ಕುಮಾರಿ ಕವಿತಾ- ಆತ್ಮವಿಶ್ವಾಸದ ರಂಗಪ್ರವೇಶ; ಭರವಸೆ ಮೂಡಿಸಿದ ಉದಯೋನ್ಮುಖ ಪ್ರತಿಭೆ

Upayuktha
0

ಬೆಂಗಳೂರು: ಕುಮಾರಿ ಕವಿತಾ ಎಚ್ ಆರ್ ಅವರು ನಗರದ ಸೇವಾ ಸದನದ ವೇದಿಕೆಯ ಮೇಲೆ ತಮ್ಮ ಭರತನಾಟ್ಯ ರಂಗಪ್ರವೇಶವನ್ನು ಏ.24ರಂದು ಬೆಳಗ್ಗೆ ತುಂಬಿದ ಸಭೆಗೆ ಪ್ರದರ್ಶಿಸಿದರು. ನಾಡಿನ ಹೆಸರಾಂತ ನೃತ್ಯ ಗುರುಗಳಾದ ಶ್ರೀ ಅಶೋಕ್ ಕುಮಾರ್ ಮತ್ತು ಶ್ರೀಮತಿ ಪದ್ಮಿನಿ ಅಚ್ಚಿ ಅವರ ಸಮ್ಮುಖದಲ್ಲಿ ಬಹಳ ಆತ್ಮವಿಶ್ವಾಸದ ನೃತ್ಯ ಪ್ರದರ್ಶನ ಇದಾಗಿತ್ತು ಸಂಗೀತ್ ನೃತ್ಯ ಭಾರತಿ ಅಕಾಡೆಮಿಯ ಶ್ರೀಮತಿ ಪದ್ಮಾ ಹೇಮಂತ್ ಮತ್ತು ವಿದುಷಿ ಶೀತಲ್ ಹೇಮಂತ್ ರವರ ನೃತ್ಯ ತರಬೇತಿಯಲ್ಲಿ ಪಳಗಿದ ಕವಿತಾ ತಮ್ಮ ಆರಂಭದ ನೃತ್ಯ ಸ್ವರ ಪಲ್ಲವಿಯಲ್ಲೆ ಲಯದ ಮೇಲಿನ ತಮ್ಮ ಬಿಗಿತದಿಂದ ರಸಿಕರನ್ನು ಆಕರ್ಷಿಸಿದ್ದರು.


ಬಹಳ ಸುಂದರವಾಗಿ ಮೂಡಿ ಬಂದ ರಂಜನಿ ಮಾಲಾ ಪ್ರಸ್ತುತಿಯ ನೃತ್ತ- ಅಭಿನಯಗಳ ಮೇಳದಲ್ಲಿ ತಾನು ಮುಂದೊಂದು ದಿನ ಭರವಸೆಯ ನೃತ್ಯಗಾರ್ತಿ ಆಗಬಹುದೆಂಬ ಭರವಸೆಯನ್ನು ಮೂಡಿಸುವಂತಿತ್ತು. ಇನ್ನು ಮುಂದುವರಿದ ಉಗಾಭೋಗ ಮತ್ತು ದೇವರನಾಮಗಳಲ್ಲಿ ತಮ್ಮ ಅಮೋಘ ಅಭಿನಯದಿಂದ ಸಭಿಕರಲ್ಲಿ ಕಣ್ಣೀರು ತರಿಸಿದರಲ್ಲದೆ ನೃತ್ತದಷ್ಟೇ ತಾನು ಅಭಿನಯದಲ್ಲೂ ಗೆಲ್ಲಬಲ್ಲೆನೆಂಬ ಆತ್ಮವಿಶ್ವಾಸವನ್ನು ಮೆರೆದರು.


ರಂಗಪ್ರವೇಶದ ಹೃದಯಭಾಗವಾದ 'ನೀ ಇಂದ ಮಾಯಂ' - ವರ್ಣವು ಖಚಿತವಾದ ಹೆಜ್ಜೆಗಳಿಂದ, ಭಾವಪೂರ್ಣ ಅಭಿನಯದಿಂದ ಎಲ್ಲರ ಮನಸೆಳೆಯಿತು. ಚಿಕ್ಕ-ಚೊಕ್ಕ ಸಭಾಕಾರ್ಯಕ್ರಮದಲ್ಲಿ ಮಾತನಾಡಿದ ಅಶೋಕ್ ಕುಮಾರ್ ಮತ್ತು ಪದ್ಮಿನಿ ಅಚ್ಚಿ ರವರು ಕಲಾವಿದೆಗೆ ಶುಭಕೋರಿದರಲ್ಲದೆ ಗುರುಗಳ ಪರಿಶ್ರಮವನ್ನು ಮನಸಾರೆ ಹೊಗಳಿದರು. ಉತ್ತರಾರ್ಧ ಭಾಗವಾಗಿ ಮೂಡಿಬಂದ 'ಕಪಾಲಿನಿ ದಯಾನಿಧಿ...' ಬಿಗಿಯಾದ ನಡೆಗಳಿಂದ, ಜತಿಯಿಂದ ಜೊತೆಗೆ ಮನೋಹರವಾದ ಭಾವಭಂಗಿಗಳಿಂದ ಸಭಿಕರಿಗೆ ಬಹಳ ಇಷ್ಟವಾಯಿತು.


'ಸಾಕೋ ನಿನ್ನ ಸ್ನೇಹ..' - ಕನ್ನಡದ ಜಾವಳಿಯಲ್ಲಿ ತನ್ನ ನಲ್ಲನಿಗೆ ಛೀಮಾರಿ ಹಾಕುವ ಖಂಡಿತ ನಾಯಕಿಯಾಗಿ ಸೈ ಎನಿಸಿಕೊಂಡರು ಕವಿತಾ. ಬಿಗಿಯಾದ ಹಿಂದೋಳ ತಿಲ್ಲಾನದೊಂದಿಗೆ ಪ್ರದರ್ಶನ ಸಂಪನ್ನಗೊಳಿಸಿದರು ಕವಿತಾ. ಗುರುಗಳ ಎರಡೆರಡು ಧ್ವನಿಗಳಲ್ಲಿ ಮೂಡಿಬರುತ್ತಿದ್ದ ಜತಿಗಳ ಪ್ರಸ್ತುತಿ, ಅದ್ಭುತವಾದ ಬಾಲು ಶರ್ಮ ಅವರ ಗಾಯನ, ಪೂರಕವಾದ ಮಹೇಶ್ ಸ್ವಾಮಿ ಅವರ ಕೊಳಲು ಮತ್ತು ಹೇಮಂತ್ ರವರ ವಯೊಲಿನ್ ಜೊತೆಗಾರಿಕೆ, ಶ್ರೀ ಭವಾನಿ ಶಂಕರ್ ರವರ ಮೈನವಿರೇಳಿಸುವ ಮೃದಂಗ ವಾದನ ಮತ್ತು ಪ್ರಸನ್ನ ರವರ ರಿದಂ ಪ್ಯಾಡ್ ಹಿಮ್ಮೇಳಕ್ಕೆ ಕಳೆ ಕಟ್ಟಿಸಿತ್ತು. ಎಂದಿನಂತೆ ನಿರೂಪಣೆಯಲ್ಲಿ ತಮ್ಮ ಪ್ರೌಢಿಮೆಯನ್ನು ಮೆರೆದವರು ಶ್ರೀ ಸುಗ್ಗನಹಳ್ಳಿ ಷಡಕ್ಷರಿ. ಸಂಗೀತ್ ನೃತ್ಯ ಭಾರತಿ ಅಕಾಡೆಮಿಯ ಶ್ರೀಮತಿ ಪದ್ಮಾ ಹೇಮಂತ್ ಅವರ ಸಾರಥ್ಯದಲ್ಲಿ ಮೂಡಿಬಂದ ಮತ್ತೊಂದು ಹೆಮ್ಮೆಯ ಭರತನಾಟ್ಯ ರಂಗಪ್ರವೇಶ ಇದಾಗಿತ್ತು.

-ಪದ್ಮಾ ಹೇಮಂತ್


hit counter

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top