ಸರಿಯಾಗಿ ಏಳು ವರ್ಷಗಳ ಹಿಂದೆ, ಮೂರ್ಖರ ದಿನದಂದು, ಊರಲ್ಲೆಲ್ಲಾ ’ಕಣಿಕ್ಕೊನ್ನ’ (ಕೊಂದೆ) ಹೂ ಬಿರಿದು ಶೋಭಿಸುತ್ತಿದ್ದಾಗ ನಾನು ಕುಟ್ಟಿಯಾಟ್ಟೂರಿನಲ್ಲಿದ್ದೆ. ನನಗೆ ಸಂಪನ್ಮೂಲ ವ್ಯಕ್ತಿಗಳಾದ ಇಬ್ಬರು ಪ್ರಭಾಕರನರ ಜತೆ ಆ ಮುರ ಪಾದೆಯೂರಿನಲ್ಲಿ ಸುತ್ತಾಡಿದ್ದೆ.
ಅದನ್ನಾಧರಿಸಿ ದೆಹಲಿಯ ಸಿವಿಲ್ ಸೊಸೈಟಿಯಲ್ಲಿ ’Kerala's Mighty Mango Tree ’, ಅಡಿಕೆ ಪತ್ರಿಕೆಯಲ್ಲಿ ’ಕುಟ್ಟಿಯಾಟ್ಟೂರ್, ಮಾವೆಲ್ಲಾ ಮಣ್ಣು ಪಾಲು’, ಮತ್ತು ತರಂಗದಲ್ಲಿ’ ಮನೆಮನೆಯಲ್ಲೂ ಮಾವು ಬೆಳೆ’ ಎಂಬ ಕವರ್ ಸ್ಟೋರಿಗಳನ್ನು ಬರೆದಿದ್ದೆ. ಜತೆಗೆ ಐಐಹೆಚ್ಆರ್ ಸಂಸ್ಥೆಯ ಆಗಿನ ನಿರ್ದೇಶಕರಾಗಿದ್ದ ಡಾ. ದಿನೇಶ್ ಎಂ.ಆರ್. ಅವರ ಗಮನ ಸೆಳೆದಿದ್ದೆ. ಈ ಮಾವಿಗೆ ಜಿಐ ಪಡೆಯುವ ಅವಕಾಶವಿದೆ ಎಂದೂ ಸೂಚಿಸಿದ್ದೆ. ಆದೆಲ್ಲಾ ಆ ಊರಿನಲ್ಲಿ ಮಾವು ಅಭಿವೃದ್ಧಿಯ ಚಿಂತನೆ ಇದ್ದದ್ದು ಕಮ್ಮಿ. ಅದು ತನ್ನಿಂದ ತಾನೇ ಬೆಳೆಯುವ ಹಿತ್ತಲ ಬೆಳೆ.
ಲೇಖನ ಪ್ರಕಟವಾದ ಮೇಲೆ ಊರವರು, ಪಂಚಾಯತು ಜಾಗೃತವಾಯಿತು. ಕೇವೀಕೆ, ಕೃಷಿ ಇಲಾಖೆ, ನಬಾರ್ಡ್, ಐಐಹೆಚ್ಆರ್ ಮೊದಲಾದ ಸಂಸ್ಥೆಗಳ ಪ್ರತಿನಿಧಿಗಳನ್ನು ಕರೆದು ದೊಡ್ಡ ಸಭೆ ನಡೆಯಿತು. ಆಗಲೇ ಊರಲ್ಲಿ ಈ ಮಾವಿನ ಮೌಲ್ಯವರ್ಧನೆಗಾಗಿ ಒಂದು ಸಂಸ್ಥೆ ಇತ್ತು. ಆದರೆ ಚಟುವಟಿಕೆ ಅಷ್ಟಕ್ಕಷ್ಟೆ.
ಡಾ. ದಿನೇಶ್ ಅವರ ತಂಡವೂ ಸೇರಿದಂತೆ ಅಧಿಕಾರಿಗಳು ಕುಟ್ಟಿಯಾಟ್ಟೂರ್ ಮಾವಿನ ಅಭಿವೃದ್ಧಿ ಬಗ್ಗೆ ತುಂಬಾ ಕಳಕಳಿ ತೋರಿದರು. ಸಲಹೆ ಕೊಟ್ಟರು. "ಹಣ್ಣು ಹುಳದ ಸಮಸ್ಯೆ ಮತ್ತು ಆಂಥ್ರೋಕ್ನೋಸ್ ಕಾಯಿಲೆ ಪರಿಹರಿಸಿದರೆ ಈ ಹಣ್ಣನ್ನು ಬ್ರಾಂಡ್ ಮಾಡಿ ಪೆಟ್ಟಿಗೆಯಲ್ಲಿ ತುಂಬಿ ಹೈವೇಯ ಬದಿಯಲ್ಲೇ ಮಾರಬಹುದು. ಸೀಸನಿನಲ್ಲಿ ಪ್ರಪ್ರಥಮವಾಗಿ ತಿನ್ನಲು ಸಿಗುವ ಹಣ್ಣಾದ ಕಾರಣ ಒಳ್ಳೆ ಮಾರಾಟಾವಕಾಶವಿದೆ. ಇಲ್ಲಿನ ಹಣ್ಣು ಪಲ್ಪಿಗೆ ಆಗುವುದಾದರೆ, ಕರ್ನಾಟಕದ ಗಡಿಯ ಪಲ್ಪ್ ಫ್ಯಾಕ್ಟರಿಗಳು ಒಂದು ತಿಂಗಳ ಮೊದಲೇ ಪಲ್ಪ್ ತಯಾರಿಗೆ ತೊಡಗಬಹುದು" ಎನ್ನುತ್ತಾ ದಿನೇಶ್ ಆ ಕಂಪೆನಿಗಳನ್ನೂ ಪರಿಚಯ ಪಡಿಸಿದರು. ಕುಟ್ಟಿಯಾಟ್ಟೂರ್ ಮಾವಿನ ಮಾದರಿ ಕಳಿದಾಗ ಪಲ್ಪಿಗೆ ಓಕೆ ಎಂಬ ಉತ್ತರವೂ ಬಂತು.
ಅಂದಿನ ವೇಗದಲ್ಲೇ ಹೋಗಿದ್ದರೆ ಕುಟ್ಟಿಯಾಟ್ಟೂರ್ ಮಾವು ಇನ್ನೂ ಮೇಲಕ್ಕೇರುತ್ತಿತ್ತು. ಆದರೆ ನಡುವೆ ಚುನಾವಣೆ ಬಂತೋ, ಕೇರಳದಲ್ಲಿ ಹುಮ್ಮಸ್ಸೆಲ್ಲಾ ಲೀಕಾಗಿ ಹೋಗುತ್ತದೆ. ಮರಳಿ ಬುಡದಿಂದ ಕೆಲಸ ಮಾಡಬೇಕು. ಅದೇನೇ ಇದ್ದರೂ ಕೇವೀಕೆ, ಊರ ಜನರಲ್ಲಿ ಕೆಲವರು ಚಟುವಟಿಕೆ ಮುಂದುವರಿಸಿದರು. ಕೇರಳ ಕೃಷಿ ವಿವಿಯ ಐಪಿಆರ್ ಸೆಲ್ಲಿನ ಡಾ.ಸಿ.ಆರ್. ಎಲ್ಸಿ, ಹಿಂದಿನ ಕೇರಳದ ಕೃಷಿ ಸಚಿವ ಸುನಿಲ್ ಕುಮಾರ್ ಅವರ ಪ್ರಯತ್ನಗಳಿಂದ ಈಚೆಗೆ ಕುಟ್ಟಿಯಾಟ್ಟೂರ್ ಮಾವಿಗೆ ಜಿಐ (ಭೌಗೋಳಿಕ ಸನ್ನದು) ಸಿಕ್ಕಿದೆ.
ಏಪ್ರಿಲ್ 2 ರಂದು ಕುಟ್ಟಿಯಾಟ್ಟೂರಿನಲ್ಲಿ ಜಿಐ ಕಾಗದಪತ್ರ ಹಸ್ತಾಂತರ ಮತ್ತು ಮಾವಿನ ಮೌಲ್ಯವರ್ಧಿತ ಉತ್ಪನ್ನಗಳ ಬಿಡುಗಡೆ. ಸಚಿವ ಗೋವಿಂದನ್ ಮಾಸ್ಟರ್ ಅವರಿಂದ. ಜಿಐಗಾಗಿ ಶ್ರಮಿಸಿದ ಡಾ.ಸಿ.ಆರ್. ಎಲ್ಸಿ ಅವರಿಗೂ, ಕುಟ್ಟಿಯಾಟ್ಟೂರ್ ಮಾವನ್ನು ಹೊರಪ್ರಪಂಚಕ್ಕೆ ಪರಿಚಯಿದ ಪತ್ರಕರ್ತ ಎಂದು ನನಗೂ ನೆನಪಿನ ಕಾಣಿಕೆ.
ಸುಧಾರಣೆಯ ಗಾಳಿ ಬೀಸುತ್ತಿದ್ದರೂ, ಕುಟ್ಟಿಯಾಟ್ಟೂರಿನ ಮಾವಿನ ರಂಗದ ಅಭಿವೃದ್ಧಿ ಏನೇನೂ ಸಾಲದು. 5,000 ಟನ್ ಮಾವು ಬೆಳೆಯುವ ಊರು ಸಾಕಷ್ಟು ಚುರುಕಾದರೆ ಹರಿದು ಬರಬಹುದಾದ ಆರ್ಥಿಕತೆ ಸಣ್ಣದೇನಲ್ಲ. ಮೂರು ತಿಂಗಳು ಎಚ್ಚರ ವಹಿಸಿದರೆ ಪ್ರತಿ ಮರದಿಂದ 2- 3ರಿಂದ ಆರಂಭಿಸಿ ಹತ್ತು ಸಾವಿರ ರೂ ವರೆಗೂ (ಒಂದು ಟನ್ ಬೆಳೆ ಕೊಡುವ ಮರಗಳೂ ಇವೆ) ಆದಾಯ ಸಾಧ್ಯ. ಆದರೆ ಸವಾಲುಗಳೂ ಹಾಗೆಯೇ ಇವೆ. ಹಣ್ಣು ಹುಳ, ಮರದಲ್ಲಿ ಬಂದಣಿಕೆ ಸಮಸ್ಯೆ. ಅಷ್ಟು ದೊಡ್ಡ ಮರ ಏರಿ ಮಾಗಿದ ಮಾವು ಕೊಯ್ಯುವ ಸಾಹಸಿಗರ ಅಭಾವ.
"ಹಿತ್ತಲಲ್ಲಿ ತಾನೇತಾನಾಗಿ ಬೆಳೆಯುವ ಈ ಮಾವು ಪ್ರಕೃತಿ ಕುಟ್ಟಿಯಾಟ್ಟೂರಿಗರಿಗೆ ಕರುಣಿಸಿದ ಬ್ಲಾಂಕ್ ಚೆಕ್. ಆದರೆ ನೀವಿದನ್ನು ನಗದುಗೊಳಿಸಿದ್ದು ಸಾಲದು" ಎಂದೇ ಸಮಾರಂಭದ ನನ್ನ ಮಾತು ಆರಂಭಿಸಿದೆ. ಜಿಐ ಅಂಗೀಕಾರವೂ ಒಂದು ಮುಂಡಾಸಿನಂತೆ. ಅದನ್ನು ಜಾಣ್ಮೆಯಿಂದ ಬಳಸಿ ಊರ ಮಂದಿ ಜೇಬು ತುಂಬಿಕೊಳ್ಳಬೇಕು. ಅದಕ್ಕಾಗಿ ಕುಟ್ಟಿಯಾಟ್ಟೂರ್ ತಮ್ಮ ಮಾವು ಹಿತ್ತಲ ಗಿಡ ಎಂಬ ಉದಾಸೀನ ಮರೆತು ಇನ್ನಷ್ಟು ಉತ್ಸಾಹ ವಹಿಸಿ, ಮೈಕೊಡವಿ ಎದ್ದೇಳಬೇಕು.
-ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು