|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಧರ್ಮ-ಕರ್ಮ: ಶ್ರಾದ್ಧ ಕ್ರಿಯೆಯ ವೈಜ್ಞಾನಿಕತೆ

ಧರ್ಮ-ಕರ್ಮ: ಶ್ರಾದ್ಧ ಕ್ರಿಯೆಯ ವೈಜ್ಞಾನಿಕತೆ


ಶ್ರಾದ್ಧ ಕ್ರಿಯೆಯು ದೈವಿಕವಾಗಿದ್ದರೂ ವೈಜ್ಞಾನಿಕತೆಗೆ ಎಟುಕಲಾರದ ವಿಷಯವಲ್ಲ. ಪಂಚಭೂತಗಳಿಂದ ಭೌತಿಕ ಶರೀರ ಉಂಟಾಗಿದೆ. ಮರಣಾನಂತರ ಇದು ನಾಶವಾದರೂ, ತೇಜಸ್ಸು, ಪಂಚವಾಯು ಮತ್ತು ಆಕಾಶ ತತ್ವಗಳು ಮನೋಮಯ ಕೋಶದೊಡನೆ ಕರ್ಮಾನುಸಾರ ಶರೀರಾಂತರವನ್ನು ಸೇರುವುದು. ತಂದೆಯ ಸೂಕ್ಷ್ಮ ಶರೀರಕ್ಕೂ ಪುತ್ರನ ಸೂಕ್ಷ್ಮ ಶರೀರಕ್ಕೂ ಪರಸ್ಪರ ಆಕರ್ಷಣೆಯ ಋಣಾನುಬಂಧವಿದೆ.

ಪಿತೃವಿನ ಮರಣಾನಂತರವೂ ಈ ಸಂಬಂಧವು ತೊಲಗಲಾರದು. ಆದಕಾರಣ ಪುತ್ರಕೃತ ಸಂಸ್ಕಾರಗಳು ಪಿತೃಗಳ ಸದ್ಗತಿಗೆ ಸಾಧಕಗಳಾಗುವುದು. ಇದು ಶಾಸ್ತ್ರಸಿದ್ಧ ಮೃತ ವ್ಯಕ್ತಿಯ ಸೂಕ್ಷ್ಮ ಶರೀರವು ಯಾವ ಅಜ್ಞಾತ ಯೋನಿಯಲ್ಲಿದ್ದರೂ (ಆಕಾಶದ ಶಬ್ದ, ವಾಯುವಿನ ಸ್ಪರ್ಶ, ತೇಜಸ್ಸಿನ ತರಂಗಗಳು ಇಲ್ಲಿಂದಲ್ಲಿಗೆ ಸದಾ ಪ್ರವಹಿಸುತ್ತಿರುವ ಕಾರಣ) ಮಾಡುವ ಶ್ರಾದ್ಧದಲ್ಲಿ ಕ್ರಿಯಾಶಕ್ತಿ, ಮಂತ್ರಶಕ್ತಿ, ದ್ರವ್ಯಶಕ್ತಿಗಳು ಸಮ್ಮಿಳಿತವಾಗಿ ಲೋಕಾಂತರದಲ್ಲಿರುವ ಪಿತೃಗಳಿಗೆ (ಪಿಂಡ ತಿಲತರ್ಪಣಗಳು) ರೂಪಾಂತರ ಹೊಂದಿ ಆಹಾರವಾಗಿ ಪರಿಣಮಿಸುತ್ತದೆ. ಮಾನವನ ಸೀಮಿತ ದೃಷ್ಟಿಗೆ ಇದು ಗೋಚರಿಸದಿದ್ದರೂ "ಶ್ರಾದ್ಧೇ ಯೋಗಃ ಪ್ರವರ್ತತೇ' ಎಂದು ಋಷಿಗಳು ಈ ಸೂಕ್ಮ ರಹಸ್ಯವನ್ನು ಮನಗಂಡಿದ್ದಾರೆ.


ಶ್ರಾದ್ಧ ಕರ್ಮದ ಉದ್ದೇಶವೇನು?

ಮರಣಾನಂತರ ಜೀವಿಗೆ ತನ್ನ ಕರ್ಮಾನುಸಾರ ಸ್ವರ್ಗವೋ, ನರಕವೋ ಪ್ರಾಪ್ತಿ. ಸ್ವರ್ಗವಾದರೆ ಮೋಕ್ಷ, ಪುನರ್ಜನ್ಮವಿಲ್ಲವೆಂದು ನಂಬಿಕೆ. ಅವರಿಗೆ ಶ್ರಾದ್ಧಕರ್ಮಗಳಲ್ಲಿನ ತರ್ಪಣಗಳು ಏಕೆ ಬೇಕು? ನರಕವಾದರೆ ಪಾಪದ ಫಲ ಅನುಭವಿಸಿದ ನಂತರ ಪುನರ್ಜನ್ಮ. ಯಾವುದೋ ರೂಪದಲ್ಲಿ ಬೇರೆಯಲ್ಲಿಯೋ ಜನ್ಮ ಪಡೆದ ಪಿತೃಗಳಿಗೆ ನಾವು ಪಿಂಡಪ್ರದಾನ ಮಾಡುವುದರ ಅವಶ್ಯಕತೆಯೇನು? ದೇಹತ್ಯಾಗದ ನಂತರ ಆತ್ಮ ಪರಮಾತ್ಮನಲ್ಲಿ ಐಕ್ಯವಾದ ಮೇಲೆ ಜೀವಿಯ ಆತ್ಮಕ್ಕೆ ಪ್ರತ್ಯೇಕ ಅಸ್ತಿತ್ವವೆಲ್ಲಿದೆ? ಹೀಗಾಗಿ ಇಲ್ಲಿಯೂ ಶ್ರಾದ್ಧದ ಪ್ರಮೇಯವೇನು?


ಸಾಮಾನ್ಯವಾಗಿ ಆಸ್ತಿಕ ಸಮಾಜದಲ್ಲಿ ಆಸಕ್ತರಿಗೆ ಪಿತೃಶ್ರಾದ್ಧಾದಿ ಕಾರ್ಯ ಒಂದು ಕರ್ತವ್ಯವೆಂತಲೂ, ಅದನ್ನು ಶ್ರದ್ಧೆಯಿಂದ ಮಾಡಬೇಕೆಂತಲೂ ನಂಬಿಕೆಯಿದೆ. ಇದು ಸಾರ್ಥಕ ನಂಬಿಕೆ. ತಲತಲಾಂತರದಿಂದ ಆಚರಿಸಿಕೊಂಡು ಬರುತ್ತಿದ್ದಾರೆ ಆಸ್ತಿಕ ಜನರು. ಆದರೆ ಆಚರಣೆಗಳನ್ನು ನೋಡಿ ಹೀಗೆಳೆಯುವ, ನಿಂದೆ ಮಾಡುವ ವರ್ಗವೂ ಇದೆ. ಇದೇಕೆ ಮಾಡಬೇಕು? ಇದರಿಂದೇನು ಉಪಯೋಗ? ಎಂದು ಹಾಸ್ಯ ಮಾಡುವ ಜನರಿಗೂ ಕೊರತೆ ಇಲ್ಲ. ಅವರಿಗೆ ಉತ್ತರಿಸುವ ಉದ್ದೇಶವೂ ನನ್ನದಲ್ಲ. ಆಸ್ತಿಕರಾದ ಜನರಿಗೆ ಅವರ ಪಿತೃಭಕ್ತಿಯ ಜೊತೆಯಲ್ಲಿ ಶ್ರದ್ಧೆ ಹೆಚ್ಚಾಗಲಿ ಎನ್ನುವ ಉದ್ದೇಶದಿಂದ ಶ್ರಾದ್ಧ ಸಾಫಲ್ಯತೆಯ ಕುರಿತು ಈ ಎರಡು ಮಾತನ್ನು ಬರೆಯುತ್ತಿದ್ದೇನೆ. ಇದನ್ನು ಓದಿದ ಪಿತೃಭಕ್ತಿ ಪರಾಯಣರಾದ ಶ್ರದ್ಧಾಳುಗಳು ಇನ್ನೂ ಹೆಚ್ಚಿನ ಶ್ರದ್ಧೆಯಿಂದ ತಮ್ಮ ತಂದೆತಾಯಿಯರ ಮೃತತಿಥ ಅಥವಾ ಪುಣ್ಯತಿಥಿ ಆಚರಿಸೋಣ.  


ಪಿತೃಶ್ರಾದ್ಧದ ಮುಖ್ಯ ಉದ್ದೇಶವೇನು?

ಇಲ್ಲಿ ಪಿತೃವೆಂದರೆ ಯಾರು? ಯಾವುದು? ಅದೇಕೆ ಗೌರವಾನ್ವಿತ ಹಾಗೂ ಪೂಜನೀಯವಾಯ್ತು? ಅದು ವ್ಯಕ್ತಿಯೇ? ದೇಹವೇ? ಶಕ್ತಿಯೇ? ತತ್ವವೇ? ಚಿಂತಿಸೋಣ.

ಸಾಮಾನ್ಯವಾಗಿ ಸೂತ್ರಕಾರರ ಅಭಿಮತದಂತೆ ಪಿತೃ ಎಂಬುದು ಒಂದು ಸ್ಥಾನ, ಹುದ್ದೆ. ಅದಕ್ಕೆ ಅದರದ್ದೇ ಆದ ಜವಾಬ್ದಾರಿ, ಬದ್ಧತೆ ಇರುತ್ತದೆ. ಅದನ್ನು ಹುಟ್ಟಿದ ಪ್ರತಿಯೊಂದು ಜೀವಿಯೂ ಹೊಂದಲೇ ಬೇಕಾದ ಹುದ್ದೆ. ಅದನ್ನು ಪಡೆಯಲು, ಜವಾಬ್ದಾರಿಯುತವಾಗಿ ನಿರ್ವಹಿಸಲು ಅಸಮಾನ್ಯ ಜ್ಞಾನವು ಬೇಕು. ಆ ಜ್ಞಾನವು ಅನುಭವದಿಂದ ಮಾತ್ರ ಪ್ರಾಪ್ತವಾಗುವಂತಹದ್ದು. ಕಲಿಕೆಯಿಂದ ಬರುವಂತಹದ್ದಲ್ಲ. ಅಂತಹ ಹುದ್ದೆಯನ್ನು ಅಲಂಕರಿಸಿದ್ದಾರೆ ನಮ್ಮ ಭೌತಿಕ ವ್ಯಾವಹಾರಿಕ ಪ್ರಪಂಚದ ಪಿತೃಗಳು. ಅಂದರೆ ಭಾವನಾತ್ಮಕ ತಂದೆಯೆಂದು ಅರ್ಥ. ವ್ಯಕ್ತಿಗತವಾಗಿ ಆ ಸ್ಥಾನವನ್ನು ಸಮರ್ಥವಾಗಿ ಅವರು ನಿರ್ವಹಿಸಿದ್ದಾರೆ ಎಂದು ಹೇಳುವ ಅರ್ಹತಾ ಪತ್ರವೇ ನಾವು. ಹಾಗಿದ್ದಾಗ ಅವರ ನಿರ್ವಹಣೆಯಲ್ಲಿ ಅನರ್ಹರು ಎಂದರೆ ನಾವು ಅನರ್ಹರು ಎಂದೇ ಅರ್ಥ.


ಅಂತಹಾ ಪಿತೃಸ್ಥಾನ ಪಟ್ಟವು ಪ್ರತಿಯೊಬ್ಬ ಜೀವಿಯೂ ಬಯಸಿ ಪಡೆಯುವ ಪಟ್ಟ. ಅದರ ಮಹತ್ವವೆಷ್ಟಿರಬಹುದು ಚಿಂತಿಸಿ? ಅದನ್ನು ಪಡೆದು ನಿರ್ವಹಿಸಿ, ಯಶಸ್ವಿಯಾಗಿ ನಮ್ಮನ್ನು ಈ ಲೋಕಕ್ಕೆ, ಸಮಾಜಕ್ಕೆ ಕೊಟ್ಟು ತಾವು ತೇರ್ಗಡೆಯಾಗಿ ವಿರಮಿಸಿದ ತಂದೆತಾಯಿಯ ಸ್ಥಾನ ಪೂಜಾರ್ಹವಲ್ಲವೇ ಚಿಂತಿಸಿ? ಅಂತಹಾ ಸ್ಥಾನವನ್ನು ಗೌರವಿಸುವುದು ಧರ್ಮವಲ್ಲವೇ? ಇದು ಶ್ರಾದ್ಧದ ಹಿನ್ನಲೆಯಲ್ಲಿರುವ ಮಾನವೀಯ ಧರ್ಮ.


ಇನ್ನು ಮೃತಾನಂತರ ಪುನರ್ಜನ್ಮ. ಅವರಿಗೇಕೆ ತರ್ಪಣ? ಪಿಂಡಪ್ರಧಾನ ಎಂಬ ಪ್ರಶ್ನೆಗಳಿವೆ. ಜನರೇ, ಈ ದೃಷ್ಟಿಯಿಂದ ಚಿಂತಿಸಬೇಕು – ತಂದೆಯು ಮೃತನಾಗುವುದಿಲ್ಲ, ದೇಹ ಮಾತ್ರ ನಾಶವಾಗಿದೆ. ತಂದೆಯು ಪುನರ್ಜನ್ಮ ಪಡೆದಿಲ್ಲ, ಆತ್ಮವು ಮಾತ್ರ ಪಡೆದಿದೆ. ತಂದೆ ಎಂಬ ಸ್ಥಾನ ಅಸ್ತಿತ್ವ ಕಳೆದುಕೊಳ್ಳುವುದಿಲ್ಲ, ತಂದೆಯಾಗಿಯೇ ಉಳಿದಿರುತ್ತಾರೆ. ಆತ್ಮವು ಮಾತ್ರ ಪುನರ್ಜನ್ಮ ಪಡೆದು ಹುಟ್ಟಿಬರಬಹುದು. ಆದರೆ ಅದು ಪ್ರಾಣಿಯಾಗಿ ಹುಟ್ಟಿತು ಎಂದು ಯಾರೂ ಪ್ರಸಕ್ತಕಾಲದ ವಿಳಾಸ ಹೇಳುವಾಗ ತನ್ನ ತಂದೆಯು ಪ್ರಾಣಿಯಾಗಿ ಪುನರ್ಜನ್ಮ ಪಡೆದಿದ್ದಾರೆ ಎಂದು ಗೊತ್ತಿದ್ದರೂ ತಾನು ಪ್ರಾಣಿಯ ಮಗನೆಂದು ತನ್ನ ಹೆಸರಿನ ಮುಂದೆ ಸೇರಿಸಿಕೊಳ್ಳುವುದಿಲ್ಲ. ಪುನರ್ಜನ್ಮ ಸಿಕ್ಕಿದೆಯೋ, ಬಿಟ್ಟಿದೆಯೇ ಅದು ಬೇರೆಯ ವಿಚಾರ. ಈ ಶ್ರಾದ್ಧವನ್ನು ಮಾಡಬೇಕಾದ ಮಗನು ಬದುಕಿರುವವರೆಗೆ, ತಂದೆ ಎಂಬ ಭಾವನಾತ್ಮಕ ಅಸ್ತಿತ್ವವು ಪುನರ್ಜನ್ಮ ಪಡೆಯುವುದಿಲ್ಲ. ಆ ಪಟ್ಟ ಈ ಮಗನಿಗೆ ಸಿಗದೇ ಇರಬಹುದು. ಅಲ್ಲಿಂದ ಮುಂದೆ ಹುಟ್ಟಿದ ಆ ಮಗನಿಂದ ಶ್ರಾದ್ಧವಿಲ್ಲ, ಬೇಕಿಲ್ಲ. ಆದರೆ ತಂದೆಯ ಸ್ಥಾನ ನಿರ್ವಹಿಸಿದ ಈ ಬ್ರಹ್ಮಚಾರೀ ಮಗನನ್ನಾದರೂ ಈ ಭೂಮಿಗೆ ಕೊಟ್ಟ ತಂದೆಯು ತನ್ನ ಸ್ಥಾನ ನಿರ್ವಹಣೆ ಮಾಡಿದ್ದಾರೆ. ಅಲ್ಲಿಯವರೆಗೆ ಶ್ರಾದ್ಧ ಸಾಧುವೇ, ಸತ್ಯವೇ, ನ್ಯಾಯವೇ ಆಗಿರುತ್ತದೆ. ಅದು ಈ ಮಗನ ಅಸ್ತಿತ್ವವನ್ನು ಉಳಿಸಿಕೊಡುತ್ತದೆ ನೆನಪಿರಲಿ.


ಇಲ್ಲಿಯವರೆಗೆ ಪಿತೃಸ್ಥಾನ ಮತ್ತು ಮಗನ ಕರ್ತವ್ಯ ನಿರ್ವಹಣೆ. ಪ್ರತೀ ಜೀವಿಯೂ ಒಂದೊ ತಂದೆಯಾಗಿ ಅಥವಾ ತಾಯಿಯಾಗಿ ಸಾಫಲ್ಯತೆ ಕಾಣುವ ನಮ್ಮ ಆಧ್ಯಾತ್ಮಿಕ, ದೈವೀಕ ನೆಲೆಗಟ್ಟಿನ ಸಮಾಜ ಜೀವನದ ಪರಮೋನ್ನತ ಪದವಿ ತಂದೆ-ಯಾ- ತಾಯಿ. ಈ ಪದವಿಗಾಗಿ ಪ್ರತೀಜೀವಿಯೂ ಹಾರೈಸುತ್ತದೆ. ಅಂತಹಾ ಪದವಿ ಆಕಾಂಕ್ಷೆಯಾದ ಪ್ರತೀಜೀವಿಯೂ ಆ ಸ್ಥಾನವನ್ನು ಶ್ರದ್ಧೆಯಿಂದ ಗೌರವಿಸಿದರೆ ನಿಸ್ತಂತುವಾಗಿ ವಂಶ ಬೆಳೆಯುತ್ತದೆ. ಇಲ್ಲವಾದರೆ ಮುಂದೆ ಸಂತಾನ ಲಭ್ಯವಿಲ್ಲದೆ ವಂಶ ನಿಂತು ಹೋಗಬಹುದು. ಆದ್ದರಿಂದ ಶ್ರಾದ್ಧ, ತರ್ಪಣ, ಪ್ರತಿಯೊಬ್ಬರ ಮುಖ್ಯ ಕರ್ತವ್ಯ. ಅದು ಆ ಸ್ಥಾನವನ್ನು ಗೌರವಿಸಿದಂತೆ. 


ಪಿತೃ ಋಣವು ಮನುಷ್ಯ ತೀರಿಸಲೇಬೇಕಾದ ಬಹುಮುಖ್ಯ ಋಣಗಳಲ್ಲೊಂದು. ಏಕೆಂದರೆ, ನಮಗೆ ಈ ದೇಹ ದೊರೆತಿರುವುದೇ ಪಿತೃಗಳಿಂದ. ಅವರು ಸಂತೃಪ್ತರಾಗಿ ಆಶೀರ್ವಾದ ಮಾಡಿದರೆ ಅದಕ್ಕಿಂತ ಹೆಚ್ಚಿನ ಬಲ ಇನ್ನೊಂದಿಲ್ಲ. ಹೀಗಾಗಿ ಪಿತೃ ಕಾರ್ಯಕ್ಕೆ ಅರ್ಹರಾದವರು ಅದನ್ನು ಮಾಡಲೇಬೇಕು ಮತ್ತು ಕಿರಿಯರು ಇದರ ಪ್ರಸಾದ, ಮಂತ್ರಾಕ್ಷತೆ ಪಡೆಯಬೇಕು.  


ಒಬ್ಬರ ಮೂರು ತಲೆಮಾರುವರೆಗಿನ ಹಿರಿಯರು/ಪೂರ್ವಜರು/ಪಿತೃಗಳ (ಸ್ಥಾನ) ಪಿತೃಲೋಕದಲ್ಲಿ ಅಂದರೆ ಭೂಮಿ ಮತ್ತು ಸ್ವರ್ಗದ ನಡುವಿನ ಪ್ರದೇಶದಲ್ಲಿ ವಾಸ ಮಾಡಿಕೊಂಡಿರುತ್ತಾರೆ. ಅಂದರೆ ಈ ಪಿತೃಲೋಕದಲ್ಲಿ ಮೂರು ತಲೆಮಾರಿನ ಭಾವನಾಶಕ್ತಿಗಳು ಇರುತ್ತವೆ. ಶ್ರಾದ್ಧ ಮಾಡುವಾಗ ಈ ಲೋಕದಲ್ಲಿರುವ ಮೂರು ತಲೆಮಾರಿನ ಪೂರ್ವಜರಿಗೆ ಪಿಂಡ ಪ್ರದಾನ ಮತ್ತು ತರ್ಪಣ ಕೊಡುವ ಸಂಪ್ರದಾಯ.  


ಪರಮ ದುರ್ಲಭವಾದ ಮನುಷ್ಯಜನ್ಮದ ಸಾಫಲ್ಯತೆಯು ಅದನ್ನು ಪಡೆದ ನಮ್ಮ ಆಚರಣೆಗಳ ಮೇಲೆ ಅವಲಂಬಿತವಾಗಿರುತ್ತದೆ. ಪರಮಾತ್ಮ ನಮಗೆ ಈ ಜನ್ಮವನ್ನು ಏತಕ್ಕಾಗಿ ನೀಡಿದ್ದಾನೆ ಎಂದರೆ ಹಿಂದಿನ ಜನ್ಮದ ಪಾಪ ಶೇಷಗಳನ್ನು ಅನುಭವಿಸಿ ಮುಗಿಸಿ ಮತ್ತೆ ಇನ್ನೂ ಹೆಚ್ಚಿನದಾದ ಪುಣ್ಯಸಂಪಾದನೆ ಮಾಡಿ ಮೋಕ್ಷವನ್ನು ಪಡೆಯಲಿ ಎಂದು. ಶಾಸ್ತ್ರಗಳ ಪ್ರಕಾರ ಮೃತರ ಆತ್ಮಗಳಿಗೆ ಶಾಶ್ವತ ಪಿತೃಲೋಕ ಪ್ರಾಪ್ತಿಯಾಗುವಂತೆ ಮಾಡುವುದು ಅವರ ಮಕ್ಕಳ ಕರ್ತವ್ಯ.


ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರನ ಕೂಡ ತನ್ನ ತಂದೆ ದಶರಥನ ಮರಣ ವಾರ್ತೆಯನ್ನು ಕೇಳಿ ತಕ್ಷಣವೇ ಸಮೀಪದ ನದಿಯಲ್ಲಿ ಹೋಗಿ ದಕ್ಷಿಣಾಭಿಮುಖವಾಗಿ ತನ್ನ ಕೈಯ ಬೊಗಸೆಯಲ್ಲಿ ನೀರನ್ನು ಹಿಡಿದುಕೊಂಡು ಗತಿಸಿಹೋದ ತನ್ನ ತಂದೆಗೆ ಉತ್ತಮ ಲೋಕ ಪ್ರಾಪ್ತಿಯಾಗಲಿ ಎಂದು ಪ್ರಾರ್ಥಿಸಿಕೊಳ್ಳುತ್ತಾನೆ. ಇದರ ಪರಿಪೂರ್ಣ ಅರ್ಥ ಭಾವನಾತ್ಮಕವಾಗಿ ಪಿತೃಗಳನ್ನು ತೃಪ್ತಿಪಡಿಸಲು ನಮ್ಮ ಭಾವನೆಯನ್ನು ಅದರಲ್ಲಿ ಸೇರಿಸುವಂತಹ ಒಂದು ಪ್ರಕ್ರಿಯೆ


ಕಚ್ಚಾಡುವ ಮನೆ, ಕಾದಾಡುವ ಮಕ್ಕಳು, ಅಶಾಂತಿ-ಅತೃಪ್ತಿಯ ಗೃಹವಾಸ, ಇವೆಲ್ಲವುಗಳಿಗೆ ಕಾರಣ "ಪಿತೃಶಾಪ" ಎನ್ನುತ್ತದೆ ಜ್ಯೋತಿಃಶಾಸ್ತ್ರ. ಪಿತೃಕಾರ್ಯಗಳು ಸರಿಯಾಗಿ ನಡೆಯದಿದ್ದರೆ ಮೇಲ್ಕಂಡ ಸ್ಥಿತಿ ಏರ್ಪಡುತ್ತದೆ ಎಂದರ್ಥ.


ಸಂವತ್ಸರ ಪೂರ್ತಿ ಪಿತೃದೇವತೆಗಳು ಸಂತುಷ್ಟರಾಗಿರಬೇಕಾದರೆ ಪಿತೃಗಳು ಅಂದರೆ ನಮ್ಮ ಹಿರಿಯರು ಗತಿಸಿಹೋದ ದಿನದಂದು ಪಿತೃಗಳನ್ನು ಎಲ್ಲರೂ ನೆನೆಯಬೇಕು.


ಪಿತೃಪ್ರಾರ್ಥನೆ:

ಅಮೂರ್ತಾನಾಂ ಸುಮೂರ್ತಾನಾಂ ಪಿತೃಣಾಂ ದೀಪ್ತತೇಜಸಾಮ್ | 

ನಮಸ್ಯಾಮಿ ಸದಾ ಭಕ್ತ್ಯಾ ಧ್ಯಾಯಿನಾಂ ಯೋಗಚಕ್ಷುಸಾಮ್ || 

ದೇವತಾಭ್ಯಃ ಪಿತೃಭ್ಯಶ್ಚ ಮಹಾಯೋಗಿಭ್ಯ ಏವ ಚ | 

ನಮಃ ಸ್ವಧಾಯೈ ಸ್ವಾಹಾಯೈ ನಿತ್ಯಮೇವ ನಮೋ ನಮಃ |


ಕೃಷ್ಣಾರ್ಪಣಮಸ್ತು 

(ಸದ್ವಿಚಾರ ಸಂಗ್ರಹ)


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


hit counter

0 تعليقات

إرسال تعليق

Post a Comment (0)

أحدث أقدم