ಮಂಗಳೂರು: ಶ್ರೀನಿವಾಸ ವಿಶ್ವ ವಿದ್ಯಾಲಯದ ಶ್ರೀನಿವಾಸ ಸಮೂಹ ಸಂಸ್ಥೆಗಳ ಪದವಿ ಪ್ರದಾನ ಸಮಾರಂಭ ಏಪ್ರಿಲ್ 10ರಂದು ಶ್ರೀನಿವಾಸ ವಿವಿಯ ಮುಕ್ಕ ಕ್ಯಾಂಪಸ್ ನಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕರ್ನಾಟಕದ ಮುಖ್ಯಮಂತ್ರಿಗಳ ಕಾರ್ಯದರ್ಶಿ ವಿ. ಪೊನ್ನುರಾಜ್ ಮಾತನಾಡಿ, ಸಾಧನೆಯ ಹಾದಿಯನ್ನು ವಿದ್ಯಾರ್ಥಿಗಳೇ ನಿರ್ಧರಿಸಿ ಅದರ ಸಾಕಾರಕ್ಕೆ ಸರ್ವ ಪ್ರಯತ್ನ ಮಾಡಬೇಕು. ಆಗ ಜೀವನದಲ್ಲಿ ಸಫಲತೆ ಕಾಣಬಹುದು. ನಿಮ್ಮ ದುಡಿಮೆಯನ್ನು ಪ್ರೀತಿಸಿ, ಹಣ ಕೇವಲ ಸಂಖ್ಯೆ ಮಾತ್ರ. ಯಾವ ಕಾರ್ಯದಿಂದ ನಿಮಗೆ ತೃಪ್ತಿ ದೊರೆಯುತ್ತದೆ ಎಂಬುದರ ಮೇಲೆ ನಿಮ್ಮ ಸಫಲತೆ ನಿರ್ಧರಿತವಾಗಿದೆ ಎಂದು ಹೇಳಿದರು.
ಎ. ಶಾಮ ರಾವ್ ಪ್ರತಿಷ್ಠಾನದ ಅಧ್ಯಕ್ಷರು, ಶ್ರೀನಿವಾಸ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಡಾ. ಸಿ ಎ ಎ. ರಾಘವೇಂದ್ರ ರಾವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯೆ ಎಲ್ಲಿರುವುದೋ ವಿನಯತೆಯೂ ಅಲ್ಲಿರುತ್ತದೆ. ಶ್ರೀನಿವಾಸ ವಿಶ್ವ ವಿದ್ಯಾಲಯ ವಿದ್ಯಾರ್ಥಿಗಳಿಗೆ ಕೌಶಲ ಮತ್ತು ಜ್ಯಾನವನ್ನು ನೀಡಿದೆ. ಈ ಮೂಲಕ ದೇಶಕ್ಕೆ ಕೊಡುಗೆ ನೀಡಬೇಕೆನ್ನುವುದು ನಮ್ಮ ಆಶಯ. ವಿದ್ಯೆ ತುಂಬಾ ಶಕ್ತಿಶಾಲಿ. ಆದ್ದರಿಂದ ನೀವು ಕಲಿಯುವ ವಿಷಯವನ್ನು ಮೊದಲು ಪ್ರೀತಿಸಿ ನಂತರ ನಿಮ್ಮನ್ನು ಸಮರ್ಪಿಸಿ ಕೊಂಡಾಗ ಜೀವನದಲ್ಲಿ ಯಶಸ್ಸು ನಿಮ್ಮದಾಗುತ್ತದೆ. ಗಳಿಸಿದ ಜ್ಯಾನವನ್ನು ಹಂಚಿದಾಗ ಅದು ಹೆಚ್ಚುತ್ತದೆ ಅದರೊಂದಿಗೆ ವಿನಮ್ರತೆ ಹಾಗೂ ಪ್ರಾಮಾಣಿಕತೆ ವೃದ್ಧಿಯಾಗುತ್ತದೆ ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.
ಶ್ರೀನಿವಾಸ ವಿಶ್ವವಿದ್ಯಾಲಯದ ಸಹ ಕುಲಾಧಿಪತಿಗಳಾದ ಡಾ. ಎ. ಶ್ರೀನಿವಾಸ ರಾವ್ ಅತಿಥಿಗಳನ್ನು ಸ್ವಾಗತಿಸಿದರು. ಶ್ರೀನಿವಾಸ ಕಾಲೇಜ್ ಆಫ್ ಫಾರ್ಮಸಿಯ ಪ್ರಾಂಶುಪಾಲರಾದ ಡಾ. ರಾಮಕೃಷ್ಣ ಶಬರಾಯ ಅತಿಥಿ ಪರಿಚಯ ನೀಡಿದರು. ಶ್ರೀನಿವಾಸ ವಿವಿಯ ವಿಶ್ವಸ್ತ ಮಂಡಳಿಯ ಸದಸ್ಯರಾದ ಪ್ರೊ. ಶ್ರೀಮತಿ ಎ. ಮಿತ್ರಾ ಎಸ್. ರಾವ್ ಪದವಿ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿದರು.
1200 ವಿದ್ಯಾರ್ಥಿಗಳಿಗೆ ಪದವಿ ಪ್ರದಾನಿಸಲಾಯಿತು.
ಶ್ರೀನಿವಾಸ ವಿವಿಯ ವಿಶ್ವಸ್ತ ಮಂಡಳಿ ಸದಸ್ಯರಾದ ಶ್ರೀಮತಿ ಎ. ವಿಜಯಲಕ್ಷ್ಮೀ ಆರ್. ರಾವ್, ವಿವಿ ಉಪಕುಲಪತಿಗಳಾದ ಡಾ. ಪಿ. ಎಸ್. ಐತಾಳ್, ಸಹ ಉಪಕುಲಪತಿಗಳಾದ ಡಾ. ಜೆ. ಸತ್ಯ ಸಾಯಿ ಕುಮಾರ್, ಶ್ರೀನಿವಾಸ ವಿವಿ ಕುಲಸಚಿವರಾದ ಡಾ. ಅನಿಲ್ ಕುಮಾರ್, ಅಭಿವೃದ್ಧಿ ವಿಭಾಗದ ಕುಲಸಚಿವರಾದ ಡಾ. ಅಜಯ್ ಕುಮಾರ್, ಶೈಕ್ಷಣಿಕ ವಿಭಾಗದ ಕುಲಸಚಿವರಾದ ಶ್ರೀ ಆದಿತ್ಯಕುಮಾರ್ ಮಯ್ಯ, ಶ್ರೀನಿವಾಸ ವಿಶ್ವವಿದ್ಯಾಲಯದ ವಿವಿಧ ಕಾಲೇಜಿನ ಮುಖ್ಯಸ್ಥರು, ಪ್ರಾಂಶುಪಾಲರು, ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿಗಳ ಪಾಲಕರು ಉಪಸ್ಥಿತರಿದ್ದರು.
ಪರೀಕ್ಷಾಂಗ ವಿಭಾಗದ ಕುಲಸಚಿವರಾದ ಡಾ. ಶ್ರೀನಿವಾಸ ಮಯ್ಯ ವಂದಿಸಿದರು. ಡಾ. ಅಂಬಿಕಾ ಮಲ್ಯ ಮತ್ತು ಶ್ರೀ ಸ್ಟೀವನ್ ರಾಬರ್ಟ್ ಟೆಲ್ಲಿಸ್ ಕಾರ್ಯಕ್ರಮ ನಿರೂಪಿಸಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ