ಕೂಡ್ಲು ರಾಮ ಧಾಮದಲ್ಲಿ ಶ್ರೀ ರಾಮನವಮಿ ಉತ್ಸವ

Upayuktha
0

'ಶ್ರೀರಾಮ ಧರ್ಮಜ್ಞ ಮತ್ತು ಕೃತಜ್ಞ': ಬೊಳ್ಳಾವ ಸತ್ಯಶಂಕರ



ಮಂಗಳೂರು: 'ಭಾರತೀಯ ಪುರಾಣಗಳಲ್ಲಿ ಬರುವ ಉದಾತ್ತ ಪಾತ್ರಗಳು ನಮ್ಮ ಬದುಕಿಗೆ ದಾರಿ ದೀಪವೆನಿಸಿವೆ. ರಾಮಾಯಣ ಮಹಾಕಾವ್ಯದಲ್ಲಿ ಮಹರ್ಷಿ ವಾಲ್ಮೀಕಿ ಚಿತ್ರಿಸಿದ ಶ್ರೀ ರಾಮಚಂದ್ರ ಹಲವು ಆದರ್ಶಗಳನ್ನು ಬಿಟ್ಟು ಹೋಗಿದ್ದಾನೆ. ಅವನು ಎಷ್ಟು ಪ್ರಮಾಣದಲ್ಲಿ ಧರ್ಮಜ್ಞನೋ, ಅಷ್ಟೇ ಕೃತಜ್ಞನೂ ಆಗಿದ್ದಾನೆ' ಎಂದು ಕೋಟೆಕಾರು ಶ್ರೀ ಶಂಕರ ಮಠದ ಧರ್ಮಾಧಿಕಾರಿ ಬೊಳ್ಳಾವ ಸತ್ಯಶಂಕರ ಹೇಳಿದ್ದಾರೆ.


ಹರಿದಾಸ ದೇವಕೀ ತನಯ ಕೂಡ್ಲು ಅವರು ಗುಡ್ಡೆ ದೇವಸ್ಥಾನ ಬಳಿಯ ರಾಮ ಧಾಮ ನಿವಾಸದಲ್ಲಿ ಶ್ರೀ ರಾಮನವಮಿ ಉತ್ಸವ ಪ್ರಯುಕ್ತ ಏರ್ಪಡಿಸಿದ್ದ ಧಾರ್ಮಿಕ-ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಾರೋಪ ಸಮಾರಂಭದಲ್ಲಿ ಅವರು ಧಾರ್ಮಿಕ ಉಪನ್ಯಾಸ ನೀಡಿದರು.


'ರಾವಣ ವಧೆಯ ಬಳಿಕ ಅಯೋಧ್ಯೆಗೆ ಮರಳಿದ ಶ್ರೀರಾಮ ವಾನರರು ಹಾಗೂ ವಾನರ ಸ್ತ್ರೀಯರನ್ನು ಬಹುವಿಧವಾಗಿ ಸತ್ಕರಿಸಿದುದು ಅವನ ಉಪಕಾರ ಸ್ಮರಣೆಗೆ ಸಾಕ್ಷಿಯಾಗಿದೆ' ಎಂದವರು ತಿಳಿಸಿದರು.


ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಪತ್ರಕರ್ತ ಮತ್ತು ಸಾಹಿತಿ ಮಲಾರು ಜಯರಾಮ ರೈ ಅವರು ತಾವು ರಚಿಸಿದ 'ರಸದಿಂಜಿ ರಾಮಾಯಣ' ತುಳು ಕೃತಿಯಲ್ಲಿ ಉಲ್ಲೇಖಿತವಾದ ಶ್ರೀರಾಮನ ವ್ಯಕ್ತಿತ್ವದ ಬಗ್ಗೆ ಮಾತನಾಡಿದರು.


ಸಮ್ಮಾನ:

ಈ ಸಂದರ್ಭದಲ್ಲಿ ಹರಿಕಥಾ ಪರಿಷತ್ತಿನ ಅಧ್ಯಕ್ಷರಾಗಿ, ಯಕ್ಷಗಾನ ಮತ್ತು ಧಾರ್ಮಿಕ ಕಾರ್ಯಕ್ರಮಗಳ ಸಂಘಟಕರಾಗಿ ಸುದೀರ್ಘ ಸೇವೆ ಸಲ್ಲಿಸಿದ ದೇವಕೀ ತನಯರನ್ನು ಊರವರ ಪರವಾಗಿ ಸನ್ಮಾನಿಸಲಾಯ್ತು. ಹಿರಿಯ ಮೃದಂಗ ವಿದ್ವಾನ್ ಕೆ.ಬಾಬು ರೈ ಮತ್ತು ಯಕ್ಷಗಾನ ಅರ್ಥದಾರಿ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಮುಖ್ಯ ಅತಿಥಿಗಳಾಗಿದ್ದರು. 


ನ್ಯಾಯವಾದಿ ಹರಿದಾಸ್ ಮಹಾಬಲ ಶೆಟ್ಟಿ ಕೂಡ್ಲು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಶೇಣಿ ಚ್ಯಾರಿಟೇಬಲ್ ಟ್ರಸ್ಟ್ ನ ಪಿ.ವಿ.ರಾವ್ ಪೇಜಾವರ ವಂದಿಸಿದರು.


ಹರಿಕಥೆ- ತಾಳಮದ್ದಳೆ:

ಕಾರ್ಯಕ್ರಮದ ಅಂಗವಾಗಿ ಕಲಾರತ್ನ ಶಂ.ನಾ.ಅಡಿಗ ಕುಂಬಳೆ ಅವರಿಂದ 'ಪಾದುಕಾ ಪ್ರದಾನ' ಹರಿಕಥೆ ಜರಗಿತು. ಬಳಿಕ ಪ್ರಸಿದ್ಧ ಕಲಾವಿದರಿಂದ 'ಪಂಚವಟಿ- ಶ್ರೀರಾಮ ಶಾಸನ' ಯಕ್ಷಗಾನ ತಾಳಮದ್ದಳೆ ನೆರವೇರಿತು. ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ, ದೇವಕೀ ತನಯ ಕೂಡ್ಲು, ಪಿ.ವಿ.ರಾವ್, ಉಮೇಶ್ ಆಚಾರ್ಯ ಗೇರುಕಟ್ಟೆ ಅರ್ಥದಾರಿಗಳಾಗಿ ಭಾಗವಹಿಸಿದರು. ರಾಜಾರಾಮ ಹೊಳ್ಳ ಕೈರಂಗಳ, ರಾಜೇಶ್ ಕುತ್ಪಾಡಿ ಮತ್ತು ಮಯೂರ್ ನಾಯಗ ಹಿಮ್ಮೇಳದಲ್ಲಿ ಸಹಕರಿಸಿದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


hit counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top