ಮಂಗಳೂರು: ವೇದಗಳ ಕಾಲದ ಸಾಹಿತ್ಯಗಳಿಂದಲೇ ಆಯುರ್ವೇದ ಔಷಧ ಪದ್ಧತಿಗಳ ಉಲ್ಲೇಖಗಳನ್ನು ಕಾಣುತ್ತೇವೆ. ಮಾನವ ಹುಟ್ಟುವ, ವಾಸಿಸುವ ಪ್ರದೇಶದೊಂದಿಗೆ ಅವನ ದೇಹ ಪ್ರಕೃತಿಗೂ, ಆಹಾರ ಪದ್ಧತಿಗೂ ಅವಿನಾಭಾವ ಸಂಬಂಧವಿದೆ. ಆಯುರ್ವೇದ ಚಿಕಿತ್ಸೆಯನ್ನು ನೀಡುವಾಗ ಅದನ್ನು ಗಣನೆಗೆ ತೆಗೆದುಕೊಂಡರೆ ಸಮರ್ಪಕ ಚಿಕಿತ್ಸೆ ನೀಡಲು ಸಾಧ್ಯ. ಪ್ರತಿಯೊಬ್ಬರೂ ತಮ್ಮ ದೇಹ ಪ್ರಕೃತಿಯನ್ನು ಅರಿತುಕೊಂಡು ಅದಕ್ಕನುಗುಣವಾಗಿ ಆಹಾರವನ್ನು ಹಿತಮಿತವಾಗಿ ತೆಗೆದುಕೊಂಡರೆ ರೋಗಗಳಿಲ್ಲದೆ ನೆಮ್ಮದಿಯ ಬದುಕನ್ನು ನಡೆಸಲು ಸಾಧ್ಯ. ಸಾಧ್ಯವಾದಷ್ಟೂ ಹೊರಗಿನ ಆಹಾರಗಳನ್ನು ವರ್ಜಿಸಿ ಮನೆಯ ಆಹಾರವನ್ನು ಸೇವಿಸಬೇಕು. ನಮ್ಮ ದೇಹದ ಆರೋಗ್ಯ ನಿಂತಿರುವುದೇ ನಾವು ಸೇವಿಸುವ ಆಹಾರದ ಮೇಲೆ ಎಂದು ಡಾ. ಕೇಶವರಾಜ್ ರವರು ಅಭಿಪ್ರಾಯಪಟ್ಟರು.
ಅವರು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕ ಮತ್ತು ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ ಇವುಗಳ ಸಂಯುಕ್ತ ಆಶ್ರಯದಲ್ಲಿ ಮಂಗಳೂರಿನ ವೇದಮಾಯು ಆಸ್ಪತ್ರೆಯಲ್ಲಿ ಆಹಾರ, ಆರೋಗ್ಯ ಮತ್ತು ಸಾಹಿತ್ಯ ಎಂಬ ವಿಷಯದ ಬಗ್ಗೆ ಗುರುವಾರ ನಡೆದ ವಿಚಾರಗೋಷ್ಠಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡುತ್ತಿದ್ದರು.
ವಿಚಾರಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಂಗಳೂರು ತಾಲೂಕು ಘಟಕದ ಅಧ್ಯಕ್ಷರಾದ ಡಾ. ಮಂಜುನಾಥ ಎಸ್ ರೇವಣಕರ್ ಮಾತನಾಡಿ, ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಬಗ್ಗೆ ಯಾವತ್ತೂ ಕಾಳಜಿ ವಹಿಸಿಕೊಳ್ಳಬೇಕು. ಹೊರಗಿನ ಆಹಾರಗಳನ್ನು ಸೇವಿಸುವುದನ್ನು ಬಿಟ್ಟು ಮನೆಯಲ್ಲೇ ತಯಾರಿಸಿದ ಪರಿಶುದ್ಧ ಆಹಾರ ಸೇವನೆ ಮಾಡಿದರೆ ರೋಗಗಳಿಂದ ದೂರ ಉಳಿಯಲು ಸಾಧ್ಯ ಎಂದರು.ಋಣಾತ್ಮಕ ಚಿಂತನೆ ಗಳಿಂದ ವಿಮುಖರಾಗಿಬೇಕು ಎಂದು ಕರೆ ನೀಡಿದರು.
ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಂಗಳೂರು ಘಟಕದ ಗೌರವ ಕಾರ್ಯದರ್ಶಿಗಳು ಹಾಗೂ ವಿಚಾರಗೋಷ್ಠಿಯ ಸಂಯೋಜಕರೂ ಆದ ಡಾ. ಮುರಲಿ ಮೋಹನ ಚೂಂತಾರ್ ಅವರು ಪ್ರಸ್ತಾವನೆಗೈದು ಸ್ವಾಗತಿಸಿದರು. ಇನ್ನೋರ್ವ ಗೌರವ ಕಾರ್ಯದರ್ಶಿ ಗಣೇಶ ಪ್ರಸಾದ ಜೀ ಅವರು ಧನ್ಯವಾದ ಸಮರ್ಪಣೆಗೈದರು.
ಶ್ರೀವೇದಮಾಯು ಆಸ್ಪತ್ರೆಯ ಸಿಬ್ಬಂದಿಗಳು, ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಡಾ. ಅರುಣಾ ನಾಗರಾಜ್, ಮಂಗಳೂರು ಘಟಕದ ಪದಾಧಿಕಾರಿಗಳಾದ ಶ್ರೀ ಸುಬ್ರಾಯ ಭಟ್, ಡಾ ಮೀನಾಕ್ಷಿ ರಾಮಚಂದ್ರ, ಸುಖಲಾಕ್ಷಿ, ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾದ ಎ ಎಸ್ ಭಟ್, ಸುರೇಶನಾಥ್, ಶಶಿಧರ್ ದಿವಾಕರ್, ವಿಚಾರಗೋಷ್ಠಿಯ ಅನಂತರ ನಡೆದ ಸಂವಾದದಲ್ಲಿ ಸಕ್ರಿಯವಾಗಿ ಪಾಲುಗೊಂಡರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ