|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಧರ್ಮಸ್ಥಳದಲ್ಲಿ ಐವತ್ತನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ; 183 ಜೋಡಿಗಳು ಗೃಹಸ್ಥಾಶ್ರಮಕ್ಕೆ

ಧರ್ಮಸ್ಥಳದಲ್ಲಿ ಐವತ್ತನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ; 183 ಜೋಡಿಗಳು ಗೃಹಸ್ಥಾಶ್ರಮಕ್ಕೆ

ಬುಧವಾರ ಸಂಜೆ ಗಂಟೆ 6.50 ರ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ ಅಮೃತವರ್ಷಿಣಿ ಸಭಾಭವನದಲ್ಲಿ ನಡೆದ 50ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ 183 ಜೊತೆ ವಧೂ-ವರರು ಗೃಹಸ್ಥಾಶ್ರಮಕ್ಕೆ ಪದಾರ್ಪಣೆ ಮಾಡಿದರು.


ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು, ಕಂದಾಯ ಸಚಿವ ಆರ್. ಅಶೋಕ್, ಚಲನಚಿತ್ರ ನಟ ಗಣೇಶ್ ಮತ್ತು ಗಣ್ಯರು ಮಂಗಲ ಸೂತ್ರ ನೀಡಿ ಶುಭ ಹಾರೈಸಿದರು.


ಚಿತ್ರಗಳು: ಕೀರ್ತಿ ಮಂಗಳೂರು.


ಉಜಿರೆ: ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದಲ್ಲಿ ಬುಧವಾರ ಐವತ್ತನೇ ವರ್ಷದ ಉಚಿತ ಸಾಮೂಹಿಕ ವಿವಾಹದ ಸಂಭ್ರಮ, ಸಡಗರ. ಸಂಜೆ ಗಂಟೆ 6.50 ರ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ ಅಮೃತವರ್ಷಿಣಿ ಸಭಾಭವನದಲ್ಲಿ 183 ಜೊತೆ ವಧೂ-ವರರು ದಾಂಪತ್ಯ ಜೀವನಕ್ಕೆ ಪದಾರ್ಪಣೆ ಮಾಡಿದರು.

ಬೆಳಿಗ್ಯೆ ಹೆಗ್ಗಡೆಯವರ ನಿವಾಸದಲ್ಲಿ ವಧುವಿಗೆ ಸೀರೆ ಮತ್ತು ರವಕೆ ಹಾಗೂ ವರನಿಗೆ ಧೋತಿ, ಶಾಲು ವಿತರಿಸಿದರು.

ಸಂಜೆ 5 ಗಂಟೆಗೆ ಭವ್ಯ ಮೆರವಣಿಗೆಯಲ್ಲಿ ವಧೂ-ವರರು ದೇವಸ್ಥಾನಕ್ಕೆ ಪ್ರದಕ್ಷಿಣೆ ಬಂದು ಅಮೃತವರ್ಷಿಣಿ ಸಭಾಭವನದಲ್ಲಿ ಮದುವೆ ಮಂಟಪಕ್ಕೆ ಪ್ರವೇಶಿಸಿದರು.

ಅಲ್ಲಿ ಹೆಗ್ಗಡೆಯವರು ಮತ್ತು ಗಣ್ಯ ಅತಿಥಿಗಳು ಮಂಗಳಸೂತ್ರ ವಿತರಿಸಿ ಶುಭ ಹಾರೈಸಿದರು.


6.50 ರ ಗೋಧೂಳಿ ಲಗ್ನ ಸುಮೂಹರ್ತದಲ್ಲಿ ವೇದಘೋಷ, ಮಂತ್ರ, ಪಠಣದೊಂದಿಗೆ ಮಂಗಳವಾದ್ಯಗಳ ನಿನಾದದೊಂದಿಗೆ ಜಾತಿವಾರು ಸಂಪ್ರದಾಯದಂತೆ ಧಾರ್ಮಿಕ ವಿಧಿ-ವಿಧಾನಗಳನ್ನು ನಡೆಸಿ ಮಂತ್ರಾಕ್ಷತೆ, ಹಾರ ವಿನಿಮಯ ಹಾಗೂ ಮಾಂಗಲ್ಯ ಧಾರಣೆಯೊಂದಿಗೆ ವಿವಾಹ ನೆರವೇರಿಸಲಾಯಿತು.


ನೂತನ ದಂಪತಿಗಳಿಂದ ಪ್ರತಿಜ್ಞಾ ವಿಧಿ: ಧರ್ಮಸ್ಥಳದಲ್ಲಿ ಇಂದು ಮಂಗಲ ಮುಹೂರ್ತದಲ್ಲಿ ವಧೂ-ವರರಾಗಿ ಪವಿತ್ರ ಬಾಂಧವ್ಯವನ್ನು ಹೊಂದಿರುವ ನಾವು ಮುಂದೆ ಜೀವನದುದ್ದಕ್ಕೂ ಧರ್ಮ, ಅರ್ಥ, ಕಾಮದಲ್ಲಿ ಸಹಚರರಾಗಿ, ಪರಸ್ಪರ ಪ್ರೀತಿ-ವಿಶ್ವಾಸದಿಂದ ಒಬ್ಬರಿಗೊಬ್ಬರು ವಂಚನೆ ಮಾಡದೆ ಹಾಗೂ ಯಾವುದೇ ದುರಭ್ಯಾಸಗಳಿಗೂ ತುತ್ತಾಗದೆ ಬದುಕುತ್ತೇವೆ ಎಂದು ಭಗವಾನ್ ಶ್ರೀ ಮಂಜುನಾಥ ಸ್ವಾಮಿಯ ದಿವ್ಯ ಸನ್ನಿಧಿಯಲ್ಲಿ ಮತ್ತು ಪೂಜ್ಯ ಹೆಗ್ಗಡೆಯವರ ಸಮಕ್ಷಮದಲ್ಲಿ ಪ್ರಮಾಣವಚನ ಬದ್ಧರಾಗುತ್ತಿದ್ದೇವೆ.


ಬಳಿಕ ನೂತನ ದಂಪತಿಗಳು ದೇವಸ್ಥಾನಕ್ಕೆ ಹೋಗಿ ದೇವರದರ್ಶನ ಪಡೆದು ಅನ್ನಪೂರ್ಣ ಭೋಜನಾಲಯದಲ್ಲಿ ಮದುವೆ ಊಟ ಸ್ವೀಕರಿಸಿ ತಮ್ಮ ಊರಿಗೆ ಮರಳಿದರು.


ಗಣ್ಯರ ಸಂದೇಶ

ಕಂದಾಯ ಸಚಿವ ಆರ್. ಅಶೋಕ್ ಮಾತನಾಡಿ, ಬದುಕಿನಲ್ಲಿ ಆಸ್ತಿ, ಅಂತಸ್ತು ಮುಖ್ಯ ಅಲ್ಲ. ಪ್ರೀತಿ-ವಿಶ್ವಾಸವೇ ಮುಖ್ಯ. ಬಡತನ - ಸಿರಿತನ ಶಾಶ್ವತವಲ್ಲ. ಪ್ರೀತಿ-ವಿಶ್ವಾಸವಿಲ್ಲ್ಲದಿದ್ದರೆ ಬದುಕಿಗೆ ಅರ್ಥವಿಲ್ಲ ಎಂದು ಹೇಳಿದರು. ಗಂಡ-ಹೆಂಡತಿ ಸದಾ ಪರಸ್ಪರ ಅರ್ಥೈಸಿಕೊಂಡು ಪ್ರೀತಿ-ವಿಶ್ವಾಸದಿಂದ ಸಾರ್ಥಕ ಜೀವನ ನಡೆಸಬೇಕು ಎಂದು ಹಾರೈಸಿದರು. 


ಮನೆಬಾಗಿಲಿಗೆ ಸರ್ಕಾರದ ಸೇವೆ: 72 ಗಂಟೆಗಳೊಳಗೆ ಮನೆ ಬಾಗಿಲಿಗೆ ಸರ್ಕಾರದಿಂದ ದೂರವಾಣಿ ಮೂಲಕ ವೃದ್ಧಾಪ್ಯ ವೇತನ ನೀಡುವ ಕಾರ್ಯಕ್ರಮ ಸದ್ಯದಲ್ಲಿಯೇ ಜಾರಿಗೆ ಬರಲಿದೆ ಎಂದು ಸಚಿವರು ಪ್ರಕಟಿಸಿದರು. ಮುಖ್ಯಮಂತ್ರಿಯವರ ನೇತೃತವ್ದಲ್ಲಿ ಈ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಎಲ್ಲರೂ ಸತ್ಯ, ಧರ್ಮದ ಹಾದಿಯಲ್ಲಿ ನಡೆದು ಸುಖ-ಶಾಂತಿ ಮತ್ತು ನೆಮ್ಮದಿಯ ಜೀವನ ನಡೆಸುವಂತಾಗಲಿ ಎಂದು ಅವರು ಹಾರೈಸಿದರು.


ಚಲನಚಿತ್ರ ನಟ ಗಣೇಶ್ ವರನಟ ರಾಜ್‍ಕುಮಾರ್ ಹಾಡಿದ “ಹೊಸ ಬಾಳಿನ ಹೊಸಿಲಲಿ ನಿಂತಿರುವ ಹೊಸ ಜೋಡಿಗೆ …….” ಹಾಡನ್ನು ಸುಶ್ರಾವ್ಯವಾಗಿ ಹಾಡಿ  ನೂತನ ದಂಪತಿಗಳಿಗೆ ಶುಭ ಕೋರಿದರು.


ಸತ್ಯ., ಧರ್ಮ, ನ್ಯಾಯ ಮತ್ತು ನೀತಿಗೆ ಪ್ರಸಿದ್ಧವಾದ ಧರ್ಮಸ್ಥಳಕ್ಕೆ ತಾನು ವರ್ಷಕ್ಕೊಮ್ಮೆ ಬಂದು ದೇವರ ದರ್ಶನ ಪಡೆದು ಸೇವೆ ಮಾಡಿ ಹೋಗುತ್ತೇನೆ ಎಂದು ಹೇಳಿದರು. 


ಸಂಸಾರ ಸಾಗರಕ್ಕೆ ಧುಮುಕಿದ ನವದಂಪತಿಗಳು ಶ್ರೀ ಸ್ವಾಮಿಯ ಅನುಗ್ರಹದಿಂದ ಸುಖ-ಶಾಂತಿ ಮತ್ತು ನೆಮ್ಮದಿಯ ಜೀವನ ನಡೆಸುವಂತಾಗಲಿ ಎಂದು ಹಾರೈಸಿದರು.


ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಆಶೀರ್ವದಿಸಿ, ಸಾಮೂಹಿಕ ವಿವಾಹ ಸರಳ ಜೀವನಕ್ಕೆ ನಾಂದಿಯಾಗಬೇಕು. ಮದುವೆಯ ಹೆಸರಿನಲ್ಲಿ ದುಂದು ವೆಚ್ಚ ಮಾಡಬಾರದು. ವಿವಾಹಕ್ಕಾಗಿ ಮಾಡುವ ದುಂದು ವೆಚ್ಚ, ವರದಕ್ಷಿಣೆ, ಜೀತಪದ್ಧತಿ ಮೊದಲಾದ ಸಮಸ್ಯೆಗಳನ್ನು ನಿವಾರಿಸಲಿಕ್ಕಾಗಿ ಸಾಮೂಹಿಕ ವಿವಾಹ ಯೋಜನೆಯನ್ನು ಧರ್ಮಸ್ಥಳದಲ್ಲಿ ಆರಂಭಿಸಲಾಯಿತು. ಇಂದು ಜಾತಿ-ಮತ, ಅಂತಸ್ತಿನ ಬೇಧ ಮರೆತು 60 ಜೊತೆ ಅಂತರ್ಜಾತೀಯ ವಿವಾಹವಾದ ಬಗ್ಗೆ ಅವರು ಮೆಚ್ಚುಗೆ ವ್ಯಕ್ತ ಪಡಿಸಿದರು. ಇವರಿಗೆ ವಿವಾಹ ನೋಂದಣಿ ಪ್ರಮಾಣ ಪತ್ರ ನೀಡಿ ಅದು ಮುಂದೆ ಉದ್ಯೋಗ, ಶಿಕ್ಷಣ ಹಾಗೂ ಸರ್ಕಾರದ ನೆರವು ಪಡೆಯಲು ಸಹಕಾರಿಯಾಗಿದೆ ಎಂದು ಹೇಳಿದರು. ಧರ್ಮಸ್ಥಳದಲ್ಲಿ ಮದುವೆಯಾದವರು ಪರಸ್ಪರ ಅರಿತುಕೊಂಡು ಶಾಂತಿ-ಸಹನೆ ಮತ್ತು ಪ್ರೀತಿ-ವಿಶ್ವಾಸದಿಂದ ನೆಮ್ಮದಿಯ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು. ಮದುವೆಯ ಪಾವಿತ್ರ್ಯ ಮತ್ತು ಗಂಭಿüೀರತೆಯನ್ನು ಅರ್ಥಮಾಡಿಕೊಂಡು ಸಾರ್ಥಕ ಜೀವನ ನಡೆಸಿ ಎಂದು ಹಾರೈಸಿದರು. 


ಶಾಸಕರುಗಳಾದ ಕೃಷ್ಣಪ್ಪ ಮತ್ತು ಹರೀಶ್ ಪೂಂಜ, ಹೇಮಾವತಿ ವಿ. ಹೆಗ್ಗಡೆ, ಡಿ. ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು.


ಮುಖ್ಯಾಂಶಗಳು:

• ಮದುವೆಯಲ್ಲಿ ಸುಶ್ರಾವ್ಯ ಶೋಭಾನೆ ಹಾಡುಗಳು ಸಮಾರಂಭಕ್ಕೆ ವಿಶೇಷ ಮೆರುಗನ್ನು ನೀಡಿದವು.

• 1972 ರಲ್ಲಿ ಪ್ರಥಮ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಮದುವೆಯಾದ ಪಕೀರ ಪೂಜಾರಿ ಮತ್ತು ಸೋಮನಾಥ ಶೆಟ್ಟಿ ದಂಪತಿಯನ್ನು ಸನ್ಮಾನಿಸಲಾಯಿತು.

• 1972 ರಲ್ಲಿ ಸಾಮೂಹಿಕ ವಿವಾಹದಲ್ಲಿ 88 ಜೊತೆ ವಿವಾಹವಾಗಿದ್ದು ಪ್ರತಿವರ್ಷ ಏಪ್ರಿಲ್ ತಿಂಗಳಿನಲ್ಲಿ ಧರ್ಮಸ್ಥಳದಲ್ಲಿ ಉಚಿತ ಸಾಮೂಹಿಕ ವಿವಾಹ ನಡೆಸುತ್ತಿದ್ದು ಕಳೆದ ವರ್ಷದವರೆಗೆ 12,393 ಜೊತೆ ವಿವಾಹವಾಗಿದ್ದು, ಸುಖ-ಶಾಂತಿ, ನೆಮ್ಮದಿಯ ದಾಂಪತ್ಯ ಜೀವನ ನಡೆಸುತ್ತಿದ್ದಾರೆ.

• ವಿವಾಹ ನೋಂದಣಿ ಕಚೇರಿಯ ಅಧಿಕಾರಿಗಳು ಉಪಸ್ಥಿತರಿದ್ದು ವಿವಾಹ ನೋಂದಣಿ ಪ್ರಮಾಣಪತ್ರ ಸದ್ಯದಲ್ಲಿಯೇ ನೀಡಲಾಗುವುದು.

• 50ನೆ ವರ್ಷದ ಸಾಮೂಹಿಕ ವಿವಾಹದ ಸವಿನೆನಪಿಗಾಗಿ ಪ್ರತಿ ದಂಪತಿಗೆ ಹೆಗ್ಗಡೆಯವರು 5,000 ರೂ. ಮೌಲ್ಯದ ಅಡುಗೆ ಪರಿಕರಗಳ ಸೆಟ್ ಉಡುಗೊರೆಯಾಗಿ ನೀಡಿದರು.

• ಒಟ್ಟು 183 ಜೊತೆಯಲ್ಲಿ 60 ಜೊತೆ ಅಂತರ್ಜಾತೀಯ ವಿವಾಹವಾಗಿರುತ್ತಾರೆ.

• ತಮ್ಮ ವಿವಾಹದ ಸುವರ್ಣ ಮಹೋತ್ಸವ ಸಂಭ್ರಮದಲ್ಲಿರುವ ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಹೇಮಾವತಿ ಹೆಗ್ಗಡೆ ದಂಪತಿಯನ್ನು ಆರತಿ ಬೆಳಗಿ ಗೌರವಿಸಲಾಯಿತು. 


ಡಿ. ಹರ್ಷೇಂದ್ರ ಕುಮಾರ್ ಸ್ವಾಗತಿಸಿದರು. ಗಣೇಶ್ ಕಾಮತ್ ಧನ್ಯವಾದವಿತ್ತರು. ಬಾರಕೂರಿನ ದಾಮೋದರ ಶರ್ಮಾ ಕಾರ್ಯಕ್ರಮ ನಿರ್ವಹಿಸಿದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



hit counter

0 تعليقات

إرسال تعليق

Post a Comment (0)

أحدث أقدم