡಿ

ತೃತೀಯ ಪತ್ರಿಕೋದ್ಯಮ ವಿದ್ಯಾರ್ಥಿ,

ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


hit counter

0 Comments

Post a Comment

Post a Comment (0)

Previous Post Next Post