ನೋಡಲೇಬೇಕಾದ ಸದಭಿರುಚಿಯ ಸಂಸ್ಕೃತ ಚಲನಚಿತ್ರ 'ಏಕಚಕ್ರಮ್‌' ಕನ್ನಡದಲ್ಲೂ ತೆರೆಗೆ

Upayuktha
0

ವಸ್ತುಶಃ ದಾನಿಗಳ ನೆರವಿನಿಂದಲೇ ಸಂಪೂರ್ಣ ನಿರ್ಮಾಣಗೊಂಡ ಚಿತ್ರ


ಬೆಂಗಳೂರು: ನಾಡಿನ ಶ್ರೇಷ್ಠ ಸಂಸ್ಕೃತ ವಿದ್ವಾಂಸ ವಿದ್ವಾನ್ ರಂಗನಾಥ ಶರ್ಮಾ ವಿರಚಿತ ಕಾವ್ಯೋದ್ಯಾನಮ್ ಕೃತಿಯ ಆಧರಿತ ಸಂಸ್ಕೃತ ಚಲನಚಿತ್ರ 'ಏಕಚಕ್ರಮ್', ಪ್ರತಿಭಾವಂತ ನಿರ್ದೇಶಕ, ಕಲಾವಿದ ಸುಚೇಂದ್ರ ಪ್ರಸಾದ್ ಅವರ ನಿರ್ದೇಶನದಲ್ಲಿ ಅತ್ಯಂತ ಸಮರ್ಥವಾಗಿ ಬೆಳ್ಳಿತೆರೆಗೆ ಬಂದಿದೆ.


ಪಾಂಡವರ ಅಜ್ಞಾತವಾಸದ ಸಂದರ್ಭ- ವಿರಾಟ ರಾಜನ ಏಕಚಕ್ರ ನಗರದಲ್ಲಿ ಅಜ್ಞಾತವಾಸ ನಡೆಸುತ್ತಿರುವ ಪಾಂಡವರು, ನಾಡಿಗೆ ಕಂಟಕನಾಗಿದ್ದ ಬಕಾಸುರನನ್ನು ವಧಿಸುವ ಸನ್ನಿವೇಶದ ಚಿತ್ರಣ ಇದರ ಪ್ರಮುಖ ಕಥಾವಸ್ತು. ಆದರೆ ಅಷ್ಟೇ ಅಲ್ಲ, ಇನ್ನೂ ಬಹಳಷ್ಟು ಸೂಕ್ಷ್ಮ ವಿಚಾರಗಳನ್ನು ಆಧುನಿಕ ಸಮಾಜದ ಜನಜೀವನದ ಜತೆಗೆ ತುಲನಾತ್ಮಕವಾಗಿ ಬಿಂಬಿಸಲಾಗಿದೆ.


ಕಾಲಾಂತರದಲ್ಲಿ ಮೌಲ್ಯಗಳು ಬದಲಾಗುವ ಬಗೆ, ಒಳಿತು-ಕೆಡಕುಗಳ ಸಂಘರ್ಷವನ್ನೂ ಚಿತ್ರದಲ್ಲಿ ನಿರ್ದೇಶಕ ಸುಚೇಂದ್ರ ಪ್ರಸಾದ್ ಅವರು ಸಮರ್ಥವಾಗಿ ಹಿಡಿದಿಟ್ಟಿದ್ದಾರೆ.


ಈ ಚಿತ್ರ ಮೊನ್ನೆ ಮಾರ್ಚ್ 27ರಂದು ಬೆಂಗಳೂರಿನ ಸುಚಿತ್ರ ಚಿತ್ರಮಂದಿರದಲ್ಲಿ ಮೊದಲ ಪ್ರದರ್ಶನ ಕಂಡಿತು. ಮೊದಲ ಪ್ರದರ್ಶನದಲ್ಲೇ ನಿರೀಕ್ಷೆಗೂ ಮೀರಿದ ಪ್ರೇಕ್ಷಕರ ಸ್ಪಂದನೆ ವ್ಯಕ್ತವಾಯಿತು.


ಈ ಹಿನ್ನೆಲೆಯಲ್ಲಿ ನಿರ್ದೇಶಕರಾದ ಸುಚೇಂದ್ರ ಪ್ರಸಾದ್ ಅವರ ಜತೆಗೆ ಉಪಯುಕ್ತ ನ್ಯೂಸ್ ಮಾತುಕತೆ ನಡೆಸಿದಾಗ, ಚಿತ್ರ ನಿರ್ಮಾಣದ ಹಿನ್ನೆಲೆ, ಎದುರಾದ ಹಲವಾರು ತೊಡಕುಗಳು, ಅಂತಿಮವಾಗಿ ಸೆನ್ಸಾರ್ ಮಂಡಳಿಯಿಂದ ಪ್ರಮಾಣಪತ್ರವನ್ನು ಪಡೆದುಕೊಳ್ಳಬೇಕಾದರೆ ನಡೆಸಿದ ಹೋರಾಟದ ಕಥನವನ್ನು ಎಳೆ ಎಳೆಯಾಗಿ ತೆರೆದಿಟ್ಟರು.


ಹೆಸರಾಂತ ಕಲಾವಿದ ಶರತ್ ಲೋಹಿತಾಶ್ವ ಅವರು ಈ ಚಿತ್ರದಲ್ಲಿ ಬಕಾಸುರನ ಪಾತ್ರ ನಿರ್ವಹಿಸಿದ್ದಾರೆ. ಉಳಿದಂತೆ ಪಾತ್ರ ನಿರ್ವಹಿಸಿದ ಎಲ್ಲ ಕಲಾವಿದರೂ ತಮ್ಮ ಪಾತ್ರಗಳ ಚೌಕಟ್ಟಿನಲ್ಲಿ ಅದ್ಭುತವಾದ ಪ್ರದರ್ಶನವನ್ನೇ ನೀಡಿದ್ದಾರೆ.


ಕರ್ನಾಟಕದಲ್ಲಿ ಮಾತ್ರವಲ್ಲ, ದೇಶದಲ್ಲೇ 30 ವರ್ಷಗಳ ಬಳಿಕ ಮತ್ತೊಮ್ಮೆ ಸದಭಿರುಚಿಯ ಸಂಸ್ಕೃತ ಚಲನಚಿತ್ರವೊಂದು ನಿರ್ಮಾಣಗೊಂಡು ತೆರೆಗೆ ಬಂದಿದೆ. ಇದನ್ನು ಮುಕ್ತವಾಗಿ ತೆರೆದ ತೋಳಿನಿಂದ ಬರಮಾಡಿಕೊಂಡು ವೀಕ್ಷಿಸುವ ಮೂಲಕ ಸದಭಿರುಚಿಯ ಚಿತ್ರಗಳ ನಿರ್ಮಾಣ ಪರಂಪರೆ ಮತ್ತೊಮ್ಮೆ ಬೆಳೆಯುವಂತೆ ಮಾಡಲು ಜನತೆ ಮುಂದಾಗಬೇಕಿದೆ.


ಸುಮಾರು 50 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಚಿತ್ರಕ್ಕೆ ಒಬ್ಬ ನಿರ್ಮಾಪಕನಿಲ್ಲ. ಯಾಕೆಂದರೆ ಇದು ಸಾವಿರಾರು ಮಂದಿಯ ಉದಾರ ದೇಣಿಗೆಗಳಿಂದ ನಿರ್ಮಾಣಗೊಂಡಿರುವ ಚಿತ್ರ. ಚಿತ್ರ ನಿರ್ಮಾಣ ತಂಡ ಇದಕ್ಕಾಗಿ ಅಕ್ಷರಶಃ ಭಿಕ್ಷಾಟನೆ ನಡೆಸಿದೆ.  ಜನಸಾಮಾನ್ಯರು ನೀಡಿದ ಹತ್ತು ರೂ. ನೂರು ರೂ ದೇಣಿಗಳಿಂದಲೇ ಚಿತ್ರ ನಿರ್ಮಾಣದ ಕಾರ್ಯ ಪೂರ್ಣಗೊಂಡಿದೆ ಎಂದು ತೆರೆಯ ಹಿಂದಿನ ಕಥನವನ್ನು ಬಿಚ್ಚಿಟ್ಟರು ಸುಚೇಂದ್ರ ಪ್ರಸಾದ್.


ಮಹಾ ಮಹೋಪಾಧ್ಯಾಯ ವಿದ್ವಾನ್ ರಂಗನಾಥ ಶರ್ಮಾ ಅವರ ಕೃತಿಯನ್ನು ಆಧರಿಸಿದ ಚಿತ್ರವಾದ್ದರಿಂದ ಅವರ ಕುರಿತು ಚಲನಚಿತ್ರದಲ್ಲಿ ಕಿರುಪರಿಚಯವನ್ನು ಸೇರಿಸಲಾಗಿತ್ತು. ಆದರೆ ಸೆನ್ಸಾರ್‌ ಮಂಡಳಿಯ ಸಂವೇದನಾರಹಿತ ನಡೆಯಿಂದಾಗಿ ಸುಮಾರು ಹದಿನೆಂಟೂವರೆ ನಿಮಿಷಗಳ ಆ ಭಾಗವನ್ನೇ ಕತ್ತರಿಸಬೇಕಾಯಿತು ಎಂದು ನಿರ್ದೇಶಕ ಸುಚೇಂದ್ರ ಪ್ರಸಾದ್‌ ನೋವಿನಿಂದ ಹೇಳಿಕೊಂಡರು.


ಇದೇ ಕಥಾನಕವನ್ನು ಇದೇ ಹೆಸರಿನಲ್ಲಿ ಕನ್ನಡದಲ್ಲೂ ನಿರ್ಮಿಸಲಾಗಿದೆ. ಎರಡರಲ್ಲೂ ಅದೇ ಕಲಾವಿದರು ನಟಿಸಿದ್ದಾರೆ.  ಒಳಿತು-ಕೆಡಕುಗಳನ್ನು ಜನರ ಹೃದಯಕ್ಕೆ ತಟ್ಟುವಂತೆ ನಿರೂಪಸಲು ಚಲನಚಿತ್ರ ಮಾಧ್ಯಮವನ್ನು ಹೇಗೆ ಸಮರ್ಥವಾಗಿ ಬಳಸಿಕೊಳ್ಳಬಹುದು ಎಂಬುದನ್ನು ಸುಚೇಂದ್ರ ಪ್ರಸಾದ್ ಮತ್ತು ಅವರ ತಂಡ ಈ ಚಿತ್ರದಲ್ಲಿ ನಿರೂಪಿಸಿದೆ.


ಸಂಸ್ಕೃತಿ, ಕಲೆ, ಪರಂಪರೆ, ಧಾರ್ಮಿಕ ಸನ್ನಡತೆಗಳಿಗೆ ಹೆಸರುವಾಸಿಯಾದ ಕರಾವಳಿ ಕರ್ನಾಟಕದ ಜನತೆ ಕೂಡ ಈ ಚಿತ್ರವನ್ನು ಊರೂರುಗಳಲ್ಲಿ ಪ್ರದರ್ಶಿಸುವಂತೆ ಬೇಡಿಕೆ ಇಡಬೇಕಾಗಿದೆ. ಒಂದು ಸದಭಿರುಚಿಯ ಚಿತ್ರವನ್ನು ಗೆಲ್ಲಿಸಲೇಬೇಕಾದ ಹೊಣೆಗಾರಿಕೆ ಇಲ್ಲಿನ ಪ್ರೇಕ್ಷಕರ ಮೇಲಿದೆ. ಜತೆಗೆ ಇಲ್ಲಿನ ನಾನಾ ಸಂಘಟನೆಗಳು ಈ ಚಿತ್ರದ ಪ್ರದರ್ಶನಕ್ಕೆ ಸೂಕ್ತ ಅವಕಾಶಗಳನ್ನು ಮಾಡಿಕೊಡಬೇಕಿದೆ.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



hit counter

Post a Comment

0 Comments
Post a Comment (0)
Mandovi Motors
Mandovi Motors
To Top