ಮಹಾತ್ಮರಾದ ಪುತ್ತೂರು ಅಜ್ಜ.. ನನ್ನ ನೆನಪಿನಂಗಳದಿಂದ

Upayuktha
0


ನೆಟ್ಟಾರಿನ ಮಹಾತ್ಮರ ಮೂಲ ಮನೆಯ ಹೊರ ಜಗಲಿಯ ಬೆಂಚಿನಲ್ಲಿ ಕುಳಿತಿದ್ದ ಪುತ್ತೂರು ಅಜ್ಜನವರ ಬಲಬದಿಗೆ ನಾನೂ ಕುಳಿತಿದ್ದೆ.


ಮಹಾತ್ಮರಾದ ಅಜ್ಜನವರು ತಾವೇನೂ ಅಲ್ಲವೆಂಬಂತೆ ಸಹಜ ಸ್ಥಿತಿಯಲ್ಲಿ ಕುಳಿತಿದ್ದರು. ಮಹಾತ್ಮರೆಂದರೆ  ಹೀಗೂ ಇರುತ್ತಾರೆಯೇ? ಅಂದರೆ ಇಷ್ಟು ಸರಳವಾಗಿ ಸಮೀಪವಾಗಿ ಇರಬಹುದೇ ಎಂಬ ಯೋಚನೆ ಒಂದು ಕ್ಷಣ ಮನದಲ್ಲಿ ಸುಳಿದದ್ದು ಉಂಟು. ಸಾಮಾನ್ಯವಾಗಿ ಸಮಾಜದಲ್ಲಿ ಕಾಣುವಂತಹ ಠಾಕುಠೀಕುಗಳು,  ಆಡಂಬರಗಳು ಯಾವುದು ಕೂಡ ಅಲ್ಲಿ ಇರಲಿಲ್ಲ. ಆದರೆ ಬರಬರುತ್ತಾ ನನ್ನ ಅರಿವಿಗೆ ಬಂತು, ಮಹಾತ್ಮರು ಹೀಗೆಯೇ ಇರುತ್ತಾರೆ, ಮತ್ತು ಇರಬೇಕು. ಅದು ಅವರ "ಮಹಾತ್ಮ" ಎಂಬ ಅಭಿದಾನಕ್ಕೆ ಕೈಗನ್ನಡಿ.  ಆಡಂಬರ ಇದ್ದಲ್ಲಿ, ಆರ್ಭಟದಲ್ಲಿ  ತಿರುಳಿಗಿಂತ ಸಿಪ್ಪೆ ಹೆಚ್ಚು, ಸಿಪ್ಪೆಗೆ ಮಹತ್ವ ಹೆಚ್ಚು. ತಿರುಳು ಸದಾ ಒಳಗೆ ಇರುವುದಕ್ಕೆ ಇಷ್ಟಪಡುವಷ್ಟು ಹೊರಗೆ ಕಾಣಿಸಿಕೊಳ್ಳುವುದಕ್ಕೆ  ಇಷ್ಟಪಡಲಾರರು. ಅದು ಉಪನಿಷತ್ತಿನಲ್ಲಿ ಹೇಳಿದಂತೆ ಚಿನ್ನದ ಪಾತ್ರೆಯ ಒಳಗಿನ ಸತ್ಯದಂತೆ. ಮುಚ್ಚಿಕೊಂಡಿರುವುದು ಸತ್ಯಕ್ಕೆ ಅಪ್ಯಾಯಮಾನ ಸಂಗತಿ.  


ಅಂದು, ಆ ಸಂದರ್ಭದಲ್ಲಿ ನನ್ನ ಸೀಮಿತ ಬುದ್ಧಿಗೆ ಬಂದ ಪ್ರಶ್ನೆಯನ್ನು ಅವರ ಬಳಿ ಕೇಳಬೇಕು ಅನ್ನಿಸಿತು.  ಅನ್ನಿಸಿದ್ದು ಮಾತ್ರವಲ್ಲ ಕೇಳಿದೆ ಕೂಡ. ಅಷ್ಟು ಹೊತ್ತು ಕಣ್ಣು ಮುಚ್ಚಿ ಮಂದಹಾಸದ ಮುಖಮುದ್ರೆಯಲ್ಲಿ ಕುಳಿತಿದ್ದ ಅವರು ಕಣ್ಣು ತಡೆಯುವುದಕ್ಕಾಗಿ ಕಾಯುತ್ತಿದ್ದೆ. ತಕ್ಷಣ ಕೇಳಿಬಿಟ್ಟೆ.


"ಸ್ವಾಮಿ ಮುಕ್ತಾನಂದರು ತಮ್ಮ ಚಿಚ್ಛಕ್ತಿವಿಲಾಸ ಪುಸ್ತಕದಲ್ಲಿ ಪಿತೃ ಲೋಕದ  ವಿಷಯ ಹೇಳಿದ್ದಾರೆ. ವಿಷಯ ಎಂತದು ಅಜ್ಜಾ?".

ಅವರ ಉತ್ತರ: "ಪಿತೃಗಳು ನಮ್ಮ ಭೇಟಿಗಾಗಿ ಕಾಯುತ್ತಾ ಇದ್ದಾರೆ".

ಸ್ವಾಮಿ ಮುಕ್ತಾನಂದರೆಂದರೆ  ಭಗವಾನ್ ಅವಧೂತ ನಿತ್ಯಾನಂದರ ಪರಮ ಶಿಷ್ಯರು. ಧ್ಯಾನದ ಮಜಲುಗಳನ್ನು ನಿತ್ಯಾನಂದರ ಅನುಗ್ರಹದಿಂದ ಅನುಭವಿಸಿದವರು. 

ಅವರ ಸ್ಪಂದನಕ್ಕೆ ಧನ್ಯನಾದೆ.


ಪುಸ್ತಕದಲ್ಲಿ ಒಂದು ಸಂಗತಿಯನ್ನು ಓದುವುದಕ್ಕೂ, ನಿಜ ಜ್ಞಾನಿಗಳಾದ ಮಹಾತ್ಮರ ಮಾತುಗಳನ್ನು ನೇರಾನೇರ ಕೇಳಿ ವಿಷಯಗಳನ್ನು ಖಚಿತಪಡಿಸಿಕೊಳ್ಳುವುದಕ್ಕೂ ತುಂಬಾ ವ್ಯತ್ಯಾಸಗಳಿವೆ. ಅದು ಕಡತಕ್ಕೆ ಬೀಳುವ ಮುದ್ರೆಯಂತೆ ನಮ್ಮ ಮನಸ್ಸಿನಲ್ಲಿ ಅಚ್ಚೊತ್ತಿ ಬಿಡುತ್ತದೆ. ಮತ್ತು ಯಾವುದೋ ಒಂದು ಸಂದರ್ಭದಲ್ಲಿ ಮುನ್ನೆಲೆಗೆ ಬಂದು ಕ್ರಿಯಾಶೀಲ ವಾಗುವುದಕ್ಕೆ ತೊಡಗುತ್ತದೆ ಎಂಬುದು ನಂತರದ ದಿನಗಳಲ್ಲಿ ನನ್ನ ಅನುಭವಕ್ಕೆ ಬಂತು. ಅಷ್ಟೇ ಅಲ್ಲ, ಅಜ್ಜನವರ ನಿಕಟವರ್ತಿ, ಅಂತರಂಗದ ಸತ್ಯಾನುಭವಿ ಡಾ. ದೇವದಾಸ ನಾಯಕ್ (ಪುತ್ತೂರಿನಲ್ಲಿ ವೈದ್ಯರಾಗಿದ್ದರು) ಕೂಡ ಒಮ್ಮೆ ಹೇಳಿದ್ದರು-" ಅಜ್ಜನವರ ಮಾತು ಎಂದರೆ ಅದು ಬರೀ ಮಾತಲ್ಲ, ನಿಮ್ಮ ಒಳಗೆ ಕೆಲಸ ಮಾಡುತ್ತದೆ. ಮಾತ್ರವಲ್ಲ ಅವರು ಹಾಗೆ ಅಂತಹ ವಿಚಾರಗಳನ್ನು ಎಲ್ಲರಿಗೂ ಉತ್ತರ ಕೊಡುವುದು ಕೂಡ ಇಲ್ಲ" ಎಂದಿದ್ದರು. ಆಗ ಅರ್ಥವಾಯಿತು. ಕೆಲವೊಂದು ವಿಚಾರಗಳನ್ನು ಅಜ್ಜನವರು ಹೇಳಿದ್ದು ನಮ್ಮ ಭಾಗ್ಯ, ಅವರ ಕರುಣೆ. 


ಉದಾಹರಣೆಯಾಗಿ ಡಾ. ನಾಯಕ್ ಅವರು ಒಂದು ಘಟನೆ ಹೇಳಿದ್ದರು. ಒಬ್ಬರು ವ್ಯಕ್ತಿ ಆಗಾಗ ಅವರ   ಚಿಕಿತ್ಸಾಲಯಕ್ಕೆ ಬರುತ್ತಿದ್ದರು. ಬೇರೆ ಬೇರೆ ವಿಷಯ ಮಾತಾಡುತ್ತಿದ್ದರು. ಅದರಲ್ಲಿ ಅಧ್ಯಾತ್ಮದ ವಿಷಯವು ಸೇರಿರುತ್ತಿತ್ತು. ಒಂದು ಸಂದರ್ಭ ಅಜ್ಜನವರು ಇದ್ದಾಗಲೇ ಅವರ ಆಗಮನವಾಯಿತು. ಆಗ ಅವರು ಏನೇ ಮಾತನಾಡಿದರೂ ಅಜ್ಜನವರು ಕೇಳುತ್ತಿದ್ದರಂತೆ, "ಭಟ್ರೆ, ಅಡಿಕೆಗೆ ಈಗ ರೇಟು ಎಷ್ಟು? ಈ ವರ್ಷ ಬೆಳೆ ಹೇಗೆ?" ಅದನ್ನೇ ಮತ್ತೆ ಮತ್ತೆ ಕೇಳಿದರು. ಭಟ್ಟರು ಸಜ್ಜನ ವ್ಯಕ್ತಿ. ಸಾಧು ಸ್ವಭಾವ. ಆದರೆ ಅವರು  ಪಾರಮಾರ್ಥಿಕ ವಿಷಯಗಳನ್ನು ಮಾತಾಡುವುದಕ್ಕೆ ಎಷ್ಟೇ ಸರ್ಕಸ್ ಮಾಡಿದರೂ ಕೂಡ, ಅಜ್ಜನವರು ಅವರ ಬಳಿ ವ್ಯವಹಾರದ ಬಗ್ಗೆ ಮಾತನಾಡುತ್ತಿದ್ದರು. ಅಂದರೆ ಅರ್ಥಮಾಡಿಕೊಳ್ಳಬೇಕಾದ ವಿಷಯ ಇಷ್ಟೇ. ನಮ್ಮ ಮನಸ್ಸು ಹೇಗೆ ಇದೆಯೋ, ಮಹಾತ್ಮರ ಪ್ರತಿಕ್ರಿಯೆ ಕೂಡ ಅದಕ್ಕೆ ತಕ್ಕಂತೆ ಇರುತ್ತದೆ. ಅಂದರೆ ಇಲ್ಲದೆ ಇದ್ದದ್ದನ್ನು ಉಂಟು ಎಂಬಂತೆ ತೋರಿಸಿ ಮಹಾತ್ಮರನ್ನು ನಮ್ಮ ಖೆಡ್ಡಾಕ್ಕೆ ಬೀಳಿಸುವುದು ಅಸಾಧ್ಯದ ಮಾತು.  


ಅಂತೂ ನನ್ನ ಒಂದು ಪ್ರಶ್ನೆಗೆ ನಾನು ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ನಿಖರತೆಯ ಉತ್ತರ ಅಜ್ಜನವರಿಂದ ಸಿಕ್ಕಿತು ಎಂದು ಒಳಗೆ ಹಿಗ್ಗಿದೆ. ಆದರೆ ನನ್ನದು ಮನಸ್ಸು ತಾನೇ? ಅದರಲ್ಲೂ ವಿದ್ಯಾರ್ಥಿ ದೆಸೆಯ ಎಳಸು ಮನಸು. ನನ್ನ ಪ್ರಶ್ನೆ ಅಷ್ಟಕ್ಕೇ ನಿಲ್ಲಲಿಲ್ಲ. "ಗರುಡ ಪುರಾಣದಲ್ಲಿ ಹೇಳಿದ ಹಲವು ವಿಷಯಗಳು ಹೇಗೆ ಅಜ್ಜಾ?" ಎಂದೆ. 


ತಕ್ಷಣ ದೊಡ್ಡದಾಗಿ ನಗುತ್ತಾ, ಅದಕ್ಕೆ ಉತ್ತರಿಸುವುದರ ಬದಲಿಗೆ, ಹಿರಿಯರು ಚಿಕ್ಕ ಮಕ್ಕಳ ಕೆನ್ನೆಯನ್ನು ಗಿಲ್ಲುವಂತೆ, ಅವರ ಮುಖವನ್ನು ನನ್ನ ಮುಖದ ಹತ್ತಿರ ತಂದು, ಬಲಗೈಯಿಂದ ನನ್ನ ಕೆನ್ನೆಯನ್ನು  ಗಿಲ್ಲಿದರು.  ನಿನ್ನ ತುಂಟಾಟ ನನಗೆ ಗೊತ್ತಾಯಿತು ಎಂಬ ನಗುವಿನ ಮುಖ ಮುದ್ರೆಯೊಂದಿಗೆ. ಅಂತೂ ಇದಕ್ಕೆ ಉತ್ತರಿಸಿದರೆ ಇನ್ನೊಂದು ಪ್ರಶ್ನೆ ನಿನ್ನ ಬಳಿ ಉಂಟು ಎಂಬುದು ತನಗೆ ಗೊತ್ತಾಯಿತು ಎಂಬಂತೆ. 


ಇದು ಆ ಸಂದರ್ಭದ ತುಣುಕು.

ಇನ್ನೊಂದು ಸಂದರ್ಭದಲ್ಲಿ ಕೇಳಿದ್ದೆ. ಅವರು ಬೆಂಚಿನಲ್ಲಿ ಕುಳಿತಿದ್ದರು. ನಾನು ಅವರ ಬಲಪಕ್ಕದಲ್ಲಿ ಕುಳಿತಿದ್ದೆ.  ಎದುರಿನಲ್ಲಿ ಒಂದು ಬೆಕ್ಕು ಹಾದು ಹೋಯಿತು. ಈ ಬೆಕ್ಕಿನಲ್ಲಿ ಆತ್ಮ ಇದೆಯಾ? ಎಂದಾಗ ಹೌದು ಎಂಬಂತೆ ತಲೆಯಾಡಿಸಿದರು. ಮತ್ತೆ ಮತ್ತೊಂದು ಪ್ರಶ್ನೆಗೆ ಮನಸು ಜಿಗಿದು-" ಅಜಾಮಿಳ ಬೇಡದ ಅನಾಚಾರ ಮಾಡಿದ  ಎಂದು ಭಾಗವತದಲ್ಲಿ ಇದೆ. ಹಾಗಿದ್ದಾಗ ಅವನಿಗೆ ಭಗವಂತ ಕಾಣಿಸಿಕೊಂಡು ಕೊನೆಗಾಲದಲ್ಲಿ ಹೇಗೆ ಅನುಗ್ರಹ ಮಾಡಿದ?" ಎಂದಾಗ- "ಅವನ ಆಂತರ್ಯ ಶುದ್ಧ ಇತ್ತು ಮಾರಾಯ" ಎಂದರು.


ಅಜಾಮಿಳ ತನ್ನ ಸಮುದಾಯದವರಿಂದಲೇ ತಿರಸ್ಕೃತ. ಪತಿತ, ಕೆಟ್ಟವನೆಂಬ ಪಟ್ಟ ಕಟ್ಟಿ ಸಮಾಜದಿಂದ ಬಹಿಷ್ಕೃತ. ಸಮಾಜ ಕಟ್ಟುವ ಹಣೆಪಟ್ಟಿ ಮತ್ತು ಭಗವಂತನು ಬರೆಯುವ ಹಣೆಬರಹ ಬೇರೆಯೇ ಇರುತ್ತದೆ.  ಜಗತ್ತಿನ ತೀರ್ಪು ಭಗವಂತನ ತೀರ್ಪು ಆಗಿರಬೇಕೆಂದಿಲ್ಲ. ಆಗಬಾರದು ಎಂದು ಕೂಡ ಇಲ್ಲ. ಅಂತರಂಗ ಶುದ್ಧವಾದರೆ ಜಗತ್ತಿಗಿಂತ ಮೊದಲು ಗೊತ್ತಾಗುವುದು ಭಗವಂತನಿಗೆ ಎಂಬ ಅರಿವು ಜಗತ್ತಿಗೆ ಇದ್ದಹಾಗೆ ಇಲ್ಲ.  ತನ್ನ ತೀರ್ಮಾನವನ್ನು ದೇವರ ತೀರ್ಮಾನ ವೆಂದು ಭಾವಿಸಿದಂತೆ ಜಗತ್ತು ಹಾಯಾಗಿದೆ. ಅಂತರಂಗದ ಸತ್ಯದ ಬಗ್ಗೆ ಜಗತ್ತು ಆಸಕ್ತವಲ್ಲ. ಅಜಾಮಿಳನ ಅಂತಃ ಶುದ್ಧಿ ದೇವರಿಗೆ ಮಾತ್ರ ಗೊತ್ತಿತ್ತು ಎಂಬುದನ್ನು   ಹೊರಗೆಡಹುವಂತೆ ಇತ್ತು, ಪೂಜ್ಯ ಅಜ್ಜನವರ ಆ ಉತ್ತರ. ಅವನು ಸರಿಯಿಲ್ಲ,  ಇವನು ಸರಿಯಿಲ್ಲ  ಎಂದು ತೀರ್ಪು ನೀಡುವ ನಾವುಗಳು ಮತ್ತೊಮ್ಮೆ ಮನಸ್ಸನ್ನು ಮುಟ್ಟಿ ನೋಡಿಕೊಳ್ಳಬೇಕು. ಅಷ್ಟೇ. 


-ಡಾ. ಆರ್.ಪಿ.ಬಂಗಾರಡ್ಕ. M. S. (Ayu) 

ಆಯುರ್ವೇದ ತಜ್ಞ ವೈದ್ಯರು

ಪ್ರಸಾದಿನೀ ಆಯುರ್ನಿಕೇತನ  

ಆಯುರ್ವೇದ ಆಸ್ಪತ್ರೆ, 

ನರಿಮೊಗರು, ಪುತ್ತೂರು. 

ಅಸಿಸ್ಟೆಂಟ್ ಪ್ರೊಫೆಸರ್,  

ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಸುಳ್ಯ. 

rpbangaradka@gmail.com

mob:8904474122(O) 

9740545979(P) 

website:www.prasadini.com


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


hit counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top