|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಆರೋಗ್ಯವನ್ನು ನಿಸರ್ಗಮೂಲವಾಗಿಯೇ ಕಾಪಾಡಿಕೊಳ್ಳಬೇಕಾದ ಅಗತ್ಯವನ್ನು ಪ್ರತಿಪಾದಿಸುವ 'ಸ್ವಾದ'

ಆರೋಗ್ಯವನ್ನು ನಿಸರ್ಗಮೂಲವಾಗಿಯೇ ಕಾಪಾಡಿಕೊಳ್ಳಬೇಕಾದ ಅಗತ್ಯವನ್ನು ಪ್ರತಿಪಾದಿಸುವ 'ಸ್ವಾದ'


ಲೇಖಕರು: ಡಾ. ಮುರಳೀಮೋಹನ ಚೂಂತಾರು


ಇತ್ತೀಚೆಗೆ ಪ್ರಕಟವಾಗಿರುವ ಡಾ. ಮುರಳೀಮೋಹನ ಚೂಂತಾರು ಅವರ 'ಸ್ವಾದ - ಆಹಾರಸಂಹಿತೆ' ಎಂಬ ಕೃತಿಯು ಸಾವಿರಾರು ವರ್ಷಗಳಿಂದಲೂ ಭಾರತೀಯರ ಸ್ವಾಸ್ಥ್ಯವನ್ನು ಕಾಪಾಡಿಕೊಂಡು ಬಂದ ನಿಸರ್ಗಮೂಲ ಪದ್ಧತಿಯಾದ ಶಾಕಾಹಾರ, ಮಿತಾಹಾರ, ಪಥ್ಯ, ಉಪವಾಸ ಮುಂತಾದ ಆಯುರ್ವೇದ ಸಿದ್ಧಾಂತಗಳನ್ನು ಮೆಲುದನಿಯಿಂದ ಮಂಡಿಸುತ್ತ, ಜೊತೆಗೆ ನಿರೋಗಿಯಾಗಿರಲು ಅಗತ್ಯವಾದ ಆಹಾರಕ್ರಮವನ್ನು ವಿವರಿಸುತ್ತ, ಕಾಲಕ್ಕೆ ತಕ್ಕಂತೆ ಆಧುನಿಕ ವೈದ್ಯವಿಜ್ಞಾನದ ಸಂತುಲಿತ ಅಳವಡಿಕೆಯಿಂದ ಹೇಗೆ ಮನುಕುಲಕ್ಕೆ  ಒಳಿತಾಗುತ್ತದೆ ಎಂಬುದನ್ನು  ಎತ್ತಿಹಿಡಿಯುವ ಒಂದು ಕೃತಿಯಾಗಿದೆ. ಪ್ರಕೃತಿಯ ಶಿಶುವಾಗಿರುವ ಮನುಷ್ಯ ಋತುಮಾನಕ್ಕೆ ತಕ್ಕಂತೆ ಹದವರಿತು ಯುಕ್ತ ಆಹಾರ ಸೇವನೆ ಮಾಡಿದರೆ ಹೇಗೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂಬುದನ್ನು ಅತ್ಯಂತ ಸರಳವಾಗಿ ಇಲ್ಲಿ ವಿವರಿಸಲಾಗಿದೆ. ಆಹಾರಸೇವನೆಯ ಕ್ರಮ ಅರಿಯದೆ ಯದ್ವಾತದ್ವಾ ತಿನ್ನುತ್ತಿರುವುದೇ ಇಂದಿನ ಬಹುತೇಕ ಆರೋಗ್ಯ ಸಮಸ್ಯೆಗಳಿಗೆ ಮೂಲ ಎಂಬುದನ್ನು ಧ್ವನಿಪೂರ್ಣವಾಗಿ ಪ್ರತಿಪಾದಿಸಲಾಗಿದೆ.


ದೈಹಿಕ ಆರೋಗ್ಯ, ಮಾನಸಿಕ ಆರೋಗ್ಯ ಮತ್ತು ಸಾಮಾಜಿಕ ಆರೋಗ್ಯ ಈ ಮೂರೂ ಚೆನ್ನಾಗಿದ್ದಾಗ ಮಾತ್ರ ನಾವು ಒಂದು ಆರೋಗ್ಯವಂತ ಸುಖೀ ರಾಷ್ಟ್ರವನ್ನು ಕಟ್ಟಲು ಸಾಧ್ಯ. ಆಹಾರ, ಔಷಧ, ವ್ಯಾಯಾಮ, ಯೋಗ, ಪೂಜೆ, ಧ್ಯಾನ, ಆಧ್ಯಾತ್ಮಿಕತೆ, ದೇವಾಲಯಗಳು, ಪ್ರಾರ್ಥನಾ ಮಂದಿರಗಳು ಇವೆಲ್ಲವೂ ಸ್ವಸ್ಥ ಸಮಾಜ ನಿರ್ಮಾಣದ ಉದ್ದೇಶಕ್ಕಾಗಿ ಇರುವಂಥವು. ಜೊತೆಗೆ ಶಿಕ್ಷಣ, ಕಲೆ, ಸಾಹಿತ್ಯ, ಸಂಸ್ಕೃತಿ ಕೂಡ.


ಸರ್ವರ ಒಳಿತು ಮತ್ತು ಸಾಮಾಜಿಕ ಕಳಕಳಿ ಇಲ್ಲದ ಯಾವ ಜ್ಞಾನ ಸಂಪಾದಿಸಿ ಏನು ಪ್ರಯೋಜನ? ಕೇವಲ ಔಷಧ ನೀಡುವುದಷ್ಟೇ ವೈದ್ಯರ ಕೆಲಸವಲ್ಲ. 'ಸೇವೆ' ಎಂಬ ವಿಶಾಲ ಅರ್ಥ ಅದಕ್ಕಿದೆ. ಸಮಾಜಕ್ಕೆ ಆರೋಗ್ಯಶಿಕ್ಷಣ ನೀಡುವುದೂ ವೈದ್ಯಕೀಯ ಸೇವೆಯ ಇನ್ನೊಂದು ಜವಾಬ್ದಾರಿಯಾಗಿದೆ. ತುಂಬ ವ್ಯಾಪ್ತವಾದ ಭಿತ್ತಿಯಲ್ಲಿ ಆರೋಗ್ಯದ ಮಹತ್ತ್ವವನ್ನು ವಿವರಿಸುವುದು ಮತ್ತು  ಆ ಬಗೆಗಿನ ಶಿಕ್ಷಣವನ್ನು ಸಮಾಜಕ್ಕೆ ನೀಡುವುದು ಇಂದು ವೈದ್ಯರು ಮಾಡಬೇಕಾದ ಅತ್ಯಗತ್ಯ ಕೆಲಸವಾಗಿದೆ. ದಂತವೈದ್ಯರಾಗಿರುವ ಮುರಳೀಮೋಹನ ಚೂನ್ತಾರು ಅವರು ತನ್ನ ಚೌಕಟ್ಟನ್ನು ತುಸು ವಿಸ್ತರಿಸಿಕೊಂಡು ಈ ಕರ್ತವ್ಯವನ್ನು ನಿಭಾಯಿಸಿತ್ತಿರುವುದು ಸಂತೋಷ ಕೊಡತಕ್ಕ ವಿಷಯವಾಗಿದೆ.


ಡಾ. ಚೂಂತಾರು ಅವರು ದಂತವೈದ್ಯರಾಗಿರುವುದರಿಂದ ಮನುಷ್ಯನ ಮೂವತ್ತೆರಡು ಹಲ್ಲುಗಳಿಗೆ ಸಂವಾದಿಯಾಗಿ ಮೂವತ್ತೆರಡು ಲೇಖನಗಳನ್ನು ಇಲ್ಲಿ ನೀಡಿದ್ದಾರೆ. ವಯಸ್ಸಿಗೆ ತಕ್ಕಂತೆ ತಿನ್ನಿ, ಸಕ್ಕರೆ ಎಂಬ ಬಿಳಿವಿಷ, ನೀರು ಕುಡಿದು ನಿರೋಗಿಗಳಾಗಿ, ಖನಿಜಗಳ ಕಣಜ ಕಣಿಲೆ, ಪಪ್ಪಾಯಿಹಣ್ಣು, ಫರಂಗಿಹಣ್ಣು (ಅನನಾಸು), ಅಮೃತಸದೃಶ ಎಳನೀರು, ಕಬ್ಬಿನಹಾಲು ಎಂಬ ಜೀವರಸ, ಔಷಧೀಯ ಗುಣದ ನೆಲ್ಲಿಕಾಯಿ, ಅಮೃತಸದೃಶ ಜೀರಿಗೆನೀರು ಮುಂತಾದ ಲೇಖನಗಳು ಕುತೂಹಲದಾಯಕವಾಗಿದೆ. ಜನಸಾಮಾನ್ಯರು ತಿಳಿದುಕೊಳ್ಳಬೇಕಾದ ಹಲವು ಹೊಸ ವಿಷಯಗಳಿವೆ.


ಋತುಮಾನಕ್ಕೆ ಅನುಸರಿಸಿ ಪ್ರಕೃತಿಯಲ್ಲಿ ದೊರಕುವ ಸೊಪ್ಪು ಚಿಗುರು, ತರಕಾರಿ, ಗೆಡ್ಡೆಗೆಣಸು, ಹಣ್ಣುಹಂಪಲು, ದ್ರವಯುಕ್ತ ಆಹಾರಗಳನ್ನು ಹೇಗೆ, ಎಷ್ಟು ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಬಹುದು ಎಂಬುದು ಈ ಕೃತಿಯ ಮೂಲ ಅಂಶವಾಗಿದೆ.

ಡಾ. ಚೂಂತಾರು ಅವರ ಮನೆತನದ ಪಾರಂಪರಿಕ ಜ್ಞಾನ ಮತ್ತು ಸಮಾಜಮುಖೀ ಆಲೋಚನೆಗಳು ಅವರನ್ನು ರೂಪಿಸಿರುವುದಲ್ಲದೆ ಕೃತಿರಚನೆಯ ಹಿಂದೆ ಈ ಅಂಶಗಳು ದುಡಿದಿರುವುದು ಮಹತ್ತ್ವದ ಅಂಶವಾಗಿದೆ.

ಸರಳವಾದ ಭಾಷೆ, ವಿಷಯಮುಖಿಯಾದ ನಿರೂಪಣೆ, ಸಂಕ್ಷಿಪ್ತತೆ ಮತ್ತು ಲೇಖನಕ್ಕೆ ಪೂರಕವಾದ ಚಿತ್ರಗಳನ್ನು ಅಳವಡಿಸಿಕೊಂಡಿರುವುದು ಉಲ್ಲೇಖನೀಯ ಸಂಗತಿಯಾಗಿದೆ. ಸುಂದರವಾದ ಮುದ್ರಣ ಕೃತಿಯನ್ನು ಆಕರ್ಷಕವಾಗಿಸಿದೆ.

-ಡಾ. ವಸಂತಕುಮಾರ ಪೆರ್ಲ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


hit counter

0 تعليقات

إرسال تعليق

Post a Comment (0)

أحدث أقدم