||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮುಚ್ಚಿ ಹೋಗಿರುವ 'ಚಿತ್ಪಾವನ್ ಫೈಲ್ಸ್'

ಮುಚ್ಚಿ ಹೋಗಿರುವ 'ಚಿತ್ಪಾವನ್ ಫೈಲ್ಸ್'


ಶತಮಾನಗಳಿಂದ ಯಾರಿಗೂ ತಿಳಿಯದಂತೆ ಮುಚ್ಚಿಟ್ಟ ಸತ್ಯಗಳನ್ನು ದಿ ಕಾಶ್ಮೀರ್ ಫೈಲ್ಸ್ ಎಂಬ ಕಿಡಿಯೊಂದು ಉರಿದು ಒಂದೊಂದೇ ಸತ್ಯವನ್ನು ಜಗತ್ತಿಗೆ ತೋರಿಸುತ್ತಿದೆ. ಸಂತೋಷದ ವಿಷಯ. ಚರಿತ್ರೆ ಯಾವಾಗಲೂ ಮುಚ್ಚಿಡಬಾರದು, ಅದು ಪಾರದರ್ಶಕವಾಗಿರಬೇಕು. ಆವಾಗಲೇ ಅದರಿಂದ ನಮಗೆ ಪಾಠ ಕಲಿಯಲಿಕ್ಕಾಗುತ್ತದೆ. ಪಂಡಿತರ ಮೇಲೆ ದೌರ್ಜನ್ಯದಿಂದ ದಿ ಕಾಶ್ಮೀರ್ ಫೈಲ್ಸ್ ಸಿನೆಮಾ ಹುಟ್ಟಿಕೊಂಡಿದೆ. ಸತ್ಯ ಅನಾವರಣವಾದಂತೆ ಅದೆಷ್ಟು ಕಠೋರವೆಂಬ ಅರಿವು ನಮಗಾಗುತ್ತದೆ. ಹಾಗೆಂದು ಇದು ಮೊದಲ ದೌರ್ಜನ್ಯವಲ್ಲ. ನಾವು ಅಂದರೆ ಚಿತ್ಪಾವನರು... ಸುಮಾರು ಮೂರು ನಾಲ್ಕು ಶತಮಾನಗಳ ಹಿಂದೆಯೇ ಇಂತಹ ಅಮಾನುಷ ಕ್ರೌರ್ಯಕ್ಕೆ ಬಲಿಯಾಗಿ ಕಾಶ್ಮೀರದ ಪಂಡಿತರಂತೆ ಚಿತ್ಪಾವನರು ರತ್ನಗಿರಿ, ಚಿಪ್ಲೂನ್ ಗೋವಾ, ಸಾಂಗ್ಲಿ, ಕರ್ಹಾಡ ಮುಂತಾದ ಊರುಗಳಿಂದ ಹೊರದಬ್ಬಲ್ಪಟ್ಟು ದಕ್ಷಿಣ ಕನ್ನಡಕ್ಕೆ ಬಂದು ಕಾಡು ಮೇಡುಗಳಲ್ಲಿ ಅವಿತುಕೊಂಡು, ಕ್ರಮೇಣ ಸ್ಥಳೀಯರೊಡನೆ ವಿಶ್ವಾಸ ಉಳಿಸಿಕೊಂಡು ಪಶ್ಚಿಮ ಘಟ್ಟಗಳಲ್ಲಿ ತಮ್ಮ ಅಸ್ತಿತ್ವ ಕಂಡುಕೊಂಡಿದ್ದಾರೆಂದರೆ ಅಂದು ನಡೆದ ಭೀಕರ ಮಾರಣ ಹೋಮಗಳೇ ಕಾರಣಗಳಿರಬಹುದು.


ಇಲ್ಲದಿದ್ದರೆ ಆಸ್ತಿ ಪಾಸ್ತಿಗಳನ್ನು, ಗೋವುಗಳನ್ನು, ಪರಿಸರ ಪ್ರಕೃತಿಯನ್ನು ಏಕಾಏಕಿ ಬಿಟ್ಟು ಭೀತಿಯಿಂದ ಓಡೋಡಿ ಬಂದು ಕಾಡಿನ ತಪ್ಪಲೊಳಗೆ ವಾಸಮಾಡಿಕೊಂಡಿರಲು ಅಂದಿನ ದೌರ್ಜನ್ಯ ಅದೆಷ್ಟರ ಮಟ್ಟಿಗಿರಬಹುದೆಂದು ಆಲೋಚಿಸಲೂ ಆಗದು. ಬಹುಷಃ ಅಂದಿನ ಭೀತಿಯ ಒಂದಂಶವು ಇಂದೂ ಚಿತ್ಪಾವನರಲ್ಲಿ ಉಳಿದುಕೊಂಡಿದೆ ಎಂದೆನಿಸುತ್ತದೆ. ಯಾಕೆಂದರೆ ಇತರ ಯಾವುದೇ ಬ್ರಾಹ್ಮಣರಿರಲಿ ಅಥವಾ ಯಾವುದೇ ಪಂಗಡವಿರಲಿ ಚಿತ್ಪಾವನರಷ್ಟು ಶಾಂತಿ ಪ್ರಿಯರು ಯಾರೂ ಇರಲಿಕ್ಕಿಲ್ಲ. ಆ ಕಾಲದ ಗಲಾಟೆ ದೊಂಬಿಗಳ ರಾಕ್ಷಸೀ ಪ್ರವೃತ್ತಿಗೆ ಚಿತ್ಪಾವನರ ಅಂತಸ್ಸತ್ವವೇ ಉಡುಗಿ ಹೋಗಿರಬೇಕೆಂದು ಕಾಣುತ್ತದೆ. ಏನೇ ಇರಲಿ ಇವತ್ತು ಚಿತ್ಪಾವನರು ಎಲ್ಲರೊಡನೆ ಬೆರೆತು ದಕ್ಷಿಣ ಕನ್ನಡದ ಅವಿಭಾಜ್ಯ ಅಂಗದಂತೆಯೇ ಇದ್ದಾರೆಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆ. 


ಆತ್ಮಾಭಿಮಾನಿಗಳಾದ ಚಿತ್ಪಾವನರು ಯಾವುದೇ ಸರಕಾರಿ ಸವಲತ್ತುಗಳನ್ನು ಅಪೇಕ್ಷಿಸದೆ ತಮ್ಮ ಸ್ವ ಶಕ್ತಿಯಿಂದಲೇ ಇಂದು ಕರ್ಣಾಟಕದಾದ್ಯಂತ ಬದುಕಿದ್ದಾರೆ. ಒಂದು ವೇಳೆ ನಿರಾಶ್ರಿತರ ಶಿಬಿರವೆಂದಾಗಲಿ, ಸರಕಾರ ರಕ್ಷಿಸುತ್ತದೆ ಎಂದಾಗಲಿ ಇರುತ್ತಿದ್ದರೆ ಬಹುಷಃ ಇಂದು ಕೂಡ ಅನಾಥರಾಗಿಯೇ ಇರಬೇಕಿತ್ತು. ಇವತ್ತಿನ ಚಿತ್ಪಾವನರ ಹೆತ್ತವರಾಗಲಿ, ಅಜ್ಜ ಅಜ್ಜಿಯರಾಗಲಿ ಇಲ್ಲಿ ಹುಟ್ಟಿ ಬೆಳೆದವರಂತೆ ಕಾಣುತ್ತಾರೆ. ಆದರೆ ಮತ್ತೂ ಮೂರು ನಾಲ್ಕು ತಲೆಮಾರಿನ ಹಿಂದೆ ಹೋದಾಗ ಅವರ ಮೂಲ, ಕಾಶ್ಮೀರದಲ್ಲಿ ಭೀಭತ್ಸ ಕೃತ್ಯಕ್ಕೊಳಗಾಗಿ ಪಂಡಿತರು ನಾಶ ಹೋದಂತೆ ಚಿತ್ಪಾವನರು ಕೂಡ ಮೂಲ ಸ್ಥಳಗಳಲ್ಲಿ ನಾಶವಾದ ಕಥೆ ಭಯಾನಕವಾಗಿದ್ದಿರಬಹುದು. ಅದರ ಯಾವುದೇ ದಾಖಲೆಗಳು ನಮ್ಮ ಬಳಿ ಇಂದು ಇರದಿದ್ದುದರಿಂದ ನಮಗೆ ಆ ಘಟನೆಗಳು ಯಾರದೋ ಕಾಲದ ಯಾವುದೋ ಚರಿತ್ರೆ ಎಂದು ಅನಿಸುತ್ತಿದೆ. ಮ್ಲೇಂಛರ ದಾಳಿ ಇರಬಹುದು, ಗಾಂಧಿ ಹತ್ಯೆಯ ಸಂದರ್ಭವಿರಬಹುದು ಚಿತ್ಪಾವನರ ಮೇಲಾದ ದೌರ್ಜನ್ಯಗಳು ಚಿತ್ಪಾವನರು ಬ್ರಾಹ್ಮಣರು ಎಂಬ ಏಕೈಕ ಕಾರಣದಿಂದ ಮುಚ್ಚಿ ಹೋಗಿದೆ.


ಇವತ್ತು ಕಾಶ್ಮೀರ್ ಫೈಲ್ಸ್ ಏನು ಹೇಳುತ್ತದೋ ಅದಕ್ಕಿಂತಲೂ ಘೋರ ಘಟನೆಗಳು ಚಿತ್ಪಾವನರ ಪೂರ್ವಜರು ಅನುಭವಿಸಿದ್ದಾರೆ ಎಂದು ನನಗನಿಸುತ್ತದೆ. ನೇರ ಸಂಪರ್ಕ ಕಳಚಿ ಹೋದದ್ದರಿಂದ ಹಾಗೂ ಯಾವುದೇ ದಾಖಲೆಗಳಿಲ್ಲದ್ದರಿಂದ ನಾವು ಏನೂ ಆಗಿಲ್ಲ ಎನ್ನುವಂತೆ ಇವತ್ತು ಬದುಕಿದ್ದೇವೆ. ಕಾಶ್ಮೀರ್ ಫೈಲ್ಸ್ ಎನ್ನುವಂಥ ಕಿಡಿಗಳು ಪ್ರಜ್ವಲವಾದರೆ ಅದೆಷ್ಟೋ ಬಚ್ಚಿಟ್ಟ ಸತ್ಯಗಳು ಹೊರಬರಬಹುದು. ಆದರೆ ಅದು ಮುಚ್ಚಿಟ್ಟಷ್ಟು ಸುಲಭದಲ್ಲಿ ಬಿಚ್ಚಲ್ಪಡಬಲ್ಲವೇ? ಕಾಲವೂ ಮುಂದೋಡಿದೆ, ಸತ್ಯ ಅರಗಿಸಿಕೊಳ್ಳುವಷ್ಟು ವ್ಯವಧಾನವೂ ಇಲ್ಲವಾಗಿದೆ, ಮುಚ್ಚಿದ್ದನ್ನು ಬಿಚ್ಚಿದಾಗ ದ್ವೇಶದ ಕಿಚ್ಚು ಹೆಚ್ಚಾದರೆ ಶಮನ ಮಾಡುವ ಮನಸ್ಥಿತಿಯೂ ಇಲ್ಲವಾಗಿದೆ. ಆದ್ದರಿಂದ ಕೆಲವು ಸಂದರ್ಭಗಳಲ್ಲಿ ಸತ್ಯವಾದರೂ ಅಪ್ರಿಯ ಸತ್ಯವೆಂಬುದು ಬಾಧೆಯನ್ನೇ ಕೊಡುತ್ತದೆ. ಸತ್ಯವನ್ನು ಸುಳ್ಳಿನಷ್ಟು ಸಹಜವಾಗಿ ಒಪ್ಪಿಕೊಳ್ಳಲಾಗದ್ದರಿಂದ ಪರಿಣಾಮವೂ ಕಲ್ಪನಾತೀತವಾಗಿರುತ್ತದೆ. ಸತ್ಯದಿಂದ ಪಾಠ ಕಲಿತರೇ ಒಳ್ಳೆಯದೇ. ಆದರೆ ಅಂದು ನಡೆದ ಘಟನೆಗಳಿಗೆ ಇಂದು ಪ್ರತೀಕಾರದ ಮನೋಭಾವ ಬೆಳೆದರೆ ಅದು ಇನ್ನೊಂದು ಚರಿತ್ರೆಗೆ ದಾರಿಯಾದರೆ ಸತ್ಯ ಗೌಪ್ಯವಾಗಿದ್ದರೇ ಚೆನ್ನಾಗಿತ್ತು ಎಂದೆನಿಸದೆ?  


ಸ್ವಾತಂತ್ರ್ಯ ಸಂಗ್ರಾಮಗಳಿರಬಹುದು, ಮತಾಂಧರ ದಾಳಿಗಳಿರಬಹುದು ಹಿಂದೂಗಳ ಮಾರಣ ಹೋಮಗಳೇ ನಡೆದಿವೆ. ಆದರೆ ಇಂದು ಶಾಲಾ ಪಠ್ಯದಲ್ಲಿ ಆಗಲಿ ಚರಿತ್ರೆಯ ಪುಸ್ತಕಗಳಲ್ಲಾಗಲಿ ಇದರ ಉಲ್ಲೇಖವೇ ಇಲ್ಲ. ಸತ್ಯ ತಿಳಿಯಬೇಕೆಂದರೂ ಸಾಧ್ಯವಿಲ್ಲ. ಹಾಗೆಂದು ಅಂದು ಎಷ್ಟೇ ಕ್ರೌರ್ಯಗಳು ನಡೆದರೂ ಇಂದು ಅದರ ಸತ್ಯಗಳು ತಿಳಿದರೂ ಯಾವೊಬ್ಬ ಹಿಂದುವಾಗಲಿ, ಯಾವುದೇ ಪಂಗಡಗಳಾಗಲಿ ಪ್ರತೀಕಾರ ತೆಗೆದುಕೊಳ್ಳುವ ಮನಸ್ಥಿತಿಯಲ್ಲಿಲ್ಲ ಆದರೆ ಸತ್ಯ ತಿಳಿದಾಗ ಮನಸ್ಸಿಗೆ ಆಘಾತಗಳಾಗುವುದಂತೂ ನಿಜವೇ. ಕಾಶ್ಮೀರ್ ಫೈಲ್ಸ್ ತರಹದ ಚಿತ್ರಗಳ ವೀಕ್ಷಣೆ ಮಾತ್ರ ಹಿಂದೂಗಳಾಗಲಿ ಮುಸ್ಲೀಮರಾಗಲಿ ಖಂಡಿತ ಮಾಡಲೇಬೇಕು. ಮತಾಂಧತೆಯಿಂದ ಏನೇನೆಲ್ಲ ನಡೆಯುತ್ತದೆ, ಹೇಗೆ ಒಂದು ಜನಾಂಗವೇ ನಾಶವಾಗುತ್ತದೆ, ಅದರೊಡನೆ ಅಮೂಲ್ಯವಾದ ಸಂಸ್ಕೃತಿ ಸಂಪ್ರದಾಯ ಹೇಳಹೆಸರಿಲ್ಲದಂತಾಗುತ್ತದೆ, ಅದೇ ಸಂದರ್ಭ ಅಳಿದು ಉಳಿದವರ ಮಾನಸಿಕತೆ ಅದೆಷ್ಟು ಛಿದ್ರ ಛಿದ್ರವಾಗುತ್ತದೆ ಎಂಬೆಲ್ಲ ವಿಚಾರಗಳು ಮಂಥನವಾದರೆ ಮುಂದೆ ಇಂತಹ ಘಟನೆಗಳು ನಡೆಯದಂತೆ ಅಥವಾ ನಡೆಯುವುದಾದರೆ ಅದಕ್ಕೆ ಪೂರ್ವ ತಯಾರಿ ಮಾಡಿಕೊಳ್ಳುವಂತೆ ಪಾಠವನ್ನು ಕಲಿತುಕೊಳ್ಳಬಹುದು.


ಏನೇ ಇರಲಿ ಚಿತ್ಪಾವನರು ಮಾತ್ರ ಅಂತಹ ಭೀಭತ್ಸ ವಿದ್ಯಮಾನಗಳಿಂದ ಹೊರಬಂದು ಇವತ್ತು ಎಲ್ಲರೊಡನೆ ಬೆರೆತು ಏನೂ ಆಗಿಲ್ಲವೆಂಬಂತೆ ಬದುಕು ಕಟ್ಟಿಕೊಂಡಿದ್ದಾರೆಂದರೆ, ಅದು ಹೇಡಿತನವಲ್ಲ. ಯಾಕೆಂದರೆ ಕ್ರಾಂತಿಕಾರಿಗಳಾದ ವೀರ ಸಾವರ್ಕರ್, ತಿಲಕ್, ಗೋಖಲೆಯವರಂಥ ದೇಶಭಕ್ತರನ್ನು ಕೊಟ್ಟಂಥ ವೀರ ಪರಂಪರೆಯೇ ಇರುವ ಪಂಗಡ ಚಿತ್ಪಾವನರದ್ದೆಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆ. ಹಾಗೆಂದು ಮತಾಂಧರಂತೆ ಭಯೋತ್ಪಾದನೆಯೊಂದಿಗೆ ಬದುಕು ಕಟ್ಟಿಕೊಳ್ಳುವ ಜಾಯಮಾನವೂ ಚಿತ್ಪಾವನರದ್ದಲ್ಲವಾದ್ದರಿಂದ ಜನ್ಮ ಭೂಮಿಯನ್ನು ಬಿಟ್ಟು ಶಾಂತಿಯುತ ಜೀವನವನ್ನು ಅರಸಿಕೊಂಡು ವಲಸೆ ಬಂದಿರುವ ಚರಿತ್ರೆಯೇ ಚಿತ್ಪಾವನರಿಗೂ ದಕ್ಷಿಣ ಕನ್ನಡಕ್ಕೂ ಅವಿನಾಭಾವ ಸಂಬಂಧವನ್ನು ಕಲ್ಪಿಸಿಕೊಟ್ಟಿದೆ ಎಂದೆನಿಸುತ್ತದೆ. ಅದರಿಂದಾಗಿ ಚಿತ್ಪಾವನರು ಆರಿಸಿಕೊಂಡದ್ದು ಪರಿಪೂರ್ಣವಾದ ವರ್ತಮಾನದ ಬದುಕೇ ಆಗಿದೆ. ಭೂತವನ್ನು ತಿಳಿಯಬಹುದು, ವರ್ತಮಾನವನ್ನು ಅನುಭವಿಸಬಹುದು, ಭವಿಷ್ಯವನ್ನು ಊಹಿಸಬಹುದು. ಆದರೆ ಬದಲಾವಣೆ ನಾವಂದುಕೊಂಡಂತೆ ಸಾಧ್ಯವಾಗದು. ಹವ್ಯಕ ಭಾಷೆಯಲ್ಲಿ ಗಾದೆ ಮಾತೊಂದಿದೆ 'ಎಬ್ಬಿದಲ್ಲಿ ಹೋಗದಿದ್ದರೆ ಹೋದಲ್ಲಿ ಎಬ್ಬುದು' ಎಂದು. ಹಾಗೇ ನಮ್ಮ ಸ್ಥಿತಿ ನಾವೆಣಿಸಿದಂತೆ ಬದುಕು ಕಟ್ಟಲಾಗದಿದ್ದರೆ, ಬದುಕು ಕೊಂಡು ಹೋದಲ್ಲಿ ಬದುಕು ಕಟ್ಟಿಕೊಳ್ಳುವುದು. ಇದು ಇಂದಿನ ಚಿತ್ಪಾವನರ ಮನಸ್ಥಿತಿ ಎಂದರೆ ತಪ್ಪಾಗಲಾರದು.

-ಬಾಲಕೃಷ್ಣ ಸಹಸ್ರಬುದ್ಧೆ ಮುಂಡಾಜೆ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


hit counter

0 Comments

Post a Comment

Post a Comment (0)

Previous Post Next Post