|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಹೊರನಾಡ ಕನ್ನಡಿಗ | ಭರತ್ ಕುಮಾರ್ ಪೊಲಿಪು | ಮಲಬಾರ್ ವಿಶ್ವ ರಂಗ ಪುರಸ್ಕಾರ-2022 ಸಮ್ಮಾನಿತರು

ಹೊರನಾಡ ಕನ್ನಡಿಗ | ಭರತ್ ಕುಮಾರ್ ಪೊಲಿಪು | ಮಲಬಾರ್ ವಿಶ್ವ ರಂಗ ಪುರಸ್ಕಾರ-2022 ಸಮ್ಮಾನಿತರು



ಭರತವರ್ಷದ ಅದ್ಭುತ ಪ್ರತಿಭೆ, ವೇದ ಪುರಾಣ ಇತಿಹಾಸದ ಸಾರ ಪೂರ್ಣ ಪುರಾಣ ಪುರುಷ ಭರತ. ಹೋಲಿಸಿದರೆ ತಪ್ಪೆನಿಸದು. ಇವರ ಪ್ರತಿಭೆಯೂ ನಮ್ಮ ಚಿಂತನೆಗೆ ಮೀರಿದ್ದು. ಕನ್ನಡ ನಾಡಿನ ಮಣ್ಣಿನ ಕಂಪನ್ನು ಹೊರನಾಡಿಗೆ ಹಬ್ಬಿಸುತ್ತಿರುವ ಹೊರನಾಡ ಕನ್ನಡಿಗ ಭರತ್ ಕುಮಾರ್ ಪೊಲಿಪು. ಹೆಸರೇ ಹೇಳುವಂತೆ ಅವರ ಹುಟ್ಟೂರು ಕಾಪು ಸಮೀಪದ ಪೊಲಿಪು. ಪ್ರಾಥಮಿಕ ಪ್ರೌಢ ವಿದ್ಯಾಭ್ಯಾಸವೂ ಅಲ್ಲೇ ಹುಟ್ಟೂರಲ್ಲೆ. ಕಟಪಾಡಿಯ ಎಸ್.ವಿ.ಎಸ್ ನಲ್ಲಿ ಪದವಿ ಪೂರ್ವ ಹಾಗೂ ಉಡುಪಿಯ ಪೂರ್ಣಪ್ರಜ್ಞದಲ್ಲಿ ಬಿ.ಕಾಂ ಪದವಿ. ಮರಾಠಿಯ ಊರಲ್ಲಿ ಕನ್ನಡದಲ್ಲಿ ಎಂ.ಎ. ಉನ್ನತ ಪದವಿ. ಅದೂ ಪ್ರಥಮ ಶ್ರೇಣಿಯಲ್ಲಿ. ಈ ಮಧ್ಯೆ ಜೀವನದ ಕಾರ್ಯ ಕ್ಷೇತ್ರವಾಯ್ತು ಮುಂಬಯಿ. ಬಾಳ ಪ್ರಮುಖ ಘಟ್ಟ... ವೃತ್ತಿ ಜೀವನಕ್ಕೆ ನೆಲೆ ದೊರೆಯಿತು ಮುಂಬಯಿ ಮೊಗವೀರ ಬ್ಯಾಂಕಿನಲ್ಲಿ. 35 ವರ್ಷಗಳ ಸುದೀರ್ಘ ಸೇವೆಯ ನಂತರ ವೃತ್ತಿಗೆ ಕಳೆದ ವರ್ಷವಷ್ಟೇ ಸ್ನೇಹ ಪೂರ್ಣ ವಿದಾಯದೊಂದಿಗೆ ನಿವೃತ್ತಿ ದೊರಕಿತ್ತು.


ಈ ನಡುವೆ ನಡೆದಿತ್ತು ಸಾಧನೆಗಳ ಮಹಾಪೂರ. ತೀರದ ಹಸಿವು ಆರದ ದಣಿವು. "ಮುಂಬಯಿ ಕನ್ನಡ ರಂಗಭೂಮಿ ಒಂದು ಸಾಂಸ್ಕೃತಿಕ ಅಧ್ಯಯನ" ಎಂಬ ಸಂಶೋಧನಾ ಕೃತಿಗೆ ದೊರಕಿತು ಮುಂಬಯಿ ವಿ.ವಿ.ಯಿಂದ ಡಾಕ್ಟರೇಟ್ ಪದವಿ. ಪ್ರಕಟಗೊಂಡಿತು ಕೃತಿ. ಊರು ಪರವೂರುಗಳಲ್ಲಿ ಆಯ್ತು ಲೋಕಾರ್ಪಣೆ.

ಬಾಲ್ಯದ ಆಸಕ್ತಿ ರಂಗಭೂಮಿ. ಆ ಆಸಕ್ತಿಗೆ ಮುನ್ನುಡಿ ಬರೆದ ಸಾಧಕರು ಗುರುಗಳಾದ ಖ್ಯಾತ ಸಾಹಿತಿ, ನಾಟಕಕಾರ ದಿ. ಉದ್ಯಾವರ ಮಾಧವಾಚಾರ್ಯ ಹಾಗೂ ದಿ. ಬಿ.ಆರ್. ನಾಗೇಶ್.


ಶ್ರೇಷ್ಟ ರಂಗಕರ್ಮಿಗಳಾದ ಶ್ರೀನಿವಾಸ ಪ್ರಭು, ಪ್ರಸನ್ನ, ರಾಮಚಂದ್ರ ಮೂರ್ತಿಯವರ ಗರಡಿಯಲ್ಲಿ ನಡೆದ ನಾಟಕ ರಚನೆ ಹಾಗೂ ರಂಗ ತರಬೇತಿ ಶಿಬಿರಗಳು ಮನಸ್ಸಿನ ಕಾಮನೆಗಳಿಗೆ ಆಯ್ತು ಭದ್ರ ಬುನಾದಿ. ನಾಟಕ ರಂಗದಲ್ಲಿ ನಿರ್ದೇಶನವನ್ನು ಬಾಳ ಯಜ್ಞವನ್ನಾಗಿಸಿಕೊಂಡು ತ್ರಿದಶಕಗಳ ಪರ್ಯಂತ ಯಜ್ಞ ದೇವನಿಗೆ ಪೂರ್ಣಾಹುತಿ ನೀಡಿ ಪೂರ್ಣ ಫಲವನ್ನು ದಕ್ಕಿಸಿಕೊಂಡವರು ಶ್ರೀಮಾನ್ ಪೊಲಿಪು. ಈ ಅವಧಿಯಲ್ಲಿ  ಜನ ಮೆಚ್ಚಿದ ಹಲವು ನಾಟಕಗಳು ಇವರಿಂದ ನಿರ್ದೇಶಿಸಲ್ಪಟ್ಟು ಕಟ್ಟಿದ ಕನಸಿನ ಗೋಪುರಕ್ಕೆ ಕಲಶಪ್ರಾಯವಾದವು. ಒಂದಕ್ಕಿತ ಒಂದು ಬಿಗಿಯಾದ ನಾಟಕಗಳು... ಹೆಸರಿಸದೇ ಹೋದರೆ ತಪ್ಪೆನಿಸುತ್ತದೆ. ಮುಖ್ಯವಾಗಿ ಮೃಗತೃಷ್ಣಾ, ರಾವಿ ನದಿಯ ದಂಡೆಯಲ್ಲಿ, ಕೋಮಲ ಗಾಂಧಾರ, ಅಂಬೆ ಹೀಗೆ ಸಾಕಷ್ಟು ನಾಟಕಗಳು ಇವರಿಂದ ನಿರ್ದೇಶನಗೊಂಡು ರಾಜ್ಯ ಹೊರ ರಾಜ್ಯಗಳಲ್ಲಿ ಪ್ರದರ್ಶನಗೊಳ್ಳುತ್ತಿವೆ. ಉಡುಪಿಯ ತುಳುಕೂಟದಲ್ಲಿ ಪ್ರದಶಿ೯ಸಿದ ಆರು ನಾಟಕಗಳ ಪೈಕಿ ಐದು ನಾಟಕಗಳಿಗೆ ಪ್ರಥಮ ಹಾಗೂ ದ್ವಿತೀಯ ಪ್ರಶಸ್ತಿ ಬಂದಿರುವುದು ನಿರ್ದೇಶನದ ಗುಣಮಟ್ಟಕ್ಕೆ ಹಿಡಿದ ಒಂದು ಕೈಗನ್ನಡಿ.


ಇವರ ಪ್ರತಿಭೆ ಬರೀ ನಿರ್ದೇಶನಕ್ಕೆ ಸೀಮಿತವಾಗಿರದೆ, ನಟನೆ, ಸಂಘಟನೆ, ವಿಮರ್ಶೆ, ನಾಟಕ- ಕೃತಿ ರಚನೆ, ಅನುವಾದ, ಪ್ರಬಂಧ ಮಂಡನೆ ಹೀಗೆ ಹಲವು ಕ್ಷೇತ್ರಗಳಲ್ಲಿ ಕೈಯಾಡಿಸಿದವರು. ತುಳು, ಕನ್ನಡ, ಹಿಂದಿ, ಮರಾಠಿಯಲ್ಲಿ ಹಲವು ಪ್ರಬಂಧಗಳು, ನಾಟಕ, ಕೃತಿಗಳು, ಅನುವಾದದ ಕೃತಿಗಳು ಇವರ ಕೈಯಿಂದ ಅರಳಿ ಪುಸ್ತಕ ರೂಪವನ್ನು ಪಡೆದವು. ಇವರ ಆರುಂಧತಿ ತುಳು ನಾಟಕ ರತ್ನ ವರ್ಮ ಸ್ಮಾರಕ ನಾಟಕ ರಚನಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಗಿಟ್ಟಿಸಿಕೊಂಡಿರುವುದು ಅಭಿನಂದನಾರ್ಹ.


ರಾಜ್ಯ ಹೊರ ರಾಜ್ಯಗಳಲ್ಲಿ ನಡೆದ ಹಲವು ಗೋಷ್ಟಿ, ಸಮ್ಮೇಳನಗಳಲ್ಲಿ ಇವರ ಮನದ ಚಿಂತನೆ ಮಂಥನಗಳು ಬದುಕು- ಬರಹಗಳು ಪ್ರಬಂಧ ರೂಪವನ್ನು ತಳೆದು ಬಹಳಷ್ಟು ಪ್ರಮುಖ ವೇದಿಕೆಗಳಲ್ಲಿ ಮಂಡನೆಗೊಂಡಿದೆ. ಕರ್ನಾಟಕ ಸಂಘ ಮುಂಬಯಿ, ಕನ್ನಡ ಕಲಾ ಕೇಂದ್ರ, ಧಾರವಾಡ ವಿದ್ಯಾವರ್ಧಕ ಸಂಘ ಹೀಗೆ ಹತ್ತು ಹಲವು ಸಂಘಗಳಲ್ಲಿ ಪ್ರಮುಖ ಹುದ್ದೆಗಳನ್ನು ನಿರ್ವಹಿಸುತ್ತ ಕಲಾಮಾತೆಯ ಸೇವೆ ಸಲ್ಲಿಸುತ್ತಿರುವ ಬಹು ಚಟುವಟಿಕೆಯ ವ್ಯಕ್ತಿ ಭರತ್ ಕುಮಾರ್.


ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಕಾಂತಾವರ ಕನ್ನಡ ಸಂಘದ 'ಸುವರ್ಣ ರಂಗ ಸಮ್ಮಾನ್' ಕೆ. ಕೆ. ಸುವರ್ಣ ರಂಗ ಪ್ರಶಸ್ತಿ ಇಂತಹ ಹತ್ತು ಹಲವು ರಂಗ ಪ್ರಶಸ್ತಿಗಳು ಇವರ ಸಾಧನೆಗಿತ್ತ ಹೊನ್ನ ಕಿರೀಟ. ಜೊತೆಗೆ ದೊರೆತ ಗೌರವ ಸನ್ಮಾನಗಳು ಲೆಕ್ಕಕ್ಕೆ ಎಟುಕದಷ್ಟು. ಮುಂಬಯಿ ವಿ.ವಿ., ದೆಹಲಿ ಕನ್ನಡ ಸಂಘ, ರಂಗಭೂಮಿ ಉಡುಪಿ, ದೃಶ್ಯ ಬೆಂಗಳೂರು, ಸೂರತ್ ಕನ್ನಡ ಸಂಘ, ಮೊಗವೀರ ಸಂಘಟನೆಗಳು ಕಾಪು ಹುಟ್ಟೂರ ಸನ್ಮಾನ ಇವೆಲ್ಲವು ನೆನಪಿನ ಸ್ಮೃತಿ ಪಟಲದಲ್ಲಿ ಅಳಿಸಲಾರದಂತಹವುಗಳು... ಸದಾ ಸೌರಭ ಸೂಸುವಂತಹವುಗಳು.


ಅನ್ಯೋನ್ಯ ಸಾಂಸಾರಿಕ ಜೀವನ ಪಯಣದಲ್ಲಿ ಮೆಚ್ಚಿನ ಮಡದಿ ಶೈಲಜಾರ ಸತತ ಸಹಕಾರ ಬಾಳಿನೆರಡು ಕಣ್ಣುಗಳಂತಿರುವ ಮಕ್ಕಳು ರಚನಾ ಹಾಗೂ ರಚಿತ್ ರವರ ನಿರಂತರ ಪ್ರೋತ್ಸಾಹ, ಗೆಳೆಯರೆಲ್ಲರ ಶುಭ ಹಾರೈಕೆ ಭರತ್ ಕುಮಾರ್ ಪೊಲಿಪುರವರನ್ನು ಜೀವನದಲ್ಲಿ ಧನ್ಯರನ್ನಾಗಿಸಿದೆ.


ಹೀಗೆ ಸಾಧನೆಯ ಉತ್ತುಂಗ ಕ್ಕೇರಿರುವ ರಂಗಕರ್ಮಿ ಭರತ್ ಕುಮಾರ್ ಪೊಲಿಪು ರವರು ಸಂಸ್ಕೃತಿ ವಿಶ್ವ ಪ್ರತಿಷ್ಠಾನ ರಿ. ಉಡುಪಿ ಮತ್ತು ಮಲಬಾರ್ ಗೋಲ್ಡ್ & ಡೈಮಂಡ್ಸ್, ಉಡುಪಿ ಶಾಖೆಯು ಉಡುಪಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಹಕಾರದೊಂದಿಗೆ ಐದು ಜನ ಶ್ರೇಷ್ಟ ರಂಗಸಾಧಕರಲ್ಲಿ ನಟ ಹಾಗೂ ನಿರ್ದೇಶಕರು ಶೀರ್ಷಿಕೆಯಡಿಯಲ್ಲಿ ಕೊಡ ಮಾಡುತ್ತಿರುವ ಈ ಬಾರಿಯ "ಮಲಬಾರ್ ವಿಶ್ವ ರಂಗ ಪುರಸ್ಕಾರ- 2022 "ಕ್ಕೆ ಭಾಜನರಾಗಿದ್ದಾರೆ.

ಲೇಖನ: ರಾಜೇಶ್ ಭಟ್ ಪಣಿಯಾಡಿ.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


hit counter

0 Comments

Post a Comment

Post a Comment (0)

Previous Post Next Post