(ಸಂಗ್ರಹ ಚಿತ್ರ)
ಕೊಪ್ಪ: ಪೊಳಲಿ ಶಾಸ್ತ್ರೀ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಕಲಾವಿದ ದಿವಂಗತ ಎಂ.ಎಲ್. ರಾಮಚಂದ್ರರಾವ್ ಅವರ ಸವಿ ನೆನಪಿನಲ್ಲಿ ಮನೆಯಂಗಳದಲ್ಲಿ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ಕುಮರಿಗದ್ದೆ (ಸಿಗದಾಳು) ಜಿ.ಆರ್ .ಅಶೋಕ ಅವರ ಮನೆಯಂಗಳದಲ್ಲಿ ಏಪ್ರಿಲ್ 30ಕ್ಕೆ ಶನಿವಾರ ಅಪರಾಹ್ನ 3:00 ಗಂಟೆಗೆ ನಡೆಯಲಿದೆ.
ಕೃಷಿಕರೂ, ಕಲಾ ಪೋಷಕರೂ ಆದ ವಿಜಯರಂಗ ಕೋಟೆತೋಟ ಅವರು ದೀಪ ಪ್ರಜ್ವಲನದೊಂದಿಗೆ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಅಂದಿನ ಯಕ್ಷಗಾನ ತಾಳಮದ್ದಳೆಯ ಪ್ರಸಂಗ: ಸತ್ಯವಾನ ಸಾವಿತ್ರಿ. ಹಿಮ್ಮೆಳದಲ್ಲಿ ಭಾಗವತರಾಗಿ ಪ್ರಸನ್ನ ಭಟ್ ಬಾಳಕಲ್, ಮದ್ದಳೆವಾದಕರಾಗಿ ಸುನಿಲ್ ಭಂಡಾರಿ ಕಡತೋಕ ಮತ್ತು ಚೆಂಡೆಯಲ್ಲಿ ಎಚ್.ಎಸ್ ಗಣೇಶಮೂರ್ತಿ ಹುಲುಗಾರು ಪಾಲ್ಗೊಳ್ಳಲಿದ್ದಾರೆ.
ಮುಮ್ಮೇಳದಲ್ಲಿ ವಿದ್ವಾನ್ ಗಣಪತಿ ಭಟ್ ಸುಂಕದಗುಂಡಿ, ವಾಸುದೇವರಂಗಾ ಭಟ್ ಉಡುಪಿ, ಡಾ. ವಾದಿರಾಜ ಕಲ್ಲೂರಾಯ, ಕಿನ್ನಿಕಂಬಳ, ಸೀತಾರಾಮ ಚಂದು ಹೆಗಡೆ ಶಿರಸಿ, ಎಂಎಸ್ ಜನಾರ್ದನ ಮಂಡಗಾರು, ಎ.ಆರ್ ನಾಗೇಂದ್ರ ಅಡ್ಡಗದ್ದೆ, ಅರವಿಂದ ಸಿಗದಾಳ್ ಮೇಲುಕೊಪ್ಪ, ಅಶೋಕ, ಸಿಗದಾಳು, ಕು. ವಿದ್ಯಾಧರ, ಮೇಲುಕೊಪ್ಪ, ಕು. ಅಭಿರಾಮ್ ಸಿಗದಾಳು ಭಾಗವಹಿಸಿ ತಾಳಮದ್ದಳೆಗೆ ವಿಶೇಷ ರಂಗು ನೀಡಲಿದ್ದಾರೆ.
ದಿ. ಎಂ.ಎಲ್ ರಾಮಚಂದ್ರರಾವ್ ಅವರ ಪುತ್ರರಾದ ಅರವಿಂದ ಸಿಗದಾಳ್ ಮತ್ತು ಅಶೋಕ ಸಿಗದಾಳ್ ಅವರು ತಮ್ಮ ತಂದೆಯವರ ಸವಿ ನೆನಪಿನಲ್ಲಿ ಈ ಕಾರ್ಯಕ್ರಮ ಆಯೋಜಿಸಿದ್ದಾರೆ.
******
ಈ ಕಾರ್ಯಕ್ರಮದ ಆಮಂತ್ರಣವೇ ಒಂದು ಅತ್ಯಾಕರ್ಷಕ ಮಾತಿನ ಮಂಟಪ. ಅರವಿಂದ ಸಿಗದಾಳರು ಕಟ್ಟಿದ ಈ ಮಂಟಪದ ವೈಭವವನ್ನು ನೀವೂ ಒಮ್ಮೆ ನೋಡಿಬನ್ನಿ.
*****
ಅಪ್ಪಟ 24 ಕ್ಯಾರೇಟ್ ಗೋಲ್ಡ್ ಮಾತುಗಳು!!
ಇವತ್ತು ಇಡೀ ಪ್ರಪಂಚ ಮಾತಿನ ಮೇಲೆ ನಿಂತಿದೆ!!
ರಾಜಕಾರಣ, ಸಾಮಾಜಿಕ, ಧಾರ್ಮಿಕ, ಸಿನಿಮಾ ಮತ್ತು ಅದನ್ನೆಲ್ಲ ಮನೆ ಮನೆಗೆ ತಲುಪಿಸುವ ಮಾಧ್ಯಮ ಮತ್ತು ಅಂತರ್ಜಾಲಗಳಿಗೆ 'ಮಾತೆ' ಬಂಡವಾಳ!!
84,00,000 ಜೀವ ರಾಶಿಯಲ್ಲಿ ಮಾತು ಬರುವ ಏಕೈಕ ಪ್ರಾಣಿ ಮನುಷ್ಯ.
ಮಾತಿನಲ್ಲಿ ಧನಾತ್ಮಕವೂ ಇದೆ, ಋಣಾತ್ಮಕವೂ ಇದೆ. ಮಾತಿನಿಂದಲೆ ಯುದ್ದ, ಮಾತಿನಿಂದಲೆ ಶಾಂತಿ. ಮಾತಿಲ್ಲದೆ ಜಗತ್ತೇ ಇಲ್ಲ .
ಮೌನದೊಳೊ ಮಾತಿನೊಳೊ ಹಾಸ್ಯದೊಳೊ ಹಾಡಿನೊಳೊ ।
ಮಾನವಂ ಪ್ರಣಯದೊಳೊ ವೀರ ವಿಜಯದೊಳೋ ॥
ಎನೊ ಎಂತೋ ಸಮಾಧಾನಗಳನರಸುತಿಹ ।
ನಾನಂದವಾತ್ಮಗುಣ - ಮಂಕುತಿಮ್ಮ ॥
ಆತ್ಮ ಅನುಭವಿಸುವ ಭಾವಕ್ಕೆ ಮಾತು ಬೇಕೇ ಬೇಕು.
ಸಮಾಧಾನಕ್ಕೂ ಮಾತು ಮುಖ್ಯ.
ಮಾತಿನಿಂ ನಗೆ ನುಡಿಯು ಮಾತಿನಿಂ ಹಗೆ ಕೊಲೆಯು
ಮಾತಿನಿಂ ಸರ್ವ ಸಂಪದವು ಲೋಕಕ್ಕೆ
ಮಾತೇ ಮಾಣಿಕ್ಯವು ಸರ್ವಜ್ಞ!!
ಅಂತ ಒಂದೇ ಮಾತಿನಲ್ಲಿ ಸರ್ವಜ್ಞ ಹೇಳಿದ್ದು ಮಾತಿನ ಮಹತ್ವವನ್ನು ಹೇಳುತ್ತದೆ.
**
ಕ್ರೌಂಚ ಮಿಥುನ ಪಕ್ಷಿಗಳಿಗೆ ಬೇಡನೊಬ್ಬ ಬಾಣ ಬಿಟ್ಟಾಗ ವಾಲ್ಮೀಕಿ ಬಾಯಿಯಿಂದ ಬಂದ ಒಂದು ಮಾತು
ಮಾನಿಷಾದ ಪ್ರತಿಷ್ಠಾಂ ತ್ವಮಗಮಃ ಶಾಶ್ವತೀಸ್ಸಮಾ ಯತ್‌ಕ್ರೌಂಚಮಿಥುನಾದೇಕಮವಧೀ ಕಾಮಮೋಹಿತಮ್ ರಾಮಾಯಣದ ಕೃತಿಗೆ ನಾಂದಿಯಾಯಿತು.
ಮಾತು ಮುತ್ತು ಮತ್ತು ಮಾತು ಮೃತ್ಯು. (ಪಂಚ 'ಮ'!!). ಪಾಂಚಾಲಿಯ ವಸ್ತ್ರಾಪಹರಣ ಸಮಯದಲ್ಲಿ ತೊಡಿ ತಟ್ಟಿ ದುರ್ಯೋಧನ ಆಡಿದ ಮಾತು ಮತ್ತು ಅದಕ್ಕೆ ಪ್ರತಿಯಾಗಿ ಪಂಚ ಪತಿಯಂದಿರಲ್ಲಿ ಒಬ್ಬನಾದ ಭೀಮನಾಡಿದ ಮಾತು ದುರ್ಯೋಧನನ ಸಾವಿಗೆ ನಾಂದಿಯಾಯಿತು. ಹಾಗೆ ನೋಡಿದರೆ ಪಂಚ ಪತಿಗಳಿಗೆ ಪಾಂಚಾಲಿ ಪತ್ನಿಯಾಗಲೂ "ಹಂಚಿಕೊಳ್ಳಿ" ಎಂದ ಪಾಂಡವರ ತಾಯಿ ಕುಂತಿಯ ಮಾತೇ ಕಾರಣ!!
ಒಬ್ಬ ಅಗಸನಾಡಿದ ಮಾತು ಸೀತೆಯನ್ನು ಮತ್ತೆ ಕಾಡಿಗೆ ಕಳಿಸಿತು.
**
ಒಳ್ಳೆಯ ಮಾತನಾಡಿದರೆ ಎಲ್ಲರೂ ಅವರನ್ನು ಅನು'ಮೋದಿ'ಸುತ್ತಾರೆ, ರಾಜನಾಗಬಹುದು. ಮಾತಿನಲ್ಲಿ ನೈತಿಕ ವ್ಯಾಕರಣ ತಪ್ಪಿದರೆ ಮಂತ್ರಿಯೂ ರಾಜಿನಾಮೆ ಕೊಡಬೇಕಾಗಬಹುದು.
ಮಾತು ಬೆಳ್ಳಿ ಮೌನ ಬಂಗಾರ ಎನ್ನುವುದು ಗಾದೆ. ಅದರ ಪ್ರಕಾರ ₹ ಲೆಕ್ಕದಲ್ಲಿ ಇವತ್ತಿನ ಮಾರುಕಟ್ಟೆಗೆ ಹೋಲಿಸಿ ಹೇಳುವುದಾದರೆ ಮಾತಿನ ಬೆಲೆ ಕೆಜಿಗೆ ₹ 73,000 ಮತ್ತು ಮೌನದ ಬೆಲೆ ₹ 50,00,000!!!
ಆದರೆ ಈ ಮೌಲ್ಯ ಎಲ್ಲ ಕಡೆಗೆ ಒಂದೇ ರೀತಿ ಅನ್ವಯಿಸುವುದಿಲ್ಲ!!
ವಾಲ್ಮೀಕಿಯ ಮಾತಿಗೆ ಬಂಗಾರದ ರೇಟ್ ಬಂದಿತ್ತು. ಹಾಗಾಗಿಯೇ ರಾಮಾಯಣ ಎಂಬುದು ಎಂದೂ ಮೌಲ್ಯ ಕಳೆದುಕೊಳ್ಳದ, ಬೆಲೆ ಕಟ್ಟಲಾರದ ಚಿನ್ನದ ನಾಣ್ಯ. ಮಂಥರೆಯ ಮೂಲಕ ಕೈಕೇಯಿ ಆಡಿದ ಕಬ್ಬಿಣದ ಮಾತಿಗೆ ರಾಮ ಕೊಟ್ಟಿದ್ದು ಬಂಗಾರದ ಬೆಲೆಯನ್ನು!! ಯುದ್ದ ಮಾಡಲಾರೆ ಅಂತ ಗಾಂಡೀವ ಕೆಳಗಿಟ್ಟ ಪಾರ್ಥನಿಗೆ ಕೃಷ್ಣ ಉಪದೇಶ ಮಾಡಿದ್ದು ಬಂಗಾರದ ಮಾತುಗಳನ್ನು!! ಇವತ್ತಿಗೂ ಆ ಮಾತಿನ 'ಗೀತೆ' ಟ್ವಂಟಿಫೋರ್ ಕ್ಯಾರೆಟ್‌ನ ಅಪ್ಪಟ ಬಂಗಾರ!!
ಒಂದು ಮಾತು ಭಾಂದವ್ಯದ ಸೇತುವ ಕಟ್ಟಬಹುದು.
***
"ವೈಲೆನ್ಸ್ ವೈಲೆನ್ಸ್, ವೈಲೆನ್ಸ್...." ಅನ್ನುವ ಒಂದು ಮಾತು ಕೋಟಿ ಕೋಟಿ ಗಳಿಸಬಹುದು, 'ಯಶ'ಸ್ಸು ಕೊಡಬಹುದು.
***
ಅಮೃತದಂತಹ ಮಾತು ಮೃತ್ಯುವನ್ನೇ ಅಟ್ಟಿಸಿಬಿಡಬಹುದು!! ತರ್ಕದ ಮಾತಿನ ವಾದದಲ್ಲಿ ಎದುರಾಳಿಯ ಮಾತನ್ನೇ 'ಸಿಗಿದು' ಸಾವನ್ನೇ 'ಆಳ'ಬಹುದು, ಜಯಿಸಬಹುದು!! ಯಮನನ್ನೇ ಸೋಲಿಸಬಹುದು!!
'ಸಿಗದಾಳ್'ನಲ್ಲಿ ನೆಡೆಯಲಿರುವ ಅಂತಹ ಒಂದು ಅಮೃತದ ಮಾತಿನ ರಂಗವೇದಿಕೆಗೆ ಈ ಮೂಲಕ ಒಂದು ಮಾತಿನ ಸ್ವಾಗತ.
"ಮಾತಾಡಿದರೆ ಹೀಗೆ ಮಾತಾಡಬೇಕು" ಅಂತ ನೀವು ಸಾಕ್ಷೀಕರಿಸುವ ಮಾತಿನ ಮೇಳ ನೆಡೆಯುವುದು 30.04.2022 ಅಪರಾಹ್ನ ಮೂರರಿಂದ ರಾತ್ರಿ ಎಂಟರವರೆಗೆ. ಮಾತಿನ ಅಂಗಳಕ್ಕೆ ಮಂಟಪ ಕಟ್ಟಿರುವುದು ಜಿ.ಆರ್.ಅಶೋಕ ಇವರ ಮನೆ ಅಂಗಳ. ಮಾತನಲ್ಲೇ ಅಂಗಳದ ವಿಳಾಸ ಹೇಳುವುದಾದರೆ:
ಜಿ.ಆರ್.ಅಶೋಕ,
ಕುಮರಿಗದ್ದೆ,
ಸಿಗದಾಳ್ (ಅದ್ದಡ) ಪೋಸ್ಟ್,
ಕೊಪ್ಪ ತಾಲ್ಲೂಕ್
ಚಿಕ್ಕಮಗಳೂರು ಜಿಲ್ಲೆ 577126
ಅಕಸ್ಮಾತ್ ಮಾತಿನ ಮಂಟಪಕ್ಕೆ ಬರುವಾಗ ದಾರಿ ಸಿಕ್ಕದೇ ಹೋದರೆ, ದಾರಿ ತಪ್ಪಿದರೆ, ದೂರ 'ವಾಣಿ'ಯ ಮೂಲಕ ಕರೆ ಮಾಡಿ. ಮಾತಿನಲ್ಲೇ ನಿಮಗೆ ಮಾರ್ಗದರ್ಶನ ಮಾಡಲಾಗುವುದು. ಹಾಗೆ ಮಾತಿನ ಕರೆಗೆ ಕೆಳಗಿನ ನಂಬರ್‌ಗಳಲ್ಲಿ ಯಾವುದಾದರೂ "ಒಂದನ್ನು ಒತ್ತಿ":
6361709631
9449205294
9449631248
ಉಳಿದ ಅಗತ್ಯ ಮಾಹಿತಿಗಳಿಗೆ ಲಗತ್ತಿಸಿರುವ ಪತ್ರಿಕೆಯನ್ನು ಕೇಳಿ. ಅದೇ ಮಾತಾಡಿ ಹೇಳುತ್ತದೆ.
ತಾಳ ಮದ್ದಳೆಗೆ ಬನ್ನಿ.
ನಿಮ್ಮ ಆಗಮನ ಮತ್ತು ಉಪಸ್ಥಿತಿಗೆ ನಮ್ಮ ಹೃದಯ ಮತ್ತು ಕಣ್ಣುಗಳು ಕಾಯುತ್ತಿರುತ್ತವೆ.
ಕಲಾವಿದರ ಮಾತುಗಳು ನಿಮ್ಮ ಕಿವಿಗಳಿಗಾಗಿ ಕಾಯುತ್ತಿರುತ್ತವೆ.
ಬರ್ತೀರಲ್ವಾ?
ಒಳ್ಳೆಯ ಮಾತುಗಳನ್ನು ತಪ್ಪಿಸಿಕೊಳ್ಳಬೇಡಿ.
ಉಳಿದಿದ್ದನ್ನು ತಾಳಮದ್ದಳೆ ನಂತರ ಊಟ ಮಾಡ್ತ ಮಾತಾಡುವ.
ಬನ್ನಿ.
-ಅರವಿಂದ ಸಿಗದಾಳ್, ಮೇಲುಕೊಪ್ಪ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ