ಬೆಂಗಳೂರು: ಸಂಗೀತ್ ನೃತ್ಯ ಭಾರತಿ ಅಕಾಡೆಮಿಯ ಮತ್ತೊಂದು ಹೆಮ್ಮೆಯ ಭರತನಾಟ್ಯ ರಂಗಪ್ರವೇಶವು ಇದೇ ಏಪ್ರಿಲ್ 24 ಭಾನುವಾರದಂದು ಬೆಳಿಗ್ಗೆ 10.00ಕ್ಕೆ ನಗರದ ಮಲ್ಲೇಶ್ವರದ ಸೇವಾಸದನದಲ್ಲಿ ನಡೆಯಲಿದೆ.
ಗುರು ಶ್ರೀಮತಿ ಪದ್ಮಾ ಹೇಮಂತ್ ಮತ್ತು ವಿದುಷಿ ಶೀತಲ್ ಹೇಮಂತ್ ರವರ ಬಳಿ ನೃತ್ಯಾಭ್ಯಾಸ ಮಾಡುತ್ತಿರುವ ಕುಮಾರಿ ಕವಿತಾ ಎಚ್ ಆರ್ ತಮ್ಮ ಬಹುದಿನಗಳ ಕನಸು, ಮಹತ್ವಾಕಾಂಕ್ಷೆಯ ರಂಗಪ್ರವೇಶವನ್ನು ನೃತ್ಯ ಗುರುಗಳ, ಕಲಾರಸಿಕರ ಮತ್ತು ಗೌರವಾನ್ವಿತ ಅತಿಥಿಗಳಾಗಿ ಆಗಮಿಸುತ್ತಿರುವ ಭರತನಾಟ್ಯದ ಹಿರಿಯ ಗುರುಗಳಾದ ಕರ್ನಾಟಕ ಕಲಾಶ್ರೀ ಅಶೋಕ್ ಕುಮಾರ್ ಮತ್ತು ಮತ್ತೋರ್ವ ನೃತ್ಯಗುರು, ಕಿರುತೆರೆಯ ಕಲಾವಿದೆ, ಶ್ರೀಮತಿ ಪದ್ಮಿನಿ ಆಚ್ಚಿರವರುಗಳ ಸಮ್ಮುಖದಲ್ಲಿ ಪ್ರದರ್ಶಿಸಲಿದ್ದಾರೆ.
ಕವಿತಾರವರು ವೃತ್ತಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆದರೂ ತಮ್ಮ ಪ್ರವೃತ್ತಿ, ಭರತನಾಟ್ಯ ಕಲಿಕೆಗೂ ಸಹ ಸಾಕಷ್ಟು ಸಮಯ, ಪರಿಶ್ರಮವನ್ನು ಇತ್ತು ಗುರುಗಳ ಮಾರ್ಗದರ್ಶನದಲ್ಲಿ ತಾಲೀಮು ನಡೆಸಿದ್ದಾರೆ. ವಿದ್ಯೆಯ ಜೊತೆಗೆ ವಿನಯವು ಸೇರಿರುವ ಅಪರೂಪದ ಸಮ್ಮಿಲನವೆಂದು ಕವಿತಾಳನ್ನು ಬಣ್ಣಿಸುವ ಗುರು ಪದ್ಮ ಹೇಮಂತ್ ರವರ ಮಾತುಗಳು ಕವಿತಾ ರವರ ನೃತ್ಯ ಸಾಧನೆಗೆ ಅತ್ಯಂತ ಹಿರಿದಾದ ಪ್ರೋತ್ಸಾಹವೇ ಸರಿ.
ಈ ಸುಂದರ ಭರತನಾಟ್ಯ ರಂಗಪ್ರವೇಶಕ್ಕೆ ಕವಿತಾ ರವರಿಗೆ ಪಕ್ಕವಾದ್ಯದಲ್ಲಿ ಸಹಕರಿಸುತ್ತಿರುವ ಹಿರಿಯ ಕಲಾವಿದರುಗಳೆಂದರೆ, ನಟುವಾಂಗದಲ್ಲಿ ಗುರುಗಳಾದ ಗುರು ಶ್ರೀಮತಿ ಪದ್ಮಾ ಹೇಮಂತ್ ಮತ್ತು ವಿದುಷಿ ಶೀತಲ್ ಹೇಮಂತ್, ಗಾಯನದಲ್ಲಿ ವಿದ್ವಾನ್ ಶ್ರೀ ಬಾಲಸುಬ್ರಹ್ಮಣ್ಯ ಶರ್ಮ, ಮೃದಂಗದಲ್ಲಿ ವಿದ್ವಾನ್ ಶ್ರೀ ಭವಾನಿ ಶಂಕರ್, ವೈಲಿನ್ ನಲ್ಲಿ ವಿದ್ವಾನ್ ಬಿ ಆರ್ ಹೇಮಂತ್ ಕುಮಾರ್, ಕೊಳಲಿನಲ್ಲಿ ವಿದ್ವಾನ್ ಶ್ರೀ ವೇಣುಗೋಪಾಲ್ ಮತ್ತು ರಿದಂ ಪ್ಯಾಡ್ ನಲ್ಲಿ ವಿದ್ವಾನ್ ಶ್ರೀ ಪ್ರಸನ್ನಕುಮಾರ್ ಅವರು ಕಲಾರಸಿಕರ ಮನತಣಿಸಲಿದ್ದಾರೆ.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ