|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಸ್ವಾದ- ಆರೋಗ್ಯ ಸಂಹಿತೆ: ಡಾ. ಮುರಲೀ ಮೋಹನ ಚೂಂತಾರು ಅವರ 13ನೇ ಕೃತಿ ಬಿಡುಗಡೆ

ಸ್ವಾದ- ಆರೋಗ್ಯ ಸಂಹಿತೆ: ಡಾ. ಮುರಲೀ ಮೋಹನ ಚೂಂತಾರು ಅವರ 13ನೇ ಕೃತಿ ಬಿಡುಗಡೆ


ಮಂಗಳೂರು: ಖ್ಯಾತ ದಂತ ವೈದ್ಯರು ಹಾಗೂ ವೈದ್ಯ ಸಾಹಿತಿ ಡಾ. ಮುರಲೀ ಮೋಹನ ಚೂಂತಾರು ಅವರ 13ನೇ ಕೃತಿ 'ಸ್ವಾದ' ಆರೋಗ್ಯ ಸಂಹಿತೆ ಬುಧವಾರ (ಮಾ.30) ಸಂಜೆ ಬಿಡುಗಡೆಗೊಂಡಿತು.


ನಗರದ ಹೋಟೆಲ್ ಮಾಯಾ ಇಂಟರ್‌ನ್ಯಾಷನಲ್‌ನಲ್ಲಿ ನಡೆದ ಸರಳ ಸಮಾರಂಭದಲ್ಲಿ ಖ್ಯಾತ ಹಾಸ್ಯ ಲೇಖಕಿ ಭುವನೇಶ್ವರಿ ಹೆಗಡೆ ಅವರು ಕೃತಿಯನ್ನು ಲೋಕಾರ್ಪಣೆ ಮಾಡಿದರು.


ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ ಮತ್ತು ಕನ್ನಡ ಸಾಹಿತ್ಯ ಪರಿಷತ್‌- ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕು ಘಟಕದ ಸಹಯೋಗದಲ್ಲಿ ಸಮಾರಂಭ ಆಯೋಜಿಸಲಾಗಿತ್ತು.


ಜನಪ್ರಿಯ ವೈದ್ಯರಾಗಿ, ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾಗಿ, ಕನ್ನಡ  ಸಾಹಿತ್ಯ ಪರಿಷತ್ ಮಂಗಳೂರು ತಾಲೂಕು ಘಟಕದ ಗೌರವ ಕಾರ್ಯದರ್ಶಿಯಾಗಿ ಹಾಗೂ ಇನ್ನಿತರ ಬಿಡುವಿಲ್ಲದ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಡಾ. ಮುರಲೀ ಮೋಹನ ಚೂಂತಾರು ಅವರು ಅತ್ಯಂತ ಸರಳ ಭಾಷೆಯಲ್ಲಿ ವೈದ್ಯಕೀಯ ಸಾಹಿತ್ಯ ಕೃತಿಗಳನ್ನು ರಚಿಸುತ್ತಿರುವುದು ಹೆಮ್ಮೆಯ ವಿಚಾರ ಎಂದು ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಭುವನೇಶ್ವರಿ ಹೆಗಡೆ ಅವರು ನುಡಿದರು.


ವೈದ್ಯಕೀಯ ವೃತ್ತಿಯಲ್ಲೇ ಬಿಡುವಿಲ್ಲದಷ್ಟು ಕೆಲಸಗಳನ್ನು ಹೊಂದಿರುವ ಅವರು ಇತರ ಎಲ್ಲ ಸಾಮಾಜಿಕ ಚಟುವಟಿಕೆಗಳ ನಡುವೆಯೂ ಬಿಡುವು ಮಾಡಿಕೊಂಡು ವೈದ್ಯ ಸಾಹಿತ್ಯ ಕೃತಿಗಳನ್ನು ರಚಿಸುವ ಮೂಲಕ ಜನರ ಹಾಗೂ ಸಮಾಜದ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಸೇವಾ ಮನೋಭಾವದಿಂದ ಮಾಡುತ್ತಿದ್ದಾರೆ. ಡಾ. ಮುರಲೀ ಅವರಿಂದ ಇನ್ನಷ್ಟು ಸಾಹಿತ್ಯ ಕೃತಿಗಳು ಹೊರಬರುವಂತಾಗಲಿ ಎಂದು ಭುವನೇಶ್ವರಿ ಹೆಗಡೆ ಅವರು ಶುಭ ಹಾರೈಸಿದರು.


ಇನ್ನೋರ್ವ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಮಂಗಳೂರು ಆಕಾಶವಾಣಿಯ ನಿವೃತ್ತ ನಿಲಯ ನಿರ್ದೇಶಕ ಹಾಗೂ ಹಿರಿಯ ಕವಿ,  ಸಾಹಿತಿ ಡಾ. ವಸಂತ ಕುಮಾರ್ ಪೆರ್ಲ ಅವರು, ಡಾ. ಚೂಂತಾರು ಅವರ ಸಾಹಿತ್ಯ ಕೃತಿಗಳ ಬಗ್ಗೆ ಮೆಚ್ಚುಗೆಯ ನುಡಿಗಳನ್ನಾಡಿದರು.


ಹಿರಿಯ ದಂತ ವೈದ್ಯರೂ, ಮಂಗಳೂರು ಹವ್ಯಕ ಸಭಾದ ನಿಯೋಜಿತ ಅಧ್ಯಕ್ಷರೂ ಆಗಿರುವ ಡಾ. ರಾಜೇಂದ್ರ ಪ್ರಸಾದ್‌ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು.


ಕನ್ನಡ ಸಾಹಿತ್ಯ ಪರಿಷತ್‌ ಮಂಗಳೂರು ತಾಲೂಕು ಘಟಕದ ಅಧ್ಯಕ್ಷರಾದ ಡಾ. ಮಂಜುನಾಥ್ ಎಸ್. ರೇವಣಕರ್ ಅವರು, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಡಾ. ಚೂಂತಾರು ಅವರಿಂದ ಇನ್ನಷ್ಟು ಉತ್ತಮ ಸಾಹಿತ್ಯ ಕೃತಿಗಳು ಮೂಡಿಬರಲಿ, ಕನ್ನಡ ಸಾಹಿತ್ಯವನ್ನು ಮನೆ ಮನೆಗೆ ಪಸರಿಸುವ ಅವರ ಕೈಂಕರ್ಯದಲ್ಲಿ ಸಾಹಿತ್ಯ ಪರಿಷತ್ ಸಹಯೋಗ ಯಾವತ್ತೂ ಇರುತ್ತದೆ ಎಂದು ಅವರು ನುಡಿದರು.


ಆರಂಭದಲ್ಲಿ ಪ್ರಾಸ್ತಾವಿಕ ಮಾತುಗಳನ್ನಾಡಿ ಎಲ್ಲರನ್ನೂ ಸ್ವಾಗತಿಸಿದ ಕೃತಿಕಾರ ಡಾ. ಚೂಂತಾರು ಅವರು, ಲೇಖನಗಳನ್ನು ಬರೆಯುವ ಹವ್ಯಾಸ ತಮ್ಮಲ್ಲಿ ಬೆಳೆದು ಬಂದ ಬಗೆಯನ್ನು ವಿವರಿಸಿದರು. ತಮ್ಮ ಮೊದಲ ಕೃತಿಯ 36 ಸಾವಿರ ಪ್ರತಿಗಳು ಮಾರಾಟವಾಗಿರುವುದನ್ನು ಈ ಸಂದರ್ಭದಲ್ಲಿ ನೆನಪಿಸಿಕೊಂಡರು.


ಆರೋಗ್ಯವನ್ನು ಕಾಪಾಡಿಕೊಳ್ಳುವುದು ನಮ್ಮ ಕೈಯ್ಯಲ್ಲೇ ಇದೆ. ಈಗಿನ ಕಾಲದಲ್ಲಿ ಬಹುತೇಕ ಕಾಯಿಲೆಗಳು ಜೀವನಶೈಲಿಯ ಬದಲಾವಣೆಯಿಂದಾಗಿ ಬರುತ್ತವೆ. ಯಾವ ಆಹಾರ, ಎಷ್ಟು ಪ್ರಮಾಣ, ಹೇಗೆ ಸೇವಿಸಬೇಕು ಇತ್ಯಾದಿ ಮಹತ್ವಪೂರ್ಣ ಮಾರ್ಗದರ್ಶನಗಳನ್ನು ನೀಡುವ 32 ಲೇಖನಗಳ ಸಂಗ್ರಹ 'ಸ್ವಾದ' ಆಹಾರ ಸಂಹಿತೆಯಲ್ಲಿದೆ ಎಂದು ತಿಳಿಸಿದರು.


ನಿವೃತ್ತ ಶಿಕ್ಷಕಿ ರತ್ನಾವತಿ ಜೆ. ಬೈಕಾಡಿ ಅವರು ಪ್ರಾರ್ಥನಾ ಗೀತೆ ಹಾಡಿದರು. ಕನ್ನಡ ಸಾಹಿತ್ಯ ಪರಿಷತ್‌ ಮಂಗಳೂರು ತಾಲೂಕು ಘಟಕದ ಕಾರ್ಯದರ್ಶಿ ಗಣೇಶ್ ಪ್ರಸಾದ್ ಜೀ ಸ್ವಾಗತಿಸಿದರು. ಹಿರಿಯ ನ್ಯಾಯವಾದಿ, ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನದ ಸದಸ್ಯರಾಗಿರುವ ಗಣೇಶ್ ಸುಂದರ್ ಅವರು ಧನ್ಯವಾದ ಸಮರ್ಪಿಸಿದರು. ಶಿಕ್ಷಕರಾಗಿರುವ ಶ್ರೀಕೃಷ್ಣ ಭಟ್ ನೀರಮೂಲೆ ಅವರು ಕಾರ್ಯಕ್ರಮ ನಿರೂಪಿಸಿದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


hit counter

0 Comments

Post a Comment

Post a Comment (0)

Previous Post Next Post