|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಸಣ್ಣ ಕಥೆ: ಬಾಳಪ್ಪನ ರೇಡಿಯೋ ಕನಸು

ಸಣ್ಣ ಕಥೆ: ಬಾಳಪ್ಪನ ರೇಡಿಯೋ ಕನಸು


ಪ್ರಾತಿನಿಧಿಕ ಚಿತ್ರ


ಸಾಧಾರಣ 45 ವರ್ಷಗಳಷ್ಟು ಹಿಂದಿನ ಮಾತು. ಬಾಳಪ್ಪನಿಗೆ ಆಗ ಏರು ಯೌವನ. ಕಲ್ಲನ್ನೂ ಕರಗಿಸಬಲ್ಲ ಕಾಯ ಕಸುವು. ಆರ್ಥಿಕವಾಗಿ ಬಡತನವೆಂಬುದನ್ನು ಬಿಟ್ಟರೆ ಬಾಕಿದ್ದೆಲ್ಲವೂ ಸಿರಿತನವೇ. ಏನನ್ನೂ ಸಾಧಿಸಬಲ್ಲೆ, ಪಡೆಯಬಲ್ಲೆ ಎನ್ನುವ ಉತ್ಸಾಹ. ಸೂರ್ಯೋದಯದಿಂದ ಸೂರ್ಯಾಸ್ತದವರೆಗೂ ದುಡಿಮೆಯೊಂದೇ ಸಂಗಾತಿ. ವರುಷದ ಆದಾಯ ಜೀವನಕ್ಕೆ ಸಾಲದಾದಾಗ, ಸಾಲವೇ ಆದಾಯವಾಗಿ ಪರಿವರ್ತಿಸಿಕೊಳ್ಳುವ ಅನಿವಾರ್ಯತೆ. ಆದರೂ ಸ್ವಾಭಿಮಾನಕ್ಕೆ ಕೊರತೆಯಾಗದಂತಹ, ದೈನ್ಯತೆ ಬಯಸದ ಬದುಕು. ಆದಾಯಕ್ಕೆ ಅನ್ಯ ದಾರಿಗಳಿಲ್ಲದೆ, ಆರಕ್ಕೆ ಏರದೆ ಮೂರಕ್ಕೆ ಇಳಿಯದೆ ನಡುವಲ್ಲೇ ಸುತ್ತುವ ಜೀವನ. ಇದಿಷ್ಟು ಬಾಳಪ್ಪನ ಅಂದಿನ ಜೀವನದ ಚಿತ್ರಣ. ಆ ಕಾಲದಲ್ಲಿ ಬೈಕು, ಟಿ.ವಿ., ಟೇಪ್ ರೆಕಾರ್ಡ್ ಗಳು ಯಾವುದೂ ಇಲ್ಲದೆ ಬರಿದೆ ಬೈಸಿಕಲ್ ರೇಡಿಯೋ ಮಾತ್ರ ಪ್ರತಿಷ್ಠೆಯ ಹಾಗೂ ಮಾನವನ ಪ್ರಾಥಮಿಕ ಅವಶ್ಯಕತೆಗಳು ಆಗಿದ್ದವು.  


ಇಂತಿರುವ ಆ ದಿನದಲ್ಲಿ ಬಾಳಪ್ಪನಿಗೂ ರೇಡಿಯೋ ತಂದು ಕೇಳುವ ಆಸೆ ಬಹಳಷ್ಟಿತ್ತು. ಆದರೆ ಆರ್ಥಿಕವಾಗಿ ಅಷ್ಟೇ ಕಷ್ಟವೂ ಇತ್ತು. ಹೇಗಾದರೂ ಮಾಡಿ ರೇಡಿಯೋ ಪಡಕೊಳ್ಳಲೇಬೇಕೆಂಬ ಬೃಹದ್ದಾಸೆ ಮಾತ್ರ ಬಾಳಪ್ಪನನ್ನು ಸದಾ ಕಾಡುತ್ತಲೇ ಇತ್ತು. ದಿನವೂ ದುಡಿತಕ್ಕೆ ರೇಡಿಯೋ ಕನಸು ಉತ್ತೇಜನ ಕೊಡುತ್ತಿತ್ತು. ಎಲ್ಲರಿಗೂ ಜೀವನದಲ್ಲಿ ಕೆಲವು ಅವಕಾಶಗಳು ಹುಡುಕಿ ಬರುತ್ತದೆ. ಅದೇರೀತಿ ಈ ಬಾಳಪ್ಪನ ಮನೆಗೆ ಒಂದುದಿನ ಒಬ್ಬ ಮರದ ದಲಾಲಿ ಬಂದು ತನಗೆ ಒಂದು ಹಲಸಿನ ಮರ ಬೇಕಾಗಿದೆ ನಿಮ್ಮ ತೋಟದೊಳಗಿನ ಮರ ಕೊಡಬಹುದೇ ಎಂದು ಪ್ರಸ್ತಾಪ ಮಾಡಿದಾಗ ಈ ಬಾಳಪ್ಪ ಹಿಂದೆ ಮುಂದೆ ನೋಡದೆ ಕೊಡುತ್ತೇನೆ ಎನ್ನಬೇಕೆ? ಕಾರಣ ಇಷ್ಟೆ ಆತನ ಅಡಿಕೆ ತೋಟದಲ್ಲಿ ಹಲವಾರು ಹಲಸಿನ ಮರಗಳಿದ್ದವು ಒಂದು ಮರ ಕೊಟ್ಟರೆ ತನಗೇನು ಕಡಿಮೆಯಾಗದು. ಬದಲಾಗಿ ಹಲಸಿನ ಮರಕ್ಕೆ ಒಳ್ಳೆಯ ಕ್ರಯವಿದ್ದುದರಿಂದ ತನ್ನ ರೇಡಿಯೋ ಆಸೆ ಈಡೇರಬಹುದು ಎಂಬ ದೀರ್ಘಾಲೋಚನೆ ಬಾಳಪ್ಪನದು. ಮರವನ್ನು ಮಾರಿ ಸಾಲ ಮರುಪಾವತಿ ಅಥವಾ ಜೀವನ ಇದೆಲ್ಲ ಬಾಳಪ್ಪನಿಗೆ ಅನಿವಾರ್ಯವಲ್ಲ. ಕೆಲಸ ಮಾಡಿ ಅಥವಾ ಕೂಲಿ ಮಾಡಿ ಆದರೂ ನಿಭಾಯಿಸಬಲ್ಲೆ ಎಂಬ ದೃಢ ವಿಶ್ವಾಸ. ಹಾಗೂ ಕಪಟವಿಲ್ಲದ ಸಾತ್ವಿಕ ಚಿಂತನೆ, ಯಾರನ್ನೂ ನಂಬುವ ಪ್ರವೃತ್ತಿ. ಇದರಿಂದ ಆತ್ಮವಿಶ್ವಾಸ ಬಹಳವೇ ಇತ್ತು ಬಾಳಪ್ಪನಿಗೆ. ಇದೆಲ್ಲ ಹಿನ್ನೆಲೆಯಿಂದ ಬಾಳಪ್ಪ ಮರವನ್ನು ದಲಾಲಿಗೆ ಕೊಟ್ಟು ಬಿಟ್ಟ. ಆದರೆ ಆ ದಲಾಲಿಯು ಹಣವನ್ನು ಮರಕೊಯ್ದು ಮರ ಸಾಗಾಟ ಮಾಡುವಾಗ ಕೊಡುವೆ ಎಂದಾಗ ಅರ್ಧ ನಿರಾಸೆಯಾದರೂ ಬಾಳಪ್ಪ ಕಪಟವರಿಯದವನಾದ್ದರಿಂದ ನಂಬಿದ. ಅದೇರೀತಿ ದಲಾಲಿಯ ಜನರು ಬಂದು ಮರವನ್ನು ಬೀಳಿಸಿ ಕೊಯ್ದು ಹಲಗೆ ಹಾಗೂ ಇನ್ನಿತರ ಅದರಿಂದಾಗುವ ಸೊತ್ತುಗಳನ್ನು ಮಾಡಿಟ್ಟು ಅವರಷ್ಟಕ್ಕೆ ಅವರು ಹೋದಾಗಲೂ ಬಾಳಪ್ಪನಿಗೆ ನಿರಾಸೆ ಇಲ್ಲ. ಆಮೇಲೆ ದಿನಾಲೂ ಬಾಳಪ್ಪ ಕಾಯಲು ಪ್ರಾರಂಭಿಸಿದ. ದಲಾಲಿ ಇಂದು ಬರುತ್ತಾನೆ ನಾಳೆ ಬರುತ್ತಾನೆ ಹಣ ಕೊಡುತ್ತಾನೆ ತಾನು ಮಂಗಳೂರಿಗೆ ಹೋಗಿ ರೇಡಿಯೋ ತರುತ್ತೇನೆ ಎಂಬ ಕನಸನ್ನು ಹಗಲೂ ಕಾಣಲಾರಂಭಿಸಿದ.  


ದಿನ ಕಳೆದಂತೆ ಬಾಳಪ್ಪನಿಗೆ ನಿರಾಸೆಯು ಆವರಿಸತೊಡಗಿತು. ಯಾಕೆ ದಲಾಲಿ ಬಂದಿಲ್ಲ? ಯಾಕೆ ಮರ ಆತನಿಗೆ ಬೇಡವೇ? ಅಥವಾ ನಾನು ಈ ಮರಗಳನ್ನು ಯಾರಿಗೆ ಕೊಡಲಿ? ಕೊಡುವುದಾದರೂ ಕಾನೂನಿನ ತೊಡಕುಗಳೇನು?... ಇದ್ಯಾವುದೂ ಬಾಳಪ್ಪನಿಗೆ ಹೊಳೆಯದೆ ರೇಡಿಯೋ ಕನಸಿನೊಂದಿಗೆ ದಿನಾಲೂ ವ್ಯಥೆ ಪಡತೊಡಗಿದ. ಮುಖ್ಯ ರಸ್ತೆಯಿಂದ ಬಾಳಪ್ಪನ ಮನೆ ಬಹಳ ದೂರವಿದ್ದುದರಿಂದ ವಾಹನಗಳು ಕೂಡ ಅಪರೂಪವೇ. ಆದರೂ ಕೆಲವೊಮ್ಮೆ ವಾಹನಗಳ ಶಬ್ದ ಕೇಳಿದಾಗ ಬಾಳಪ್ಪ ಬಹುಷಃ ದಲಾಲಿ ಬಂದಿರಬಹುದು... ಮರ ಸಾಗಿಸಲು ಲಾರಿ ತಂದಿರಬಹುದು... ತನಗೆ ಹಣ ಕೊಡಬಹುದು.. ಮುಂತಾಗಿ ಯೋಚಿಸಿದರೂ, ಆ ವಾಹನ ಬೇರ್ಯಾರದೋ ಆದಾಗ ಪುನಃ ನಿರಾಸೆಯೇ ಬಾಳಪ್ಪನಿಗೆ. 


ಕಡಿದು ಕೂಡಿಟ್ಟ ಮರಗಳಿಗೆ ಗೆದ್ದಲು ಬರಲು ಪ್ರಾರಂಭವಾದಾಗಲಂತೂ ಬಾಳಪ್ಪ ತನಗೆ ರೇಡಿಯೋ ಕೊಳ್ಳುವ ಭಾಗ್ಯವೇ ಇಲ್ಲವೆಂದು ಜೀವನದಲ್ಲಿ ಪ್ರಥಮ ಬಾರಿಗೆ ನಿರಾಸೆಯನ್ನು ತಾಳಿದ. ಒಂದು ದಿನ ಇದ್ದಕ್ಕಿದ್ದಂತೆ ಆ ದಲಾಲಿ ಬಾಳಪ್ಪನ ಮನೆಗೆ ಭೇಟಿ ಕೊಟ್ಟು ನನಗೆ ಹಲವಾರು ಕಾನೂನಿನ ತೊಂದರೆಗಳಿದ್ದುದರಿಂದ ಅದನ್ನು ಸರಿದೂಗಿಸಲು ಇಷ್ಟು ದಿನಗಳಾದವು ನಾಳೆಯೇ ಮರಗಳನ್ನು ಸಾಗಿಸುತ್ತೇನೆ ಎಂದು ಸ್ವಲ್ಪ ಹಣವನ್ನು ಕೊಟ್ಟು ಹೋದ. ಆ ದಿನ ಬಾಳಪ್ಪನಿಗೆ ಜೀವನದಲ್ಲಿಯೇ ಮರೆಯಲಾಗದ ದಿನ. ನಾಳೆ ಮರಗಳು ಹೋಗುತ್ತವೆ ಉಳಿದ ಹಣ ದೊರೆಯುತ್ತದೆ. ಕೂಡಲೇ ನಾಳೆಯೇ ಮಂಗಳೂರಿಗೆ ಹೋಗಿ ರೇಡಿಯೋ ತರುವುದೆಂದು ಲೆಕ್ಕಾಚಾರ ಹಾಕಿ ಮಲಗಿದರೆ ಬಾಳಪ್ಪನಿಗೆ ನಿದ್ದೆ ಬರಬೇಕೇ? ಇಡೀ ರಾತ್ರಿ ತಾನು ಮಂಗಳೂರಿಗೆ ಹೋದಂತೆ ರೇಡಿಯೋ ಕೊಂಡಂತೆ ಅರೆಪ್ರಜ್ಞಾವಸ್ಥೆಯ ಕನಸುಗಳು. ಅಂತು ಬೆಳಗಾಯಿತು. ಈಗ ದಲಾಲಿಯನ್ನು ಕಾಯುವುದು ಮಾತ್ರ ಬಾಳಪ್ಪನ ಗುರಿ. ಆಗಾಗ ವಾಹನದ ಶಬ್ದ ಕೇಳಿಸಿದಂತಾಗುವುದು ಮಂಗಳೂರಿಗೆ ಯಾವ ಬಸ್ಸಿನಲ್ಲಿ ಹೋಗುವುದು.. ಯಾವ ರೇಡಿಯೋ ತರುವುದು ಮುಂತಾದ ಲೆಕ್ಕಾಚಾರ. ಆದರೆ ದಲಾಲಿ ಬರಲೇ ಇಲ್ಲ. ಪುನಃ ನಿರಾಸೆಯೇ ಬಾಳಪ್ಪನಿಗೆ.  


ನಿರಾಸೆಯಿಂದ ಮಲಗಿದ ಬಾಳಪ್ಪನಿಗೆ ನಿದ್ದೆ ಬಂದೀತೇ.? ಯಾವಾಗಲೋ ನಿದ್ದೆ ಬಂದಿತ್ತು. ಅಷ್ಟರಲ್ಲಿ ಯಾರೋ ಕರೆದಂತಾಯಿತು. ಬಾಳಪ್ಪ ಲಗುಬಗೆಯಿಂದ ಎದ್ದು ಬಾಗಿಲು ತೆರೆದಾಗ ದಲಾಲಿಯೂ ರೇಡಿಯೋ ಕನಸೂ ಒಟ್ಟಾಗಿ ಪ್ರತ್ಯಕ್ಷವಾಗಬೇಕೇ. ಮತ್ತೊಮ್ಮೆ ಬಾಳಪ್ಪ ಆಶಾವಾದಿಯಾದ. ಮರಗಳನ್ನು ಈಗಲೇ ಸಾಗಿಸಬೇಕು ರಾತ್ರಿಯಾದರೆ ಅರಣ್ಯ ಇಲಾಖೆಯ ತೊಂದರೆ ಕಡಿಮೆ ಎಂದು ಹೇಳಿ ದಲಾಲಿಯು, ನಿಮಗೆ ನಾನು ನಾಳೆ ಸಿಗುವೆನೆಂದು ಹೇಳಿ ಮರಗಳನ್ನು ಕೊಂಡು ಹೋದನು. ಸತ್ಯವಂತ ಬಾಳಪ್ಪ.. ಆ ನಾಳೆಗಳಿಗಾಗಿ ಎಷ್ಟೋ ದಿನಗಳನ್ನು ನಿನ್ನೆಯನ್ನಾಗಿಸಿದ. ಕೊನೆಗೂ ಆ ನಾಳೆ ಬಂದಿಲ್ಲ, ರೇಡಿಯೋ ಕನಸು ನನಸಾಗಿಲ್ಲ... ಕಾಲ ಮುಂದೋಡಿದೆ. ಇಂದು ಬಾಳಪ್ಪ ಹಲವು ಏಳು ಬೀಳುಗಳನ್ನು ದಾಟಿ ಬಂದಾಗಿದೆ. ಬಾಳಪ್ಪನಿಗೂ ಕಪಟ, ಮೋಸ, ವಂಚನೆಗಳ ಅರಿವಾಗಿದೆ. ಇಂದು ಬಾಳಪ್ಪನಲ್ಲಿ ರೇಡಿಯೋ, ಟಿ.ವಿ., ಕ್ಯಾರವಾನ್ ರೇಡಿಯೋ ಮುಂತಾದ ಎಲ್ಲ ಆಧುನಿಕ ಸೌಲಭ್ಯಗಳೂ ಇವೆ. ಆದರೆ ಅಂದು ರೇಡಿಯೋ ಬೇಕೆಂಬ ಆಸೆಯಿಂದ ಕಾದುಕೊಂಡಾಗಿನ ಕುತೂಹಲ ಮಾತ್ರ ಇಲ್ಲವಾಗಿದೆ.

*************

-ಬಾಲಕೃಷ್ಣ ಸಹಸ್ರಬುಧ್ಯೆ ಮುಂಡಾಜೆ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿhit counter

0 Comments

Post a Comment

Post a Comment (0)

Previous Post Next Post