ಹೆಣ್ಣು ಸಂಸಾರದ ಕಣ್ಣು ಇದು ಲೋಕೋಕ್ತಿ. ಆದರೆ ಇಂದು ಹೆಣ್ಣು ಸಂಸಾರದ ಹುಣ್ಣು ಎಂಬಂತಾಗಿದೆ. ಮಗಳಾಗಿ, ಸಹೋದರಿಯಾಗಿ, ಹೆಂಡತಿಯಾಗಿ, ತಾಯಿಯಾಗಿ, ಸೊಸೆಯಾಗಿ, ಸಂಸಾರದ ರಥದ ಸಾರಥಿಯಾಗಿ ಹಲವು ಹತ್ತು ರೂಪತಾಳಿ ತನ್ನ ಜೀವನವನ್ನು ಕುಟುಂಬದ ಒಳಿತಿಗಾಗಿ ಸವೆಯುವ ಹೆಣ್ಣು ತನಗಾಗಿ ಪಡೆಯುವುದು ಏನು? ಕೇವಲ ಸಂತೃಪ್ತಿ ಮಾತ್ರ. ಸಂಸಾರಕ್ಕಾಗಿ ದುಡಿಯುವ ಹೆಣ್ಣಿಗೆ ಸುಸ್ತು ಎಂಬುದು ಇಲ್ಲವೇ ಇಲ್ಲ. ಇದು ಭಾರತೀಯ ನಾರಿಯರ ಜನ್ಮಜಾತ ಗುಣ ಎಂದರೆ ತಪ್ಪಿಲ್ಲ.
ಆಧುನಿಕ ಯುಗದಲ್ಲಿ ಹೆಣ್ಣು ಕೇವಲ ಮನೆಯ ಒಳಗೆ ಮಾತ್ರವಲ್ಲದೇ ಹೊರಗಿನ ಕ್ಷ್ಟೇತ್ರದಲ್ಲೂ ಸೈ ಎನಿಸಿಕೊಂಡಿದ್ದಾಳೆ. ಆ ಮೂಲಕ ತಾನು ಅಬಲೆಯಲ್ಲ ಸಬಲೆ ಎನಿಸಿಕೊಂಡಿದ್ದಾಳೆ. ಆದರೆ ಪ್ರಸ್ತುತ ಸಮಾಜದಲ್ಲಿ ಹೆಣ್ಣಿನ ಬಾಳು ಗೋಳಾಗಿದೆ. ಪ್ರತಿನಿತ್ಯದ ವಾರ್ತಾಪತ್ರಿಕೆಗಳನ್ನು ಗಮನಿಸಿದಾಗ ಒಂದು ಕ್ಷಣ ಮೈ ಜುಮ್ಮ್ ಎನಿಸುತ್ತದೆ.
"ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾ:" ಎಂಬ ಉತ್ಕೃಷ್ಟ ಉಕ್ತಿಯನ್ನು ಸಾರಿದ ನಾಡು ಇದುವೆಯಾ!? ಎನ್ನುವಂತಾಗಿದೆ. ಹೌದು ಯಾಕೆ ಹೀಗಾಗುತ್ತಿದೆ? ಇದಕ್ಕೆ ಮುಕ್ತಿ ಯಾವಾಗ? ಹೇಗೆ? ಯಾರಿಂದ? ಎಂಬಿತ್ಯಾದಿ ಪ್ರಶ್ನೆಗಳು ಮೂಡುವುದು ಸಹಜ. ಉತ್ತರ ಹುಡುಕಬೇಕಾದರೆ ಇದಕ್ಕೆ ಕಾರಣಗಳೇನು ಎಂಬುದನ್ನು ತಿಳಿಯಬೇಕಾಗಿದೆ. ಸಮೂಹ ಮಾಧ್ಯಮಗಳಾದ ವಾರ್ತಾಪತ್ರಿಕೆಗಳೆ? ಟಿವಿ ಮಾದ್ಯಮಗಳೇ! ಆಧುನಿಕ ಚಿಂತನೆಗಳೇ? ಉಡುಗೆ ತೊಡುಗೆಗಳೇ? ಅಲ್ಲಾ ಓದಿದ್ದೇವೆ ಎಂಬ ಸ್ತ್ರೀ ಸಂಕೂಲವೇ? ಯಾವುದು ತಿಳಿಯುತ್ತಿಲ್ಲ. ಆದರೆ ಒಂದು ಮಾತಂತೂ ಸತ್ಯ, ಕೂಡು ಕುಟುಂಬದ ಅವನತಿಯೇ ಮುಖ್ಯ ಕಾರಣವಾಗಿ ಕಂಡು ಬರುತ್ತದೆ. ದಾರಿ ತೋರುವ ಹಿರಿಯರಿಲ್ಲದೆ ಸ್ವಾತಂತ್ರ್ಯದ ಹೆಸರಿನಲ್ಲಿ ಸ್ವೇಚ್ಚೆಯಿಂದ ಸಾಗುತ್ತಿರುವ ವಿಭಕ್ತ ಕುಟುಂಬ ನಾವಿಕನಿಲ್ಲದ ನಾವೆಯಂತೆ ಯದ್ವಾತದ್ವಾ ಹೊಯ್ದಾಡುತ್ತಿದೆ.
ಪರಿಣಾಮವಾಗಿ ಎಳವೆಯಲ್ಲಿ ಮಕ್ಕಳು ಕೇಳಬೇಕಾದ ನೀತಿಕಥೆಗಳು, ಸಾಹಸಗಾಥೆಗಳು ಇಲ್ಲದೆ ಕ್ರೂರ ಕಾರ್ಯಗಳು, ಕೊಲೆ, ಸುಲಿಗೆ, ಮೋಸ, ಕುತಂತ್ರಗಳಿಂದ ಕೂಡಿದ ಧಾರಾವಾಹಿಗಳನ್ನು ನೋಡಿ ಮನೋವಿಕಲತೆಗೆ ಒಳಗಾಗಿ ಸಮಾಜದ ಘಾತುಕ ಶಕ್ತಿಗಳಾಗಿ ಬದಲಾಗುತ್ತಿವೆ. ಈ ರೀತಿಯಾಗಿ ದಾರಿತಪ್ಪಿದ ಯುವಜನಾಂಗಕ್ಕೆ ಬಲಿಪಶುವಾಗುವುದು ಹೆಣ್ಣು.
ಕಾನೂನಿನ ಚೌಕಟ್ಟಿನಿಂದ ಪರಿಹಾರ ಕಂಡುಕೊಳ್ಳುವ ಸಮಸ್ಯೆ ಇದಲ್ಲ. ಇದಕ್ಕೆ ಭದ್ರವಾದ ನೈತಿಕ ಬುನಾದಿಯು ಅಗತ್ಯವಿದೆ. ಆದ್ದರಿಂದ ವಿದ್ಯಾರ್ಥಿ ದೆಸೆಯಲ್ಲೇ ಈ ರೀತಿಯ ಶಿಕ್ಷಣವು ಕಡ್ಡಾಯವಾಗಬೇಕಾಗಿದೆ.
-ಚೈತನ್ಯ ಲಕ್ಷ್ಮೀ
ವಿವೇಕಾನಂದ ಕಾಲೇಜು
ಪತ್ರಿಕೋದ್ಯಮ ವಿಭಾಗ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ