ಪತ್ರಿಕೋದ್ಯಮ ಕಲಿಕೆಗೆ ಸಂಪನ್ಮೂಲ, ಸಂಶೋಧನೆ ಎರಡೂ ಅಗತ್ಯ: ಪ್ರೊ. ಪಿ ಸುಬ್ರಹ್ಮಣ್ಯ ಯಡಪಡಿತ್ತಾಯ

Upayuktha
0

ಮಂಗಳೂರು: ನೂತನ ಶಿಕ್ಷಣ ಪದ್ಧತಿ ಫಲಿತಾಂಶ ಆಧಾರಿತ, ಪ್ರಾಯೋಗಿಕ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತದೆ. ಪತ್ರಿಕೋದ್ಯಮ ಶಿಕ್ಷಕರೂ ಉದ್ಯಮದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಗಮನಿಸಿ, ಎಲ್ಲರ ಸಹಕಾರದೊಂದಿಗೆ ವಿದ್ಯಾರ್ಥಿಗಳನ್ನು ರೂಪಿಸಬೇಕಾಗಿದೆ, ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ ಸುಬ್ರಹ್ಮಣ್ಯ ಯಡಪಡಿತ್ತಾಯ ಅಭಿಪ್ರಾಯಪಟ್ಟರು.

 

ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಡಾ. ಶಿವರಾಮ ಕಾರಂತ ಸಭಾಭವನದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಪತ್ರಿಕೋದ್ಯಮ ಪದವಿ ಪಠ್ಯಕ್ರಮ (ಎನ್ಇಪಿ) ಕುರಿತ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಕುಲಪತಿಗಳು, ಸಂಶೋಧನೆ, ಸಂಪನ್ಮೂಲಗಳೆರಡೂ ಪತ್ರಿಕೋದ್ಯಮ ಶಿಕ್ಷಣಕ್ಕೆ ಅತ್ಯಗತ್ಯ. ವಿದ್ಯಾರ್ಥಿಗಳಿಗೆ ಸ್ಪರ್ಧೆ ಆಧಾರಿತ ಶಿಕ್ಷಣ ನೀಡಿ ಅವರನ್ನು ಜೀವನಕ್ಕೆ ಅಣಿಗೊಳಿಸಬೇಕಾಗಿದೆ, ಎಂದರಲ್ಲದೆ ವಿವಿ ಅಧೀನದ ಪತ್ರಿಕೋದ್ಯಮ ವಿಭಾಗಗಳಿಗೆ ಅಗತ್ಯ ನೆರವು ನೀಡುವ ಭರವಸೆ ನೀಡಿದರು.  


ಮುಖ್ಯ ಅತಿಥಿಗಳ ನೆಲೆಯಲ್ಲಿ ಮಾತನಾಡಿದ ಉಜಿರೆಯ ಎಸ್.ಡಿ.ಎಂ ಕಾಲೇಜಿನ (ಸ್ವಾಯತ್ತ) ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರೊ. ಭಾಸ್ಕರ ಹೆಗ್ಡೆ, ಕರಾವಳಿ ಜಿಲ್ಲೆಗಳ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಬೇಡಿಕೆಯಿದೆ. ಇದನ್ನು ಉಳಿಸಿಕೊಳ್ಳಬೇಕಾಗಿದೆ. ನೂತನ ಪಠ್ಯಕ್ರಮ ಜಾರಿಗೆ ತರಲು ಉಪನ್ಯಾಸಕರು ತಮ್ಮ ಜ್ಞಾನವನ್ನು ಹಂಚಿಕೊಳ್ಳುವುದು ಮುಖ್ಯವಾಗುತ್ತದೆ, ಎಂದರು. ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಪ್ರಾಂಶುಪಾಲೆ ಡಾ. ಅನಸೂಯ ರೈ ಅವರು ಮಾತನಾಡಿ, ಹೊಸ ತಲೆಮಾರಿನ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಕಲಿಸಲು ಉಪನ್ಯಾಸಕರು ಹೊಸದನ್ನು ಸ್ವೀಕರಿಸುವ ಪ್ರವೃತ್ತಿ ರೂಢಿಸಿಕೊಳ್ಳಬೇಕಿದೆ, ಎಂದರು. 


ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಡಾ. ಶಾನಿ ಕೆ ಆರ್ ಅತಿಥಿಗಳನ್ನು ಸ್ವಾಗತಿಸಿ ಕಾರ್ಯಾಗಾರದ ಅಗತ್ಯತೆಯ ಬಗ್ಗೆ ಬೆಳಕು ಚೆಲ್ಲಿದರು. ವಿವಿಧ ಕಾಲೇಜುಗಳ ಪತ್ರಿಕೋದ್ಯಮ ಉಪನ್ಯಾಸಕರು, ವಿವಿಧ ವಿಭಾಗಗಳ ಮುಖ್ಯಸ್ಥರು, ಸ್ನಾತಕೋತ್ತರ ವಿಭಾಗಗಳ ಸಂಯೋಜಕರು ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಎಸ್ ಡಿ ಎಂ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ಸಹಾಯಕ ಪ್ರಾಧ್ಯಾಪಕ ಸುನಿಲ್ ಹೆಗ್ಡೆ ಹಾಗೂ ಪತ್ರಿಕೋದ್ಯಮ ಶಿಕ್ಷಕ, ಸಬ್ಸ್ಯಾಂಡ್ ಸ್ಕ್ರೈಬ್ಸ್, ಮೀಡಿಯಾ ವೆಂಚರ್ಸ್‌ನ  ವ್ಯವಸ್ಥಾಪಕ ನಿರ್ದೇಶಕ ಹರ್ಷ ರಾಜ್ ಗಟ್ಟಿ ಸಂಪನ್ಮೂಲ ವ್ಯಕ್ತಿಗಳಾಗಿದ್ದರು. 


ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಪದವಿ ವಿಭಾಗದ ಅಧ್ಯಯನ ಮಂಡಳಿಯ ಮುಖ್ಯಸ್ಥೆ ಪ್ರೊ. ಕಿಶೋರಿ ನಾಯಕ್ ಕೆ,  ಪತ್ರಿಕೋದ್ಯಮ ಶಿಕ್ಷಕನಾಗಿ ಎಲ್ಲವನ್ನೂ ಕಲಿಯಲೇಬೇಕು ಎಂದರಲ್ಲದೆ, ಮುಂದಿನ ಸೆಮಿಸ್ಟರ್‌ಗಳ ಪಠ್ಯಕ್ರಮ ಜಾರಿಗೆ ಈಗಲೇ ತಯಾರಿ ಆರಂಭಿಸಬೇಕಾಗಿದೆ, ಎಂದರು.

ಉಪಯುಕ್ತ ನ್ಯೂಸ್ ಫೇಸ್‌ಬುಕ್ ಪುಟ ಲೈಕ್ ಮಾಡಿ.  

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


hit counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top