|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಬೆಳೆಯುವ ಮುನ್ನ ಉಳಿಯುವ ಪ್ರಯತ್ನವಾಗಲಿ

ಬೆಳೆಯುವ ಮುನ್ನ ಉಳಿಯುವ ಪ್ರಯತ್ನವಾಗಲಿ



ಹೊಸತನದ ಹುಮ್ಮಸ್ಸಿನಲ್ಲಿ ಏನನ್ನೋ ಸಾಧಿಸಿ ಬಿಡಬೇಕೆಂಬ ಹುಚ್ಚು ಹಂಬಲದಲ್ಲಿ ಹೋಗುತ್ತಿರುವ ದಾರಿ ಸರಿಯಾದದ್ದೋ ಸುರಕ್ಷಿತವಾದದ್ದೋ ಎಂಬುದನ್ನು ಕೂಡ ಅರಿಯದಷ್ಟು ಉತ್ಕಟತೆಯಲ್ಲಿ ನಮಗೆ ಮೋಸ ಮಾಡಲೆಂದೇ ಕಾದಿರುವ ಗೋಮುಖ ವ್ಯಾಘ್ರಗಳ ಕಪಿಮುಷ್ಠಿಗೆ ಸಿಲುಕಿ ಪಡಬಾರದ ಪಾಡು ಅನುಭವಿಸಿ ನೊಂದು ಬೆಂದು ಬಸವಳಿದು ಈ ಜೀವ ಜೀವನ ಎರಡು ಬೇಡವೆಂದು ನಿರ್ಧರಿಸುವ ಹಂತಕ್ಕೆ ತಲುಪಿ ಹೋಗಿದೆ. ಇತ್ತೀಚಿನ ಸಾಮಾಜಿಕ ಜಾಲತಾಣಗಳಲ್ಲಿ ಅವಕಾಶಗಳನ್ನು ನೀಡುವ ನೆಪದಲ್ಲಿ ಅವಕಾಶವಾದಿಗಳು ನಮ್ಮನ್ನು ಬಳಸಿಕೊಂಡು ಹಿಂಡಿ ಹಿಪ್ಪೆ ಮಾಡಿ ಬೀದಿಗೆಸೆದು ಬಿಡುವರು. ಈಗಿನ ಯುವ ಸಮುದಾಯಕ್ಕೆ ತಾಳ್ಮೆಯ ಕೊರತೆ ಎದ್ದು ಕಾಣುತ್ತದೆ.


ನಾಲ್ಕು ಸಾಲು ಗೀಚಿದ್ದೆ ತಡ ತಾನ ದೊಡ್ಡ ಬರಹಗಾರನೇ ಎಂದು ತೋರಿಸಿಕೊಳ್ಳುವ ಇರಾದೆಗೆ ಬಿದ್ದು ಹೋಗುವ ದಾರಿಯನ್ನೇ ದಿಕ್ಕು ತಪ್ಪಿಸಿ ಪ್ರಶಸ್ತಿ-ಪುರಸ್ಕಾರಗಳ ಅಮಲೇರಿಸಿ ತಮ್ಮ ಕೈಗೊಂಬೆಗಳನ್ನಾಗಿ ಮಾಡಿಕೊಂಡು ಪ್ರತಿಭೆಯನ್ನು ತುಳಿದು ಬೆಳೆದು ನಿಲ್ಲುವ ಭಂಡರ ಮೋಡಿಯ ಮಾತುಗಳಿಗೆ ಬಲಿಯಾಗಿ ಸರ್ವಸ್ವವನ್ನೇ ಕಳೆದುಕೊಂಡು ಸಮಾಜದೆದುರು ಅದನ್ನು ಒಪ್ಪಿಕೊಳ್ಳಲಾಗದೆ ಅನಾಹುತ ಮಾಡಿಕೊಳ್ಳುವ ಅಮಾಯಕ ಯುವಮನಸ್ಸುಗಳಿಗೆ ಹಾಲು ಯಾವುದು ಸುಣ್ಣದ ನೀರು ಯಾವುದು ಎಂಬುದನ್ನು ಮನವರಿಕೆ ಮಾಡಿಕೊಳ್ಳುವ ಅನಿವಾರ್ಯತೆ ಹಿಂದೆಂದಿಗಿಂತಲೂ ಈಗ ಅವಶ್ಯಕವಾಗಿದೆ.


ಇಂದಿನ ಸಾಮಾಜಿಕ ಜಾಲತಾಣಗಳ ಯುಗದಲ್ಲಿ ಪ್ರಚಲಿತದಲ್ಲಿರುವ ಮುಖ ಒಂದಾದರೆ, ಮರೆಯಲ್ಲಿ ಅವಿತು ಮರಳು ಮಾಡಿ ಪ್ರಪಾತಕ್ಕೆ ತಳ್ಳುವ ಖೂಳರ ಸಮೂಹವೇ ತುಂಬಿ ಹೋಗಿದೆ. ಇಂತಹ ಸಂದರ್ಭದಲ್ಲಿ ಅನನುಭವಿ ಯುವಕ/ ಯುವತಿಯರು ಬಹುಬೇಗ ಅಂತಹವರನ್ನು ನಂಬಿ ಮೋಸ ಹೋಗಿರುವುದೇ ಹೆಚ್ಚು. ಹಿಂದೆ ಗೊತ್ತಿಲ್ಲ ಮುಂದೆ ಗೊತ್ತಿಲ್ಲದ ಅಪರಿಚಿತರ ಜೊತೆ ವ್ಯವಹಾರ ನಡೆಸುವಾಗ ತುಂಬಾ ಜಾಗರೂಕತೆಯಿಂದ ಮುಂದುವರಿಯಬೇಕಾಗುತ್ತದೆ. ನಮ್ಮ ಪ್ರತಿಭೆ ನಮ್ಮ ಬೆಳವಣಿಗೆಗೆ ಪೂರಕವಾಗಿರಬೇಕು. ಕಾಯುವ ಮನಸ್ಥಿತಿ ಗಾಢವಾಗಿ ಇರಬೇಕು. ಮೋಡಿಗಾರನ ಮಾಯಾಜಾಲದಂತೆ ಯಾವುದು ಅಂದುಕೊಂಡಂತೆ ತಕ್ಷಣಕ್ಕೆ ಆಗುವುದಿಲ್ಲ. ಅದಕ್ಕೆಲ್ಲ ತುಂಬಾ ಸಮಯ ಬೇಕಾಗುತ್ತದೆ.


ಈ ಮಧ್ಯೆ ನಮ್ಮ ಪ್ರತಿಭೆಯನ್ನು ಗುರುತಿಸುವ ನೆಪದಲ್ಲಿ ನಮ್ಮ ಮುಗ್ಧತೆಯನ್ನು ಕೈವಶ ಮಾಡಿಕೊಂಡು ತಾವು ಹೇಳಿದಂತೆ ಕೇಳುವ ಸೂತ್ರದ ಗೊಂಬೆಗಳನ್ನಾಗಿಸಿಕೊಂಡು ಮೆರೆಯುವವರ ಮುಂದೆ ನಾವು ಕುರಿಗಳಂತೆ ತಲೆತಗ್ಗಿಸಿ ನಿಲ್ಲಬಾರದು. ನಮ್ಮೊಳಗಿನ ಕ್ರಿಯಾಶೀಲತೆ ಪ್ರಾಮಾಣಿಕವಾಗಿದ್ದೂ ಕನಸು ಕಲ್ಪನೆಗಳಿಗೆ ಜೀವ ತುಂಬುವಂತೆ ಇದ್ದರೆ ವರುಷಗಳ ಲೆಕ್ಕದಲ್ಲಿ ಅದನ್ನು ಕಾಪಿಟ್ಟುಕೊಂಡು ನಮ್ಮ ಪ್ರಯತ್ನವನ್ನು ಮುಂದುವರಿಸಿಕೊಂಡು ಹೋಗಬೇಕು. ಈ ಸಂದರ್ಭದಲ್ಲಿ ಕೆಲವರು ಒಡ್ಡುವ ಆಮಿಷಗಳಿಗೆ ಬಲಿಯಾಗದೆ ಪ್ರತಿನಿಮಿಷವೂ ಎಚ್ಚರಿಕೆಯಿಂದ ಮುಂದೆ ಸಾಗಿದಾಗ ಮಾತ್ರ ನಮ್ಮ ಗುರಿ ತಲುಪುತ್ತೇವೆ. ಯಾವುದೇ ಹಿರಿಮೆ ಗರಿಮೆ ಕಡೆಗೆ ಮನಸ್ಸು ಕೊಡದೆ ನಮ್ಮೊಳಗಿನ ಉತ್ಕಟೇಚ್ಛೆಯು ನಮ್ಮ ಉನ್ನತಿಗೆ ಮೆಟ್ಟಿಲಾಗುವಂತೆ ಮಾರ್ಪಡಿಸಿಕೊಂಡು ನಾವಿಲ್ಲಿ ಬೆಳೆಯಬೇಕೆ ವಿನಹ ಗೊತ್ತುಗುರಿಯಿಲ್ಲದೆ ಯಾವುದೇ ವ್ಯಕ್ತಿ ಸಂಘಟನೆಯವರು ಮೂಗಿನ ತುದಿಗೆ ತುಪ್ಪ ಸವರುವ ಕೆಲಸ ಮಾಡುವಾಗ ಅಂಥವರಿಂದ ದೂರವಿದ್ದು ನಮ್ಮ ಪಾಡಿಗೆ ನಾವು ಸಾಧನೆಯ ಗಮ್ಯದೆಡೆಗೆ ದೃಷ್ಟಿನೆಟ್ಟು ಸಾಗಬೇಕು.


ಅದರಲ್ಲೂ ಹೊಸಪೀಳಿಗೆಯ ಯುವಕ-ಯುವತಿಯರು ಅನುಭವದ ಕೊರತೆಯಿಂದಲೂ ಅತಿಯಾದ ಆತ್ಮವಿಶ್ವಾಸದಿಂದಲೋ ಯಾರು ಗುರುತಿಸಿ ಬೆಳೆಸುತ್ತಾರೆ ಎಂಬ ಅಂಧಶ್ರದ್ಧೆಯಿಂದ ಮುಂದೆ ಹೋದರೆ ಅವರು ನಮ್ಮ ಕಣ್ಣಿಗೆ ಪಟ್ಟಿ ಕಟ್ಟಿ ನಮ್ಮ ಜುಟ್ಟು ಹಿಡಿದು ಅವರಿಗೆ ಬೇಕಾದಂತೆ ನಡೆಸಿಕೊಂಡು ಎಲ್ಲ ಬರಿದಾಗಿಸಿ ನಡು ನೀರಲ್ಲಿ ಕೈ ಬಿಟ್ಟು ಹೋಗುತ್ತಾರೆ. ಅಂತಹ ಸಂದರ್ಭದಲ್ಲಿ ತೀವ್ರತರ ಖಿನ್ನತೆಗೆ ಒಳಗಾಗಿ ಅನ್ಯಾಯ ಎಸಗಿದವರ ವಿರುದ್ಧ ಸೆಟೆದು ನಿಲ್ಲಲಾಗದೆ, ಮೋಸ ಹೋದದ್ದನ್ನು ಅರಗಿಸಿಕೊಳ್ಳಲಾಗದೆ, ಸಮಾಜದೆದುರು ಮುಖ ತೋರಿಸಲಾಗದೆ ಸುಂದರವಾದ ಬದುಕಿಗೆ ಇತಿಶ್ರೀ ಹಾಡುವುದು ವೀರರ ಲಕ್ಷಣವಲ್ಲ. ತೊಂದರೆ ಕೊಟ್ಟವನನ್ನು ಬಯಲಿಗೆಳೆದು ಜಗದೆದುರು ಅವನ ಕಪಟತನ ಜಗಜ್ಜಾಹೀರು ಮಾಡಿ ಮುಂದೆ ಯಾರು ಅಂತವನ ಆಮಿಷಗಳಿಗೆ ಬಲಿಯಾಗದಂತೆ ಕಾಯುವ ಕಟ್ಟಾಳುಗಳಾಗಿ ನಿಂತು ಸಮಸ್ಯೆಯನ್ನು ಎದುರಿಸಬೇಕು.


ನಮ್ಮ ಕಣ್ಣೆದುರೇ ನಡೆಯುವ ಇಂತಹ ದುಷ್ಕೃತ್ಯಗಳಿಗೆ ಸಾಮೂಹಿಕವಾಗಿ ನ್ಯಾಯಸಮ್ಮತವಾಗಿ ಕಾನೂನಾತ್ಮಕವಾದ ಹೋರಾಟದಿಂದ ಅಪರಾಧಿಗೆ ಶಿಕ್ಷೆ ಕೊಡಿಸುವ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಬೇಕು. ಅದನ್ನು ಬಿಟ್ಟು ಆಗಿ ಹೋದದ್ದರ ಬಗ್ಗೆ ಮರುಕಪಟ್ಟು ಅನುಕಂಪದ ನಾಲ್ಕು ಮಾತುಗಳನ್ನಾಡಿದರೆ ತಪ್ಪಿತಸ್ಥನಾದವನು ಅದನ್ನೇ ನಮ್ಮ ಅಸಹಾಯಕತೆ ಎಂದು ತಿಳಿದು ಮತ್ತೆ ಮತ್ತೆ ಅಂಥದೇ ಕೃತ್ಯಗಳನ್ನೆಸಗುತ್ತಾ ಸಮಾಜದಲ್ಲಿ ದೊಡ್ಡ ವ್ಯಕ್ತಿಯಂತೆ ಬಿಂಬಿತನಾಗುತ್ತಾನೆ. ಯಾರು ನನಗೆ ಏನೂ ಮಾಡಲಾರರು ಎಂದು ಮೆರೆಯುತ್ತಿರುತ್ತಾನೆ. ಅಂತದಕ್ಕೆಲ್ಲ ಆಸ್ಪದ ನೀಡದೆ ನಾವು ನಡೆಯುವ ಹಾದಿಯಲ್ಲಿ ಮೈಯೆಲ್ಲ ಕಣ್ಣಾಗಿ ನಮ್ಮನ್ನು ನಾವು ಕಾಪಾಡಿಕೊಂಡು ನಮ್ಮ ಬದುಕನ್ನು ನಾವೇ ರೂಪಿಸಿಕೊಳ್ಳಬೇಕು. ಇಲ್ಲಿ ಬೆಳೆಸುವ ಕೈಗಳ ಪ್ರಾಮಾಣಿಕತೆ ಮೇಲ್ನೋಟಕ್ಕೆ ಕಾಣುವುದೇ ಇಲ್ಲ. ಹಾಗಾಗಿ ಯಾವುದೇ ಕ್ಷಣದಲ್ಲಾದರೂ ನಾವು ಹಾದಿ ತಪ್ಪುವ ಅವಕಾಶವೇ ಇಲ್ಲದಂತೆ ಕಟ್ಟೆಚ್ಚರದಿಂದ ನಮ್ಮ ಕನಸು ಭಾವನೆಗಳ ಜೊತೆಗೆ ಗುರಿ ತಲುಪುವ ವೇದಿಕೆಯನ್ನು ನಾವೇ ಮಾಡಿಕೊಂಡು ಬೆಳೆಯಬೇಕೆ ವಿನಹ ಯಾರದೋ ಮರ್ಜಿಗೆ ಒಳಗಾಗಿ ಅವನ ಸಿಗುವ ಭಿಕ್ಷೆಗೆ ಬಾಯಿತೆರೆದು ಕೂರದೆ ನಮ್ಮತನ ನಮ್ಮ ಘನತೆಯನ್ನು ಕಾಯ್ದುಕೊಂಡು ಸಮಾಜದಲ್ಲಿ ನಮ್ಮದೇ ಆದ ಛಾಪನ್ನು ಮೂಡಿಸಬೇಕು.


-ಅಪ್ಪಾಜಿ ಎ ಮುಸ್ಟೂರು 

ಮುಸ್ಟೂರು ಅಂಚೆ,

ಜಗಳೂರು ತಾಲೂಕು, ದಾವಣಗೆರೆ ಜಿಲ್ಲೆ 

8496819281

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



hit counter

0 Comments

Post a Comment

Post a Comment (0)

Previous Post Next Post