ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯ ದಾಖಲಾತಿಗೆ ಹರಿದು ಬಂದ ವಿದ್ಯಾರ್ಥಿಸಾಗರ

Upayuktha
0

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಂಗ ಸಂಸ್ಥೆ, ಕರ್ನಾಟಕ ಸರಕಾರದ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ರಾಜ್ಯದ ನಂ. 1 ಕನ್ನಡ ಮಾಧ್ಯಮ ಶಾಲೆಯಾಗಿ ಗುರುತಿಸಿಕೊಂಡಿರುವ ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯ 2022-23ನೇ ಸಾಲಿನ 6ರಿಂದ 9ನೇ ತರಗತಿಯ ಸಂಪೂರ್ಣ ಉಚಿತ ಶಿಕ್ಷಣ ಸೌಲಭ್ಯಕ್ಕೆ ನಡೆಸುವ ಪ್ರವೇಶ ಪರೀಕ್ಷೆಯು ಪುತ್ತಿಗೆ ವಿವೇಕಾನಂದ ನಗರದಲ್ಲಿ ಭಾನುವಾರ ನಡೆಯಿತು.


ರಾಜ್ಯಾದ್ಯಂತ 26 ಜಿಲ್ಲೆಗಳ 11,362 ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದು, 10,764 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾದರು. 6ನೇ ತರಗತಿಗೆ 5628, 7ನೇ ತರಗತಿಗೆ 1936, 8ನೇ ತರಗತಿಗೆ 2157 ವಿದ್ಯಾರ್ಥಿಗಳು ಹಾಗೂ 9ನೇ ತರಗತಿಗೆ 1043 ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆ ಬರೆದರು. ಬೆಳಗಾವಿ ಜಿಲ್ಲೆಯಿಂದ ಅತೀ ಹೆಚ್ಚು 3,513 ವಿದ್ಯಾರ್ಥಿಗಳು, ಬಾಗಲಕೋಟೆ ಹಾಗೂ ವಿಜಯಪುರದಿಂದ ಕ್ರಮವಾಗಿ 1,519 ಹಾಗೂ 1,088 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾದರು.


ಪ್ರವೇಶ ಪರೀಕ್ಷೆಯು ವಿದ್ಯಾರ್ಥಿಗಳು ಪ್ರಸ್ತುತ ಓದುತ್ತಿರುವ ಪಠ್ಯವಿಷಯಗಳಿಗೆ ಸಂಬಂಧಿಸಿದ ಹಾಗೂ ಸಾಮಾನ್ಯ ಜ್ಞಾನ, ತಾರ್ಕಿಕ ಸಾಮಾರ್ಥ್ಯ ಆಧಾರಿತ ಬಹು ಆಯ್ಕೆಯ ಪ್ರಶ್ನೆಗಳನ್ನು ಒಳಗೊಂಡಿತ್ತು. ಪರೀಕ್ಷೆಯಲ್ಲಿ ನಕಲು ತಡೆಗಟ್ಟುವ ಉದ್ದೇಶದಿಂದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸುವ ರೀತಿಯಲ್ಲೇ ಎ,ಬಿ,ಸಿ,ಡಿ ಸೀರಿಸ್ ಪ್ರಶ್ನೆ ಪತ್ರಿಕೆಗಳು ಹಾಗೂ ಉತ್ತರ ನಮೂದಿಸಲು ಒಎಂಆರ್ ಶೀಟ್ ಒದಗಿಸಲಾಗಿತ್ತು.


20,000ಕ್ಕೂ ಅಧಿಕ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರು ಆಗಮಿಸಿದ್ದರೂ ಬಹಳ ಅಚ್ಚುಕಟ್ಟಿನ ವ್ಯವಸ್ಥೆಯೊಂದಿಗೆ ಪರೀಕ್ಷೆ ನಡೆಸಲಾಯಿತು. ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳಿಗೆ ಆಳ್ವಾಸ್ ಸಂಸ್ಥೆಯ ವತಿಯಿಂದ ಉಚಿತ ವಸತಿ ವ್ಯವಸ್ಥೆ ಕಲ್ಪಿಸಲಾಗಿತ್ತು.


ಸತತ 5 ವರ್ಷಗಳಿಂದ ರಾಜ್ಯದಲ್ಲಿರುವ 15,000ಕ್ಕೂ ಅಧಿಕ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಶಾಲೆಗಳ ಪೈಕಿ ಆಳ್ವಾಸ್ ಕನ್ನಡ ಮಾಧ್ಯಮ ಶಾಲೆ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ನಂ. 1 ಸಂಸ್ಥೆಯಾಗಿ ಗುರುತಿಸಿಕೊಂಡಿದೆ.


ಕನ್ನಡ ಮಾಧ್ಯಮದ ಉಚಿತ ಶಿಕ್ಷಣ ಸೌಲಭ್ಯದಡಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಶಿಕ್ಷಣ ಶುಲ್ಕ, ವಿದ್ಯಾರ್ಥಿನಿಲಯ, ಪಠ್ಯಪುಸ್ತಕ ಹಾಗೂ ಸಮವಸ್ತ್ರ ಸಂಪೂರ್ಣ ಉಚಿತವಾಗಿಯೇ ನೀಡಲಾಗುತ್ತದೆ. ಶಾಲಾ ಶಿಕ್ಷಣದೊಂದಿಗೆ ವಿದ್ಯಾರ್ಥಿಗಳಿಗೆ ಬಾಲ್ಯದಲ್ಲಿಯೇ ಸ್ಪರ್ಧಾತ್ಮಕವಾದ ಬುದ್ಧಿಮತ್ತೆ ಜತೆಗೆ ಸುಸಂಸ್ಕೃತವಾದ ಮನಸನ್ನು ಕಟ್ಟುವ ವಿವಿಧ ಚಟುವಟಿಕೆಗಳನ್ನು ಕಲಿಸಲಾಗುತ್ತದೆ. ಈ ಹಿನ್ನಲೆಯಲ್ಲಿ ವಾರ್ಷಿಕ ಓರ್ವ ವಿದ್ಯಾರ್ಥಿಗೆ ಸಂಸ್ಥೆಯ ವತಿಯಿಂದ 1 ಲಕ್ಷ ರೂಪಾಯಿ ವ್ಯಯಿಸಲಾಗುತ್ತಿದೆ.


ಎರಡು ಹಂತಗಳಲ್ಲಿ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಮೊದಲ ಹಂತದ ಪರೀಕ್ಷೆಯಲ್ಲಿ ಆಯ್ಕೆ ಅದವರಿಗೆ ಮಾತ್ರವೇ ಎರಡನೇ ಹಂತದಲ್ಲಿ ಪರೀಕ್ಷೆ ಹಾಗೂ ಸಂದರ್ಶನ ನಡೆಸಿ ದಾಖಲಾತಿ ಪ್ರಕ್ರಿಯೆ ಮಾಡಲಾಗುತ್ತದೆ. ಶೈಕ್ಷಣಿಕ ಕ್ಷೇತ್ರ, ಸಾಂಸ್ಕೃತಿಕ ಕ್ಷೇತ್ರದಲ್ಲಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಹಾಗೂ ಸಮಾಜದಲ್ಲಿ ಹಿಂದುಳಿದ ವರ್ಗ, ಸಿದ್ಧಿ, ಕೊರಗ, ಹಕ್ಕಿ - ಪಿಕ್ಕಿ ಮಲೆಕುಡಿಯ, ಜನಾಂಗದವರಿಗೆ, ಗಡಿನಾಡು, ಮಲ್ಲಕಂಬ ಪಟುಗಳಿಗೆ ಹಾಗೂ ಇತರ ಕ್ರೀಡಾ ಸಾಧಕರಿಗೆ ಆದ್ಯತೆ ನೀಡಲಾಗುತ್ತದೆ.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top