ಬೋಳಾರ ಹಳೇಕೋಟೆ ಮಾರಿಯಮ್ಮ ದೇವಸ್ಥಾನದಲ್ಲಿ ಇಂದು ರಾಶಿ ಪೂಜೆ- ಮಾರಿ ಪೂಜೆ

Upayuktha
0


ಮಂಗಳೂರು: ಬೋಳಾರದ ಹಳೇಕೋಟೆ ಮಾರಿಯಮ್ಮ ದೇವಸ್ಥಾನದಲ್ಲಿ 2020ರಲ್ಲಿ ನಡೆದ ಬ್ರಹ್ಮಕಲಶೋತ್ಸವದಲ್ಲಿ ಕಾಷ್ಠ ಶಿಲ್ಪದ ಆಳೆತ್ತರದ ಮಾರಿಯಮ್ಮನ ವಿಗ್ರಹ‌ವನ್ನು ಪ್ರತಿಷ್ಠಾಪಿಸಲಾಗಿತ್ತು.


ಪೂರ್ವದಿಂದಲೂ ಆರಾಧಿಸಿಕೊಂಡು ಬಂದ ಎರಡು ಶಿಲಾ ಸಾನಿಧ್ಯಗಳನ್ನು ಹಾಗೆಯೇ ಉಳಿಸಿಕೊಂಡು ಸಿಂಹವಾಹಿನಿ ದುರ್ಗಾ ಸ್ವರೂಪದ ಮಾರಿದೇವತೆಯನ್ನು ಪೂಜಿಸಲಾಗುತ್ತಿದೆ.


ಮಾರಿಗುಡಿಯ ಸುತ್ತು ಪೌಳಿಯನ್ನು ಕೋಟೆಯ ಸ್ವರೂಪದಲ್ಲಿ ಮುರಕಲ್ಲಿನಿಂದ ಅಲಂಕರಿಸಲಾಗಿದೆ. ಮಾತಂಗಿ ವನದಲ್ಲಿ ಮಾತಂಗಿ ಕಟ್ಟೆ, ಮೈರಾಣ ಕಟ್ಟೆಯನ್ನು ಪುನರ್ನಿಮಿಸಲಾಗಿದೆ. ಶ್ರೀಗಂಧವೇ ಮೊದಲಾದ ವೃಕ್ಷಗಳನ್ನು ಬೆಳೆಸಲಾಗುತ್ತಿದೆ.


ಪ್ರಾಚೀನ ಶಿಲಾ ಪಾದುಕೆ, ಪ್ರಮಾಣ ದೀಪಸ್ಥಂಭಗಳನ್ನು ಉಳಿಸಿಕೊಂಡು ರಾಶಿಕಟ್ಟೆಯನ್ನು ನಿರ್ಮಿಸಲಾಗಿದೆ.


ಚಾರಿತ್ರಿಕ ಬಲಿಕಂಬ:

ಬೋಳಾರದ ಮಾರಿಯಮ್ಮನಿಗೆ ಶತಮಾನದ ಹಿಂದೆ ಕೋಣ ಬಲಿ ನೀಡಲಾಗುತ್ತಿತ್ತು. ಬಾಸೆಲ್ ಮಿಷನರಿಯ ಪೋಟೋ ಸಂಗ್ರಹಾಲಯದಲ್ಲಿ ಹದಿಮೂರು ಕೋಣಗಳನ್ನು ಬಲಿಕೊಟ್ಟ ಛಾಯಾಚಿತ್ರ ಇದೆ.

ಕೋಣಬಲಿಗೆ ಉಪಯೋಗಿಸುತ್ತಿದ್ದ ಪುರಾತನ ಆಯುಧಗಳಿಗೆ ನವರಾತ್ರಿ ಸಂದರ್ಭದಲ್ಲಿ ಆಯುಧಪೂಜೆ ನಡೆಸಲಾಗುತ್ತದೆ.


ಬೋಳಾರದ ಮಾರಿಯಮ್ಮನಿಗೆ ಕೋಣಬಲಿ ನೀಡಲಾಗುತ್ತಿತ್ತು!!

ಹೌದು.. ಒಂಭತ್ತು ದಶಕಗಳ ಹಿಂದೆ ಬೋಳಾರ ಹಳೇಕೋಟೆ ಮಾರಿಗುಡಿಯ ರಣಕಂಭದ ಬಳಿ ಒಂದಲ್ಲ ಎರಡಲ್ಲ.‌.. 13 ಕೋಣಗಳನ್ನು ಮಾರಿದೇವಿಗೆ ಬಲಿಕೊಡಲಾಗಿತ್ತು!!!



ಮಾರಿ ಪೂಜೆ ಎಂದರೆ ಮಾರಿಜಾತ್ರೆಯ ಪ್ರಧಾನ ಪೂಜೆ. ಪ್ರಾಣಿ ಬಲಿ ಮಾರಿ ಪೂಜೆಯ ಅವಿಭಾಜ್ಯ ಅಂಗ. ಮಾರಿಯಮ್ಮನ ಗಂಡನೇ ಕೋಣನ ರೂಪದಲ್ಲಿರುವ ಸುಳ್ಳುಗಾರ ಪಾತಕಿ ಎಂಬ ಪರಿಕಲ್ಪನೆಯಲ್ಲಿ ಕೋಣ ಬಲಿ ನೀಡಲಾಗುವುದು‌ ಅಲಂಕರಿಸಲ್ಪಟ್ಟ ಪಟ್ಟದ ಕೋಣದ ತಲೆಯನ್ನು ಒಂದೇ ಏಟಿಗೆ ಕತ್ತರಿಸಬೇಕು.

ಆ ತಲೆಯನ್ನು ಮಾರಿದೇವಿಯ ಎದುರಿಗಿರಿಸಿ, ಕೋಣದ ಕೊಬ್ಬಿನಿಂದ ಹಣತೆ ಹಚ್ಚಿ ತಲೆಯ ಮೇಲಿಡಬೇಕು. ಕೋಣದ ಬಲಗೈ (ಕಾಲು) ಕತ್ತರಿಸಿ ಬಾಯೊಳಗಿರಿಸಬೇಕು... ಇದು ಕೋಣ ಬಲಿ ವಿಧಾನ‌.


ಕೋಣದ ತಲೆಯನ್ನು ನೇತ್ರಾವತಿಯಲ್ಲಿ ವಿಸರ್ಜನೆ ಮಾಡಲಾಗುತ್ತಿತ್ತಂತೆ.


ಕೋಣದ ಮಾಂಸವನ್ನು ಭಕ್ತರಿಗೆ ಹಂಚಲಾಗುತ್ತಿತ್ತು. ಆ ಮಾಂಸವನ್ನು ಒಣಗಿಸಿ ಶೇಖರಿಸುವ (ಸೂಂಟಯಿ) ಕ್ರಮವೂ ಇತ್ತು!!!! 


ಬಾಸೆಲ್ ಮಿಷನರಿಯ ಸಂಗ್ರಹದಲ್ಲಿದ್ದ ಪೋಟೋಗಳನ್ನು ನಾನು "ಬೋಳಾರದ ಮಾರಿಯಮ್ಮ" ಗ್ರಂಥ ರಚಿಸುವಾಗ ಪ್ರಕಟಿಸಲು ಒದಗಿಸಿದವರು ಶ್ರೀ ಬೆನೆಟ್ ಅಮ್ಮನ್ನ.


ಅಂಗಣದಲ್ಲಿ ಅಣ್ಣಪ್ಪ ಪಂಜುರ್ಲಿ ನೇಮ

ಪ್ರಪ್ರಥಮ ಬಾರಿ ಮಾರಿಗುಡಿಯ ಅಂಗಣದಲ್ಲಿ ಅಣ್ಣಪ್ಪ ಪಂಜುರ್ಲಿ ದೈವದ ನೇಮವು ಬುಧವಾರ 27, ಎಪ್ರೀಲ್ ರಂದು ಜರಗಲಿದೆ. ಸಂಜೆ 6ಕ್ಕೆ ಗಗ್ಗರದೆಚ್ಚಿ, ರಾತ್ರಿ 8ಕ್ಕೆ ನೇಮದೆಚ್ಚಿ, ಮರುದಿನ ರಾತ್ರಿ 8ಕ್ಕೆ ಕ್ಷೇತ್ರಪಾಲ ರಾಜಗುಳಿಗ ಕೋಲ ನಡೆಯಲಿದೆ.

-ಕದ್ರಿ ನವನೀತ ಶೆಟ್ಟಿ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ




hit counter

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top