||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ವಿಶ್ವ ಭೂಮಿ ದಿನ-ಏಪ್ರಿಲ್ 22: ಇರುವ ಒಂದೇ ಭೂಮಿಯನ್ನು ಉಳಿಸಿಕೊಳ್ಳೋಣ

ವಿಶ್ವ ಭೂಮಿ ದಿನ-ಏಪ್ರಿಲ್ 22: ಇರುವ ಒಂದೇ ಭೂಮಿಯನ್ನು ಉಳಿಸಿಕೊಳ್ಳೋಣ


ಪ್ರತಿ ವರ್ಷ ಏಪ್ರಿಲ್ 22 ರಂದು ವಿಶ್ವದಾದ್ಯಂತ ವಿಶ್ವ ಭೂಮಿ ದಿನ ಎಂದು ಆಚರಿಸಿ ಭೂತಾಯಿಯ ಮೇಲೆ ಉಂಟಾಗುವ ಅತ್ಯಾಚಾರ ಮತ್ತು ಶೋಷಣೆಯನ್ನು ಎತ್ತಿ ತೋರಿಸಿ ಜನರಲ್ಲಿ ನಮ್ಮ ಭೂಮಿಯನ್ನು ರಕ್ಷಿಸಬೇಕು ಎಂದು ಮನದಟ್ಟು ಮಾಡುವ ಕಾರ್ಯವನ್ನು ಮಾಡುತ್ತಾರೆ. ಈ ದಿನಾಚರಣೆ 1970ರಲ್ಲಿ ಅಮೇರಿಕಾ ದೇಶದಲ್ಲಿ ಮೊದಲು ಆರಂಭವಾಯಿತು. 2022ನೇ ವಿಶ್ವ ಭೂಮಿ ದಿನಾಚರಣೆಯ ಧ್ಯೇಯ ವಾಕ್ಯ “Invest In Our Planet” ಅಂದರೆ “ನಮ್ಮ ಭೂ ಗ್ರಹದ ಮೇಲೆ ಬಂಡವಾಳ ಹೂಡಿ” ಇದರರ್ಥ. ಭೂಮಂಡಲದ ಮೇಲೆ ಉಂಟಾಗುವ ದೌರ್ಜನ್ಯವನ್ನು ಕಡಿಮೆ ಮಾಡಿ ಭೂಮಿಯ ಫಲವತ್ತತೆಯನ್ನು ಉಳಿಸಿಕೊಂಡು ಭೂಮಿಯಲ್ಲಿರುವ ಅಗಾಧ ಸಂಪತ್ತು ಉಳಿಸಿ ಪೋಷಿಸಿ ಎಂಬುದಾಗಿದೆ.


1969 ರಲ್ಲಿ ಅಮೇರಿಕಾದ ಸೆನೆಟರ್ ಗೇಲಾರ್ಡಾ ನೆಲ್ಸನ್ ಎಂಬಾತ ಸಾಂಟಾ ಬಾರ್ಬರಾದಲ್ಲಿ ಉಂಟಾದ ಎಣ್ಣೆ ಚೆಲ್ಲುವಿಕೆ ಪ್ರಕ್ರಿಯೆಯನ್ನು ಕಂಡು ಅವರಿಂದ ಪರಿಸರ, ಭೂಮಿ ಮತ್ತು ಕಡಲಿಗೆ ಉಂಟಾಗುವ ದುಷ್ಪರಿಣಾಮಗಳನ್ನು ಎತ್ತಿ ತೋರಿಸುವ ಸಲುವಾಗಿ 1970 ರಲ್ಲಿ ಹಲವು ಸಂಘಟನೆಗಳು ಒಟ್ಟು ಸೇರಿ ಈ ವಿಶ್ವ ಭೂಮಿ ದಿನ ಆಚರಣೆಯನ್ನು ಆರಂಭಿಸಲಾಯಿತು. ವಾಯು ಮಾಲಿನ್ಯ, ನೀರು ಕಲುಷಿತಗೊಳ್ಳುವಿಕೆ ಮತ್ತು ಪರಿಸರ ಮಾಲಿನ್ಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ, ಶುದ್ಧ ಗಾಳಿ, ಬೆಳಕು, ನೀರು ಮತ್ತು ಶುದ್ಧ ಪರಿಸರದ ಅವಶ್ಯಕತೆಯನ್ನು ಬೊಟ್ಟು ಮಾಡುವ ಸಲುವಾಗಿ ಈ ಆಚರಣೆಯನ್ನು ಆರಂಭಿಸಲಾಯಿತು. ಈಗ ಇದರ ಜೊತೆಗೆ ಹೆಚ್ಚುತ್ತಿರುವ ನೈಸರ್ಗಿಕ ದುರಂತಗಳು, ಮಾನವ ನಿರ್ಮಿತ ಕೈಗಾರಿಕಾ ದುರಂತಗಳು, ಹೆಚ್ಚುತ್ತಿರುವ ಪರಿಸರದ ತಾಪಮಾನ, ಕೈಗಾರೀಕರಣದಿಂದ ಪರಿಸರದ ಮೇಲೆ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಹೆಚ್ಚಿನ ಬೆಳಕು ಚೆಲ್ಲುವ ಪ್ರಯತ್ನವನ್ನು ಈ ವಿಶ್ವ ಭೂಮಿ ದಿನಾಚರಣೆ ಮಾಡಲಾಗುತ್ತಿದೆ.


ಇಂದು ಏಪ್ರಿಲ್ 22 ವಿಶ್ವ ಭೂಮಿ ದಿನ. ಇದರಲ್ಲೇನಿದೆ ವಿಶೇಷ ಬಿಡಿ. ಪ್ರತಿ ದಿನಕ್ಕೂ ಒಂದು ವಿಶೇಷವಿದ್ದೇ ಇರುತ್ತದೆ. ಆದರೆ ಇವತ್ತು ಮಾತ್ರ ನಾವು ಗಂಭೀರವಾಗಿ ಚಿಂತನೆಗೆ ಹಚ್ಚಿಕೊಳ್ಳಬೇಕಾದ ವಿಶೇಷ ದಿನ.   ನಮ್ಮ ಪರಿಸರ ಕಾಳಜಿಗಳನ್ನು ಮರು ವಿಮರ್ಷೆಗೆ ಒಡ್ಡಿಕೊಳ್ಳುವ ದಿನ. ಇದು ಕೇವಲ ಹಸಿರು ನಡಿಗೆ, ಹಸಿರು ರ್ಯಾಲಿ, ಗಿಡ ವಿತರಣೆ ಕಾರ್ಯಕ್ರಮ, ಘೋಷವಾಕ್ಯ ಬರವಣಿಗೆ, ಪರಿಸರ ಉಳಿಸುವ ಚಿತ್ರ ಸ್ಪರ್ಧೆ ಮತ್ತು ಸಭಾಕಾರ್ಯಕ್ರಮಗಳಿಗೆ ಸೀಮಿತವಾಗಬಾರದು. ಮನುಷ್ಯನ ಆಸೆ ಆಕಾಂಕ್ಷೆ ಗಳಿಗೆ ಮಿತಿಯೆಂಬುದೇ ಇಲ್ಲ. ಕೈಗಾರೀಕರಣದ ಹೆಸರಲ್ಲಿ  ಅಭಿವೃದ್ಧಿಯ ನೆಪದಲ್ಲಿ ಮರಗಿಡಗಳನ್ನು ಕಡಿದು, ನೆಲ, ಹೊಲ, ಜಲಗಳನ್ನು ಕಲುಷಿತಗೊಳಿಸಿ ಸಸ್ಯರಾಶಿಯನ್ನು ಬಲಿತೆಗೆದು ಕಾಡು ಕಡಿದು ಕಾಂಕ್ರೀಟ್ ನಾಡು ಮಾಡುವ ಹುನ್ನಾರದಿಂದ ನಾವು ಬದುಕುವ ನೈತಿಕ ಹಕ್ಕನ್ನೇ ಕಳೆದುಕೊಂಡಿದ್ದೇವೆ ಎಂದರೂ ತಪ್ಪಲ್ಲ. ಭೂತಾಯಿಯ ಮೇಲೆ ಅವಿರತವಾಗಿ, ನಿರಂತರವಾಗಿ ದೌರ್ಜನ್ಯ ಹಗಲು ಇರುಳು ನಡೆಯುತ್ತಲೇ ಇದೆ. ಭೂತಾಯಿಯ ಮೂಕರೋಧನವನ್ನು ಕೇಳುವ ಕಿವಿಗಳು ಬರಡಾಗಿ, ನೋಡುವ ಕಣ್ಣುಗಳು ಕುರುಡಾಗಿ ಯಾಂತ್ರೀಕೃತ ಬದುಕಿನಲ್ಲಿ ಜನರು ಉಸಿರಾಡಲು ಕಷ್ಟವಾಗುವ ಪರಿಸ್ಥಿತಿ ಬಂದೊದಗಿದೆ. ಅಕ್ರಮ ಗಣಿಗಾರಿಕೆ, ಅವೈಜಾನಿಕ ಮೀನುಗಾರಿಕೆ, ಇಂಧನಗಳ ಪೋಲುಗಾರಿಕೆ, ನೈಸರ್ಗಿಕ ಸಂಪನ್ಮೂಲಗಳ ಕೊಳ್ಳೆಗಾರಿಕೆ ಹೀಗೆ ಒಂದಲ್ಲ. ಎರಡಲ್ಲ.  ಹಗಲು ರಾತ್ರಿ ಮನುಷ್ಯನ ದಬ್ಬಾಳಿಕೆ ಎಗ್ಗಿಲ್ಲದೇ ನಡೆಯುತ್ತಲೇ ಇದೆ.


ಮನುಷ್ಯ ತನ್ನ ದುರಾಸೆ ತ್ಯಜಿಸಿ, ಕ್ಷಣಿಕ ಸುಖದ ಆಸೆಗೆ ತಿಲಾಂಜಲಿ ಬಿಟ್ಟು, ತಾನು ಬದುಕುವ ನೆಲ-ಜಲಕ್ಕೆ ಗೌರವ ನೀಡಿದಲ್ಲಿ ಮಾತ್ರ ಮುಂದಿನ ಜನಾಂಗಕ್ಕೂ ಬದುಕಲು ಎಡೆಯಾಗಬಹುದು. ಇಲ್ಲವಾದಲ್ಲಿ ನೈಸರ್ಗಿಕ ಸಂಪನ್ಮೂಲಗಳು ಬರಿದಾಗಿ, ಭೂಮಿ ಬರಡಾಗಿ, ಉಸಿರಾಡುವ ಗಾಳಿಗೆ, ಕುಡಿಯುವ ನೀರಿಗೆ ಮತ್ತು ತಿನ್ನುವ ತುತ್ತು ಅನ್ನಕ್ಕೂ ತತ್ಸಾರ ಬರುವ ದಿನಗಳು ದೂರವಿಲ್ಲ.


ಕೊನೆಮಾತು:

ಮನುಷ್ಯ ಜೀವಿಗಳು ಭೂಮಂಡಲದಲ್ಲಿ ಓಡಾಡಲು ಆರಂಭಿಸಿ ಸರಿ ಸುಮಾರು 4000 ವರ್ಷಗಳೇ ಸಂದಿವೆ. ಭೂಮಿಯಲ್ಲಿ ಜನಸಂಖ್ಯೆ 750 ಕೋಟಿ ದಾಟಿದೆ. ಇನೈವತ್ತು ವರ್ಷ ಕಳೆದರೆ ಭೂಮಿಯಲ್ಲಿ ನಡೆದಾಡಲು ಮನುಷ್ಯ ಪರದಾಡುವ ಪರಿಸ್ಥಿತಿ ಬಂದರೂ ವಿಶೇಷವಲ್ಲ. ಕಳೆದ ನಲವತ್ತು ವರ್ಷಗಳಲ್ಲಿ ಮನುಷ್ಯ ಭಯಾನಕವಾಗಿ ಬೆಳವಣಿಗೆಯ ನೆಪದಲ್ಲಿ ಹೊಲ, ನೆಲ, ಜಲವನ್ನು ಕಲುಷಿತಗೊಳಿಸುತ್ತಿದ್ದಾನೆ. ನೋಡು ನೋಡುತ್ತಿದ್ದಂತೆಯೇ ನಮ್ಮ ಭೂಮಂಡಲ ಸಮಸ್ಯೆಗಳ ಆಗಾರವಾಗಿ ಬೆಳೆದು ನಿಂತಿದೆ. ಜನಸಂಖ್ಯಾಸ್ಪೋಟ, ಆಹಾರ ಸಮಸ್ಯೆ, ಶಕ್ತಿ ಸಮಸ್ಯೆ, ಕಚ್ಚಾ ಪದಾರ್ಥಗಳ ಸಮಸ್ಯೆ, ಪರಿಸರ ಮಾಲಿನ್ಯ ಒಂದಲ್ಲ, ಎರಡಲ್ಲ ಹತ್ತು ಹಲವು ಸಮಸ್ಯೆಗಳು ಭೂತಾಕಾರವಾಗಿ ಬೆಳೆದು ನಿಂತಿದೆ. ಪರಿಸರ ಮಾಲಿನ್ಯ ತಾರಕಕ್ಕೇರಿದೆ. ಇಡೀ ಭೂ ಮಂಡಲದ ‘ಜೀವ ಸಂಕುಲ’ಗಳೇ ವಿನಾಶಾದತ್ತ ಸಾಗಿದೆ. ಕಾರ್ಖಾನೆಗಳಿಂದ ಕ್ಯಾನ್ಸರ್ ಹಬ್ಬಿಸಬಲ್ಲ ವಿಷಪೂರಿತ ರಾಸಾಯನಿಕಗಳು ದಿನ ನಿತ್ಯವು ಪರಿಸರಕ್ಕೆ ಸೇರುತ್ತಿದೆ. ವಾತಾವರಣದ ಓಜೋನ್ ವಲಯ ಛಿದ್ರವಾಗುತ್ತಿದೆ. ಹುಳಿ ಮಳೆ (acid rain) ಸುರಿಯ ತೊಡಗಿದೆ. ಕೈಗಾರಿಕ ಕಾರ್ಖಾನೆಗಳಿಂದ ಹಸಿರು ಅನಿಲ (Green House Gas) ಎಂದೇ ಕುಖ್ಯಾತಿ ಪಡೆದ ನೀರಿನ ಹಬೆ (H2O) ಕಾರ್ಬನ್ ಡೈ ಆಕ್ಸೈಡ್, (CO2) ನೈಟ್ರಿಸ್ ಆಕ್ಸೈಡ್ (N2O) ಮಿಥೇನ್ (CH4) ಮುಂತಾದ ಅನಿಲಗಳು ನಾವು ಉಸಿರಾಡುವ ಗಾಳಿಯನ್ನೇ ಕಲುಷಿತಗೊಳಿಸುತ್ತಿದೆ. ಮರುಭೂಮಿ ವಿಸ್ತರಿಸುತ್ತಿದೆ. ಅಂತರ್ಜಲ ಬತ್ತಿ ಕೆರೆ, ಬಾವಿಗಳು ಬರಡಾಗುತ್ತಿದೆ. ನೂರಾರು ಅಡಿ ಅಗೆದರೂ ಕೊಳವೆ ಬಾವಿಗಳಲ್ಲಿ ಹನಿ ನೀರೂ ಕೂಡ ಸಿಗದಂತಹಾ ಪರಿಸ್ಥಿತಿ ನಿರ್ಮಾಣವಾಗಿದೆ. ಇರುವ ನದಿ, ಕೆರೆ, ಸಾಗರಗಳೂ ಮಲಿನಗೊಳ್ಳುತ್ತಿದೆ. ಕುಡಿಯುವ ಹನಿ ಹನಿ ನೀರಿಗೂ ತಾತ್ಸಾರ ಬಂದೊದಗಿದೆ. ಭೂಗರ್ಬದಲ್ಲಿ ಕಾವು ಏರಿ, ಬದುಕಲು ಸಾಧ್ಯವಾದಂತ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಹವಾಮಾನದಲ್ಲಿ ಅನೀರಿಕ್ಷಿತ ಸ್ಥಿತ್ಯಂತರಗಳೂ ಕ್ಷಣ ಕ್ಷಣಕ್ಕೂ ಬದಲಾಗುತ್ತಿದೆ. ಜಾಗತೀಕ ತಾಪಮಾನ ಏರಿಕೆ (Global Warming) ಯಿಂದಾಗಿ ‘ಜೀವ ಸಂಕುಲಗಳ’ ಸಮತೋಲನಕ್ಕೆ ಧಕ್ಕೆ ಬಂದಿದೆ.


ಮನುಷ್ಯನ ಆಸೆಬುರುಕತನಕ್ಕೆ ಎಣೆಯೇ ಇಲ್ಲ. ತಾನು ಅಭಿವೃದ್ಧಿ ಹೊಂದುವ ಧಾವಂತದಲ್ಲಿ ತನ್ನ ಜೀವನಾಡಿಯಾದ ಭೂತಾಯಿ ಒಡಲನ್ನು ಅಗಿದು, ಬಗೆದು ಬರಡು ಮಾಡುತ್ತಿದ್ದಾನೆ. ಇದನ್ನು ನೋಡಿಯೇ 1940 ರಲ್ಲಿ ಗಾಂಧೀಜಿಯವರು ಹೀಗೆ ಹೇಳಿದ್ದರು “ಈ ಭೂಮಿ ಎಲ್ಲರ ಆಸೆಗಳನ್ನು ಪೂರೈಸಬಲ್ಲರು ಆದರೆ ದುರಾಸೆಗಳನ್ನಲ್ಲ” ಈ ಕಾರಣದಿಂದಲೇ ಹಿರಿಯರೂ, ಪರಿಸರವಾದಿಗಳು ಭೂತಾಯಿಯನ್ನು  ಹೀಗೆ ವರ್ಣಿಸುತ್ತಾರೆ “ಈ ಭೂಮಿ ತಮ್ಮ ತಾತ ಮುತ್ತಾತರಿಂದ ಬಂದ ಬಳವಳಿಯಲ್ಲ, ಮಕ್ಕಳು-ಮೊಮ್ಮಕ್ಕಳಿಂದ ಎರವಲಾಗಿ ಪಡೆದದದ್ದು” ಒಟ್ಟಿನಲ್ಲಿ ಸಂಪದ್ಬರಿತವಾದ ಭೂಮಿಯನ್ನು ಬರಡಾಗಿಸುವ ಹಕ್ಕು ಯಾರಿಗೊಬ್ಬರಿಗೂ ಇಲ್ಲ. ಭೂತಾಯಿಯ ಒಡಲನ್ನು ಬರಡು  ಮಾಡದೇ, ಹೆಚ್ಚು ಸಂಪತ್ ಭರಿತವಾಗಿಸಲು ನಾವು ಅತೀ ಅಗತ್ಯವಾಗಿ ತುರ್ತಾಗಿ ಮಾಡಲೇಬೇಕಾದ ಕಾರ್ಯಗಳೆಂದರೆ,

1. ಜನಸಂಖ್ಯಾ ಸ್ಪೋಟವನ್ನು ತಡೆಗಟ್ಟುವುದು.

2. ಆಹಾರ ಧಾನ್ಯ ಬೆಳೆಯುವ ಭೂಮಿಯನ್ನು ಸಂರಕ್ಷಿಸುವುದು.

3. ಮರಗಿಡಗಳನ್ನು ನೆಟ್ಟು ಅಡವಿಗಳನ್ನು ಪುನರ್ ನಿರ್ಮಿಸುವುದು.

4. ಭೂಗರ್ಭದ ಬರಿದಾಗುವ ಸಂಪನ್ಮೂಲಗಳನ್ನು ಬರಿದಾಗದಂತೆ ನೋಡಿಕೊಳ್ಳುವುದು ಮತ್ತು ಬರಿದಾಗದಂತ ಸಂಪನ್ಮೂಲಗಳನ್ನು ಅಭಿವೃದ್ಧಿಗೊಳಿಸುವುದು.


ಸುಮಾರು ಒಂದೂವರೆ ಶತಮಾನದ ಹಿಂದೆಯೇ ಅಭಿವೃದ್ಧಿಯ ನೆಪದಲ್ಲಿ ಅಮೇರಿಕ ಸರಕಾರ  1854 ರಲ್ಲಿ ವಾಷಿಂಗ್ ಟನ್ ಪಕ್ಕದ ಅಧಿವಾಸಿ ಜನರನ್ನು ಒಕ್ಕಲೆಬ್ಬಿರುವ ಯತ್ನದಲ್ಲಿದ್ದಾಗ, ಅಧಿವಾಸಿಗಳ ನಾಯಕನಾಗಿರುವ ರೆಡ್ ಇಂಡಿಯನ್ ಜನಾಂಗದ ಸೀಟ್ಲ್ ಹೇಳಿದ ಅರ್ಥಗರ್ಭಿತ ಮಾತುಗಳು ಹೀಗಿತ್ತು, “ಈ ಭೂಮಿ ಯಾವನೊಬ್ಬ ಮಾನವನ ಪಿತ್ರಾರ್ಜಿತ ಆಸ್ತಿಯಲ್ಲ, ಇತರ ಅಸಂಖ್ಯಾತ ಜೀವಿಗಳಂತೆ ಮನುಷ್ಯ ಕೂಡ ಒಂದು ಜೀವಿ ಅಷ್ಟೆ. ಜೀವ ಸಂಕುಲಗಳ ಈ ಸಂಕೀರ್ಣವಾದ ಜಾಲವನ್ನು ಮಾನವ ಹಣಿದದ್ದಲ್ಲ. ಮನುಷ್ಯ ಈ ಜಾಲದ ಒಂದು ಸಣ್ಣ ಎಳೆ ಅಷ್ಟೆ. ಈ ಜಾಲಕ್ಕೆ ಮಾನವ ಏನೇ ವಿಪತ್ತು ತಂದರೂ, ಆತ ತನಗೆ ತಾನೆ ವಿಪತ್ತು ತಂದುಕೊಂಡಂತೆ. ಈ ಭೂಮಿಗೆ ದುರ್ಗತಿ ಬಂದರೆ, ಮಾನವನಿಗೂ ಅದೇ ಗತಿ ಬರುವುದು ಎಂದರ್ಥ. ಇಲ್ಲಿ ಎಲ್ಲವೂ ಒಂದಕ್ಕೊಂದು ಪರ್ಯಾಯವಾಗಿ ತುಳುಕು ಹಾಕಿಕೊಂಡಿದೆ ಮತ್ತು ಮನುಷ್ಯ ಮಾತ್ರ ಈ ಭೂ ಮಂಡಲದಲ್ಲಿ ಏಕಾಂಗಿಯಾಗಿ ಬದುಕಲು ಸಾಧ್ಯವೇ ಇಲ್ಲ”.  


1986ನೇ ವಿಶ್ವ ಪರಿಸರ ದಿನಾಚರಣೆಯಂದು 14ನೇ ದಲಾಯಿ ಲಾಮಾ ಪೂಜ್ಯ ತೇನ್ಸಿನ್ ಗ್ಲಾಕೊ ನೀಡಿದ ಸಂದೇಶದ  ಸಾರ ಹೀಗಿತ್ತು. “ಮಾನವನ ಅಜ್ಞಾನ, ಆಸೆ ಬುರುಕುತನ ಮತ್ತು ಜೀವಿಗಳ ಬಗೆಗಿನ ಅಸಡ್ಡೆಯಿಂದಾಗಿಯೇ ನಿಸರ್ಗ ಬರಿದಾಗುತ್ತಿದೆ. ಅಜ್ಞಾನವೊಂದರಿಂದಲೇ ಈ ತಪ್ಪು ಆಗಿದ್ದರೆ, ಈ ಹಿಂದೆ ಮನುಷ್ಯ ಹಾಳುಗೆಡವಿದ್ದನ್ನೆಲ್ಲ ಕ್ಷಮಿಸಬಹುದು. ಆದರೆ ಇಂದು ನಮಗೆ ನಿಸರ್ಗದ ಕುರಿತು ಅಪಾರ ಮಾಹಿತಿ ಸಿಗುತ್ತಿದೆ. ಪೂರ್ವಜರಿಂದ ಪಡೆದಿದ್ದೇನು, ನಮ್ಮಿಂದಾಗುತ್ತಿರುವ ತಪ್ಪುಗಳೇನು, ಮುಂದಿನ ಪೀಳಿಗೆಗೆ ಉಳಿಯಬೇಕಾದುದು ಏನೇನು ಎಂಬ ಪ್ರಶ್ನೆಗಳಿಗೆ ನೈತಿಕವಾದ ಉತ್ತರ ಸಿಗಲೇಬೇಕಾಗಿದೆ. ಖಂಡಿತವಾಗಿಯೂ ನಮ್ಮದು ಪರ್ವಕಾಲದ ಪೀಳಿಗೆ. ವಿಜ್ಞಾನ, ತಂತ್ರಜ್ಞಾನದಲ್ಲಿ ನಮ್ಮ ಸಾಧನೆ ಎಷ್ಟೇ ಇದ್ದರೂ ಅದಕ್ಕೆ ಸರಿಸಾಟಿಯಾಗಿ ನಮ್ಮ ದೌರ್ಬಲ್ಯಗಳೂ ಬೆಟ್ಟದಷ್ಟಿದೆ. ಇತರ ಜೀವ ರಾಶಿಗಳನ್ನು ಹೊಸಕಿ ಹಾಕಿದ್ದೂ ಅಲ್ಲದೆ, ನಮ್ಮವರೇ ಹಸಿವಿನಿಂದ ಸಾವನ್ನಪ್ಪುತ್ತಿರುವುದೂ, ಈ ವೈಫಲ್ಯಕ್ಕೆ ಕನ್ನಡಿ ಹಿಡಿದಂತಿವೆ. ನಮ್ಮ ಮೇಲೆ ಇಂದು ಅಪಾರ ಹೊಣೆಗಾರಿಕೆ ಇದೆ. ಅದನ್ನು ನಿಭಾಯಿಸುವ ಸಾಮರ್ಥ್ಯವೂ ನಮಗಿದೆ. ಈಗಲಾದರೂ ಕಾರ್ಯಪ್ರಾಪ್ತರಾಗೋಣ, ಕಾಲವಿನ್ನೂ ಮಿಂಚಿಲ್ಲ”.


ವಿಶ್ವಭೂಮಿ ದಿನಾಚರಣೆಯು ಅರ್ಥಪೂರ್ಣವಾಗಬೇಕಾದರೆ ಸರಕಾರದ ಜೊತೆಗೆ, ಸರಕಾರೇತರ ಸಂಘಸಂಸ್ಥೆಗಳ ಮುಖಾಂತರ ಪರಿಸರ ವಿಜ್ಞಾನಿಗಳು, ಪರಿಸರ ಸಂರಕ್ಷಣಾ ಕಾರ್ಯಕರ್ತರು, ಪರಿಸರ ವಿಚಾರವಾದಿಗಳು ಒಟ್ಟು ಸೇರಿ ಕೆಲಸ ಮಾಡಬೇಕು ಮತ್ತು ಜನಸಾಮಾನ್ಯರಲ್ಲೂ ನಿಜವಾದ ಬದಲಾವಣೆ ಉಂಟಾಗಬೇಕಾಗಿದೆ. ಇಲ್ಲವಾದಲ್ಲಿ ಈ ವಿಶ್ವ ಭೂಮಿ ದಿನವು ಮತ್ತೊಂದು ಘೋಷಣಾ ದಿನವಾಗಿ ಉಳಿಯಬಹುದು. 


ಬನ್ನಿ ಗೆಳೆಯರೇ ಇಂದೆ ಶಪಥ ಮಾಡೋಣ. ಪರಿಸರ ಮಾಲಿನ್ಯಕ್ಕೆ ಎಡೆಮಾಡುವ ಮತ್ತು ಭೂತಾಯಿಯ ಒಡಲನ್ನು ಬರಡು ಮಾಡಲು ಎಲ್ಲಾ ಕಾರ್ಯಗಳಿಗೂ ತಿಲಾಂಜಲಿ ಬಿಡೋಣ. ನಾವು ಬದುಕೋಣ, ಇತರ ಜೀವ ಸಂಕುಲಗಳನ್ನು ಬದುಕಲು ಅವಕಾಶ ನೀಡೋಣ ಮತ್ತು ನಮ್ಮ ಮುಂದಿನ ತಲೆಮಾರಿನ ಜೀವಿಗಳು ಬದುಕಲು ಪೂರಕವಾದ ನೆಲ, ಹೊಲ, ಜಲ, ಗಾಳಿ, ನೀರು ಉಳಿಸುವ ಪುಣ್ಯಕಾರ್ಯಕ್ಕೆ ಟೊಂಕ ಕಟ್ಟೋಣ.


-ಡಾ|| ಮುರಲೀ ಮೋಹನ್ ಚೂಂತಾರು

BDS, MDS,DNB,MOSRCSEd(U.K), FPFA, M.B.A

ಸುರಕ್ಷಾ ದಂತ ಚಿಕಿತ್ಸಾಲಯ

ಹೊಸಂಗಡಿ, ಮಂಜೇಶ್ವರ

ಮೊ: 9845135787

drmuraleechoontharu@gmail.com


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post