ಅಬ್ಬಕ್ಕನ ನಿಜದ ಚರಿತ್ರೆ ಮುನ್ನೆಲೆಗೆ ಬರಲಿ: ಪ್ರೊ.ಎ.ವಿ. ನಾವಡ

Upayuktha
0

 'ನಮ್ಮ ಅಬ್ಬಕ್ಕ' ಅಮೃತ ಸ್ವಾತಂತ್ರ್ಯ ಸಂಭ್ರಮ: ಸಮಾರೋಪ- ಪ್ರಶಸ್ತಿ ಪ್ರದಾನ



ಮಂಗಳೂರು: 'ನಮ್ಮ ವಿದ್ವಾಂಸರು ಬ್ರಿಟಿಷರ ಹಿಷ್ಟಾಗ್ರಫಿ-ಚರಿತ್ರೆ ಲೇಖಾ ಶಾಸ್ತ್ರ ಪ್ರಕಾರ ಇತಿಹಾಸವನ್ನು ಕಟ್ಟುತ್ತಾರೆ. ಇದರಿಂದ ದೇಶೀಯವಾದ ಎಷ್ಟೋ ಮಹತ್ವದ ಸಂಗತಿಗಳು ಬೆಳಕಿಗೆ ಬಾರದೆ ಹೋಗಿವೆ. ಹಾಗಾಗಿ ಅಬ್ಬಕ್ಕ ನಂತಹ ಆರಂಭಕಾಲದ ಸ್ವಾತಂತ್ರ್ಯ ವೀರರಿಗೆ ತೀರ  ಅನ್ಯಾಯವಾಗಿದೆ. ಅದಕ್ಕಾಗಿ ರಾಷ್ಟ್ರಮಟ್ಟದ ವಿದ್ವಾಂಸರನ್ನು ಕರೆಸಿ ಅಬ್ಬಕ್ಕನ ಕುರಿತಾದ ಶೋಧ ಕಾರ್ಯಗಳು ನಡೆಯಬೇಕು. ಸೃಜನ ಪ್ರತಿಕ್ರಿಯೆಗಳ ಮೂಲಕ ಅಬ್ಬಕ್ಕರಾಣಿಯ ಚರಿತ್ರೆ ಮುನ್ನೆಲೆಗೆ ಬರುವಂತಾಗಬೇಕು' ಎಂದು ಹಿರಿಯ ಸಾಹಿತಿ, ಹಂಪಿ ವಿಶ್ವವಿದ್ಯಾನಿಲಯದ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಎ.ವಿ. ನಾವಡ ಹೇಳಿದರು.


ಮಂಗಳೂರು ಮಹಾನಗರಪಾಲಿಕೆ ಮತ್ತು ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ಸಹಭಾಗಿತ್ವದಲ್ಲಿ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಜರಗಿದ 'ನಮ್ಮ ಅಬ್ಬಕ್ಕ -2022: ಅಮೃತ ಸ್ವಾತಂತ್ರ್ಯ ಸಂಭ್ರಮ' ಸಮಾರೋಪ ಸಮಾರಂಭದಲ್ಲಿ ಅವರು ಸಮಾರೋಪ ಭಾಷಣ ಮಾಡಿದರು.


'ಕಿತ್ತೂರು ಚೆನ್ನಮ್ಮ ,ಟಿಪ್ಪು ಸುಲ್ತಾನ್, ಝಾನ್ಸಿ ರಾಣಿ ಮೊದಲಾದವರನ್ನು ಸ್ವಾತಂತ್ರ್ಯ ಹೋರಾಟಗಾರರನ್ನಾಗಿ ಇತಿಹಾಸಕಾರರು ಬಿಂಬಿಸಿದ್ದಾರೆ. ಹೊನ್ನಾವರದ ಚೆನ್ನಬೈರಾದೇವಿ, ಕೆಳದಿ ಚೆನ್ನಮ್ಮ, ಉಳ್ಳಾಲದ ಅಬ್ಬಕ್ಕ ರಾಣಿಯರನ್ನು ಆ ದೃಷ್ಟಿಯಿಂದ ಅವರು ನೋಡಿಲ್ಲ. ಅದಕ್ಕಿಂತಲೂ ಮೊದಲು ಭಾರತಕ್ಕೆ ದಾಳಿಯಿಟ್ಟ ಪೋರ್ಚುಗೀಸರನ್ನು ಎದುರಿಸಿ ಸ್ವಾತಂತ್ರ್ಯದ ಕಹಳೆ ಮೊಳಗಿಸಿದ ಅಬ್ಬಕ್ಕನ ಕುರಿತು ಅಧ್ಯಯನ ಮಾಡಿ ಹೊಸ ಚರಿತ್ರೆಯನ್ನು ಕಟ್ಟಬೇಕು. ಪೋರ್ಚುಗಲ್ಲಿನ ಲಿಪ್ಟನ್ ನಲ್ಲಿರುವ ಅಪಾರ ಪ್ರಮಾಣದ ದಾಖಲೆಗಳನ್ನು ತಡಕಾಡಬೇಕಾಗುತ್ತದೆ. ವಿಶ್ವವಿದ್ಯಾಲಯದ ಅಬ್ಬಕ್ಕ ಪೀಠ ಮತ್ತು ಅಬ್ಬಕ್ಕ ಪ್ರತಿಷ್ಠಾನ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುವಂತೆ ಸರಕಾರ ನೆರವು ನೀಡಬೇಕು' ಎಂದವರು ನುಡಿದರು.


ಸಮಾಜಮುಖಿಯಾಗಿ ಬದುಕೋಣ:

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಡಾ. ಪಿ.ಎಸ್. ಯಡಪಡಿತ್ತಾಯ ಅವರು ಮಾತನಾಡಿ 'ವೀರರಾಣಿ ಅಬ್ಬಕ್ಕ ಸಮಾಜಮುಖಿಯಾಗಿ ಬದುಕಿದ್ದು ಅದೇರೀತಿ ನಾವೆಲ್ಲರೂ ಸಾಮಾಜಿಕ ಕಳಕಳಿಯೊಂದಿಗೆ ಬದುಕನ್ನು ಹೇಗೆ ರೂಪಿಸಿಕೊಳ್ಳಬಹುದು ಎನ್ನುವ ಕುರಿತು ಆತ್ಮಾವಲೋಕನ ಮಾಡಿಕೊಳ್ಳಬೇಕು' ಎಂದರು.


ಕರ್ನಾಟಕ ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಅತಿಥಿ ಸ್ಥಾನದಿಂದ ಮಾತನಾಡುತ್ತಾ 'ವ್ಯಕ್ತಿ ಜೀವನಕ್ಕಿಂತ ರಾಷ್ಟ್ರ ಜೀವನ ಶೇಷ್ಠ. ಸ್ವಾತಂತ್ರ್ಯಾನಂತರದ 75 ವರ್ಷಗಳಲ್ಲಿ ದೇಶದಲ್ಲಾದ ಬದಲಾವಣೆಯನ್ನು ಗಮನಿಸಿ ಪ್ರಗತಿಪಥದತ್ತ ನಾವು ಹೆಜ್ಜೆ ಇಡಬೇಕು' ಎಂದು ನುಡಿದರು.


ಜಿಲ್ಲಾ ಕ.ಸಾ.ಪ ಅಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್ 'ಅಬ್ಬಕ್ಕ ರಾಣಿಯ ಬಗ್ಗೆ ವಿದ್ಯಾರ್ಥಿ- ಯುವ ಜನರಿಗೆ ತಿಳಿಸಲು ಕನ್ನಡ ಸಾಹಿತ್ಯ ಪರಿಷತ್ತು ಪ್ರಯತ್ನ ನಡೆಸಲಿದೆ' ಎಂದರು. ರಾಜ್ಯ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು ಮತ್ತು ಪ್ರತಿಷ್ಠಾನದ ಅಧ್ಯಕ್ಷ ಹರಿಕೃಷ್ಣ ಪುನರೂರು ಮಾತನಾಡಿದರು.


ಪ್ರಶಸ್ತಿ ಪ್ರದಾನ:

ಸಮಾರಂಭದಲ್ಲಿ ಅನ್ಯಾನ್ಯ ಕ್ಷೇತ್ರಗಳಲ್ಲಿ ಮಾಡಿದ ಜೀವಮಾನ ಸಾಧನೆಗಾಗಿ ಹಿರಿಯ ಸಾಹಿತಿ, ಜಾನಪದ ವಿದ್ವಾಂಸ ಡಾ.ಅಮೃತ ಸೋಮೇಶ್ವರ ಅವರಿಗೆ 'ನಮ್ಮ ಅಬ್ಬಕ್ಕ ಅಮೃತ ಸ್ವಾತಂತ್ರ್ಯೋತ್ಸವ ಪ್ರಶಸ್ತಿ' ನೀಡಿ ಗೌರವಿಸಲಾಯಿತು. ಅವರು ವಯೋಸಹಜ ಅಸ್ವಸ್ಥತೆಯಿಂದ ಗಾಲಿ ಕುರ್ಚಿಯಲ್ಲಿ ಬಂದು ಪ್ರಶಸ್ತಿ ಸ್ವೀಕರಿಸಿದ್ದು ವಿಶೇಷವಾಗಿತ್ತು. ಪ್ರತಿಷ್ಠಾನದ ವಾರ್ಷಿಕ ಗೌರವ 'ರಾಣಿ ಅಬ್ಬಕ್ಕ ಪುರಸ್ಕಾರ' ವನ್ನು ಹಿರಿಯ ಸಮಾಜ ಸೇವಾ ಕಾರ್ಯಕರ್ತೆ ಮತ್ತು ಸಂಘಟಕಿ ವಿಜಯಲಕ್ಷ್ಮಿ ಬಿ. ಶೆಟ್ಟಿ ಅವರಿಗೆ ನೀಡಲಾಯಿತು. ಪಿ.ಡಿ. ಶೆಟ್ಟಿ ಮತ್ತು ನಮಿತಾ ಶ್ಯಾಮ್ ಸನ್ಮಾನಪತ್ರ ವಾಚಿಸಿದರು. ಪ್ರಶಸ್ತಿ ಪುರಸ್ಕೃತರು ಪ್ರತಿ ವಚನ ನೀಡಿ ಸಂಘಟಕರನ್ನು ಅಭಿನಂದಿಸಿದರು.


ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಪ್ರತಿಷ್ಠಾನದ ಸದಸ್ಯರು ನಾಡಗೀತೆಯನ್ನು ಹಾಡಿದರು. ಸಂಚಾಲಕ ತ್ಯಾಗಂ ಹರೇಕಳ ವಂದಿಸಿದರು. ಆರ್ ಜೆ ನಯನಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.


ಸಾಂಸ್ಕೃತಿಕ ಸಂಭ್ರಮ:

ಸಮಾರಂಭದ ಅಂಗವಾಗಿ 2ನೇ ದಿನವೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಿದ್ದು, ಕೊಡಿಯಾಲಬೈಲ್ ಶಾರದಾ ವಿದ್ಯಾಲಯದ ಮಕ್ಕಳ 'ರಾಷ್ಟ್ರ ವಂದನಾ'; ತುಳು ಎಂ.ಎ. ವಿದ್ಯಾರ್ಥಿಗಳಿಂದ 'ಪರಪುದ ಪನಿ', ಸ್ಪರ್ಧಾ ವಿಜೇತರಿಂದ ಆಶುಭಾಷಣ- ದೇಶಭಕ್ತಿಗೀತೆ, ಪಟ್ಲ ಸತೀಶ್ ಶೆಟ್ಟಿ, ಅಮೃತ ಅಡಿಗ ಬಳಗದ 'ಯಕ್ಷ-ಗಾನ-ನಾಟ್ಯ', ಸ್ವಾತಂತ್ರ್ಯಾಮೃತ ಕವಿನಮನ- ಕಾವ್ಯ ಗಾನ, ಸನಾತನ ನಾಟ್ಯಾಲಯದವರಿಂದ ಭಾಸ್ಕರ ರೈ ಕುಕ್ಕುವಳ್ಳಿ ವಿರಚಿತ 'ಅಮೃತ ಸ್ವಾತಂತ್ರ್ಯ ಗೀತ-ನೃತ್ಯ, ಜರ್ನಿ ಥೇಟರ್ ಗ್ರೂಪ್ ಅಭಿನಯದಲ್ಲಿ ಪ್ರೊ.ಅಮೃತ ಸೋಮೇಶ್ವರರ 'ಗೋಂದೊಳು' ತುಳು ನಾಟಕ ಜರಗಿತು.

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



hit counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top