ಬಿಸಿಲಿಗೆ ಬೆವರಿಳಿಯುತ್ತಿರುವ ಮುಖ. ಎರಡು ಕಣ್ಣುಗಳು ಕುಗ್ಗಿ ಹೋಗಿವೆ. ಆ ಕಣ್ಣುಗಳಲ್ಲಿ ಯಾವ ಖುಷಿಯೂ ಕಾಣುತ್ತಿಲ್ಲ, ಕಳೆಗುಂದಿದ ಕಣ್ಣು. ದಿನವಿಡಿ ಬಿಸಿಲಿಗೆ ನಡೆಯುತ್ತಲೇ ಬೀದಿಯಲ್ಲಿಯೇ ಇರುವ ಈ ಹೆಣ್ಣು ಚಿಂದಿ ಆಯುವ ಕೈಗಳು. ಚಪ್ಪಲಿ ಧರಿಸದೆ ಬರೀ ಕಾಲಿನಲ್ಲಿ ನಡೆದು ನಡೆದು ದಣಿದ ಕಾಲುಗಳು. ಎಲ್ಲಿ ಒಂದು ಹೊತ್ತಿನ ಊಟ ಸಿಗುತ್ತದೆ ಎಂದು ಆ ಜೀವ. ದುಡಿಯುವ ಶಕ್ತಿಯೂ ಇಲ್ಲದ ಈಕೆ ಸರಿಯಾದ ಅನ್ನ ನೀರು ಸಿಗದೆ ಪ್ರತಿದಿನ ಆಹಾರಕ್ಕಾಗಿ ಕಾದ ಒಡಲು. ಈಕೆಗೆ ತಂದೆ ತಾಯಿ ಯಾರೆಂದೇ ತಿಳಿದಿಲ್ಲ. ತಂದೆ ತಾಯಿಯ ಪ್ರೀತಿ ದೊರೆತಿಲ್ಲ. ಮನೆ ಮಠ ಎಂದರೇನು ಗೊತ್ತಿಲ್ಲದ ಈ ಹೆಣ್ಣಿಗೆ ಯಾವ ಗುರುವು ಇಲ್ಲ ಈಕೆಯ ಹಿಂದೆ. ಆಕೆಯ ಜೀವನದಲ್ಲಿ ಯಾವುದೇ ಗುರಿಯು ಇಲ್ಲ ಯಾವುದರ ಆಶೆಯು ಅವಳಿಗಿಲ್ಲ. ಕನಸು ಕಾಣುವ ವಯಸ್ಸು ಅಷ್ಟೇ ಆಕೆಗೆ, ಆದರೆ ಕನಸೇ ಇಲ್ಲದ ಕತ್ತಲೆ ಕೋಣೆಯಲ್ಲಿರುವ ಅವಳ ಮನಸು ಬಾಲ್ಯದ ಸುಂದರ ದಿನಗಳ ಖುಷಿ ಅಕೆಗಿಲ್ಲ.
ಆಟವಾಡಲು ಗೆಳತಿಯರಿಲ್ಲ, ಬಾಲ್ಯದ ದಿನಗಳ ರುಚಿಯೇ ತಿಳಿದಿಲ್ಲ. ಈಕೆಯ ಸರಿಯಾದ ಉಡುಗೆ ತೊಡುಗೆಗಳಿಲ್ಲ. ಅವಳು ರಸ್ತೆ ಬದಿಯಲಿ ದಿನ ಕಳೆಯುವಳು ರಾತ್ರಿಯಾದ ಕೂಡಲೇ ಅಂಗಡಿ ಬದಿಯಲ್ಲಿ ವಿಶ್ರಾಂತಿ. ಈಕೆಗೆ ಕನಸುಗಳಿಲ್ಲವೆಂದಲ್ಲ ಮನದಲ್ಲಿ ಚಿಗುರುತ್ತದೆ ಆಶಾಲತೆ ಆದರೆ ಆ ಕನಸುಗಳು ನನಸಾಗದು ಎಂದು ಆಕೆಗೆ ತಿಳಿದಿದೆ, ಬೆಳೆಸಲು ಅಸಾಧ್ಯ. ಇದರಿಂದ ಮನದಲ್ಲಿಯೇ ಕನಸುಗಳನ್ನು ಬಚ್ಚಿಟ್ಟುಕೊಂಡಿರುವಳು. ಮರೆತೇ ಬಿಟ್ಟಿರುವಳು ಕನಸು ಕಾಣುವುದನ್ನು. ನಗು ನಗುತ್ತ ಇರಬೇಕಾದ ಆ ಹೆಣ್ಣು ಶಾಲೆಯಲ್ಲಿ ಕಲಿಯಬೇಕಾದ ಆಕೆ ಮಣ್ಣು ಮೆತ್ತಿಕೊಂಡ ಬಟ್ಟೆ ಧರಿಸಿ ಬಿದಿ ಬದಿಯ ಕಸ ಹೆಕ್ಕುತ್ತಿರುವಳು.
ಒಂದೊಂದು ಬಾರಿ ರಾತ್ರಿಯಾದರೂ ಊಟವೇ ಸಿಗುತ್ತಿಲ್ಲ. ಬರಿ ಹೊಟ್ಟೆಯಲಿ ಮಲಗುತ್ತಾಳೆ. ಮತ್ತೆ ದಿನ ಬೆಳಗಾಯಿತು ಎಂದರೆ ಸಾಕು ನೆತ್ತಿ ಮೇಲೆ ಸುಡುತ್ತಿರುವ ಸೂರ್ಯ, ಮತ್ತೆ ಕಾಡುವ ಹಸಿವು. ಊಟ ಕಂಡರೆ ಕಿತ್ತುತಿನ್ನುವ ಆನ್ನದ ಆಸೆ. ಅವಳ ಜೀವನ ಕಟ್ಟಿರುವ ಕಾಗದದ ಹೂವಿಗೆ ಸಮವಾಗಿದೆ ಯಾವ ಪರಿಮಳವೂ ಇಲ್ಲ. ಅವಳ ಬದುಕಿಗೆ ಆಧಾರ ಯಾರೂ ಇಲ್ಲ.
ಬಾಲ್ಯದ ಆ ಸುಂದರ ದಿನಗಳು ಎಲ್ಲ ಮಕ್ಕಳಿಗೂ ದೊರೆಯಲಿ. ಖುಷಿಯಿಂದ ಶಾಲೆಗೆ ಹೋಗುವ ಅವಕಾಶವೂ ದೊರೆಯಲಿ, ಈ ಹೆಣ್ಣಿನ ಬದುಕಿನಂತೆ ಬೇರೆ ಯಾವ ಹೆಣ್ಣುಮಗಳಿಗೂ ಬರದಿರಲಿ. ಬೀದಿ ಬದಿಯಲ್ಲಿರುವ ಮಕ್ಕಳಿಗೆ ಅಥವಾ ಬೀದಿ ಬದಿಯಲ್ಲಿರುವ ಜನರಿಗೆ ಯಾವತ್ತಿಗೂ ಆಧಾರವಾಗಿ ನಿಲ್ಲಬೇಕು. ಅವರಿಗೂ ಸಮಾಜದಲ್ಲಿ ಎಲ್ಲರಂತೆ ಬದುಕಲು ಅವಕಾಶ ಸಿಗಬೇಕು.
-ಸುಮನಾ ನಾಯಕ್
ಪ್ರಥಮ ಪತ್ರಿಕೋದ್ಯಮ
ವಿವೇಕಾನಂದ ಕಾಲೇಜ್, ಪುತ್ತೂರು
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ