||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಗಾನ ಸಾರಥಿ ರಾಘವೇಂದ್ರ ಆಚಾರ್ಯ ಜನ್ಸಾಲೆ

ಗಾನ ಸಾರಥಿ ರಾಘವೇಂದ್ರ ಆಚಾರ್ಯ ಜನ್ಸಾಲೆ


04.10.1983 ರಲ್ಲಿ ಜಾನಕಿ ಹಾಗೂ ಲಕ್ಷ್ಮಣ ಆಚಾರ್ಯ ಇವರ ಮಗನಾಗಿ ಜನನ.

ಬಾಲ್ಯದಲ್ಲಿಯೇ ಭಾಗವತ ಕಾಳಿಂಗ ನಾವಡರ ಪದ್ಯಕ್ಕೆ ಮಾರು ಹೋದವರು ಜನ್ಸಾಲೆ. 9ನೇ ತರಗತಿಯ ನಂತರ ಶಾಲಾ ಶಿಕ್ಷಣಕ್ಕೆ ತಿಲಾಂಜಲಿ ಇತ್ತು ಯಕ್ಷಗಾನದತ್ತ ಮನ ಮಾಡಿದವರು. ಉಡುಪಿಯ ಯಕ್ಷಗಾನ ಕೇಂದ್ರದಲ್ಲಿ ಗುರು ಬನ್ನಂಜೆ ಸಂಜೀವ ಸುವರ್ಣರಲ್ಲಿ ನಾಟ್ಯಾಭ್ಯಾಸವನ್ನು ಕಲಿತು, ಗುರು ಗೋರ್ಪಾಡಿ ವಿಠಲ ಪಾಟೀಲರಲ್ಲಿ ತಾಳಗತಿ, ಹಾಡುಗಾರಿಕೆಯನ್ನು ಕಲಿತರು. ಹಾರ್ಯಾಡಿ ಸತೀಶ್‌ ಕೆದ್ಲಾಯರಿಂದ ಸಭಾ ಲಕ್ಷಣ ಹಾಗೂ ಪೂರ್ವರಂಗವನ್ನು ಕಲಿತವರು. ಮುಂದೆ ಎರಡು ವರ್ಷ ಹವ್ಯಾಸಿ ಭಾಗವತರಾಗಿ ಸೇವೆ ಸಲ್ಲಿಸಿದರು. ಆರಂಭದ ತಿರುಗಾಟ ಮಾರಣಕಟ್ಟೆ ಮೇಳದಲ್ಲಿ ಸಂಗೀತಗಾರರಾಗಿ 2 ವರ್ಷ, ಸಹಭಾಗವತರಾಗಿ ಐದು ವರ್ಷ ಹಾಗೂ ಐದು ವರ್ಷ ಪ್ರಧಾನ ಭಾಗವತರಾಗಿ ಮಾರಣಕಟ್ಟೆ ಮೇಳದಲ್ಲಿ ತಿರುಗಾಟ ಮಾಡಿದರು.


ನಂತರ ಪೆರ್ಡೂರು ಮೇಳದಲ್ಲಿ ತಿರುಗಾಟ ಆರಂಭಿಸಿ ಅಪಾರ ಜನಮೆಚ್ಚುಗೆ ಗಳಿಸಿದರು. ಇದೀಗ ಅತಿಥಿ ಭಾಗವತರಾಗಿ ಯಕ್ಷಗಾನ ತಿರುಗಾಟವನ್ನು ಮಾಡುತ್ತಿದ್ದಾರೆ. ಯಕ್ಷಗಾನ ರಂಗದಲ್ಲಿ ೨೪ ನೇ ವರ್ಷದ ತಿರುಗಾಟವನ್ನು ಮಾಡುತ್ತಿದ್ದಾರೆ. ಪೌರಾಣಿಕ ಪ್ರಸಂಗಗಳಲ್ಲಿ ಇವರ ಕಂಠಸಿರಿ, ಭಾವನಾತ್ಮಕ ಪ್ರಸಂಗಗಳಲ್ಲಿ ಪರಿಣಾಮಕಾರಿಯಾಗಿ ಹಾಡುವ ಶೈಲಿ ರಂಗ ಸೃಷ್ಟಿಯನ್ನು ಮಾಡಬಲ್ಲದು. ಹಂತ ಹಂತವಾಗಿ ಕಲೆಯಲ್ಲಿ ಸಿದ್ಧಿ ಸಂಪಾದಿಸಿಕೊಂಡು ಸತತ ಪರಿಶ್ರಮದಿಂದ ಬಡಗುತಿಟ್ಟಿನ ಭಾಗವತರಲ್ಲಿ ಮುಂಚೂಣಿಯಲ್ಲಿರುವವರು.

ಬಡಗಿನ ಖ್ಯಾತ ಸ್ತ್ರೀ ವೇಷಧಾರಿ ಅರಾಟೆ ಮಂಜುನಾಥರ “ಅರಾಟೆ ಪ್ರವಾಸಿ ಯಕ್ಷಗಾನ’ ತಂಡದಿಂದ ವಿವಿಧೆಡೆ ತನ್ನ ಕಂಠ ಸಿರಿಯಿಂದ ಅಪಾರ ಕೀರ್ತಿ ಪಡೆದಿರುತ್ತಾರೆ. ಸದಾ ಕಲಿಯುವ ತುಡಿತವನ್ನು ಹೊಂದಿರುವ ಇವರು ಯಕ್ಷರಂಗದ ಶಿಸ್ತು, ಸಂಪ್ರದಾಯ, ಪ್ರಸಂಗಗಳ ಅಧ್ಯಯನ, ಪುರಾಣದ ಜ್ಞಾನ, ಹಿರಿಯ ಕಲಾವಿದರ ಜೊತೆಗಿನ ಪ್ರಸಂಗ ಪೂರ್ವ ಸಿದ್ಧತೆ ಬದ್ಧತೆಯನ್ನು ಮೈಗೂಡಿಸಿಕೊಂಡವರು.


ನಾಟಿ, ಕಲ್ಯಾಣಿ, ಅಭೇರಿ, ಮೋಹನ, ಕಲಾವತಿ, ಷಣ್ಮುಖಪ್ರಿಯ, ಹಿಂದೋಳ ಇವರ ನೆಚ್ಚಿನ ರಾಗಗಳು. ರಾಮಾಯಣ, ಮಹಾಭಾರತ ಇವರ ನೆಚ್ಚಿನ ಪ್ರಸಂಗಗಳು.


ದಿ.ಕಾಳಿಂಗ ನಾವಡರು, ದಿ.ಮರಿಯಪ್ಪ ಆಚಾರ್ಯ, ಗೋಪಾಲ್ ಗಾಣಿಗ, ರಾಘವೇಂದ್ರ ಮಯ್ಯ, ವಿದ್ವಾನ್ ಗಣಪತಿ ಭಟ್ ಇವರ ನೆಚ್ಚಿನ ಭಾಗವತರು.

ರಾಮಕೃಷ್ಣ ಮಂದಾರ್ತಿ, ರಾಕೇಶ್ ಮಲ್ಯ, ಕೋಟ ಶಿವಾನಂದ, ಸುಜನ್ ಹಾಲಾಡಿ ಇವರ ನೆಚ್ಚಿನ ಚೆಂಡೆ ವಾದಕರು.

ಶಂಕರ ಭಾಗವತ್,  ಎ.ಪಿ.ಪಾಠಕ್,  ಸುನೀಲ್ ಭಂಡಾರಿ, ಪರಮೇಶ್ವರ ಭಂಡಾರಿ ಕರ್ಕಿ ಇವರ ನೆಚ್ಚಿನ ಮದ್ದಳೆ ವಾದಕರು.


ಯಕ್ಷಗಾನದ ಇಂದಿನ ಸ್ಥಿತಿಗತಿ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:-

ತುಂಬಾ ಬದಲಾವಣೆ ಆಗಿದೆ, ಹಾಗೆಯೇ ಕಲಾವಿದರಿಗೆ ಆರ್ಥಿಕವಾಗಿ ಅನುಕೂಲ ಆಗಿದೆ. ಹಾಗೆಯೆ ಅಭಿಮಾನಿಗಳು ಹುಡುಗರು ಮತ್ತೆ ಯಕ್ಷಗಾನದತ್ತ ಬಂದಿದ್ದಾರೆ. ಕೆಲವು ಕಲಾವಿದರಲ್ಲಿ ಪರಿಶ್ರಮ - ಅಭ್ಯಾಸ ಕೊರತೆ ಇದೆ. ನೂತನ ಪ್ರಸಂಗಗಳು ಮತ್ತು ಹಳೆ ಪ್ರಸಂಗಕ್ಕೂ ಅಜಗಜಾಂತರ ವ್ಯತ್ಯಾಸ ಆಗಿದೆ ಎಂದು ಜನ್ಸಾಲೆ ಅವರು ಹೇಳುತ್ತಾರೆ.


ಇವತ್ತಿನ ಯಕ್ಷಗಾನ ಪ್ರೇಕ್ಷಕರ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:-

ಇವತ್ತಿನ ಯಕ್ಷಗಾನ ಪ್ರೇಕ್ಷಕರಿಗೆ ಕಿವಿಮಾತು; ಮೊದಲು ಕಲೆಯ ಅಭಿಮಾನಿ ಆಗಿ, ನಂತರ ನಿಮ್ಮ ನೆಚ್ಚಿನ ಕಲಾವಿದರ ಅಭಿಮಾನಿಯಾಗಿ. ಆಮೇಲೆ ಯಾವುದೇ ಪ್ರದರ್ಶನಗಳಲ್ಲಿ ತೊಂದರೆ ವ್ಯತ್ಯಾಸ ಯಾರಿಂದ ಆಗಿದ್ದರು ಅದನ್ನು ಜಾಲತಾಣದಲ್ಲಿ ಹಂಚಿಕೊಂಡು ಕಲಾವಿದರ ವ್ಯಕ್ತಿತ್ವಕ್ಕೆ ಕುಂಠಿತ ಮಾಡುವುದಕ್ಕಿಂತ ನೇರ ಸಾಧ್ಯವಾದಷ್ಟು ಕಲಾವಿದರು ಹಾಗೂ ಪ್ರಸಂಗ ಬರೆದವರಿಗೂ ಅಥವಾ ಮೇಳದ ಯಜಮಾನರಿಗೂ ಅವರನ್ನು ಸಂಪರ್ಕ ಮಾಡಿ ತಮ್ಮ ತಮ್ಮ ಅನಿಸಿಕೆ ಹೇಳಿದರೆ ಇದು ಒಳ್ಳೆಯ ಬೆಳವಣಿಗೆ ಆಗಿ ಮುಂದೆ ಕಲಾಪ್ರಪಂಚದಲ್ಲಿ ಒಳ್ಳೆಯ ಫಲ ಸಿಗುತ್ತದೆ.


ಇಲ್ಲ ಅಂದರೆ ಕಲಾವಿದ ಕಲೆಯಲ್ಲಿ ತನ್ನನ್ನು ತೊಡಗಿಸಿಕೊಳ್ಳುವಲ್ಲಿ ಹಿಂಜರಿದು ಬೇರೆ ದಾರಿ ನೋಡುತ್ತಾನೆ. ಹೊಸ ಕಲಾವಿದರು ರಂಗಕ್ಕೆ ಬರುವ ಮನಸ್ಸು ಮಾಡುವುದಿಲ್ಲ. ಮುಂದೊಂದು ದಿನ ಕಲಾವಿದರ ಕೊರತೆ ಯಕ್ಷಗಾನ ಕಲಾ ಪ್ರಪಂಚಕ್ಕೆ ಎದ್ದುಕಾಣುತ್ತದೆ‌. ಏನಿದ್ದರೂ ಆರೋಗ್ಯಕರ ವಿಮರ್ಶೆ ಒಳ್ಳೆಯದು; ವ್ಯಕ್ತಿಗತ ನಿಂದನೆ, ಟೀಕೆ-ಟಿಪ್ಪಣಿ ಮಾಡಿದರೆ ಕಲಾ ಪ್ರಪಂಚಕ್ಕೆ ಅವನತಿ.


ಯಕ್ಷಗಾನ ರಂಗದಲ್ಲಿ ಮುಂದಿನ ಯೋಜನೆ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:-

ಕಲಾ ಪ್ರಪಂಚದಿಂದ ಎಲ್ಲ ರೀತಿಯಲ್ಲೂ ತೃಪ್ತಿ ಕಂಡಿದ್ದೇನೆ. ಕೀರ್ತಿ - ಆರ್ಥಿಕತೆ - ಗೌರವ, ಟೀಕೆ-ಟಿಪ್ಪಣಿ ಇತ್ಯಾದಿ. ಯಾವುದರಲ್ಲಿಯೂ ಹೊಗಳಿದಾಗ ಹಿಗ್ಗದೆ, ತೆಗಳಿದಾಗ ಕುಗ್ಗದೆ ನನ್ನ ಪ್ರಾಮಾಣಿಕತನ, ಶ್ರದ್ಧೆ ನಿಷ್ಠೆಯಿಂದ ಕೆಲಸ ಮಾಡಿದ್ದೇನೆ. ಹಾಗಾಗಿ ಕಲಾ ಪ್ರಪಂಚಕ್ಕೆ ನನ್ನಿಂದ ಸಾಧ್ಯವಾದಷ್ಟು ಹೊಸ ಕೊಡುಗೆ ತನ್ನದೇ ಆದ ಶೈಲಿ ತನ್ನದೇ ಆದ ಹೊಸ ಆವಿಷ್ಕಾರ ಮಾಡಿದ್ದೇನೆ, ಮುಂದೆಯೂ ಕೂಡ ಮಾಡಬೇಕು. ಹಾಗೆ ನನ್ನದೇ ಆದ ಒಂದು ಸಂಸ್ಥೆ ಸ್ಥಾಪಿಸಿ ನನ್ನಿಂದ ಆದಷ್ಟು ಕಲಾವಿದರಿಗೆ ಕಲಾ ಪ್ರಪಂಚಕ್ಕೆ ಬೇರೆ ಬೇರೆ ರೀತಿಯ ಕಿಂಚಿತ್ತು ಸಹಾಯ ಮಾಡಬೇಕೆಂಬುದು ನನ್ನ ಆಸೆ. ಅದಕ್ಕೆ ಎಲ್ಲಾ ಅಭಿಮಾನಿಗಳ ಹಾಗೂ ಪೋಷಕರ ಸಹಾಯ ನಿರೀಕ್ಷೆ ಮಾಡುತ್ತೇನೆ. ಈಗಾಗಲೇ ಯಕ್ಷ ರಾಘವ ಜನ್ಸಾಲೆ ಪ್ರತಿಷ್ಠಾನ ಹುಟ್ಟು ಹಾಕಿದ್ದೇನೆ, ಯಕ್ಷ ರಾಘವ ಯೂಟ್ಯೂಬ್ ವಾಹಿನಿ ಹುಟ್ಟು ಹಾಕಿದ್ದೇನೆ. ಅನೇಕ ಕಾರ್ಯಕ್ರಮಗಳನ್ನು ಮಾಡಿದ್ದೇನೆ. ಮುಂದೆಯೂ ಕೂಡ ಮಾಡಬೇಕು ಎಂದು ಜನ್ಸಾಲೆ ಅವರು ಹೇಳುತ್ತಾರೆ.


ಜನ್ಸಾಲೆ ಅವರಿಗೆ ಆದ ಸನ್ಮಾನ ಸಾವಿರಕ್ಕೂ ಮಿಕ್ಕಿದೆ.

ಪ್ರಶಸ್ತಿ ಯಕ್ಷಕಲಾ ಶ್ರೀ, ಯಕ್ಷ ರಾಜ ಪ್ರಶಸ್ತಿ, ಶ್ರೀ ಕೃಷ್ಣ ನರಸಿಂಹಾನುಗ್ರಹ ಪ್ರಶಸ್ತಿ , ರಾಜ್ಯ ಮಟ್ಟದ ಪ್ರಶಸ್ತಿ, ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಹೀಗೆ ಹಲವಾರು ಪ್ರಶಸ್ತಿಗಳು ಬಂದಿದೆ.

ಜನ್ಸಾಲೆ ಅವರಿಗೆ ಬಂದಿರುವ ಬಿರುದುಗಳು :- ಯಕ್ಷಗಾನ ಕೋಗಿಲೆ,  ಗಾನಗಂಧರ್ವ, ವಿಶ್ವಕರ್ಮ ಯಕ್ಷಕಲಾರತ್ಮ, ವಿಶ್ವಕೋಗಿಲೆ, ಗಾನ ಸಾರಥಿ, ಗಾನ ಸಾಮ್ರಾಟ್, ವಿಶ್ವಕರ್ಮ ಯಕ್ಷ ಗಾನ ವಿಶಾರದ, ಕಂಚಿನ ಕಂಠ, ವಿಶ್ವಕರ್ಮ ಕಲಾತಪಸ್ವಿ.

ಓದುವುದು, ಮೆಕ್ಯಾನಿಕ್ ವಿಭಾಗ, ಮರಗೆಲಸ ಇವರ ಹವ್ಯಾಸಗಳು.


ಏಪ್ರಿಲ್ ೨೨ ರಂದು ಸುಷ್ಮಾ ಆರ್ ಆಚಾರ್ಯ ಅವರನ್ನು ವಿವಾಹವಾಗಿ ಇಬ್ಬರು ಮಕ್ಕಳಾದ ಭೂಮಿಕಾ ಆರ್ ಆಚಾರ್ಯ ಹಾಗೂ ಸುಮುಖ ಆರ್ ಆಚಾರ್ಯ ಜೊತೆಗೆ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ.


ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.


Pic by: Dheeraj udupa, Sharath bhat photography, Umesh sowda photography, Sudarshan Mandrathi, Ashok Danderangadi.


-ಶ್ರವಣ್ ಕಾರಂತ್ ಕೆ

ಸುಪ್ರಭಾತ

ಶಕ್ತಿನಗರ ಮಂಗಳೂರು.

8971275651


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


hit counter

0 Comments

Post a Comment

Post a Comment (0)

Previous Post Next Post