ಮಂಗಳೂರು: ಮುಡಿಪುವಿನಲ್ಲಿರುವ ಸೂರಜ್ ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮ ಕಾಲೇಜಿನ ಸಭಾಂಗಣದಲ್ಲಿ ಜರುಗಿತು.
2020-21ನೇ ಸಾಲಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಆಯೋಜಿಸಲಾದ ಬೀಳ್ಒಡುಗಡೆ ಕಾರ್ಯಕ್ರಮದಲ್ಲಿ ಸೂರಜ್ ಎಜುಕೆಶನಲ್ ಅಂಡ್ ಚ್ಯಾರಿಟೇಬಲ್ ಟ್ರಸ್ಟ್‌ನ ಮುಖ್ಯಸ್ಥರಾಗಿರುವ ಡಾ. ಮಂಜುನಾಥ್ ಎಸ್. ರೇವಣ್ಕರ್ ಅವರು ಮಾತನಾಡಿ, ಬೀಳ್ಕೊಡುಗೆ ಕಾರ್ಯಕ್ರಮವೆಂದರೆ ನಿಮ್ಮನ್ನು ನಮ್ಮ ಸಂಸ್ಥೆಯಿಂದ ಶಾಶ್ವತವಾಗಿ ದೂರ ಮಾಡುವುದಲ್ಲ, ಮುಂದಿನ ದಿನಗಳಲ್ಲಿ ಶಿಕ್ಷಕರು ಮತ್ತು ಪೋಷಕರು ಹೆಮ್ಮೆ ಪಡುವಂತೆ ಬದುಕಬೇಕು ಎಂದು ಕಿವಿಮಾತು ನುಡಿದರು.
ಕಳೆದ 15 ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಈ ಸಂಸ್ಥೆಗೆ ಸಾರ್ವಜನಿಕರು, ವಿದ್ಯಾರ್ಥಿಗಳು ಮತ್ತು ಸರಕಾರದಿಂದ ಉತ್ತಮ ಸಹಕಾರ ದೊರಕಿದೆ. ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯವನ್ನು ರೂಪಿಸಿಕೊಡುವಲ್ಲಿ ಮೌಲ್ಯಾಧಾರಿತ ಶಿಕ್ಷಣ ನೀಡುವ ಮೂಲಕ ಸೂರಜ್ ಸಮೂಹದ ಶಿಕ್ಷಣ ಸಂಸ್ಥೆಗಳು ಅತ್ಯುತ್ತಮ ಕಾರ್ಯ ಮಾಡುತ್ತಿವೆ ಎಂದು ಡಾ ರೇವಣಕರ್ ಮೆಚ್ಚುಗೆ ವ್ಯಕ್ತಪಡಿಸಿದರು.
ಬಳಿಕ ಮಾತನಾಡಿದ ಕಾಲೇಜಿನ ಪ್ರಿನ್ಸಿಪಾಲರಾದ ಪ್ರೊ. ಜಯರಾಮ ಪೂಂಜ ಅವರು, ವಿದ್ಯಾರ್ಥಿ ಜೀವನ ಅಮೂಲ್ಯವಾದದ್ದು, ಶಿಕ್ಷಣದ ಜತೆಗೆ ವಿದ್ಯಾರ್ಥಿಗಳು ಸಂತೋಷವಾಗಿರಬೇಕು. ಭವಿಷ್ಯದಲ್ಲಿ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಬದುಕಬೇಕು ಎಂದು ನುಡಿದರು.