ಮಂಗಳೂರು: ತುಳು ಒಳಗೊಂಡಂತೆ ಬ್ರಾಹ್ಮೀ ಲಿಪಿಯನ್ನು ಆಧರಿಸಿರುವ ವಿವಿಧ ಭಾಷೆಗಳ ಗಣಕೀಕರಣವನ್ನು ಸರಳೀಕರಿಸಲು ಯು.ಎಸ್.ಬಿ. ಫೊನಿಟಿಕ್ಸ್ ಕೀಬೋರ್ಡೊಂದನ್ನು ಸಿದ್ಧಪಡಿಸಲಾಗಿದೆ. ಇದನ್ನು ಎಷ್ಟೋ ಶಾಲೆಗಳು ಈಗಾಗಲೇ ಯಶಸ್ವಿಯಾಗಿ ಅಳವಡಿಸಿಕೊಂಡಿವೆ, ಎಂದು ಭಾಷಾ ವಿಜ್ಞಾನಿ ಡಾ. ಗುರುಪ್ರಸಾದ್ ತಿಳಿಸಿದ್ದಾರೆ.
ಮಂಗಳೂರು ವಿಶ್ವವಿದ್ಯಾನಿಲಯದ ತುಳುಪೀಠ ಹಾಗೂ ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜಿನ ತುಳು ಸ್ನಾತಕೋತ್ತರ ಅಧ್ಯಯನ ವಿಭಾಗದ ಜಂಟಿ ಆಶ್ರಯದಲ್ಲಿ ಆಯೋಜಿಸಲಾಗಿದ್ದ ವಿಶೇಷ ಉಪನ್ಯಾಸ - ಸಂವಾದ ಕಾರ್ಯಕ್ರಮದಲ್ಲಿ ಮೂಲತಃ ಉಡುಪಿಯವರಾದ, ಅಮೇರಿಕಾದಲ್ಲಿ 30 ವರ್ಷ ನೆಲೆಸಿ ಭಾಷಾಧ್ಯಯನಕ್ಕಾಗಿ ಭಾರತದಲ್ಲಿರುವ ಡಾ. ಗುರುಪ್ರಸಾದ್, ' ಕ-ನಾದ ಫೊನಿಟಿಕ್ಸ್' ಕಂಪೆನಿಯನ್ನು ಹುಟ್ಟು ಹಾಕಿದ ಉದ್ದೇಶ ಹಾಗೂ ಕಾರ್ಯಚಟುವಟಿಕೆಯನ್ನು ವಿವರಿಸಿದರು.
ಹಿರಿಯ ಪತ್ರಕರ್ತ ಪಿ.ಬಿ. ಹರೀಶ್ ರೈ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ, ತುಳುನಾಡಿನಲ್ಲಿ ವಿವಿಧ ಸ್ವರೂಪದ ಭಾಷಾ ಚಳುವಳಿಗಳು ಹುಟ್ಟಿಕೊಂಡಿವೆ, ಈಗಲೂ ನಡೆಯುತ್ತಿವೆ. ಆದರೆ ಡಾ. ಗುರುಪ್ರಸಾದ್ ಅವರು ತುಳು ಭಾಷಾ ವಿಜ್ಞಾನದ ತಳವನ್ನು ಶೋಧಿಸಿ ಸಂಶೋಧನಾತ್ಮಕ ಚಳುವಳಿಯಲ್ಲಿ ತೊಡಗಿಸಿರುವುದು ಅಸಾಧಾರಣ. ಭಾಷಾ ಬಳಕೆಯ ಸ್ಥಿರತೆ, ಬೆಳವಣಿಗೆ ಹಾಗೂ ಇದರ ಜನಪ್ರಿಯತೆ ಅವರ ಯು.ಎಸ್.ಬಿ. ಫೊನಿಟಿಕ್ಸ್ ಕೀಬೋರ್ಡ್ ನಲ್ಲಿ ಅಡಗಿದೆ, ಎಂದರು.
ತುಳು ಪೀಠ ಹಾಗೂ ತುಳು ಎಂ.ಎ. ವಿಭಾಗದ ಸಂಯೋಜಕ ಡಾ.ಮಾಧವ ಎಂ.ಕೆ. ಅಧ್ಯಕ್ಷೀಯ ಭಾಷಣದಲ್ಲಿ, ತುಳು ಸ್ನಾತಕೋತ್ತರ ವಿಭಾಗದ ರಚನಾತ್ಮಕ ಕಾರ್ಯಚಟುವಟಿಕೆಗಳನ್ನು ವಿವರಿಸಿದರು. ಕಾರ್ಯಕ್ರಮದ ಸಂಯೋಜಕ ಉಪನ್ಯಾಸಕ ಸುಭಾಶ್ಚಂದ್ರ ಕಣ್ವತೀರ್ಥ ಅವರು ಅತಿಥಿಗಳನ್ನು ಸ್ವಾಗತಿಸಿ ಪರಿಚಯಿಸಿದರು. ಕಾರ್ಯಕ್ರಮ ಸಂಯೋಜಕರಾದ ಉಪನ್ಯಾಸಕಿ ಪ್ರಶಾಂತಿ ಶೆಟ್ಟಿ ಇರುವೈಲು ವಂದಿಸಿದರು. ತುಳು ಎಂ.ಎ. ವಿದ್ಯಾರ್ಥಿನಿ ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ