ಮಂಗಳೂರು: ನಗರೀಕರಣ, ಮಾಲಿನ್ಯ, ಪ್ರಕೃತಿ ವಿಕೋಪಗಳಿಂದ ಅಪಾರ ಸಂಖ್ಯೆಯ ಜೀವ ಸಂಕುಲ ನೆಲೆ ಕಳೆದುಕೊಳ್ಳುತ್ತಿದೆ. ಅವುಗಳಿಗೆ ಧ್ವನಿಯಿಲ್ಲ, ಮತಹಾಕುವ ಹಕ್ಕಿಲ್ಲ, ಹಾಗಾಗಿ ಜೀವ ಸಂಕುಲದ ಧ್ವನಿಯಾಗಬೇಕು, ಎಂದು ಕರ್ನಾಟಕ ಜೀವ ವೈವಿಧ್ಯ ಮಂಡಳಿಯ ನಿಕಟಪೂರ್ವ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಅಭಿಪ್ರಾಯಪಟ್ಟರು.
'ರಾಷ್ಟ್ರೀಯ ವಿಜ್ಞಾನ ದಿನ-2022' ರ ಅಂಗವಾಗಿ ಮಂಗಳೂರು ವಿಶ್ವವಿದ್ಯಾನಿಲಯದ ಅನ್ವಯಿಕ ಪ್ರಾಣಿಶಾಸ್ತ್ರ ವಿಭಾಗ ಆಯೋಜಿಸಿರುವ ಪ್ರಾಣಿ ವೈವಿಧ್ಯತೆ ಮತ್ತು ಜೀವಿವರ್ಗೀಕರಣ ಶಾಸ್ತ್ರ ಕುರಿತ ಎರಡು ದಿನಗಳ ರಾಷ್ಟ್ರೀಯ ಕಾರ್ಯಾಗಾರವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕ ಜೀವ ವೈವಿಧ್ಯ ಮಂಡಳಿ ಮೂಲಕ 2021 ರಲ್ಲಿ ವಿನಾಶದ ಅಂಚಿನಲ್ಲಿರುವ ಪ್ರಾಣಿ, ಸಸ್ಯ ಸಂಕುಲಗಳ ಕುರಿತು ತಜ್ಞರ ವರದಿ ಸಲ್ಲಿಸಲಾಗಿದೆ. ಇದನ್ನು ಪರಿಗಣಿಸಿ ಸರಕಾರ ಗ್ರಾಮ ಪಂಚಾಯಿತಿ ಮಟ್ಟದಿಂದಲೇ ಪರಿಸರ ರಕ್ಷಣೆಗೆ ಮುಂದಾಗಬೇಕು. ಕರಾವಳಿಯಲ್ಲಿ ಸಮುದ್ರ ಕೊರೆತ ತಡೆಗಟ್ಟಲು ಕಟ್ಟುವ ಕಲ್ಲಿನ ತಡೆಗೋಡೆಗಳು ಜೀವವೈವಿಧ್ಯದ ನಾಶಕ್ಕೆ ಕಾರಣವಾಗುತ್ತಿವೆ. ಅವುಗಳ ಬದಲು 'ಹಸಿರು ಕವಚ' ಯೋಜನೆ ಜಾರಿಗೆ ತರಬೇಕು. ವಿಜ್ಞಾನಿಗಳು ಶಾಲಾ, ಕಾಲೇಜುಗಳು ಈ ಬಗ್ಗೆ ತಳಮಟ್ಟದ ಅಧ್ಯಯನಕ್ಕೆ ಆದ್ಯತೆ ನೀಡಬೇಕು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ ಮಾತನಾಡಿ, ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅತ್ಯಂತ ಪ್ರಸ್ತುತ. ವಿಜ್ಞಾನ ನಮ್ಮಲ್ಲಿ ಯಾವತ್ತೂ ವಿಶ್ವಾಸ ಮೂಡಿಸುತ್ತದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ 'ಸಬ್ ಕಾ ಸಾತ್ ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್' ಎಂಬ ಮಾತಿನಂತೆ ನಮ್ಮೊಳಗೆ ಸಾಕಷ್ಟು ವೈವಿಧ್ಯತೆಗಳಿದ್ದರೂ ಪ್ರತಿಯೊಬ್ಬರೂ ಪ್ರಕೃತಿ ಸೇರಿದಂತೆ ಎಲ್ಲರ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಬೇಕು ಎಂದರು.
ಎಂ.ಆರ್.ಪಿ.ಎಲ್ ಕಾರ್ಪೊರೇಟ್ ಕಮ್ಯುನಿಕೇಷನ್ ಪ್ರಧಾನ ವ್ಯವಸ್ಥಾಪಕ ಡಾ.ರುಡಾಲ್ಫ್ ವಿ.ಜೆ.ನೊರೊನ್ಹಾ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಅನ್ವಯಿಕ ಪ್ರಾಣಿಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಮತ್ತು ಕಾರ್ಯಕ್ರಮದ ಸಂಚಾಲಕ ನರಸಿಂಹಯ್ಯ ಎನ್, ವಿಭಾಗದ ಮುಖ್ಯಸ್ಥ ಪ್ರೊ. ಶ್ರೀಪಾದ್ ಕೆ ಎಸ್ ಮೊದಲಾದವರು ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ

