ದೇಸೀ ಜ್ಞಾನ, ಸಂಸ್ಕೃತಿ ಮಕ್ಕಳಲ್ಲಿ ಒಡಮೂಡಬೇಕು: ಡಾ.ಶ್ರೀಧರ ಎಚ್.ಜಿ
ಪುತ್ತೂರು: ಅಮೇರಿಕಾದಲ್ಲಿ ಅತಿಯಾದ ರಾಸಾಯನಿಕ ಗೊಬ್ಬರದಿಂದಾಗಿ ಮಣ್ಣು ಫಲವತ್ತತೆ ಕಳೆದುಕೊಂಡಿದೆ. ಹಾಗಾಗಿ ಭಾರತದ ಮಣ್ಣಿನ ಸತ್ವ ಹಾಗೂ ಇಲ್ಲಿ ತಯಾರಿಸುವ ದೇಸೀ ಸಾವಯವ ಗೊಬ್ಬರದ ಬಗೆಗೆ ಅಮೇರಿಕಾದ ತಂಡದಿಂದ ಅಧ್ಯಯನ ನಡೆಯುತ್ತಿದೆ. ಇಂತಹ ಶ್ರೇಷ್ಟ ಮಣ್ಣಿನ ಬಗೆಗಿನ ಅರಿವು ಮಕ್ಕಳಲ್ಲಿ ಒಡಮೂಡಬೇಕಾದದ್ದು ಅತ್ಯಂತ ಅಗತ್ಯ. ಆದ್ದರಿಂದ ರಜೆಯಲ್ಲಿ ಆಯೋಜಿಸುವ ಶಿಬಿರಗಳು ಇಂತಹ ಜ್ಞಾನವನ್ನು ನೀಡುವ ತಾಣಗಳಾಗಬೇಕು ಎಂದು ಪುತ್ತೂರಿನ ಹಿರಿಯ ಕನ್ನಡ ಪ್ರಾಧ್ಯಾಪಕ, ಸಾಹಿತಿ ಡಾ.ಶ್ರೀಧರ ಎಚ್.ಜಿ. ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇಯಲ್ಲಿ ಸೋಮವಾರದಿಂದ ಪ್ರಾರಂಭಗೊಂಡ ಮೂರು ದಿನಗಳ ಬೇಸಿಗೆ ಶಿಬಿರ – ‘ಪ್ರೇರಣಾ 2022’ ಅನ್ನು ಉದ್ಘಾಟಿಸಿ ಮಾತನಾಡಿದರು.
ಹಿಂದಿನ ಕಾಲದಲ್ಲಿ ಅಜ್ಜನ ಮನೆಯೇ ಬೇಸಗೆ ಶಿಬಿರವಾಗಿತ್ತು. ರಜೆ ಸಿಕ್ಕಾಕ್ಷಣ ಅಲ್ಲಿಗೆ ತೆರಳಿ ತೋಟ ಗದ್ದೆಗಳಲ್ಲಿ ಓಡಾಡುವುದು, ಹಣ್ಣುಗಳನ್ನು ಕೊಯ್ದು ತಿನ್ನುವುದು, ಗಿಡಗಳಿಗೆ ನೀರುಣಿಸುವುದೇ ಮೊದಲಾದ ಚಟುವಟಿಕೆಗಳಿಂದ ನಿಸರ್ಗದ ಬಗೆಗೆ ಪರಿಕಲ್ಪನೆ ಬೆಳೆಯುತ್ತಿತ್ತು. ಅನೇಕಾನೇಕ ಪಾರಂಪರಿಕ ಜ್ಞಾನಗಳು ಅಂತಹ ಸಂದರ್ಭದಲ್ಲಿ ಒಡಮೂಡುತ್ತಿದ್ದವು. ಆದ್ದರಿಂದ ಇಂದಿನ ಮಕ್ಕಳೂ ಅಜ್ಜನಮನೆಗೆ ಹೋಗುವುದನ್ನು, ಅಲ್ಲಿ ಕಾಲ ಕಳೆಯುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು ಎಂದರಲ್ಲದೆ ಪ್ರಕೃತಿಯನ್ನು ಉಳಿಸುವುದಕ್ಕೆ ಸಂಸ್ಕೃತಿ ಅಗತ್ಯ. ಆಧುನಿಕ ಯುವದಲ್ಲಿ ಪ್ರಕೃತಿಗೆ ಮಾರಕರಾಗಿ ವ್ಯವಹರಿಸುತ್ತಿದ್ದೇವೆ. ಆದ್ದರಿಂದ ನಾವೆಲ್ಲರೂ ನೆಲ ಜಲದ ಅರಿವನ್ನು ಹೊಂದಿ ಮುಂದುವರಿಯಬೇಕು ಎಂದು ತಿಳಿಸಿದರು.
ಎಳೆಯ ವಯಸ್ಸಿನಿಂದಲೇ ಓದುವ ಸಂಸ್ಕೃತಿಯನ್ನು ರೂಢಿಸಿಕೊಳ್ಳಬೇಕು. ಮನೆಯಲ್ಲಿ ನಮ್ಮದೇ ಆದ ಪುಟ್ಟ ಗ್ರಂಥಾಲಯವನ್ನು ರೂಪಿಸಿಕೊಂಡರೆ ನಮ್ಮ ಬೌದ್ಧಿಕ ಮಟ್ಟ ಬೆಳೆಯುವುದಕ್ಕೆ ಸಾಧ್ಯ. ಶಿಕ್ಷಣ, ಸಂಸ್ಕಾರ ಹಾಗೂ ಸಂಸ್ಕೃತಿಗಳ ಬಗೆಗಿನ ತಿಳುವಳಿಕೆ ಪ್ರತಿಯೊಬ್ಬರಿಗೂ ಅತ್ಯಂತ ಅಗತ್ಯ. ಹಾಸ್ಟೆಲ್‌ನಲ್ಲಿನ ವಿದ್ಯಾರ್ಥಿಗಳಿಗೆ ಸಹಬಾಳ್ವೆಯ ಅನುಭವ ದೊರಕುತ್ತದೆ. ಆದರೆ ನಿತ್ಯ ಮನೆಯಿಂದ ಶಾಲೆಗೆ ಬರುವ ಮಕ್ಕಳಿಗೆ ಪ್ರೇರಣಾದಂತಹ ಶಿಬಿರಗಳಿಂದ ಸಹಬಾಳ್ವೆಯ ಕಲ್ಪನೆ ಒಡಮೂಡುತ್ತದೆ. ಅಂತೆಯೇ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮೂಡಿಸುವ ಪ್ರಯತ್ನಗಳು ಆಗಬೇಕಾದದ್ದು ಅಗತ್ಯ ಎಂದರು.
ಪ್ರಸ್ತಾವನೆಗೈದ ಅಂಬಿಕಾ ವಿದ್ಯಾಲಯದ ಪ್ರಾಚಾರ್ಯೆ ಮಾಲತಿ ಡಿ, ಕಲಿಕೆ ಅನ್ನುವುದು ತುಂಬಾ ವಿಶಾಲ ಅರ್ಥವನ್ನು ಹೊಂದಿದೆ. ಎಷ್ಟು ಹೊತ್ತು ಮಲಗಬೇಕು, ಯಾವಾಗ ಏಳಬೇಕು ಎಂಬುದೂ ಕಲಿಕೆಯ ಒಂದು ಭಾಗವೇ ಆಗಿದೆ. ಮಕ್ಕಳಿಗೆ ದೇಶದ ಹಿರಿಮೆ ಗರಿಮೆಗಳನ್ನು ತಿಳಿಸುವ, ಸಂಸ್ಕೃತಿಯನ್ನು ಪರಿಚಯಿಸುವ ನೆಲೆಯಲ್ಲಿ ‘ಪ್ರೇರಣಾ 2022’ ಆಯೋಜನೆಗೊಂಡಿದೆ. ಅನೇಕ ಮಂದಿ ಸಂಪನ್ಮೂಲ ವ್ಯಕ್ತಿಗಳು ಮಕ್ಕಳಲ್ಲಿ ವಿನೂತನ ಪರಿಕಲ್ಪನೆಯನ್ನು ಮೂಡಿಸಲಿದ್ದಾರೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ ಮಾತನಾಡಿ ಮಕ್ಕಳು ಎಳವೆಯಿಂದಲೇ ಹೊಸ ಹೊಸ ವಿಚಾರಗಳನ್ನು ಅರಿತುಕೊಂಡು ಬೆಳೆಯಬೇಕು. ಸಂಪನ್ಮೂಲ ವ್ಯಕ್ತಿಗಳು ಹೇಳಿದ್ದನ್ನು ಕೇವಲ ಕೇಳಿಸಿಕೊಳ್ಳುವುದಷ್ಟೇ ಅಲ್ಲದೆ ಬರೆದಿಟ್ಟು ಬದುಕಿನಲ್ಲಿ ಅಳವಡಿಸುವ ನೆಲೆಯಲ್ಲಿ ಕಾರ್ಯತತ್ಪರರಾಗಬೇಕು. ತನ್ಮೂಲಕ ಶಿಬಿರದ ಸದ್ಬಳಕೆ ಆಗಬೇಕು ಎಂದು ನುಡಿದರು. ವೇದಿಕೆಯಲ್ಲಿ ಶಿಬಿರದ ಸಂಯೋಜಕ ಸತೀಶ್ ಇರ್ದೆ ಉಪಸ್ಥಿತರಿದ್ದರು.
ಎಂಟನೆಯ ತರಗತಿ ವಿದ್ಯಾರ್ಥಿ ಆತ್ರೇಯ ಪ್ರಾರ್ಥಿಸಿ, ಏಳನೆಯ ತರಗತಿ ವಿದ್ಯಾರ್ಥಿ ಆಕಾಶ್ ಸ್ವಾಗತಿಸಿದರು. ಆರನೆಯ ತರಗತಿ ವಿವಿಕ್ತ ವಂದಿಸಿ, ಪ್ರಿಯಾಂಶು ಕಾರ್ಯಕ್ರಮ ನಿರ್ವಹಿಸಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ