|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಶಿಕ್ಷಣ ಚಿಂತನ: ಮರೆತುಹೋದ ಭಾರತೀಯ ವಿದ್ಯೆಗಳನ್ನು ಮತ್ತೆ ವಿಷ್ಣುಗುಪ್ತ ವಿಶ್ವವಿದ್ಯಾಪೀಠ ನೆನಪಿಸಬಹುದೇ?

ಶಿಕ್ಷಣ ಚಿಂತನ: ಮರೆತುಹೋದ ಭಾರತೀಯ ವಿದ್ಯೆಗಳನ್ನು ಮತ್ತೆ ವಿಷ್ಣುಗುಪ್ತ ವಿಶ್ವವಿದ್ಯಾಪೀಠ ನೆನಪಿಸಬಹುದೇ?



ವಿದ್ಯಾ ಪದ್ಧತಿಯೊಂದು ನಾಶವಾಗುತ್ತಾ ಹೋದರೆ ಮೂಲ ಸಂಸ್ಕೃತಿಯು ಅದರೊಂದಿಗೆ ನಾಶವಾಗುತ್ತದೆ. ಹಳೆಯದೆಲ್ಲವೂ ಅಸಡ್ಡೆಗೆ ಒಳಗೊಳ್ಳುತ್ತದೆ ಎಂಬುದಕ್ಕೆ ಉದಾಹರಣೆ ನಾನು ಇತ್ತೀಚೆಗೆ ಕಂಡುಕೊಂಡೆ.


ಬೆಳಗ್ಗೆ ಎದ್ದು ಬಾನುಲಿಯನ್ನು ಆಲಿಸುವುದು ನನ್ನಾಕೆಗೆ ಅಭ್ಯಾಸ. ಬೆಳಗ್ಗಿನ ಹೊತ್ತಾದ್ದರಿಂದ ನನ್ನ ಕಿವಿಗೂ ಅಲ್ಪಸ್ವಲ್ಪ ಬೀಳುತ್ತಿರುತ್ತದೆ. ಮೊನ್ನೆ ಫೆಬ್ರವರಿ 13 ನೇ ತಾರೀಕು ಬಹಳ ವಿಶೇಷ ದಿನ ಎಂದು ಭಾರತೀಯ ಹೆಣ್ಣುಮಗಳೊಬ್ಬಳು ಬಾನುಲಿಯಲ್ಲಿ ಉಸುರುತ್ತಿದ್ದಳು. ಸಾವಿರದ ಎಂಟುನೂರ ಅರುವತ್ತೆರಡನೇ ಇಸವಿ ಫೆಬ್ರವರಿ 13 ವಿಶ್ವದ ಪ್ರಪ್ರಥಮ ವಿಶ್ವವಿದ್ಯಾನಿಲಯದ ಸ್ಥಾಪನೆಯಾದ ದಿನವಂತೆ. ಇದನ್ನು ಕೇಳಿದ ನನಗೆ ಸಖೇದಾಶ್ಚರ್ಯವಾಯಿತು. ಭಾರತೀಯ ನಾರಿಯಾಗಿ ಭಾರತದ ಚಾರಿತ್ರಿಕ ವಿಶ್ವವಿದ್ಯಾನಿಲಯಗಳ ಯಾವ ಗಂಧವು ಇಲ್ಲದೇ ಇದ್ದುದು ಬಹಳ ಆಶ್ಚರ್ಯದ ಸಂಗತಿ. 800 ವರ್ಷಗಳಿಗಿಂತಲೂ ಹಿಂದೆ ನಲಂದಾ ತಕ್ಷಶಿಲಾ ವಿಶ್ವವಿದ್ಯಾನಿಲಯಗಳ ಮೇಲೆ ಮುಸಲ್ಮಾನ ದಾಳಿಗಳಿಂದಾಗಿ ಅಸಂಖ್ಯಾತ ಗ್ರಂಥ ಭಂಡಾರಗಳು ಹೊತ್ತಿ ಉರಿದುದು ಇತಿಹಾಸದ ಅತ್ಯಂತ ದೊಡ್ಡ ದುರಂತ. ಅದೆಷ್ಟು ದೇಶ ವಿದೇಶಿಯರಿಗೆ ಜ್ಞಾನವನ್ನು ಪಸರಿಸುತ್ತಿದ್ದ ವಿಶ್ವವಿದ್ಯಾನಿಲಯ ನಾಶವಾದ ಸಂಗತಿ ಮರೆತು ಹೋದುದು ನಮಗೆ ನಾವೇ ಮಾಡಿಕೊಳ್ಳುವ ಅವಮಾನವಲ್ಲವೇ? ನಿರಂತರ ಆರು ತಿಂಗಳುಗಳ ಕಾಲ ಗ್ರಂಥಗಳು ಉರಿದಿದ್ದುವಂತೆ. ಅಷ್ಟೊಂದು ಜ್ಞಾನಭಂಡಾರ ನಮ್ಮಲ್ಲಿ ಇತ್ತು ಎಂದು ಹೇಳಿಕೊಳ್ಳುವುದೇ ನಮಗೆ ಒಂದು ತರದ ರೋಮಾಂಚನವನ್ನುಂಟು ಮಾಡುತ್ತದೆ. ನಿರಂತರ 800 ವರ್ಷಗಳ ಕಾಲ ಮುಸಲ್ಮಾನ ಆಡಳಿತದಲ್ಲಿ ಇದ್ದರೂ, ಭಾರತ ತನ್ನ ಸಂಸ್ಕೃತಿಯನ್ನು ಬಿಟ್ಟಿರಲಿಲ್ಲ ಕಾರಣ ಗುರುಕುಲ ಪದ್ಧತಿಯ ವಿದ್ಯಾಭ್ಯಾಸ. ಈ ಸತ್ಯವನ್ನು ಕಂಡುಕೊಂಡ ಆಂಗ್ಲರು ವಿದ್ಯಾಭ್ಯಾಸ ಪದ್ಧತಿಯನ್ನೇ ಬದಲಾಯಿಸ ಹೊರಟರು. ನಿಧಾನವಾಗಿ ಸಂಸ್ಕೃತ ಭಾಷೆ ಹೋಯಿತು ಪ್ರಾದೇಶಿಕ ಭಾಷೆಗಳು ಬಂದುವು. ಅದರೊಂದಿಗೆ ಆಂಗ್ಲ ಭಾಷೆಯನ್ನು ಅವರ ವಿದ್ಯಾ ಕ್ರಮಗಳನ್ನು ತುರುಕಿದರು. ಆಂಗ್ಲರು ಹಾಕಿದ ಅಡಿಗಲ್ಲು ಎಷ್ಟು ಗಟ್ಟಿಯಾಗಿದೆ ಎಂದರೆ ನಮ್ಮತನವನ್ನು, ನಮ್ಮ ಭಾಷಾ ಸಂಸ್ಕೃತಿಯನ್ನು, ನಮ್ಮ ಸನಾತನ ಧರ್ಮ ಸಂಸ್ಕೃತಿಯನ್ನು ನಾಶ ಮಾಡುವಷ್ಟು. ಆಂಗ್ಲರು ಹೋದರೂ ವಿದೇಶಿ ಸಂಸ್ಕೃತಿ ನಮ್ಮ ಮೇಲೆ ಪ್ರಭಾವ ಬೀರಿ ಬಿಟ್ಟಿದೆ.


ಗುರುವೊಬ್ಬ ಶಿಷ್ಯನಿಗೆ 6 ಇಂಚು ಉದ್ದದ 1000 ಸಮಿಧೆಗಳನ್ನು ಹೋಮಿಸುವುದಕ್ಕಾಗಿ ಮಾಡಲು ತಿಳಿಸಿದನಂತೆ. ಕೊನೆಯ ಹಂತ ಮುಟ್ಟುವಾಗ ಅದು 7 ಇಂಚು ಉದ್ದವಾಗಿತ್ತು. ತುಂಡಿನಿಂದ ತುಂಡನ್ನು ಅಳತೆ ಮಾಡುತ್ತಾ ತೆಗೆದುದರ ಪರಿಣಾಮವಿದು. ಮೂಲ ತುಂಡಿನಿಂದಲೇ ಅಳತೆಯನ್ನು ಮಾಡುತ್ತಿದ್ದರೆ ಉದ್ದದ ಜಾರುವಿಕೆ ಇರುತ್ತಿರಲಿಲ್ಲ. ಆಂಗ್ಲರು ಮಾಡಿದ್ದು ಇದನ್ನೇ, ಮೂಲವನ್ನು ಮರೆಯಿಸಿದರು. ಪೀಳಿಗೆಯಿಂದ ಪೀಳಿಗೆಗೆ ಭಾರತೀಯ ಭಾಷೆ-ಸಂಸ್ಕೃತಿ ನಾಶವಾಗುತ್ತಾ ಬಂತು. ನಾಶವಾದುದರ ಅರಿವೇ ಆಗಲಿಲ್ಲ. ಮತ್ತೆ ಮೂಲ ಭಾರತೀಯ ವಿದ್ಯಾ ಪದ್ಧತಿಯೆಡೆಗೆ ಸಾಗುವ ಒಂದು ಪ್ರಯತ್ನವೇ ವಿಷ್ಣುಗುಪ್ತ ವಿಶ್ವವಿದ್ಯಾಪೀಠ.


ಪ್ರತಿಯೊಬ್ಬರಿಗೂ ತಮ್ಮ ಮೂಲವನ್ನು ನೆನಸಿಕೊಂಡರೆ ಆಗುವ ಸಂತೋಷವೇ ಬೇರೆ. ನಮ್ಮದು ಎ.ಪಿ. ಎಂಬ ಉಪನಾಮದ ಕುಟುಂಬ. ಪೂರ್ಣ ಹೆಸರು ಅಡ್ಡಮನೆ ಪಳ್ಳತಡ್ಕ. ಕೆಲವು ಶತಮಾನಗಳ ಹಿಂದೆ ಸಾಗರ ತಾಲೂಕಿನ ಅಡ್ಡ ಮನೆಯಿಂದ ಈಗಿನ ದಕ್ಷಿಣ ಕನ್ನಡದ ಪಳ್ಳತಡ್ಕಕ್ಕೆ ಬಂದ ಕುಟುಂಬ ನಮ್ಮದು. ಕೊಡಗು ರಾಜರು ಕರಣಿಕ ವೃತ್ತಿಗಾಗಿ ಕರೆಸಿಕೊಂಡ ಕುಟುಂಬವಂತೆ. ಆ ವಿಷಯವನ್ನು ಪೀಳಿಗೆಯಿಂದ ಪೀಳಿಗೆಗೆ ಹಸ್ತಾಂತರಿಸುದರಲ್ಲಿ ಒಂದು ತರದ ಸಂತೋಷ ಮತ್ತು ಮೂಲದ ಸ್ಮರಣೆ.


ರಾಮಚಂದ್ರಾಪುರಮಠದ ಮೂಲವಿರುವುದು ಗೋಕರ್ಣದ ಅಶೋಕೆಯಲ್ಲಿ. ಕಾರಣಾಂತರಗಳಿಂದ ಈಗಿನ ಹೊಸನಗರಕ್ಕೆ ಸ್ಥಾನಾಂತರವಾದರೂ ಮತ್ತೆ ಮೂಲದ ಕಡೆಗೆ ಬರುವಂತಾದ್ದು ಬಹಳ ಸಂತೋಷ. ಹಾಗೆ ಬಂದುದಲ್ಲದೆ ಅದೇ ಜಾಗದಲ್ಲಿ ವೈದಿಕ ಸಂಸ್ಕೃತಿಯನ್ನು, ಭಾರತೀಯ ಸಂಸ್ಕೃತಿಯನ್ನು ಉಳಿಸಲೋಸುಗವೇ ಹುಟ್ಟಿದ  ಮಠ ವಿಶ್ವ ವಿದ್ಯಾಪೀಠವನ್ನು ಸ್ಥಾಪಿಸುವಂತೆ ಅದುದು ಅತ್ಯಂತ ವಿಶೇಷದ ಮತ್ತು ಆಶ್ಚರ್ಯದ ಸಂಗತಿ.


ಯಾವುದೇ ಉದ್ದೇಶಕ್ಕೆ ಹುಟ್ಟಿಕೊಂಡ ಸಂಸ್ಥೆ ಉಳಿದು ಬೆಳೆಯುವುದಕ್ಕೆ ಒಂದಷ್ಟು ಸಮಯ ಬೇಕಾಗುತ್ತದೆ. ಬೆಳೆಸುವಲ್ಲಿ ಸಕಲರ ಸಹಕಾರವೂ ಬೇಕಾಗುತ್ತದೆ. 20 ವರ್ಷಗಳ ಹಿಂದೆ ಭಾರತೀಯ ಕೃಷಿ ಪದ್ಧತಿಯ ಮೂಲವಾದ ದೇಶೀ ಗೋತಳಿಗಳ ನಾಶವನ್ನು ಕಂಡ ನಮ್ಮ ಗುರುಗಳು ಕಾಮದುಘಾ ಯೋಜನೆಯನ್ನು ಹಮ್ಮಿಕೊಂಡರು. ಇನ್ನೂ ಚಿಕ್ಕಪ್ರಾಯದ ಗುರುಗಳು ಗೋವಿನ ಬಗ್ಗೆ ಅರಿವಿಲ್ಲದೆ ಹೊರಟ ಯೋಜನೆ ಇದೆಂದು ಹೇಳಿಕೊಂಡವರು ನನ್ನನ್ನೂ ಸೇರಿಸಿದಂತೆ ಹಲವರು. ಆದರೆ ಮರೆತುಹೋಗಿದ್ದ ಗೋವಿನ ವಿಶೇಷತೆಯನ್ನು, ಅದರ ಔಷಧೀಯ ಗುಣಗಳನ್ನು ಜನರಿಗೆ ಮುಟ್ಟಿಸುವಲ್ಲಿ ಗುರುಗಳು ಸಮರ್ಥರಾದರು. ಅದಾದ ನಂತರ ಈಗಿನ 20 ವರ್ಷಗಳಲ್ಲಿ ಗೋಸಂತತಿ ಸಮಾಜದ ಅದೆಷ್ಟು ಮನೆಗಳಲ್ಲಿ ಇಂದು ವೃದ್ಧಿಯಾಗಿದೆ. ಅದೆಷ್ಟು ದೇಶಿ ಗೋಶಾಲೆಗಳು ಹುಟ್ಟಿಕೊಂಡವು. ಅದೆಷ್ಟೋ ಗವ್ಯೋತ್ಪನ್ನ ಮಳಿಗೆಗಳು ಗವ್ಯೋತ್ಪನ್ನಗಳು ಇಂದು ಸಮಾಜದಲ್ಲಿ ಬಳಸುವಂತಾಗಿದೆ. ಎಲ್ಲಾ ಗೋಶಾಲೆಗಳಿಗೆ ತಿಲಕ ಪ್ರಾಯವಾದ ಗೋಶಾಲೆ ಇಂದು ಹೊಸನಗರದ ರಾಮಚಂದ್ರಾಪುರ ಮಠದಲ್ಲಿಯೇ ಇದೆ. 32ರಷ್ಟು ದೇಶಿ ತಳಿ ಇರುವ ವಿಶ್ವದ ಏಕೈಕ ಗೋಶಾಲೆ ನಮ್ಮ ರಾಮಚಂದ್ರಾಪುರಮಠದ ಮಹಾನಂದಿ ಗೋಶಾಲೆ ಎಂದು ಹೇಳಿಕೊಳ್ಳುವುದು ನಮ್ಮ ಹೆಮ್ಮೆ.


ಭಾರತೀಯ ಮೂಲದ ಗೋ ಸಂಸ್ಕೃತಿಯನ್ನು, ಸಂತತಿಯನ್ನು ಉಳಿಸಿ ಬೆಳೆಸುವ ಮಠವೊಂದು, ಭಾರತೀಯ ಮೂಲ ಸಂಸ್ಕೃತಿಯನ್ನು ಬೆಳೆಸುವತ್ತ ಹೊರಟಿರುವುದು ಅತ್ಯಂತ ಶ್ಲಾಘನೀಯ ಕಾರ್ಯ.ಸಹಕಾರ ನೀಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಗೋ ಸಂಸ್ಕೃತಿಯಲ್ಲಿ ಮೇಲ್ಪಂಕ್ತಿ ಹಾಕಿಕೊಟ್ಟಂತೆ, ಅದನ್ನು ಅನುಸರಿಸಿ ಅನೇಕ ಸಂಸ್ಥೆಗಳು ಹುಟ್ಟಿಕೊಂಡಂತೆ, ಮುಂದಿನ ದಿನಗಳಲ್ಲಿ ವಿದ್ಯಾ ಸಂಸ್ಕೃತಿಯಲ್ಲಿಯೂ ಅನೇಕ ಸಂಸ್ಥೆಗಳು ಹುಟ್ಟಿಕೊಳ್ಳಬಹುದು.


ಭದ್ರವಾದ ಪಂಚಾಂಗದ ಮೇಲೆ ನಿಂತ ಕಟ್ಟಡದ ಅಡಿಗಲ್ಲು ತೆಗೆಯುವುದು ಬಹಳ ಕಷ್ಟ. ಒಮ್ಮೆ ತೆಗೆದದ್ದಾದರೆ ಮತ್ತೆ ಜಾರುವುದು ಬಹಳ ಸುಲಭ. ಸಾವಿರಾರು ವರ್ಷಗಳಿಂದ ನಿಂತ ಭಾರತೀಯತೆಯೆಂಬ ಭದ್ರ ಪಂಚಾಂಗದ ಅಡಿಗಲ್ಲು ಕಿತ್ತದ್ದು ಆಂಗ್ಲರು. ಈಗ ಸುಲಭದಲ್ಲಿ ಜಾರ ಹೊರಟಿದೆ. ಗಟ್ಟಿ ಮಾಡುವ ಕೆಲಸ ನಮ್ಮೆಲ್ಲರಿಂದಲೂ ಕೈಗೂಡಲಿ ಎಂದು ಆಶಿಸುವೆ.

ಹರೇರಾಮ.

-ಎ. ಪಿ. ಸದಾಶಿವ ಮರಿಕೆ.

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



hit counter

0 Comments

Post a Comment

Post a Comment (0)

Previous Post Next Post