|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಖಗೋಳಾಸಕ್ತರಿಗೆ ಹಬ್ಬ: ಒಂದೇ ಸಾಲಿನಲ್ಲಿ ಕಾಣಿಸಿಕೊಳ್ಳುತ್ತಿರುವ ಶನಿ, ಮಂಗಳ, ಶುಕ್ರ ಗುರು ಗ್ರಹಗಳು

ಖಗೋಳಾಸಕ್ತರಿಗೆ ಹಬ್ಬ: ಒಂದೇ ಸಾಲಿನಲ್ಲಿ ಕಾಣಿಸಿಕೊಳ್ಳುತ್ತಿರುವ ಶನಿ, ಮಂಗಳ, ಶುಕ್ರ ಗುರು ಗ್ರಹಗಳು


ಈ ತಿಂಗಳು, ಸಂಜೆ ಸೂರ್ಯಾಸ್ತವಾಗುತ್ತಿದ್ದಂತೆ, ಆಗಸದಲ್ಲಿ ಸರಳ ರೇಖೆಯನ್ನು ರೂಪಿಸುವ 3 ನಕ್ಷತ್ರಗಳನ್ನು ನಾವು ಗಮನಿಸಬಹುದು. ಇದನ್ನು ಓರೈಯನ್ ಪಟ್ಟಿ ಎನ್ನುತ್ತೇವೆ ಮತ್ತು  ಖಗೋಳಶಾಸ್ತ್ರದ ಬಗ್ಗೆ ಹೆಚ್ಚು ತಿಳಿಯದಿದ್ದವರೂ ಸಹ ಇದನ್ನು ಸುಲಭವಾಗಿ ಗುರುತಿಸಬಹುದು. ಅಲ್ಲದೆ ಈ ತಿಂಗಳ ಮುಂಜಾನೆಯ ಆಕಾಶ, ಖಗೋಳಾಸಕ್ತರಿಗೆ ವರದಾನವಿದ್ದಂತೆ. ಮುಂಜಾನೆ 4.30 ರ ನಂತರ ಒಮ್ಮೆ ಆಗಸದೆಡೆಗೆ ಕಣ್ಣು ಹಾಯಿಸಿದರೆ, ಪೂರ್ವ ದಿಗಂತದ ಬಳಿ, 4 ಪ್ರಕಾಶಮಾನ ಬಿಂದುಗಳಿಂದ ರಚಿಸಲ್ಪಟ್ಟ ಸರಳ ರೇಖೆಯನ್ನು, ಓರೈಯನ್ ಪಟ್ಟಿಯಂತೆಯೇ ಆದರೆ ಇನ್ನೂ ದೊಡ್ಡದಾಗಿ, ಗಮನಿಸಬಹುದು, ಇವುಗಳು ಮೇಲಿನಿಂದ ಕ್ರಮವಾಗಿ 4 ಗ್ರಹಗಳು ಶನಿ, ಮಂಗಳ, ಶುಕ್ರ ಮತ್ತು ಗುರು.


ಭೂಮಿಯು ಸೂರ್ಯನ ಸುತ್ತ ತನ್ನ ಕಕ್ಷೆಯಲ್ಲಿ ಚಲಿಸುತ್ತದೆ, ಈ ಕಕ್ಷೆಯ ಸಮತಲವನ್ನು ನಾವು ಕ್ರಾಂತಿವೃತ್ತ (ecliptic) ಎಂದು ಕರೆಯುತ್ತೇವೆ. ಭೌತಶಾಸ್ತ್ರದ ನಿಯಮಗಳಿಂದ, ಎಲ್ಲಾ ಗ್ರಹಗಳು ಸೂರ್ಯನನ್ನು ಸುತ್ತುತ್ತವೆ, ಹಾಗೂ ಸುಮಾರಾಗಿ ಎಲ್ಲಾ ಗ್ರಹಗಳ ಸಮತಲಗಳು ಒಂದೇ ರೀತಿಯಾಗಿರುತ್ತವೆ ಎನ್ನಬಹುದು. ಚಂದ್ರನು ಭೂಮಿಯ ಸುತ್ತ ಚಲಿಸುತ್ತಾನೆ, ಈ ಸಮತಲವೂ ಸಹ ಕ್ರಾಂತಿವೃತ್ತದ ಸಮತಲಕ್ಕೆ ಬಹಳ ಹತ್ತಿರದಲ್ಲಿದೆ ಮತ್ತು ಕೇವಲ 5 ಡಿಗ್ರಿಗಳಷ್ಟು ಓರೆಯಾಗಿದೆ.


ಸೂರ್ಯನ ಸುತ್ತ ಸುತ್ತುತ್ತಿರುವ ನಮ್ಮ ಭೂಮಿಯಿಂದ ಆಕಾಶಕಾಯಗಳನ್ನು ವೀಕ್ಷಿಸಿದಾಗ, ಸೂರ್ಯನ ಪಥವನ್ನು ಹಿನ್ನೆಲೆ ನಕ್ಷತ್ರಗಳಿಗೆ ಅನುಗುಣವಾಗಿ ಗಮನಿಸಬಹುದು, ಈ ನಕ್ಷತ್ರಗಳು ರಾಶಿಚಕ್ರ ನಕ್ಷತ್ರ ಪುಂಜಗಳನ್ನು ರೂಪಿಸುತ್ತವೆ. ಆಕಾಶದಲ್ಲಿ ಸೂರ್ಯನು ಚಲಿಸುವ ಕ್ರಾಂತಿ ವೃತ್ತದ ಪಥದಲ್ಲಿ ಚಂದ್ರ ಮತ್ತು ಇತರ ಗ್ರಹಗಳು ಚಲಿಸುವಂತೆ ತೋರುತ್ತದೆ. ಆದ್ದರಿಂದ, ಭೂಮಿಯಿಂದ ನೋಡಿದಾಗ ಸೂರ್ಯನ ಸುತ್ತ ವಿಭಿನ್ನ ವೇಗಗಳಲ್ಲಿ ಸುತ್ತುವ ಗ್ರಹಗಳು ಪರಸ್ಪರ ಸಮೀಪಕ್ಕೆ ಮತ್ತು ದೂರಕ್ಕೆ ಚಲಿಸುವಂತೆ ತೋರುತ್ತವ ಮೂಲಕ ಗ್ರಹಗಳ ಯುತಿ ಮತ್ತು ವಿಯುತಿ ವಿದ್ಯಮಾನಗಳು ಸಂಭವಿಸುತ್ತವೆ.


ಪ್ರಸ್ತುತ, ಬುಧ ಗ್ರಹವನ್ನು ಹೊರತುಪಡಿಸಿ, ಗೋಚರಿಸುವ 4 ಗ್ರಹಗಳು ಸೂರ್ಯನ ಪಶ್ಚಿಮದಲ್ಲಿವೆ ಮತ್ತು ನೇರ ರೇಖೆಯಲ್ಲಿ ಕಾಣುವಷ್ಟು ಹತ್ತಿರದಲ್ಲಿವೆ. ಬಳೆಗಳನ್ನು ಹೊಂದಿರುವ ಶನಿಯು ಮುಂಜಾನೆ ಸುಮಾರು 2 ಗಂಟೆಗೆ ಉದಯಿಸಿದರೆ, ಅದರ ನಂತರ ಕೆಂಪು ಗ್ರಹವಾದ ಮಂಗಳ ಗ್ರಹವು 3 ಗಂಟೆಗೆ ಕಾಣಿಸಿಕೊಳ್ಳುತ್ತದೆ. ಬೆಳ್ಳಿ ಚುಕ್ಕಿ ಎನಿಸಿಕೊಳ್ಳುವ ಪ್ರಕಾಶಮಾನವಾದ ಶುಕ್ರ ಗ್ರಹವು ಪ್ರಸ್ತುತ, ಮುಂಜಾನೆ 3.30 ರ ಸುಮಾರಿಗೆ ದಿಗಂತದ ಮೇಲೆ ಕಾಣಿಸಿಕೊಳ್ಳುತ್ತದೆ ಮತ್ತು ದೈತ್ಯ ಗ್ರಹವಾದ ಗುರುವು ಪೂರ್ವ ದಿಗಂತದಿಂದ 4 ಗಂಟೆಗೆ ಮೇಲೇರುತ್ತದೆ. ಮುಂಜಾನೆ ಸುಮಾರು 4.30 ರ ಸಮಯವು ಈ 4 ಗ್ರಹಗಳನ್ನು ಸರಳ ರೇಖೆಯಲ್ಲಿ ನೋಡಲು ಸೂಕ್ತ ಕಾಲವಾಗಿರುತ್ತದೆ. ಏಪ್ರಿಲ್ 24 ರಂದು ಈ ಐವರ ಜೊತೆಗೆ ಚಂದ್ರನೂ ಸೇರಿ ನಾವು 5 ಬಿಂದುಗಳ ಸರಳ ರೇಖೆಯನ್ನು ನೋಡಬಹುದು.


ಗ್ರಹಗಳು ನಿಧಾನವಾಗಿ ದೂರ ಸರಿಯುವುದರಿಂದ ಮುಂಬರುವ ತಿಂಗಳುಗಳಲ್ಲಿ ಈ ಸಂರಚನೆಯಲ್ಲಿ ಗೋಚರಿಸುತ್ತವೆ. ಪ್ರಸ್ತುತ ಶುಕ್ರ ಗ್ರಹವು ಪ್ರತಿ ದಿನವೂ ಪೂರ್ವ ದಿಗಂತದ ಕಡೆಗೆ ಚಲಿಸುತ್ತಿದೆ, ಹಾಗೂ ಇತರ ಮೂರು ಗ್ರಹಗಳು ಪಶ್ಚಿಮಕ್ಕೆ ಚಲಿಸುವಂತೆ ತೋರುತ್ತಿದೆ. ಈ ವರ್ಷ ಮೇ 1 ರಂದು ಗುರು ಹಾಗೂ ಶುಕ್ರ ಗ್ರಹದ ಯುತಿಯು ಸಂಭವಿಸುತ್ತದೆ ಆಗ ಅವೆರಡರ ಮಧ್ಯೆ ಕೇವಲ 0.25 ಡಿಗ್ರಿಯಷ್ಟು ಅಂತರವಿದ್ದಂತೆ ಗೋಚರಿಸುತ್ತದೆ. ಈ ಸಂರಚನೆಯಲ್ಲಿ ಗುರು ಗ್ರಹವು ಶುಕ್ರ ಗ್ರಹವನ್ನು ದಾಟಿ ಮಂಗಳ ಗ್ರಹದ ಕಡೆಗೆ ಚಲಿಸುತ್ತದೆ.


ಈ ಗ್ರಹಗಳು ಆಕಾಶದಲ್ಲಿ ಪರಸ್ಪರ ಹತ್ತಿರದಲ್ಲಿ ಕಾಣಿಸಿಕೊಂಡರೂ, ಅವುಗಳು ನಮ್ಮಿಂದ ಬೇರೆ ಬೇರೆ ಅಂತರದಲ್ಲಿವೆ. ಶನಿ ಗ್ರಹವು ಪ್ರಸ್ತುತ ನಮ್ಮಿಂದ 150 ಕೋಟಿ ಕಿ.ಮೀ. ದೂರದಲ್ಲಿದ್ದರೆ, ಗುರು ಗ್ರಹವು 86 ಕೋಟಿ ಕಿ.ಮೀ. ದೂರದಲ್ಲಿದೆ, ಮಂಗಳ ಮತ್ತು ಶುಕ್ರ ಗ್ರಹಗಳು ಕ್ರಮವಾಗಿ 25 ಕೋಟಿ ಕಿ.ಮೀ. ಮತ್ತು 13 ಕೋಟಿ ಕಿ.ಮೀ. ದೂರದಲ್ಲಿವೆ.


ಆದ್ದರಿಂದ, ಇದು ಕೇವಲ ಗ್ರಹಗಳು ತಮ್ಮದೇ ಆದ ವೇಗದಲ್ಲಿ ಸೂರ್ಯನ ಸುತ್ತ ಚಲಿಸುವುದರಿಂದ ಒಂದೇ ಸಾಲಿನಲ್ಲಿ ಕಾಣಿಸಿಕೊಳ್ಳುತ್ತವೆಯಾದರೂ, ಹವ್ಯಾಸಿ ಖಗೋಳ ವೀಕ್ಷಕರಿಗೆ ಇದೊಂದು ವಿಶೇಷ ವಿದ್ಯಮಾನವಾಗಿದೆ. ಈ ವಿಶೇಷ ವಿದ್ಯಮಾನವನ್ನು ಎಲ್ಲಾ ಆಸಕ್ತರು ನೋಡಿ ಆನಂದಿಸುವಂತಾಗಲಿ ಎಂದು PAAC ತಂಡ ಆಶಿಸುತ್ತದೆ.


-ಅತುಲ್ ಭಟ್‌

ಭೌತಶಾಸ್ತ್ರ ಪ್ರಾಧ್ಯಾಪಕರು,

ಪೂರ್ಣಪ್ರಜ್ಞ ಕಾಲೇಜು ಉಡುಪಿ

ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘ, ಉಡುಪಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


hit counter

0 Comments

Post a Comment

Post a Comment (0)

Previous Post Next Post