ಉಡುಪಿ: ಈ ಬೇಸಿಗೆಯಲ್ಲಿ ದಣಿದ ಹಕ್ಕಿಗಳಿಗೆ ನೀರುಣಿಸುವ ವಿಶೇಷ ಕಾರ್ಯಕ್ರಮವನ್ನು ಮಹಾತ್ಮ ಗಾಂಧಿ ಮೆಮೊರಿಯಲ್ ಕಾಲೇಜ್ ಉಡುಪಿ ಇಲ್ಲಿ ನಡೆಸಲಾಗುತ್ತಿದೆ. ಕಾಲೇಜಿನ ಇಕೋ ಕ್ಲಬ್ ಹಾಗೂ ಪ್ರಾಣಿಶಾಸ್ತ್ರ ವಿಭಾಗದ ಮುಂದಾಳತ್ವದಲ್ಲಿ ಇಕೋ ಕ್ಲಬ್‌ನ ವಿದ್ಯಾರ್ಥಿಗಳು ಕಾಲೇಜು ಆವರಣದ ಹಲವೆಡೆ ನೀರಿನ ಮಡಿಕೆಗಳನ್ನು ಇರಿಸಿದ್ದಾರೆ.
‘ವಿಶ್ವ ಗುಬ್ಬಚ್ಚಿಗಳ ದಿನ’ದ ಅಂಗವಾಗಿ ‘ದಣಿದ ಹಕ್ಕಿಗಳಿಗಾಗಿ ನೀರಿನ ಮಡಿಕೆ’ ಎಂಬ ಪರಿಕಲ್ಪನೆಯೊಂದಿಗೆ ಈ ಕಾರ್ಯಕ್ರಮವನ್ನು ಪ್ರಾರಂಭಿಸಲಾಗಿದ್ದು ಮಾರ್ಚ್ 9ರಂದು ಕಾಲೇಜಿನ ಪ್ರಾಂಶುಪಾಲರಾದ ಡಾ|| ದೇವಿದಾಸ್ ಎಸ್ ನಾಯ್ಕ್ ಇವರು ಮಡಿಕೆಗೆ ನೀರು ತುಂಬುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಇವರು ವಿದ್ಯಾರ್ಥಿಗಳ ಈ ಚಿಂತನೆಯು ಶ್ಲಾಘನೀಯ ಎಂದರು.
ಇಕೋ ಕ್ಲಬ್‌ನ ಸಂಚಾಲಕಿ ಹಾಗೂ ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥೆಯಾದ ಡಾ|| ಮನೀತಾ ಟಿ.ಕೆ. ಹಾಗೂ ಸಹಾಯಕ ಪ್ರಾಧ್ಯಾಪಕಿ ಯಶಸ್ವಿನಿ ಬಿ. ಇವರು ಕಾರ್ಯಕ್ರಮವನ್ನು ಆಯೋಜಿಸಿದ್ದು, ಕಾಲೇಜಿನ ಪ್ರಾಂಶುಪಾಲರಾದ ಡಾ|| ದೇವಿದಾಸ್ ಎಸ್ ನಾಯ್ಕ್, ಐ.ಕ್ಯು.ಎ.ಸಿ. ಸಂಯೋಜಕರು ಹಾಗೂ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಅರುಣ್ ಕುಮಾರ್ ಬಿ, ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆಯಾದ ಉಷಾರಾಣಿ ಎಸ್ ಸುವರ್ಣ, ಸಸ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಅಭಿಲಾಷ್ ಹಾಗೂ ಸಸ್ಯಶಾಸ್ತ್ರ ಮತ್ತು ಪ್ರಾಣಿಶಾಸ್ತ್ರ ವಿಭಾಗದ ಕಛೇರಿ ಸಹಾಯಕರಾದ ಮೇಘರ್ಷ ಹಾಗೂ ಮಾಧವ ಇವರು ಕಾರ್ಯಕ್ರಮ ಯಶಸ್ವಿಯಾಗುವಲ್ಲಿ ಸಹಕರಿಸಿದರು.
ಇಕೋ ಕ್ಲಬ್‌ನ ಸರ್ವಸದಸ್ಯರು ಹಾಗೂ ಪ್ರಾಣಿಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಅತ್ಯಂತ ಉತ್ಸಾಹದಿಂದ ಭಾಗವಹಿಸಿದರು. ವಿದ್ಯಾರ್ಥಿಗಳ ಈ ಉತ್ಸುಕತೆಯು ಅವರಿಗೆ ಇತರ ಜೀವರಾಶಿಗಳ ಮೇಲಿರುವ ಪ್ರೀತಿ ಮತ್ತು ಆಸಕ್ತಿಯನ್ನು ಬಿಂಬಿಸಿತು.
ವಿದ್ಯಾರ್ಥಿಗಳು ಹಲವು ಗುಂಪುಗಳನ್ನು ರಚಿಸಿಕೊಂಡು ಈ ಮಡಿಕೆಗಳಿಗೆ ನಿರಂತರವಾಗಿ ನೀರು ತುಂಬಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಇದರಿಂದಾಗಿ ಕಾಲೇಜಿನ ಸುತ್ತಮುತ್ತ ಇರುವ ಯಾವುದೇ ಹಕ್ಕಿಯು ಬಾಯಾರಿಕೆಯಿಂದ ಬಳಲದಂತೆ ನೋಡಿಕೊಳ್ಳಬಹುದಾಗಿದೆ. ಈ ಮಡಿಕೆಗಳನ್ನು ಕೇರಳದ ಆಳುವ ಎಂಬಲ್ಲಿನ ಪರಿಸರವಾದಿ ಹಾಗೂ ಪರಿಸರಪ್ರೇಮಿಯಾದ ನಾರಾಯಣ್ ಇವರು ಉಚಿತವಾಗಿ ನೀಡಿದ್ದಾರೆ.
ಬೇಸಿಗೆ ಕಾಲದಲ್ಲಿ ದಣಿದ ಪಕ್ಷಿಗಳಿಗೆ ನೀರುಣಿಸುವ ಸಲುವಾಗಿ ಉಚಿತವಾಗಿ ಮಣ್ಣಿನ ಮಡಿಕೆಗಳನ್ನು ದೇಶ-ವಿದೇಶಗಳಲ್ಲಿರುವ ಪಕ್ಷಿಪ್ರೇಮಿಗಳಿಗೆ ರವಾನಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಈ ಕಾರ್ಯಕ್ರಮ ಯಶಸ್ವಿಯಾಗುವಲ್ಲಿ ಇಕೋ ಕ್ಲಬ್‌ನ ಕಾರ್ಯದರ್ಶಿ ಚಿನ್ಮಯಿ, ಉಪಕಾರ್ಯದರ್ಶಿ ಸೃಜನ್ ಹಾಗೂ ರಜತ್ ಇವರು ಶ್ರಮಿಸಿದ್ದಾರೆ.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ