||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಬೋಳಾರದಲ್ಲಿ ಇಂದು ವರ್ಷಾವಧಿ ಮಾರಿಪೂಜೆ; ಕ್ಷೇತ್ರದ ವಿಶೇಷತೆ, ಐತಿಹ್ಯಗಳು

ಬೋಳಾರದಲ್ಲಿ ಇಂದು ವರ್ಷಾವಧಿ ಮಾರಿಪೂಜೆ; ಕ್ಷೇತ್ರದ ವಿಶೇಷತೆ, ಐತಿಹ್ಯಗಳು
-ಕದ್ರಿ ನವನೀತ ಶೆಟ್ಟಿ


`ಮಾರಿಯಮ್ಮ’ ಎನ್ನುವ ಶಕ್ತಿದೇವತೆ ಮೂಲದಲ್ಲಿ ಪುರಾಣದ ಶ್ರೀದೇವಿ ದುರ್ಗೆ ಅಲ್ಲ. ಆದರೆ ಆಕೆ ತನ್ನ ಜೀವಿತಾವಧಿಯಲ್ಲಿ ಕಷ್ಟವನ್ನು ಅನುಭವಿಸಿ, ತ್ಯಾಗ, ಬಲಿದಾನ, ಪರಾಕ್ರಮ, ಕರುಣೆ, ಭಕ್ತಿ, ದಾನ ಗುಣಗಳಿಂದ ಮರಣಾನಂತರ ದೈವತ್ವವನ್ನು ಸಿದ್ಧಿಸಿಕೊಳ್ಳುವ ಅಥವಾ ಅವಾಹಿಸಿಕೊಳ್ಳುವ ಆರಾಧನಾ ಸ್ವರೂಪವೇ ಜನಪದರ ಮಾರಿಯಮ್ಮ.


ಈ ಮಾರಿಯಮ್ಮನೂ ದುರ್ಗೆಯಂತೆ ತನ್ನ ವೈರಿನಾಶ ಮಾಡಿದ್ದಾಳೆ ಎನ್ನುವ ಘಟನಾವಳಿಗಳ ಮೆಲುಕು ಹಾಕುವ ಕಾರ್ಯಕ್ರಮವೇ ಮಾರಿಜಾತ್ರೆಯ ವಿವಿಧ ಆಚರಣೆಗಳು.


ಮಾರಿಯಮ್ಮನಿಗೆ ತಾನು ಹಡೆದ ಮಕ್ಕಳಿದ್ದರೂ ಆ ಮಕ್ಕಳನ್ನು ಆಕೆಯೇ ಕೊಲ್ಲುತ್ತಾಳೆ! ಆ ಮಕ್ಕಳೂ ಸತ್ತ ಮೇಲೂ ದೈವತ್ವಕ್ಕೆ ಏರದೆ `ಕೋರ-ಕೋಟ್ಲೆ’ ಎಂಬ ಮಾರಕ ರೋಗಗಳಾಗಿರುತ್ತಾರೆ. ಆ ರೋಗನಿವಾರಕ ಶಕ್ತಿ ಇರುವಾಕೆ ಮಾರಿಯಮ್ಮ. ಮಾರಿಯಮ್ಮ ದೇವತೆ ಆದ ಮೇಲೆ ಭಕ್ತರನ್ನೇ ತನ್ನ ಮಕ್ಕಳಂತೆ ತಿಳಿದು ಭಕ್ತರೆಲ್ಲರಿಗೂ `ಅಮ್ಮ’ನಾಗಿ ಇರುವ ಇಷ್ಟಾರ್ಥ ಸಿದ್ಧಿ ಪ್ರಾಪ್ತಿಸಿ ಕೊಡಬಲ್ಲವಳಾಗಿರುತ್ತಾಳೆ.


ಗ್ರಾಮದೇವತೆ, ಮಾತೃದೇವತೆ ಮಾರಿಯಮ್ಮನ ಆರಾಧನೆ ಹೊರಪ್ರದೇಶದಿಂದ ತುಳುನಾಡಿಗೆ ಬಂದ ಸಂಸ್ಕøತಿಯಾಗಿದೆ. ಆಕೆ ಹೊರ ಜಿಲ್ಲೆಗಳಿಂದ ಬಂದ ದೇವಿಯಾದರೂ ತುಳುವರ ದೈವಗಳ, ದೇವ ದೇವತೆಗಳ ಜೊತೆಯಲ್ಲಿ ಆಕೆಯೂ ಯೋಗ್ಯ ಸ್ಥಾನವನ್ನು ಪಡೆದು ಪೂಜಾರ್ಹಳಾಗಿ ಅನೇಕ ಜಾತಿಗಳ ಪ್ರಧಾನ ಆರಾಧಕ ಶಕ್ತಿಯಾಗಿ ಮೆರೆಯುತ್ತಿದ್ದಾಳೆ. 


ಮಾರಿಯಮ್ಮನ ಕತೆಗಳು:

ಮಾರಮ್ಮ, ಮಾರಿಕಾಂಬೆ, ಎಲ್ಲಮ್ಮ, ರೇಣುಕಾಂಬೆ, ದುಗ್ಗಮ್ಮ, ಕರಿಯಮ್ಮ, ಮಾಂಕಾಳಮ್ಮ... ಮೊದಲಾದ ನೂರಾರು ಹೆಸರುಗಳಿಂದ ಆರಾಧಿಸಲ್ಪಡುವ ಶಕ್ತಿದೇವತೆ `ಮಾರಿ’ಯ ಬಗ್ಗೆ ಪೌರಾಣಿಕ, ಜಾನಪದ, ಚಾರಿತ್ರಿಕೆ ಕತೆಗಳು ಹಲವು ಇವೆ. 'ಉಚ್ಛ ಕುಲದ ಹೆಣ್ಣು ಹೀನ ಕುಲದವನನ್ನು ಅರಿಯದೆ ಮದುವೆಯಾಗಿ ಮಕ್ಕಳನ್ನು ಪಡೆಯುತ್ತಾಳೆ. ಮುಂದೆ ಗಂಡನ ಕುಲದ ಹುಟ್ಟು ತಿಳಿದಾಗ ಕೋಪಗೊಂಡು ಗಂಡ, ಮಕ್ಕಳು, ಅತ್ತೆಯನ್ನು ಕೊಂದು ತಾನೂ ಆತ್ಮಾಹುತಿಗೈಯುತ್ತಾಳೆ. ದೈವಿಕ ಶಕ್ತಿಯಾಗುತ್ತಾಳೆ, ಶಕ್ತಿದೇವತೆಯಾಗುತ್ತಾಳೆ. ಕೋಣ, ಕುರಿ, ಆಡು, ಹಂದಿ, ಕೋಳಿ ಬಲಿ ತೆಗೆದುಕೊಳ್ಳುವ ಮೂಲಕ ಸೇಡು ತೀರಿಸಿಕೊಳ್ಳುತ್ತಾಳೆ. ಆಕೆಗೆ ವೈಧವ್ಯ ಪ್ರಾಪ್ತವಾಗುವುದು, ಮರುಮದುವೆಗೆ ಶೃಂಗಾರ ಮಾಡಿಕೊಳ್ಳುವುದು, ಮತ್ತೆ ವೈಧವ್ಯ ಸ್ಥಿರವಾಗುವುದು ಹೀಗೆ ಆಕೆಯ ಜೀವನಕಥನದ ಚಿತ್ರಣವನ್ನು ಮಾರಿಜಾತ್ರೆಯ ಸಂದರ್ಭದಲ್ಲಿ ಬೊಂಬೆ ನಿರ್ಮಿಸಿ ನಡೆಸುವ ಮಾರಿಪೂಜೆಯ ವಿಧಿ ವಿಧಾನಗಳಲ್ಲಿ ನೆನಪಿಸಿಕೊಳ್ಳಬಹುದು.


ದಂಡಿನ ಮಾರಮ್ಮ:

ರಾಜ ಮಹಾರಾಜರ ಕಾಲದಲ್ಲಿ ಯುದ್ಧ ಸಾಮಾನ್ಯವಾಗಿತ್ತು. ಯುದ್ಧದಲ್ಲಿ ಶತ್ರುದಮನ ಪ್ರಧಾನ ಅಂಶ. ರಣಕಣದಲ್ಲಿ ಶತ್ರುವಿನ ಪ್ರಾಣಹರಣ ಮಾಡುವುದು ಸ್ವಾಮಿಕಾರ್ಯ, ದೇವಕಾರ್ಯ ಎಂಬ ನಂಬಿಕೆ. ಶತ್ರುವನ್ನು ಬಲಿದೇವತೆಗೆ ಬಲಿ ನೀಡಿ ಸಂತೃಪ್ತಿಗೊಳಿಸಿದರೆ ವಿಜಯಪ್ರಾಪ್ತಿ ಎನ್ನುವ ಬಲವಾದ ನಂಬಿಕೆಯಿಂದ ಯುದ್ಧರಂಗದಲ್ಲಿ ಅಮಿತೋಲ್ಲಾಸದಿಂದ ಸೈನಿಕರು ವಿಜೃಂಭಿಸುತ್ತಿದ್ದರು.

ದೇವಿಯನ್ನು ಸ್ತುತಿಸಿ ಯುದ್ಧಕ್ಕೆ ಹೊರಟು ಶತ್ರು ಸಂಹಾರ ಮಾಡಿ ವಿಜಯ ಪ್ರಾಪ್ತಿಯ ನೆನಪಿಗೆ ಅಮ್ಮನೆಂದು ಗುಡಿ ಕಟ್ಟಿ ಆರಾಧಿಸುವ ಪರಂಪರೆಯೇ ದಂಡಿನ ಮಾರಮ್ಮ ಮಾರಿಯಮ್ಮ ದೇವಿಯಾದ ಕತೆ.


ಬೋಳಾರದ ಮಾರಿಯಮ್ಮ ಮತ್ತು ಮಂಗಳಾದೇವಿ

ಈ ಎರಡೂ ಚಾರಿತ್ರಿಕ ಕ್ಷೇತ್ರಗಳು ಬೋಳಾರದಲ್ಲಿದೆ. ಈ ದೇವಿಯರ ಬಗ್ಗೆ ಇರುವ ನಂಬಿಕೆಗಳು ಹೀಗಿವೆ.

1. ಮಂಗಳಾದೇವಿ ಅಕ್ಕ - ಮಾರಿಯಮ್ಮ ತಂಗಿ

2. ಮಾರಿಯಮ್ಮ ಅಕ್ಕ - ಮಂಗಳಾದೇವಿ ತಂಗಿ

3. ಮಂಗಳಾದೇವಿ ದೇವಸ್ಥಾನಕ್ಕೆ ಮೊದಲು ಹೋಗಬೇಕು. ನಂತರ ಮಾರಿಗುಡಿಗೆ ಹೋಗಬೇಕು.

4. ಮೊದಲು ಮಾರಿಗುಡಿಗೆ ಹೋದರೆ ನಂತರ ಮಂಗಳಾದೇವಿಗೆ ಹೋಗಕೂಡದು.

5. ಮಂಗಳಾದೇವಿಯ ಪ್ರಸಾದ ಹಿಡಿದುಕೊಂಡು ಮಾರಿಗುಡಿಗೆ ಹೋಗಬಹುದು.

6. ಮಾರಿಗುಡಿಯ ಪ್ರಸಾದ ಹಿಡಿದುಕೊಂಡು ಮಂಗಳಾದೇವಿಗೆ ಬರಬಾರದು.

7. ನವರಾತ್ರಿ ಕಳೆದು ಏಕಾದಶಿಯಂದು ಶ್ರೀ ಮಂಗಳಾದೇವಿಯು ಅವಭೃತಕ್ಕೆ ಉಪ್ಪಿನಕೋಟೆಗೆ ಬಂದು ಹಿಂದೆ ಬರುವಾಗ ಮಾರಿಗುಡಿಯ ಬಳಿ ಇರುವ ಅಶ್ವತ್ಥ ಕಟ್ಟೆಯ ಬಳಿ ರಥದ ಚಕ್ರಗಳಿಗೆ ನೀರು ಹಾಕಿ ಹಣ್ಣುಕಾಯಿ ನೀಡಿ ಆರತಿ ಸೇವೆ ಮಾಡಲಾಗುವುದು. ಮಾರಿಗುಡಿಯ ಅರ್ಚಕರು ಹಾಗೂ ಮೊಕ್ತೇಸರರು ಈ ಸಂದರ್ಭದಲ್ಲಿ ಉಪಸ್ಥಿತರಿರಬೇಕು.


ಜನ್ನನ `ಯಶೋಧರ ಚರಿತೆ’ಯಲ್ಲಿ `ಮಾರಿ ಪೂಜೆ’

`ಕವಿಚಕ್ರವರ್ತಿ’ ಬಿರುದಾಂಕಿತ ಮಹಾಕವಿ ಜನ್ನನು ಕರ್ನಾಟಕದ ಹಳೆಗನ್ನಡ ಕವಿ (1140-1260). 1209ರಲ್ಲಿ ಆತ ರಚಿಸಿದ ‘ಯಶೋಧರ ಚರಿತೆ’ಯಲ್ಲಿ ಮಾರಿ ಆರಾಧನೆಯ ಸ್ವರೂಪ ಚಿತ್ರಣ ಇದೆ.

ಜನ್ನ ಕವಿಯು ವರ್ಣಿಸಿದ ಮಾರಿಯ ಜಾತ್ರೆಯ ವರ್ಣನೆಯಲ್ಲಿ ಈ ಕೆಳಗಿನ ಆಚರಣೆಗಳ ಬಗ್ಗೆ ಉಲ್ಲೇಖಿಸಲಾಗಿದೆ.

1. ಪ್ರಾಣಿಬಲಿ - ನರಬಲಿ

2. ಸಿಡಿ ಹರಕೆ

3. ಕೆಂಡ ಹಾಯುವಿಕೆ

4. ಮಾಂಸ ಕೊಚ್ಚುವಿಕೆ

5. ಕತ್ತಿಯಿಂದ ಚುಚ್ಚಿಕೊಳ್ಳುವಿಕೆ

6. ರುಂಡಗಳನ್ನು ಅಂಟಿಸಿದ ಅಲಂಕಾರ

ಇದು ಸುಮಾರು 800 ವರ್ಷಗಳ ಹಿಂದೆ ಬರೆದ ಕಾವ್ಯ. ಮಾರಿದೇವಿಯ ಆರಾಧನಾ ಸ್ವರೂಪದಲ್ಲಿ ಅಂದೇ ಬದಲಾವಣೆಗಳಾಗಿತ್ತು. ಮುಂದಿನ 800 ವರ್ಷ ಗಳಲ್ಲೂ ಹಂತ ಹಂತವಾಗಿ ಬದಲಾವಣೆಯನ್ನು ಕಾಣುತ್ತಲೆ ಮುಂದುವರಿಯುತ್ತಿದೆ.


ರಾಶಿಪೂಜೆ - ಮಾರಿಪೂಜೆ

ಬೋಳಾರ ಮಾರಿಗುಡಿಯಲ್ಲಿ `ದರ್ಶನ ಸೇವೆ’ ಪಾತ್ರಿಗಳಿಲ್ಲದೆ ನಿಲುಗಡೆಯಾಗಿ ಐದಾರು ದಶಕಗಳು ಸಂದಿವೆ. 2004ರ ಕ್ಷೇತ್ರ ನವೀಕರಣ ಬ್ರಹ್ಮಕಲಶೋತ್ಸವ ಸಂಪನ್ನಗೊಂಡ ನಂತರ ಉರ್ವ ಮಾರಿಗುಡಿಯ ಮಾದರಿಯಲ್ಲಿ ರಾಶಿಪೂಜೆ - ಮಾರಿಪೂಜೆಯನ್ನು ನಡೆಸಲಾಗುತ್ತದೆ. ಉರ್ವ ಕ್ಷೇತ್ರದ ತೆಲುಗು ಕುಂಬಾರ ಸಮುದಾಯದ ಅರ್ಚಕ ವೃಂದದವರು ಬೋಳಾರದ `ರಾಶಿಪೂಜೆ - ಮಾರಿಪೂಜೆ’ಯಲ್ಲಿ ಪ್ರಧಾನ ಪಾತ್ರ ನಿರ್ವಹಿಸುತ್ತಾರೆ.

`ರಾಶಿ ಪೂಜೆ’ ಎಂದರೆ `ನೈವೇದ್ಯದ ರಾಶಿ’ಗೆ ಮಾಡುವ ಪೂಜೆ.


ಕುಚ್ಚಲು ಅಕ್ಕಿಯ (4.5 ಮುಡಿ) ಅನ್ನ, ಬೆಳ್ತಿಗೆ ಅಕ್ಕಯ (ಅರ್ಧ ಮುಡಿ) ದೋಸೆ, 5 ಗೋಣಿ ಹರಳು, 8 ತೆಂಗಿನಕಾಯಿ, 8 ಪನ್ನೆ ಬಾಳೆಹಣ್ಣು, ಅಡಿಕೆ, ವೀಳ್ಯದೆಲೆ, ಲಿಂಬೆಹುಳಿ, ಜೇನುತುಪ್ಪ ಮೊದಲಾದ ವಸ್ತುಗಳನ್ನು ನೈವೇದ್ಯದ ರಾಶಿಯಲ್ಲಿರಿಸಲಾಗುತ್ತದೆ.


ರಾಶಿ ಮೆರವಣಿಗೆ

ನೈವೇದ್ಯವನ್ನು ರಾಶಿ ಪೂಜೆಯ ಪಾಕಶಾಲೆಯಿಂದ ತರುವ ಸಾಂಪ್ರದಾಯಿಕ ಮೆರವಣಿಗೆಯಲ್ಲಿ ರಾಶಿಬಲಿ, ನೈವೇದ್ಯ ಬಲಿ ಎನ್ನುತ್ತಾರೆ. ಉರ್ವ ಮಾರಿಗುಡಿಯಲ್ಲಿ ಈ ವಿಧಿಗಳನ್ನು ನಡೆಸುವವರು ತೆಲುಗು ಕುಂಬಾರ ಮಾರಿಯಮ್ಮ ಅರ್ಚಕ/ಪಾತ್ರಿ ಕುಟುಂಬದ ಹಿರಿಯ ಸ್ತ್ರೀಯರು. ಐವರು ಮುತ್ತೈದೆಯರು ಸ್ನಾನ ಮಾಡಿ, ಬಿಳಿ ಸೀರೆ ಉಟ್ಟು, ಹೂ ಮುಡಿದು, ಮಡಿಲು ತುಂಬಿಸುವುದು. 4 ಸಣ್ಣ ಬುಟ್ಟಿಗಳಲ್ಲಿ ಅನ್ನ ತುಂಬಿ ಅವರ ತಲೆಗೆ ಇರಿಸಲಾಗುತ್ತದೆ. 5ನೇ ಬುಟ್ಟಿಯಲ್ಲಿ ಕುಚ್ಚಲು ಅಕ್ಕಿಯಲ್ಲಿ ಮಾಡಿದ `ಪಲ್ಲೆ’ ಇಟ್ಟು ನಂತರ ಐದೂ ಬುಟ್ಟಿಗಳನ್ನು ಮುಚ್ಚುವಂತೆ ಮೇಲಿನಿಂದ ಬಿಳಿ ಬಟ್ಟೆಯನ್ನು ಹಾಕುವುದು. ಆಗ ಅವರೆಲ್ಲರೂ ಸಾಲಾಗಿ ಒಬ್ಬರ ಹಿಂದೆ ಒಬ್ಬರು ನಿಂತಿರುತ್ತಾರೆ. ನಂತರ ಮಡಿವಾಳ ಹಾಸಿದ ಬಟ್ಟೆಯಲ್ಲಿ ನಡೆದುಕೊಂಡು (ನಡೆಮುಡಿ) ಬರುವುದು. ಪೂರ್ವ ಬದಿಯ ಬಾಗಿಲಿನ ಬಳಿ ನಿಲ್ಲುವಾಗ ಮದ್ದು ಸುಡುವಿಕೆ. ನಂತರ ಬಟ್ಟೆಯ ಮೇಲೆ ನಡೆಯುತ್ತಾ ಅಂಗಣದಲ್ಲಿ ಮೂರು ಸುತ್ತು ಪ್ರದಕ್ಷಿಣೆ ಬಂದು ರಾಶಿಕಟ್ಟೆಯ ಬಳಿ ಬರುವುದು.


ರಾಶಿಕಟ್ಟೆಯಲ್ಲಿ ಎರಡು ವಿಭಾಗಗಳು ಇರುತ್ತವೆ. ರಾಶಿಕಲ್ಲಿಗೆ ತುದಿ ಬಾಳೆ ಎಲೆಗಳನ್ನು ಹರಡಿ ಮಹಿಳೆಯರು ಹೊತ್ತು ತಂದ ಅನ್ನವನ್ನು ಅದರ ಒಂದು ಭಾಗಕ್ಕೆ ಹಾಕುವುದು. ಐದನೆಯ ಪಲ್ಲೆ ಮತ್ತು ದೀಪ ಇರುವ ಬುಟ್ಟಿಯನ್ನು ಮಂಡಲ ಹಾಕಿದ ಸ್ಥಳದಲ್ಲಿಡುವುದು. ಒಂದು ಪಲ್ಲೆ ಇಟ್ಟು, ಅದರಲ್ಲೇ ಒಂದು ದೀಪವಿಟ್ಟು ಎಣ್ಣೆ ಹಾಕಿ ಉರಿಸುವುದು. ನಾಲ್ಕು ದಿಕ್ಕುಗಳಲ್ಲಿ ಕಲಶ ತೂರಿ ಇಟ್ಟು ಅದರೊಳಗೆ ಲಿಂಬೆಹಣ್ಣು ಕೊಯ್ದು ಇರಿಸುವುದು.


ಪ್ರತಿಯೊಂದು ಕಲಶಕ್ಕೆ ಐದೈದು ವೀಳ್ಯದೆಲೆ ಇಟ್ಟು ಅದರ ಮೇಲೆ ಒಂದೊಂದು ಚೆಂಡು ಹೂವನ್ನು ತೂರಿಗಳ ಮೇಲಿಡುವುದು. ನಾಲ್ಕು ಕಲಶ ತೂರಿಗೂ ಕೆಳಗಡೆ ಒಂದೊಂದರಂತೆ ಇಡುವುದು. ಬಳಿಕ ನಾಲ್ಕು ಕಲಶ ತೂರಿಗಳ ಮೇಲೆ ಪ್ರತ್ಯೇಕ ಪ್ರತ್ಯೇಕವಾಗಿ ಅಡಿಕೆ ಮತ್ತು ವೀಳ್ಯದೆಲೆ ಇಡುವುದು. ನಾಲ್ಕು ಕಲಶಗಳಿಗೂ ನಾಲ್ಕು ಹಣ್ಣುಕಾಯಿ ಮಾಡಿಡುವುದು. 4 ಬುಟ್ಟಿಗಳ ನೈವೇದ್ಯ ಸಮರ್ಪಣೆಯ ಬಳಿಕ ಒಟ್ಟು 4.5 ಮುಡಿ ಕುಚ್ಚಲಕ್ಕಿಯ ಅನ್ನ ನೈವೇದ್ಯವನ್ನು ದೇವಿಪೂಜೆಯನ್ನು ನಿರ್ವಹಿಸುತ್ತಿರುವ ಅರ್ಚಕರ ಸಂಬಂಧಿಗಳು ಪಾಕಶಾಲೆಯಿಂದ ತಂದು ರಾಶಿಕಲ್ಲಿಗೆ ಬಡಿಸುವರು. ರಾಶಿ ಕಟ್ಟೆಯ ಒಂದು ಭಾಗದಲ್ಲಿ ಅನ್ನದ ನೈವೇದ್ಯ ಬಡಿಸಿದರೆ ಇನ್ನೊಂದು ಭಾಗಕ್ಕೆ 5 ಗೋಣಿಚೀಲ ಹರಳು (ಪೊರಿ) ರಾಶಿ ಬಡಿಸುವರು. ಅರ್ಧ ಮುಡಿ ಅಕ್ಕಿಯಿಂದ ತಯಾರಿಸಿದ ದೋಸೆಯನ್ನು ಎರಡೂ ರಾಶಿಗಳ ಮೇಲೆ ಇರಿಸುವರು. ಕರಿಬಳೆ, ಹಿಂಗಾರ, ಮಲ್ಲಿಗೆ, ಅಬ್ಬಲಿಗೆ ಇತ್ಯಾದಿ ಹೂವುಗಳಿಂದ ರಾಶಿಕಟ್ಟೆಯನ್ನು ಅಲಂಕರಿಸುವರು. 


ರಾಶಿಪೂಜೆ

ಎಲ್ಲವನ್ನೂ ಬಡಿಸಿ, ಶೃಂಗರಿಸಿ ದೂಪ ದೀಪಾದಿಗಳಿಂದ ಪ್ರಾರ್ಥನೆ, ಪೂಜೆ ನೆರವೇರುವುದು. (ಊರಿಗೆ ಬರುವ ಮಾರಿ ರೋಗಗಳಿದ್ದರೆ ಅವುಗಳನ್ನು ಪರಿಹರಿಸು, ಸಮೃದ್ಧಿಯನ್ನು ಕರುಣಿಸು, ರಾಶಿ ನೈವೇದ್ಯವನ್ನು ಸಂತೋಷದಿಂದ ಸ್ವೀಕರಿಸಬೇಕೆಂದು ಭಕ್ತರ ಪರವಾಗಿ ಪ್ರಾರ್ಥನೆಯನ್ನು ಅರ್ಚಕರು, ಆಡಳಿತ ಮೊಕ್ತೇಸರರು ಮಾಡುತ್ತಾರೆ.)


ಮಾರಿ ಓಡಿಸುವುದು

ಮಾರಿದೇವತೆಯ ಗಣಗಳನ್ನು ಸಂತೃಪ್ತಿಪಡಿಸುವ ಜಾನಪದ ಆರಾಧನಾ ಪದ್ಧತಿ `ಮಾರಿ ಉಚ್ಚಿಷ್ಠ’ ಅಥವಾ ಮಾರಿ ಓಡಿಸುವ ಪದ್ಧತಿ. ರಾಶಿಪೂಜೆಯ ನಂತರ ನಡುರಾತ್ರಿ ಕಳೆದ ಮೇಲೆ, ಜನಸಂಚಾರ ಇಲ್ಲದೆ ಇರುವ ಸಮಯದಲ್ಲಿ ಅಂದರೆ ರಾತ್ರಿ 3-30ರಿಂದ 3.50ರ ಅವಧಿಯಲ್ಲಿ ನಡೆಯುತ್ತದೆ.


ಮಾರಿ ಓಡಿಸುವಾಗ ಜನರು ಎದುರು ಬದಿಯಿಂದ ಕಾಣಸಿಗಬಾರದು. ಎದುರಾದವರಿಗೂ ಆಪತ್ತು ಬರುತ್ತದೆ. ಈ ಮಾರಿ ಉಚ್ಚಿಷ್ಠದಿಂದಾಗಿ ಮಾರಿದೇವಿಯ ಗಣಗಳು ಸಂತೃಪ್ತಿ ಹೊಂದಿ ಊರಿನಲ್ಲಿ ಹರಡಿರುವ ರೋಗ, ರುಜಿನಗಳು ನಿವಾರಣೆಯಾಗುತ್ತದೆ ಎಂಬ ನಂಬಿಕೆ ಇದೆ.


ರಾಶಿಪೂಜೆಯ ಪ್ರಸಾದ

ಭಕ್ತರು ಈ ರಾಶಿಯ ನೈವೇದ್ಯ ಪ್ರಸಾದ ಸ್ವೀಕರಿಸಿ ಸಂಗ್ರಹಿಸಿ ಇಡುವರು (ಅನ್ನ ಮತ್ತು ದೋಸೆ).

ಸಾಮಾನ್ಯ ಕಾಯಿಲೆಗಳು ಬಂದಾಗಲೂ, ಕೋರ, ಕೋಟಲೆ, ಮೈಲಿಗೆ ರೋಗ, ಸಾಮಾನ್ಯ ಕಾಯಿಲೆಗಳು ಬಂದಾಗಲೂ (ಉದಾ: ಜ್ವರ ಇತ್ಯಾದಿ) ಈ ನೈವೇದ್ಯವನ್ನು ಬೇಯಿಸಿ ಗಂಜಿ ಮಾಡಿ ಕುಡಿದರೆ ಅಂಟುಜಾಡ್ಯಗಳು ಶೀಘ್ರ ಉಪಶಮನವಾಗುವುದೆಂಬ ನಂಬಿಕೆ ಭಕ್ತರಿಗಿದೆ. ಈ ಪ್ರಸಾದವನ್ನು ಶುದ್ಧಾಚಾರದಲ್ಲಿ ಸೇವಿಸಬೇಕಾಗುತ್ತದೆ. ಅದನ್ನು ಶುದ್ಧವಾದ ಸ್ಥಳದಲ್ಲಿ ಜಾಗ್ರತೆಯಿಂದ ಇರಿಸುತ್ತಾರೆ. ಇದು ದೇವಿಯ ಮಹಾಪ್ರಸಾದ ಎಂದು ಮುಂದಿನ ವಾರ್ಷಿಕ ಮಹಾಪೂಜೆಯ ತನಕ ಜಾಗ್ರತೆಯಿಂದಿರಿಸಿಕೊಳ್ಳುತ್ತಾರೆ. 


ಬೋಳಾರ ಹಳೇಕೋಟೆ ಮಾರಿಯಮ್ಮ

ನೇತ್ರಾವತಿ ಹಾಗೂ ಫಲ್ಗುಣಿ ನದಿಗಳು ಒಂದಾಗಿ ಮುಂದೆ ಸಮುದ್ರ ಸೇರುವ ಸ್ಥಳಕ್ಕೆ `ಅಳುವೆ’ ಎಂದು ಹೆಸರು. ಚಂದ್ರಶೇಖರ ಬಂಗರಾಜನು ಮಂಗಳೂರು ಅಳುವೆಯ ಎದುರುಗಡೆಯಲ್ಲಿ ಒಂದು ಬಲವಾದ ಕೋಟೆಯನ್ನು ಕಟ್ಟಿಸಬೇಕೆಂದು ಆಲೋಚನೆ ಮಾಡಿ ಮಂಗಳಾದೇವಿ ದೇವಸ್ಥಾನದ ಹತ್ತಿರ ಕ್ರಿ.ಶ. 1222ರಲ್ಲಿ ಕೋಟೆಯನ್ನು ಕಟ್ಟಿಸಿ ಮಂದಿ ಮಕ್ಕಳನ್ನು (ಸೈನ್ಯವನ್ನು) ಇಟ್ಟು ಅದರ ಮಧ್ಯದಲ್ಲಿ ಮಂಗಳಾದೇವಿ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಿಸಿ ಉಂಬಳಿ ಬಿಟ್ಟನು. ಆ ಅಳುವೆಯು ಈಗ ಇರುವ ಸ್ಥಳದಲ್ಲಿಯೇ ಇತ್ತೆಂದು ಹೇಳಬಹುದು.


ಬೋಳಾರ ಹೊಸಕೋಟೆ - ಶಿವರಾಜೇಂದ್ರ ಗಿರಿ

ಇಕ್ಕೇರಿ ಅರಸ ಇಮ್ಮಡಿ ಬಸವಪ್ಪನಾಯಕ (ಕ್ರಿ.ಶ. 1740-1755). ಇವನು ವೀರಭದ್ರ ನಾಯಕನ ಮಗನು. ಇವನು ಮಂಗಳೂರಿನ ಹಳೇಕೋಟೆಯನ್ನು ಮುರಿದು ಶಿವರಾಜೇಂದ್ರಗಿರಿ ಎಂಬ ಹೊಸ ಕೋಟೆಯನ್ನು ಕಟ್ಟಿಸಿದನು (1743). ಮಲ್ಪೆಯ ಹರಿಯಾಬಾದಿನಗಡ ಕೋಟೆ, ಕಾಪುವಿನ ಮನೋಹರಗಡ ಕೋಟೆ, ಕುಂದಾಪುರ ಕೋಟೆಯನ್ನೂ ಕಟ್ಟಿಸಿದ್ದನು. ಮಲ್ಲಾರು ಹಾಗೂ ತೋನ್ಸೆಯಲ್ಲೂ ಒಂದೊಂದು ಕೋಟೆ ಕಟ್ಟಿಸಿದನು. ಇದೇ ಸಂದರ್ಭದಲ್ಲಿ ಮಂಗಳೂರಿನ ಹಳೆಕೋಟೆಯನ್ನು ಮುರಿದು ‘ಶಿವರಾಜೇಂದ್ರ ಗಿರಿ’ ಎಂಬ ಹೊಸ ಕೋಟೆಯನ್ನೂ ಕಟ್ಟಿಸಿದನು.


ಕೆಳದಿ (ಇಕ್ಕೇರಿ) ರಾಜ ವೀರಭದ್ರ ನಾಯಕನ ಮಗನಾದ 2ನೇ ಬಸವಪ್ಪನು (ಕ್ರಿ.ಶ. 1739-1754) ಮಲ್ಪೆ, ಕಾಪು, ಕಲ್ಯಾಣಪುರ ಹಾಗೂ ಮಂಗಳೂರಿನಲ್ಲಿ ಕೋಟೆಗಳನ್ನು ಕಟ್ಟಿಸಿದ ಎಂದು ‘ಕೆಳದಿ ನೃಪವಿಜಯ’ ಕೃತಿಯಲ್ಲಿದೆ.


ಇಂದ್ರ ವಿಭವನಿಭ ವಿಭವ ನ

ರೇಂದ್ರ ತಾಂ ಮಂಗಲೂರ ತಾಣದೆ ಶಿವರಾ |

ಜೇಂದ್ರಗಿರಿಯೆಂಬ ಗಡಮಂ

ಸಾಂದ್ರಯಶಂ ರಚನೆಗೆಯ್ಸಿದಂ ಪೊಸ ಬಗೆಯಂ ||

ಎಂಟುನೂರು ವರ್ಷಗಳ ಹಿಂದೆಯೇ `ಮಾರಿಗುಡಿ’ ಬೋಳಾರದ ಹಳೇಕೋಟೆ ಪ್ರದೇಶದಲ್ಲಿ ಇತ್ತು ಎನ್ನುವುದನ್ನು ಚಾರಿತ್ರಿಕ ದಾಖಲೆಗಳಿಂದ ತಿಳಿದುಕೊಳ್ಳಬಹುದು.


ಪಾಡ್ದನ ಸಾಹಿತ್ಯದಲ್ಲಿ ಬೋಳಾರದ ಮಾರಿಯಮ್ಮ

- ಅತ್ತಾವರದ ವೈದ್ಯನಾಥನ ಪಾರ್ದನ

- ಉಳ್ಳಾಲ ಉಳಿಯ ಉಳ್ಳಾಲ್ತಿ ಧರ್ಮರಸರ ಪಾಡ್ದನ


ಭೈರರ ಮಾರಿಯಮ್ಮ ನಂಬಿಕೆಗಳು

1. ಭೈರ ಜನಾಂಗದವರ ನಂಬಿಕೆಯಂತೆ ಬೋಳಾರ ಮಾರಿಯಮ್ಮ ಅಕ್ಕ. ಕಟೀಲು, ಕೊಲ್ಲೂರು, ಮೈಸೂರು, ಕೊಳ್ಳೇಗಾಲ ಮೊದಲಾದ ಇತರ ಹನ್ನೊಂದು ಕ್ಷೇತ್ರಗಳಲ್ಲಿರುವ ದೇವಿಯರು ಮಾರಿಯಮ್ಮನ ತಂಗಿಯಂದಿರು.

2. ಭೈರರ ಕೇರಿಗಳಿರುವ ಊರಿನಲ್ಲಿ ಮಾರಿಜಾತ್ರೆ (ಪೂಜೆ) ಮಾಡಿದರೆ ಅಕ್ಕ ಬೋಳಾರ ಮಾರಿಯಮ್ಮ ಸಂತುಷ್ಟಿಗೊಳ್ಳುವಳು.

3. ಬೋಳಾರ ಮಾರಿಯಮ್ಮನಿಗೂ ಉಳಿದ 11 ಕ್ಷೇತ್ರಗಳಲ್ಲಿ ನೆಲೆಸಿದ ದೇವಿಯರಿಗೂ 101 ಗಣಗಳೂ 101 ದೂತರೂ ಇದ್ದಾರೆ.

4. ಮಾರಿಗೆ ರಕ್ತ ಬಲಿ ಕೊಡದಿದ್ದರೆ ಸಾಂಕ್ರಾಮಿಕ ರೋಗ ಬರುತ್ತದೆ.


ಬೋಳಾರ ಮಾರಿಯಮ್ಮನ ಪರಿವಾರ

• ಮಾತಂಗಿ, ಮೈರಾಣ, ದೂತ

• ಭಂಡಾರಮನೆಯಲ್ಲಿ ನಾಗಸಾನಿಧ್ಯ, ಎಲ್ಲಮ್ಮ ದೇವಿ, ಅಣ್ಣಪ್ಪ ಪಂಜುರ್ಲಿ, ಗುಳಿಗ

• ಕ್ಷೇತ್ರಪಾಲ ರಾಜಗುಳಿಗ


ಜಳಕದ ಕೆದು – ಗುಜ್ಜರಕೆರೆ

ನವರಾತ್ರಿ ಸಂದರ್ಭದಲ್ಲಿ ಮಾರಿಯಮ್ಮನ ರಥೋತ್ಸವ ಜರಗಿ ಅವಭೃತ ಗುಜ್ಜರಕೆರೆಯಲ್ಲಿ ನಡೆಯುತ್ತಿದ್ದು ಕಾರಣಾಂತರಗಳಿಂದ ನಿಲುಗಡೆಯಾಗಿ ನೇತ್ರಾವತಿ ನದಿಯಲ್ಲಿ ಅವಭೃತ ನಡೆಯುತ್ತಿದೆ. ಇದೀಗ ಗುಜ್ಜರಕೆರೆ ನವೀಕರಣಗೊಂಡಿದೆ. ಶೀಘ್ರದಲ್ಲೇ ಗುಜ್ಜರಕೆರೆಯಲ್ಲೇ ಜಳಕದ ಪ್ರಕ್ರಿಯೆಯನ್ನು ನಡೆಸಲು ಸಂಕಲ್ಪಿಸಲಾಗಿದೆ.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


hit counter

0 Comments

Post a Comment

Post a Comment (0)

Previous Post Next Post