ಮಂಗಳೂರು: ಮಹಿಳಾ ದಿನಾಚರಣೆಯ ಅಂಗವಾಗಿ ಜೇಸಿಐ ಮಂಗಳೂರು ಲಾಲ್‌ಭಾಗ್ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳ, ಸೆಂಟರ್‌ಫಾರ್ ಇಂಟೆಗ್ರೇಟೆಡ್ ಲರ್ನಿಂಗ್, ಪದುವಾ ಕಾಲೇಜು ಕಾಮರ್ಸ್ ವಿಭಾಗ ಇದರ ಜಂಟಿ ಆಶ್ರಯದಲ್ಲಿ ದಿನಾಂಕ: 08-03-2022ನೇ ಮಂಗಳವಾರದಂದು ಮಂಗಳೂರಿನ ಪದುವಾ ಕಾಲೇಜಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಮಹಿಳಾ ಗೃಹರಕ್ಷಕಿ ಆಶಾಲತಾ ಪಿ., ಮೆಟಲ್ ಸಂಖ್ಯೆ 156, ಮಂಗಳೂರು ಘಟಕ ಇವರನ್ನು ಹೂಹಾರ, ಫಲಪುಷ್ಪ ಸ್ಮರಣಿಕೆ ಮತ್ತು ಫಲಕ ನೀಡಿ ಸನ್ಮಾನಿಸಲಾಯಿತು.
ಗೃಹರಕ್ಷಕಿ ಆಶಾಲತಾ ಇವರು ದಿನಾಂಕ 01-12-2008 ರಂದು ಗೃಹರಕ್ಷಕ ದಳಕ್ಕೆ ಸೇರ್ಪಡೆಗೊಂಡು ಕಳೆದ 14 ವರ್ಷಗಳಿಂದ ಗೃಹರಕ್ಷಕ ದಳದಲ್ಲಿ ನಿಷ್ಕಾಮ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಸ್ತುತ ಕದ್ರಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದಲ್ಲದೆ ಚುನಾವಣಾ ಕರ್ತವ್ಯ ಹಾಗೂ ಬಂದೋಬಸ್ತ್ ಕರ್ತವ್ಯಗಳನ್ನು ನಿರ್ವಹಿಸಿರುತ್ತಾರೆ. ಈ ಕಾರ್ಯಕ್ರಮದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಶ್ರೀಮತಿ ಸಚಿತಾ ನಂದಗೋಪಾಲ್ ಮತ್ತು ಮುಖ್ಯ ಅತಿಥಿಯಾಗಿ ಅಕ್ಷತಾ ಗಿರೀಶ್ ಭಾಗವಹಿಸಿದ್ದರು. ಕಾರ‍್ಯಕ್ರಮದ ಗೌರವ ಅತಿಥಿಯಾಗಿ ಪ್ರೊಫೆಸರ್ ರಾಜನ್ ವಿ.ಎನ್., ಪ್ರಿನ್ಸಿಪಾಲ್, ಪದುವಾ ಕಾಲೇಜು ಇವರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಮಂಗಳೂರು ಘಟಕದ 25 ಮಹಿಳಾ ಗೃಹರಕ್ಷಕಿಯರಿಗೆ ಒಂದು ದಿನದ 'ಡಾನ್ಸ್ ಥೆರಪಿ ಮತ್ತು ಒತ್ತಡ ನಿವಾರಣೆ' ಎಂಬ ವಿಚಾರದ ಬಗ್ಗೆ ತರಬೇತಿ ಶಿಬಿರ ನಡೆಯಿತು.
ಈ ಸಂದರ್ಭದಲ್ಲಿ ಜೇಸಿಐ ಮಾಂಗಳೂರು ಲಾಲ್‌ಭಾಗ್ ಇದರ ಅಧ್ಯಕ್ಷರಾದ ಪ್ರವೀಣ್ ಉಡುಪ, ಕಾರ‍್ಯದರ್ಶಿ ಅನುಷಾ ಪಿ. ಶೆಟ್ಟಿ, ಪ್ರಕಾಶ್ ಶೆಟ್ಟಿ, ಶಿಲ್ಪಾ ಮೂಲ್ಕಿ, ಪ್ರೊಫೆಸರ್ ಫ್ಲೆವಿಟಾ ಲೆವಿಸ್, ಪ್ರೊಫೆಸರ್ ಜೆಸ್‌ಫ್ರಿಡಾ ಮೆನೆಜೆಸ್ ಉಪಸ್ಥಿತರಿದ್ದರು.
ಶ್ರೀಮತಿ ಲಕ್ಷ್ಮಿ ಕುಮಾರನ್ ಇವರು ಮಾತನಾಡಿ ಸಮಾಜದಲ್ಲಿ ಮಹಿಳೆ ಮತ್ತು ಪುರುಷನನ್ನು ಸಮಾನವಾಗಿ ಕಾಣಬೇಕಾದ ಅನಿವಾರ್ಯತೆ ಇದೆ. ಪುರುಷಪ್ರಧಾನ ಸಮಾಜದಲ್ಲಿ ಮಹಿಳೆಯರಿಗೆ ಸರಿಯಾದ ಸ್ಥಾನಮಾನ ಸಿಗುತ್ತಿಲ್ಲ. ಮಹಿಳೆಯರಿಗೆ ಸಿಗಬೇಕಾದ ಗೌರವ, ಪ್ರೀತಿ ಮತ್ತು ಪ್ರಾಮುಖ್ಯತೆ ನೀಡಿದಲ್ಲಿ ಮಾತ್ರ ಮಹಿಳಾ ದಿನಾಚರಣೆ ಅರ್ಥಪೂರ್ಣವಾದೀತು ಎಂದು ನುಡಿದರು.
ಮುಖ್ಯ ಅತಿಥಿಯಾಗಿ ದ.ಕ.ಜಿಲ್ಲಾ ಗೃಹರಕ್ಷಕ ದಳದ ಕಮಾಡೆಂಟ್ ಶ್ರೀ ಡಾ|| ಮುರಲೀ ಮೋಹನ್ ಚೂಂತಾರು ಇವರು ಭಾಗವಹಿಸಿದ್ದರು. ಡಾ|| ಚೂಂತಾರು ಅವರು ಮಾತನಾಡುತ್ತಾ ಒಬ್ಬ ಪುರುಷ ಪರಿಪೂರ್ಣನಾಗಬೇಕಾದಲ್ಲಿ ಮಹಿಳೆ ಅನಿವಾರ್ಯ. ಆ ಮಹಿಳೆ ಅಮ್ಮನಾಗಿರಬಹುದು, ಅಕ್ಕನಾಗಿರಬಹುದು, ತಂಗಿಯಾಗಿರಬಹುದು. ಒಟ್ಟಿನಲ್ಲಿ ಒಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬಳು ತಂಗಿ, ಒಬ್ಬಳು ಅಕ್ಕ, ಒಬ್ಬಳು ಪತ್ನಿ ಅಥವಾ ಒಬ್ಬರು ತಾಯಿ ಇದ್ದೇ ಇರುತ್ತಾರೆ. ಮಹಿಳೆಯರನ್ನು ಗೌರವಿಸುವುದು ಮತ್ತು ಪೂಜಿಸುವುದು ನಮ್ಮ ಭಾರತೀಯ ಸಂಸ್ಕೃತಿಯ ಪ್ರತೀಕವಾಗಿದೆ ಎಂದು ಅವರು ನುಡಿದರು.
ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಶ್ರೀಮತಿ ಸಚಿತಾ ನಂದಕುಮಾರ್ ಭಾಗವಹಿಸಿದ್ದರು. ಇನ್ನರ್‌ವೀಲ್ ಕ್ಲಬ್ ಮಂಗಳೂರು ನಾರ್ಥ್ ಇದರ ಅಧ್ಯಕ್ಷೆಯಾದ ಶ್ರೀಮತಿ ನೀನಾ ಶೆಟ್ಟಿ ಮತ್ತು ಸಿಎಫ್‌ಐಎಲ್ ಇದರ ಡೈರೆಕ್ಟರ್ ಮತ್ತು ಕರ‍್ಯಾಗಾರದ ಸಂಯೋಜಕರಾದ ಶ್ರೀ ಶ್ರೀನಿವಾಸನ್ ನಂದಗೋಪಾಲ್ ಉಪಸ್ಥಿತರಿದ್ದರು. ಇದೇ ಸಂರ್ಭದಲ್ಲಿ ಸುಮಾರು 20 ವರ್ಷಗಳಿಂದ ಗೃಹರಕ್ಷಕ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಶ್ರೀಮತಿ ಭವಾನಿ ಇವರನ್ನು ಹೂಹಾರ, ಫಲಪುಷ್ಪ ಸ್ಮರಣಿಕೆ ಮತ್ತು ಫಲಕ ನೀಡಿ ಗೌರವಿಸಲಾಯಿತು.
ಶ್ರೀಮತಿ ಭವಾನಿ ಅವರು ಜಿಲ್ಲಾ ಕಾರಾಗೃಹ, ಪೊಲೀಸ್ ಇಲಾಖೆ, ಅಗ್ನಿಶಾಮಕ ಇಲಾಖೆ, ಮುಂತಾದ ಕಡೆ ನಿಷ್ಠೆಯಿಂದ ಕೆಲಸ ನಿರ್ವಹಿಸಿರುತ್ತಾರೆ. ಮಹಿಳಾ ದಿನಾಚರಣೆಯ ದಿನದಂದು ಅವರು ನೀಡಿದ ಸೇವೆಯನ್ನು ಗುರುತಿಸಿ ಗೌರವಿಸಲಾಯಿತು. ಇದೇ ಸಂರ್ಭದಲ್ಲಿ ಇನ್ನೋರ್ವ ಸಾಧಕಿ ಶ್ರೀಮತಿ ಲಕ್ಷ್ಮಿ ಕುಮಾರನ್ ಅವರನ್ನೂ ಸನ್ಮಾನಿಸಲಾಯಿತು. ಇನ್ನರ್‌ವೀಲ್ ಕ್ಲಬ್ ಮಂಗಳೂರು ನಾರ್ಥ್ ಇದರ ಸದಸ್ಯರು, ಕಾರ್ಯದರ್ಶಿಗಳು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳ ಮಂಗಳೂರು ಘಟಕದ ಗೃಹರಕ್ಷಕಿಯರು ಈ ಕಾರ‍್ಯಕ್ರಮದಲ್ಲಿ ಭಾಗವಹಿಸಿದ್ದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ